Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಜೆಪಿ ಮುಖಂಡರನ್ನ ಭೇಟಿ ಮಾಡಿ 2 ಪಕ್ಷಗಳ ಹೈಕಮಾಂಡ್​ಗೆ ಬ್ಲಾಕ್ ಮೇಲ್ ಮಾಡ್ತಿದ್ದಾರೆ ಅಂತ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಕಾಂಗ್ರೆಸ್-ಜೆಡಿಎಸ್ ನಾಯಕರು ತಮ್ಮ ತಮ್ಮಲ್ಲೇ ಜಗಳ ಮಾಡಿಕೊಂಡು ರಾಜೀನಾಮೆ ನೀಡಿ ನಮ್ಮ ಜೊತೆ ಬಂದ್ರೆ ನಾವು ಏನನ್ನು ಮಾಡೋಕೆ ಆಗಲ್ಲ. ಅನಿವಾರ್ಯವಾಗಿ ಸರ್ಕಾರ ಮಾಡ್ತೀವಿ ಅಂದ್ರು. ಬಿಜೆಪಿ ಸರ್ಕಾರ ಆದ್ರೆ ಬಿ.ಎಸ್. ಯಡಿಯೂರಪ್ಪ ಅವ್ರೇ ಸಿಎಂ ಆಗ್ತಾರೆ. ಯಾವ ಡಿಕೆಶಿ ಇಲ್ಲ, ಯಾರೂ ಇಲ್ಲ. ಯಡಿಯೂರಪ್ಪ ಸಿಎಂ ಅನ್ನೋದನ್ನ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಣಯ ಮಾಡಿದ್ದಾರೆ.

2.ಮೀಟೂ ಅಭಿಯಾನದ ಪರ ನನ್ನ ಹೋರಾಟ ನಿರಂತರವಾಗಿರುತ್ತೆ ಅಂತ ನಟ ಚೇತನ್ ಹೇಳಿದ್ದಾರೆ. ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಚಿತ್ರರಂಗದ ಒಳಗೂ ಹೊರಗೂ ಲೈಂಗಿಕ ಕಿರುಕುಳ ಪ್ರಕರಣಗಳು ನಡೀತಿವೆ.. ಜೊತೆಗೆ ಸ್ಲಂ ನಿವಾಸಿಗಳ ಮೇಲೂ ದೌರ್ಜನ್ಯಗಳು ಆಗ್ತಾನೇ ಇವೆ.. ಹೀಗಾಗಿ ಅನ್ಯಾಯದ ವಿರುದ್ದ ರಾಜ್ಯಾದ್ಯಂತ ಹೋರಾಟ ಮಾಡ್ತಿದ್ದೇನೆ, ನನ್ನ ಹೋರಾಟಕ್ಕೆ ಜನ ಬೆಂಬಲಿಸುತ್ತಿದ್ದಾರೆ ಅಂತ ಹೇಳಿದ್ದಾರೆ.

3.ನಟ ಪ್ರಕಾಶ್ ರಾಜ್ ಮೂರು ಓಟರ್ ಐಡಿ ಹೊಂದಿರುವ ಆರೋಪ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬೆಂಗಳೂರು ನಿವಾಸಿ ಜಗನ್ ಕುಮಾರ್ ದೂರು ನೀಡಿದ್ದಾರೆ. ದೂರು ನೀಡಿರುವುದಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್, ನನ್ನ ಬಳಿ ಇರುವುದು ಒಂದೇ ಓಟರ್ ಐಡಿ ಕಾರ್ಡ್. ಆದ್ರೆ ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಅವರಲ್ಲಿ ತಪ್ಪು ಗ್ರಹಿಕೆ ಇರಬಹುದು. ತಮಿಳುನಾಡಿನ ಅಡ್ಯಾರ್‌ನಲ್ಲಿ ನನಗೆ ಓಟರ್ ಐಡಿ ಇದೆ ಅಂತ ಹೇಳಿದ್ದಾರೆ.

4.ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಚಿಕಿತ್ಸೆ ಪಡೆಯಲು ಕೇರಳಕ್ಕೆ ಹೋಗಿಲ್ಲ.. ಬದಲಾಗಿ ಮಂತ್ರ-ತಂತ್ರ ಮಾಡಲು ಕೇರಳಕ್ಕೆ ಹೋಗಿದ್ದಾರೆ ಅಂತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವ್ರು, ಯಡಿಯೂರಪ್ಪರ ರೈತಪರ ಕಾಳಜಿ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ರೈತರಿಗೆ ಮರಣ ಶಾಸನ ತಂದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತಾಡುವ ಹಕ್ಕಿಲ್ಲ ಅಂತ ಆರೋಪಿಸಿದರು.

5.ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನ ಬರ್ಬರ ಹತ್ಯೆಗೈದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೆಣ್ಣೂರು ಬಂಡೆ ಬಳಿ ಕೇಶವ್ ಎಂಬಾತನ ಕೊಲೆ ನಡೆದಿದ್ದು, ಮೂವರು ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ. ಎಂದಿನಂತೆ ಕೆಲಸ ಮುಗಿಸಿ ಬಾರ್​​ವೊಂದಕ್ಕೆ ತೆರಳಿ ಬಳಿಕ ಮನೆಗೆ ತೆರಳುವಾಗ ಘಟನೆ ನಡೆದಿದೆ. ಕೇಶವನನ್ನೇ ನಂಬಿಕೊಂಡಿದ್ದ ಆತನ ಪತ್ನಿ ಹಾಗೂ ಇಬ್ಬರು ಮುದ್ದಾದ ಮಕ್ಕಳು ಇದೀಗ ಬೀದಿಗೆ ಬರುವ ಸ್ಥಿತಿ ಎದುರಾಗಿದೆ.

6.ವಿಜಯಪುರ ಜಿಲ್ಲಾ ಪಂಚಾಯ್ತಿಯ 11ನೇ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಾಗೂ ಅಧಿಕಾರಿ ಮಧ್ಯೆಯೇ ವಾಗ್ವಾದ ನಡೆದಿದೆ. ಇನ್ನು ಇದೆ ವೇಳೆ ಸಚಿವ ಶಿವಾನಂದ ಪಾಟೀಲ್ ಎಲ್ಲರನ್ನು ಸಮಾಧಾನ ಪಡಿಸಲು ಮುಂದಾದ್ರು. ಆದ್ರೆ ಇದಕ್ಕೆ ಕೆಲ ಸದಸ್ಯರು ಕ್ಯಾರೆ ಅನ್ಲಿಲ್ಲ. ವಾರದ ಹಿಂದೆ ಆಶಾ ಕಾರ್ಯಕರ್ತೆ ರೇಣುಕಾ ಬಿರಾದಾರ ಮೃತಪಟ್ಟಿದ್ದು, ಶವ ಸಂಸ್ಕಾರ ಬೇಗ ಮಾಡಿಸಲು ಸಹಾಯ ಮಾಡಿಲ್ಲ ಎಂದು ಸದಸ್ಯೆ ಜ್ಯೋತಿ ಅಸ್ಕಿ ಆರೋಪಿಸಿದರು.

7.ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗ್ತಿದಂತೆ ಕಾಂಗ್ರೆಸ್‌ನಲ್ಲಿ ರಾಜಕೀಯ ಚಟುವಟಿಕೆ ಜೋರಾಗಿದೆ. ಈ ನಡುವೆ, ಕೈ ಪಡೆಯ ಕೆಲವು ಶಾಸಕರು ಮುಂಬೈಗೆ ಹೋಗಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದು, ಈ ಕುರಿತು ಸಮನ್ವಯ ಸಮತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿಕ್ರಿಯಿಸಿ, ಚಳಿಗಾಲದ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಆಗುತ್ತೆ ಅಂತ ಹೇಳಿದರು.

8.ಮನೆ ತೆರವು ಕಾರ್ಯಾಚರಣೆ ವೇಳೆ ಬದಲಿ ನಿವೇಶನ ನೀಡುವ ಭರವಸೆ ನೀಡಿದ್ದ ಕೋಲಾರ ನಗರಸಭೆ, 5 ದಿನಗಳ ಒಳಗೆ ನಿವೇಶನ ನೀಡುವುದಾಗಿ ಭರವಸೆ ನೀಡಿ ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ. ಬದಲಿ ನಿವೇಶನ ನೀಡದೆ ಕೋಲಾರ ಜಿಲ್ಲಾಡಳಿತ ಮನೆಗಳನ್ನ ತೆರವು ಮಾಡಿದ ಕ್ರಮವನ್ನ ಖಂಡಿಸಿ ಸಾರ್ವಜನಿಕರು ಅಹೋರಾತ್ರಿ ಪ್ರತಿಭಟನೆಗೆ ನಿರ್ಧರಿಸಿದ್ದು,. ಇನ್ನೂ ಸ್ತಳಕ್ಕೆ ಕೋಲಾರ ಗಲ್ ಪೇಟೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

9.ಕೊಪ್ಪಳದಲ್ಲಿ ಚಲಿಸುತ್ತಿದ್ದ ಆಕಸ್ಮಿಕ ಬೆಂಕಿಯಿಂದ ಭತ್ತದ ಹುಲ್ಲು ಸೇರಿದಂತೆ ಇಡೀ ಟ್ರ್ಯಾಕ್ಟರ್​ ಬೆಂಕಿಗೆ ಆಹುತಿಯಾಗಿದೆ. ಜಿಲ್ಲೆಯ ತಾವರಗೇರಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಬಾರಿ ಅನಾಹುತವೊಂದು ತಪ್ಪಿದೆ. ಬಳಿಕ ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ ಪಟ್ಟಿದ್ದು, ತಾವರಗೇರಾ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

10.ಕೆಲಸ ಮಾಡುವ ಸೋಗಿನಲ್ಲಿ ಬಂದು ಮನೆಗಳ್ಳತನ ಮಾಡ್ತಿದ್ದ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಬೆಂಗಳೂರು ಪರಪ್ಪನ ಅಗ್ರಹಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಂಡಿಯನ್ ಹಾಗೂ ಅಣ್ಣಾಮಲೈ ಬಂಧಿತ ಆರೋಪಿಗಳು. ಬಂಧಿತರು ಮೂಲತಃ ತಮಿಳುನಾಡಿನ ಕಣಗೈ ನಗರದವರಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಮಡಿವಾಳ, ಕೋರಮಂಗಲ, ಪರಪ್ಪನ ಅಗ್ರಹಾರ ಸೇರಿದಂತೆ ಹಲವು ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಮಾಡಿದ್ದರು. ಅಲ್ದೇ, ತಮಿಳುನಾಡು ರಾಜ್ಯದ ಗುಡಿಯತ್ತಮ್, ಕಾಟುಪಾಡಿ, ವೇಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಮನೆಗಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

11.ಸಿದ್ದು ವಿರುದ್ಧದ ಈಶ್ವರಪ್ಪ ಹೇಳಿಕೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೆಟು ನೀಡಿದ್ದಾರೆ. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದ್ದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಜೆಡಿಎಸ್‌ನವರು ಸಿದ್ದರಾಮಯ್ಯನನ್ನು ಹೀನಾಯವಾಗಿ ಸೋಲಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ..? ಎಂಬ ಈಶ್ವರಪ್ಪರ ಮಾತಿಗೆ, ಚೆ ನಾನು ಈಶ್ವರಪ್ಪನ ಹೇಳಿಕೆಗಳಿಗೆ ಉತ್ತರನೇ ಕೊಡೋಕೆ ಹೋಗಲ್ಲ ಎಂದು ತಿರುಗೇಟು ನೀಡಿದ್ದಾರೆ.

12.ರಾಜ್ಯ ಪ್ರವಾಸ ಹಾಗೂ ಅಧಿವೇಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಜ್ಜಾಗ್ತಿದ್ದಾರೆ. ರಾಜ್ಯ ಸುತ್ತೋಕೆ ಅಂತಾನೇ ಫಿಟ್ ಆಂಡ್ ಫೈನ್ ಆಗೋಕೆ ಹೊರಟಿರುವ ಯಡಿಯೂರಪ್ಪ ಆರೋಗ್ಯದ ಕಡೆ ಹೆಚ್ಚು ಒತ್ತುಕೊಟ್ಟಿದ್ದಾರೆ. ಪ್ರಕೃತಿ ಚಿಕಿತ್ಸೆ ಪಡೆಯಲು ಕೇರಳಕ್ಕೆ ತೆರಳಿದ್ದಾರೆ. 8 ದಿನಗಳ ಕಾಲ ಕೇರಳದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಕೇರಳದ ಪ್ರಾಕೃತಿಕ ಚಿಕಿತ್ಸಾ ಕೇಂದ್ರದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಪ್ರಕೃತಿ ಚಿಕಿತ್ಸೆ ಜೊತೆ ವಿಶ್ರಾಂತಿ, ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಡಿಸೆಂಬರ್ 8ರ ಬಳಿಕ ರಾಜ್ಯಕ್ಕೆ ವಾಪಾಸಾಗುವ ಸಾಧ್ಯತೆ ಇದೆ.

13.ಅಡುಗೆ ಅನಿಲ ಸಿಲಿಂಡರ್‌ ಬೆಲೆ ಕಡಿಮೆಯಾಗಿದೆ. ಸಬ್ಸಿಡಿ ಸಹಿತ ಗ್ಯಾಸ್‌ ಸಿಲಿಂಡರ್ ಬೆಲೆ 6 ರೂಪಾಯಿ 52 ಪೈಸೆಯಷ್ಟು ಕಡಿಮೆಯಾಗಿದೆ. ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಯಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಲಿಂಡರ್‌ ಬೆಲೆ 500 ರೂಪಾಯಿ 90 ಪೈಸೆಗಳಾಗಲಿದ್ದು. ಇಂಡಿಯನ್‌ ಆಯಿಲ್‌ ನಿಗಮ ಈ ವಿಷಯ ತಿಳಿಸಿದೆ. 14 ಕೆಜಿ ತೂಕದ ಸಿಲಿಂಡರ್‌ ಬೆಲೆ 6 ರೂಪಾಯಿ 52 ಪೈಸೆಯಷ್ಟು ಕಡಿತಗೊಂಡಿದೆ. ಕಳೆದ ನವೆಂಬರ್‌ 1ರಂದು ಗ್ಯಾಸ್‌ ಸಿಲಿಂಡರ್ ಬೆಲೆ 2 ರೂಪಾಯಿ 94 ಪೈಸೆ ಏರಿಕೆಯಾಗಿತ್ತು ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

14.ಕಾಂಗ್ರೆಸ್‌ ಮುಖಂಡ ರಾಜ್‌ ಬಬ್ಬರ್‌ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ಯಾಂಗ್ ಸ್ಟಾರ್‌ಗಳೆಂದು ಹೇಳಿದ್ದಾರೆ. ರಾಜಸ್ಥಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್‌ನ ಇಬ್ಬರು ಗ್ಯಾಂಗ್‌ಸ್ಟರ್‌ಗಳಿದ್ದಾರೆ. ಇವರಲ್ಲಿ ಒಬ್ಬಾತ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದಾರೆ. ಇವರು ನಡೆಸುತ್ತಿರುವ ಗ್ಯಾಂಗ್‌ ಬಡಜನರನ್ನು ಕೊಲ್ಲುವುದರಲ್ಲಿ ನಿರತವಾಗಿದೆ ಎಂದು ಹೇಳಿದರು.

15.ತೆಲಂಗಾಣ ವಿಧಾನಸಭೆ ಚುನಾವಣೆ ಕಣ ಕಾವೇರುತ್ತಿದ್ದಂತೆಯೇ ಮುಸ್ಲಿಂ ಮತ ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಅವರನ್ನು ನೇಮಕ ಮಾಡಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಗೆ ಎಂಟು ನೂತನ ಪ್ರಧಾನ ಕಾರ್ಯದರ್ಶಿಗಳನ್ನು ಮತ್ತು ನಾಲ್ವರು ಕಾರ್ಯದರ್ಶಿಗಳನ್ನೂ ರಾಹುಲ್ ನೇಮಕ ಮಾಡಿದ್ದಾರೆ. ಟಿಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಗೆ ಶಿಫಾರಸು ಮಾಡಲಾಗಿದ್ದ ಅಜರುದ್ದಿನ್ ಹೆಸರನ್ನು ರಾಹುಲ್ ಗಾಂಧಿ ಅನುಮೂದಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಶೋಕ್ ಗೆಹ್ಲೋಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

16.2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸುವ ಉದ್ದೇಶದಿಂದ ಉತ್ತರ ಪ್ರದೇಶದಲ್ಲಿ ಮಹಾಮೈತ್ರಿಕೂಟ ರಚಿಸಿಕೊಳ್ಳಲು ಬಿಎಸ್‌ಪಿ, ಸಮಾಜವಾದಿ ಪಕ್ಷ ಮತ್ತು ಆರ್‌ಎಲ್‌ಡಿ ಅಂತಿಮ ಹಂತದ ಸಿದ್ಧತೆ ನಡೆಸಿವೆ. ಮಹಾಮೈತ್ರಿಕೂಟದಿಂದ ಕಾಂಗ್ರೆಸ್ ಅನ್ನು ಹೊರಗಿಡುವ ಸಾಧ್ಯತೆ ಇದೆ. ಈ ಮೂರೂ ಪಕ್ಷಗಳು ಈಗಾಗಲೇ ಮಾತುಕತೆ ಅಂತಿಮಗೊಳಿಸಿವೆ. ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ಮೈತ್ರಿಕೂಟ ರಚನೆ ಸಂಬಂಧ ಅಧಿಕೃತ ಘೋಷಣೆ ಹೊರಬೀಳಲಿದೆ ಎಂದು ಮೂಲಗಳು ಹೇಳಿವೆ.

17.ಬಿಕಾನೆರ್‌ನಲ್ಲಿ 150 ಎಕರೆ ಭೂಮಿ ಖರೀದಿ ಕೇಸ್‌ ಸಂಬಂಧ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ನೀಡಿದೆ. 2018ರಲ್ಲಿ ದೆಹಲಿಯ ಪೊಲೀಸ್‌ ಠಾಣೆಯೊಂದರಲ್ಲಿ ವಾದ್ರಾ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈ ಸಂಬಂಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ರಾಜಸ್ಥಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ. ಲ್ಯಾಂಡ್‌ ಡೀಲ್‌ ಕೇಸ್‌ನಲ್ಲಿ ವಾದ್ರಾ ನಂಟಿರುವ ಕಂಪನಿಯೊಂದು ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿದೆ. ಅದರ ಕಮಿಷನ್‌ ನೆಹರೂ ಕುಟುಂಬ ಅಳಿಯನಿಗೆ ಹೋಗಿದೆ. ಈ ಬಗ್ಗೆ ನಾನು ರಾಹುಲ್​‌ಗೆ ಕೇಳುತ್ತೇನೆ ಇದರ ಬಗ್ಗೆ ಉತ್ತರಿಸಬಲ್ಲಿರೆ? ಎಂದು ಸವಾಲು ಹಾಕಿದ್ದಾರೆ.

18.ದೇಶದ ಆರ್ಥಿಕ ಅಭಿವೃದ್ಧಿ ದರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ.7.1ಕ್ಕೆ ಕುಸಿದಿರುವುದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಶೇ.8.2 ರಷ್ಟಿದ್ದ ಜಿಡಿಪಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಶೇ,7.1ಕ್ಕೆ ಕುಸಿದಿದೆ. ಸಿಎಸ್ ಒ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಜೂನ್ ತ್ರೈಮಾಸಿಕ ಅವಧಿಯಲ್ಲಿ ಶೇ 8.2ರಷ್ಟು ಬೆಳವಣಿಗೆ ಕಂಡಿದ್ದ ಜಿಡಿಪಿ, ಈಗ ಜುಲೈ- ಸೆಪ್ಟೆಂಬರ್ ಅವಧಿಯಲ್ಲಿ 7.1 ರಷ್ಟು ಮಾತ್ರ ಬೆಳವಣಿಗೆ ಹೊಂದಿದೆ. ಸ್ಥಿರ ಜಿಡಿಪಿಯು 2018-19ರ ಎರಡನೇ ತ್ರೈಮಾಸಿಕದಲ್ಲಿ ರು. 33.98 ಲಕ್ಷ ಕೋಟಿ ರು. ಆದರೆ ಕಳೆದ ವರ್ಷ ಇದೇ ಅವಧಿಯಲ್ಲಿ ಅದು 31.72 ಲಕ್ಷ ಕೋಟಿ ರುಪಾಯಿಗಳಾಗಿತ್ತು ಎಂದು ಸಿಎಸ್ ಒ ತಿಳಿಸಿದೆ

19.ಬಿಜೆಪಿ ರಾಮಮಂದಿರ ನಿರ್ಮಿಸದಿದ್ದರೆ ದೇಶದ ಜನರು ಬಿಜೆಪಿ ಮೇಲೆ ಇಟ್ಟಿರುವ ನಂಬಿಕೆ ಕಳೆದುಕೊಳ್ಳಲಿದ್ದಾರೆ ಎಂದು ಯೋಗಗುರು ಬಾಬಾ ರಾಮ‌ದೇವ್‌ ಹೇಳಿದ್ದಾರೆ. ಕೇಂದ್ರ ಮತ್ತು ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇದೆ. ಹೀಗಾಗಿ, ರಾಮಮಂದಿರ ನಿರ್ಮಿಸಲು ಇದು ಸಕಾಲ. ಈ ಅವಕಾಶ ತಪ್ಪಿಸಬಾರದು ಎಂದು ಸಲಹೆ ನೀಡಿದ್ದಾರೆ. .

20. 20 ಶೃಂಗಸಭೆಯಲ್ಲಿ ಭಾಗವಹಿಸಲು ಅರ್ಜೆಂಟಿನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾ ದೊರೆಯನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಆಹಾರ ಭದ್ರತೆ, ಬಂಡವಾಳ ಹೂಡಿಕೆ, ತಂತ್ರಜ್ಞಾನ, ನವೀಕೃತ ಇಂಧನ ಕುರಿತಾಗಿ ಮಾತುಕತೆ ನಡೆಸಿದ್ದಾರೆ. ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಲ್‌ ಸೌದ್‌ ಅವರನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

21.ಚಿತ್ರರಂಗದ ಅಜಾಶತ್ರುವಿಗೆ ನುಡಿ ನಮನ ಹಾಗು ಶ್ರದ್ಧಾಂಜಲಿ ಸಭೆಯನ್ನ ಕನ್ನಡ ಚಿತ್ರರಂಗ ನೆರವೇರಿಸಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಹೆಚ್ ಡಿ ಕುಮರಸ್ವಾಮಿ, ಅಂಬಿಯೊಂದಿಗೆ ತಮಗಿರುವ ಒಡನಾಟದ ಬಗ್ಗೆ ನೆನೆದ್ರು. ಬಳಿಕ ಅಂಬರೀಶ್ ಅವರಿಗೆ ಫಿಲ್ಮ್‌ ಸಿಟಿ ಮಾಡಬೇಕೆಂದು ಆಸೆಯಿತ್ತು ಹಾಗಾಗಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ಹಾಗೂ ರಾಮನಗರದಲ್ಲಿ ಫಿಲ್ಮ್ ಯೂನಿರ್ವಸಿಟಿ ಮಾಡೋಣ ಎಂದ್ರು. ನಂತರ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಮೈಸೂರಲ್ಲಿ ಫಿಲ್ಮಂ ಸಿಟಿ ಮಾಡಬೇಕು ಎಂದು ಅಂಬಿಗೆ ಕನಸಿತ್ತು. ನಾನು ಸಿಎಂ ಆಗಿದ್ದಾಗ ಮೈಸೂರಿನ ಹುಳಿಮಾವಿನಲ್ಲಿ ಜಾಗ ನೀಡಿದ್ದೆ. ಹಾಗಾಗಿ ಫಿಲ್ಮ್‌ಸಿಟಿ ನಿರ್ಮಾಣ ಮಾಡಿ ಅಂಬರೀಶ್ ಹೆಸರನ್ನೇ ಇಡೋಣ ಎಂದ್ರು.

22.ಸಾರ್ವಜನಿಕರೊಬ್ಬರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್‌ ಸದಸ್ಯ ಹಾಗೂ ಶಾಸಕರು ಅಧಿಕಾರಿಗಳ ಎದುರೇ ಕಿತ್ತಾಡಿಕೊಂಡಿದ್ದಾರೆ. ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ವೈ.ಎಚ್.ಹುಚ್ಚಯ್ಯ ನಡುವೆ ತಾಲೂಕು ಪಂಚಾಯತ್ ಸಭೆಯಲ್ಲಿ ಮಾತಿನ ಚಕಮಕಿ ನಡೆದಿದೆ. ಪರಮಶಿವಯ್ಯ ಹಾಗೂ ನಾಗರಾಜು ಎಂಬುವರ ನಡುವೆ ಜಮೀನು ವಿವಾದ ಇತ್ತು. ನಾಗರಾಜು ಪರಮಶಿವಯ್ಯರ ಜಮೀನಿಗೆ ಹೋಗುವ ರಸ್ತೆಯಲ್ಲಿ ಗುಂಡಿ ತೋಡಿ ಸಂಪರ್ಕ ಕಡಿತಗೊಳಿಸಿದ್ರು. ಈ ವಿಚಾರ ಸಭೆಯಲ್ಲಿ ಚರ್ಚೆ ನಡೀತಿತ್ತು. ಆದ್ರೆ ಗಲಾಟೆ ಮಿತಿಮೀರಿ ಇಬ್ಬರು ಜನಪ್ರತಿನಿಧಿಗಳ ಕಿತ್ತಾಟದಿಂದ ತಹಶಿಲ್ದಾರ್ ನಾಗರಾಜು ಧರ್ಮಸಂಕಷ್ಟದಲ್ಲಿ ಸಿಲುಕಿದ್ರು.

23.ಬರಬರುತ್ತಾ ಸರ್ಕಾರಿ ಆಸ್ಪತ್ರೆಗಳು ದುಸ್ಥಿತಿ ತಲುಪುತ್ತಿವೆ. ಆರೋಗ್ಯ ಸಚಿವರ ತವರು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಲಂಚಾವತಾರ ತಾಂಡವವಾಡ್ತಿದೆ. ಹೆರಿಗೆ ವಿಭಾಗದಲ್ಲಿ ಕಾಸುಕೊಟ್ರೆ ಮಾತ್ರ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲಾಗುತ್ತೆ. ಶುಶ್ರೂಷಕಿಯರು ರೋಗಿಗಳ ಕುಟುಂಬಸ್ಥರಿಂದ ಹಣ ಸುಲಿಗೆ ಮಾಡ್ತಿದ್ದಾರೆ. ಇನ್ನು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಬಾವಿ ಪಟ್ಟಣದಲ್ಲಿ ಇರುವ ಸಮುದಾಯ ಆಸ್ಪತ್ರೆಯಲ್ಲಿ ರೋಗಿಗಳು ಜೀವ ಕೈಯಲ್ಲಿಡಿದು ಚಿಕಿತ್ಸೆ ಪಡೆಯಬೇಕಿದೆ.

24.ಇಂಗ್ಲೆಂಡ್​ನ ರಾಣಿ ಎಲಿಜಬೆತ್ ಬಾಲ್ಯದಲ್ಲಿ ಆಡಿದ್ದ ಗಾಜಿನ ಕಣ್ಣುಳ್ಳ ಗೊಂಬೆ ಡಿಸೆಂಬರ್ 2ನೇ ವಾರ ಲಂಡನ್​ನಲ್ಲಿ ಹರಾಜಾಗುತ್ತಿದೆ. ರಾಜಕುಮಾರಿಗೆ ಸಂಬಂಧಿಸಿದ ವಸ್ತುಗಳು ಹೀಗೆ ಹರಾಜಿಗೆ ಬರುವುದು ಬಹಳ ಅಪರೂಪ. 1930ರ ದಶಕದಲ್ಲಿ ದೊರೆತಿದ್ದ ಈ ಗೊಂಬೆಯನ್ನು ರಾಜಕುಮಾರಿ ಎಲಿಜಬೆತ್ ತುಂಬ ಇಷ್ಟಪಟ್ಟಿದ್ದರು. ಇದರ ಮೌಲ್ಯವನ್ನು 800ರಿಂದ 1200 ಪೌಂಡ್ಸ್ ಎಂದು ಅಂದಾಜು ಮಾಡಲಾಗಿದೆ.

25.ಪಾಠ ಮಾಡುವಾಗ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್​ ಉಗ್ರಗಾಮಿ ಎಂದು ಕರೆದ ಜಮ್ಮು ವಿವಿ ಪ್ರಾಧ್ಯಾಪಕರ ವಿರುದ್ಧ ವಿದ್ಯಾರ್ಥಿಗಳು ಉಪಕುಲಪತಿಗೆ ದೂರು ಸಲ್ಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ಸಮಿತಿಯನ್ನು ರಚಿಸಲಾಗಿದೆ. ಇನ್ನು ವಿದ್ಯಾರ್ಥಿಗಳ ದೂರಿಗೆ ಪ್ರತಿಕ್ರಿಯಿಸಿರುವ ಪ್ರೊ. ತಾಜುದ್ದೀನ್, ‘ರಷ್ಯಾದ ಕ್ರಾಂತಿಕಾರಿ ಲೆನಿನ್ ಕುರಿತು ಪಾಠ ಮಾಡುತ್ತಿದ್ದೆ. ಆಡಳಿತದ ವಿರುದ್ಧ ನಡೆಯುವ ಹಿಂಸಾಚಾರವನ್ನು ಭಯೋತ್ಪಾದನೆ ಎನ್ನಲಾಗುತ್ತದೆ ಎಂದು ಹೇಳುವಾಗ ಭಗತ್ ಸಿಂಗ್ ಬಗ್ಗೆ ಪ್ರಸ್ತಾಪಿಸಿದ್ದೆ. ಯಾರಿಗಾದರೂ ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಅಂತ ಹೇಳಿದರು.

26.ಕೇರಳದ ಪ್ರವಾಹದ ಸಂದರ್ಭದಲ್ಲಿ ಜನರನ್ನು ರಕ್ಷಿಸಿದ್ದ ಭಾರತೀಯ ನೌಕ ಕಮಾಂಡರ್ ಹಾಗೂ ಕ್ಯಾಪ್ಟನ್​ಗೆ 'ಏಷ್ಯನ್ ಆಫ್ ದಿ ಇಯರ್ 'ಪ್ರಶಸ್ತಿ ಸಂದಿದೆ. ಕೊಚ್ಚಿಯಲ್ಲಿ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದ ತುಂಬು ಗರ್ಭೀಣಿಯನ್ನು ಹೆಲಿಕಾಪ್ಟರ್ ಸಹಾಯದಿಂದ ರಕ್ಷಿಸಿದ್ದರು. ನಂತರ ಅವರು ಮಗುವಿಗೆ ಜನ್ಮ ನೀಡಿದ್ದರು. ವರ್ಮಾ ಅವರ ಈ ಅಪ್ರತಿಮ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿತ್ತು.

27.ಇತ್ತೀಚೆಗೆ ನಡೆದ ಕರ್ತಾರ್ ಪುರ್ ಕಾರಿಡಾರ್ ಯೋಜನೆ ಅಡಿಗಲ್ಲು ಸಮಾರಂಭದಲ್ಲಿ ನವಜೋತ್ ಸಿಂಗ್ ಸಿಧು ಭಾಗವಹಿಸಲು ರಾಹುಲ್ ಆದೇಶವೇ ಕಾರಣವೆನ್ನುವುದು ಈಗ ಬಹಿರಂಗವಾಗಿದೆ. ಸಿಧು ಸ್ವತಃ ಈ ಕುರಿತು ಹೇಳಿಕೆ ನೀಡಿದ್ದು, ರಾಹುಲ್ ಗಾಂಧಿ ನನ್ನನ್ನು ಕರ್ತಾರ್ ಪುರ ಕಾರಿಡಾರ್ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಲು ಪಾಕ್ ಗೆ ತೆರಳುವಂತೆ ಹೇಳಿದ್ದರು ಅಂತ ಸ್ಪಷ್ಟಪಡಿಸಿದ್ದಾರೆ

28.ಬಿಜೆಪಿಯ ಮಾಜಿ ಕೇಂದ್ರ ಸಚಿವ ದೀಲಿಪ್ ರಾಯ್ ಮತ್ತು ರಾಷ್ಟ್ರೀಯ ಪ್ರತಿನಿಧಿ ಬಿಜಯ್ ಮಹಾಪತ್ರ ಪಕ್ಷ ತೊರೆದಿದ್ದಾರೆ. ಬಿಜೆಪಿಯ ಮಿಷನ್ 120+ಗೆ ಭಾರಿ ಹಿನ್ನಡೆಯಾಗಿದೆ.ರಾಯ್ ಅವರು ಬಿಜೆಪಿಗೆ ರಾಜೀನಾಮೆ ನೀಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಬಳಿಕ ಒಡಿಶಾ ವಿಧಾನಸಭೆ ಸ್ಪೀಕರ್ ಪ್ರದೀಪ್ ಅಮತ್ ಭೇಟಿ ಮಾಡಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಇನ್ನು ರಾಯ್ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸಿದ್ದಾರೆ. ಬಿಜೆಪಿ ತೊರೆದಿರುವ ಈ ಇಬ್ಬರು ನಾಯಕರು ಬಿಜೆಡಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.

29.ಛತ್ತೀಸ್​​​ಗಢದಲಗಲಿ ನಕ್ಸಲರ ಅಟ್ಟಹಾಸ ಹೆಚ್ಚಾಗಿದೆ. ಕಾರ್ಯಾಚರಣೆ ನಡೆಸುವ ಭದ್ರತಾ ಪಡೆಗಳ ದಿಕ್ಕು ತಪ್ಪಿಸಲು ನಕ್ಸಲರು ಹೊಸ ತಂತ್ರಗಳನ್ನು ರೂಪಿಸಿದ್ದಾರೆ. ಅರಣ್ಯ ಪ್ರದೇಶಗಳಲ್ಲಿ ಡಮ್ಮಿ ಗೊಂಬೆಗಳ ಬಳಕೆ ಮಾಡುತ್ತಿವೆ. ಸುಕ್ಮಾದಲ್ಲಿರುವ ಅರಣ್ಯ ಪ್ರದೇಶವೊಂದರ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಡಮ್ಮಿ ಗೊಂಬೆಗಳನ್ನು ಯೋಧರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಗೊಂಬೆಗಳು ನಿಜವಾದ ಮನುಷ್ಯರಂತೆ ದೂರದಲ್ಲಿ ಕಾಣಿಸುತ್ತಿದ್ದು, ಮರಗಳ ಹಿಂದೆ ನಕ್ಸಲರು ಅವಿತುಕೊಂಡಿರುವಂತೆ ಗೊಂಬೆಗಳನ್ನು ಕಟ್ಟಲಾಗಿದೆ

30.ಕೆಜಿಎಫ್ ಮಾದರಿಯಲ್ಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಕುತೂಹಲ ಕೆರಳಿಸಿರೋ ಮತ್ತೊಂದು ಕನ್ನಡ ಸಿನಿಮಾ ಅವನೇ ಶ್ರೀಮನ್ನಾರಾಯಣ.. 80ರ ದಶಕದ ಕಾಲಘಟ್ಟದಲ್ಲಿ ನಡೆಯುವ ಈ ಸಿನಿಮಾಗಾಗಿ ಭರ್ಜರಿ ಸೆಟ್​ಗಳನ್ನ ಹಾಕಿದೆ ಚಿತ್ರತಂಡ

31.ಡಿಎಆರ್ ಪೇದೆಯೊಬ್ಬ ಎಸ್‌ಪಿ ನಿವಾಸದ ಎದುರೇ ಫೈರಿಂಗ್ ಮಾಡಿಕೊಂಡು ಅನುಮಾನಸ್ಪದ ರೀತಿಯಲ್ಲಿ ಸಾವನ್ನಪಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಘಟನೆಯ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರೋ ಪೇದೆಯ ಸಂಭಂದಿಗಳ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತ ಪೇದೆಯ ಕುಟುಂಬ ಇದು ಆತ್ಮಹತ್ಯೆಯಲ್ಲ, ಇದೊಂದು ಕೊಲೆ ಎಂದು ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ ಕೆಸ್ ದಾಖಲಿಸಲು ಕುಟುಂಬ ಮುಂದಾಗಿದೆ.

32.ಬೆಳಗಾವಿ ಸಬ್ ರಜಿಸ್ಟಾರ್ ಕಚೇರಿಯಲ್ಲಿ ಒಂದೆ ಕುರ್ಚಿಗಾಗಿ ಇಬ್ಬರು ಸಬ್ ರಜಿಸ್ಟಾರಗಳು ಕಿತ್ತಾಡಿಕೊಳ್ಳುತ್ತಿದ್ದು . ಇದರಿಂದ ಸಾರ್ವಜನಿಕರು ಯಾರ ಹತ್ತಿರ ಲಾಂಡ್ ರಜಿಸ್ಟಾರ್ ಮಾಡಿಕೊಳ್ಳುವುದು ಎಂದು ಗೋಂದಲದಲ್ಲಿ ಇದ್ದಾರೆ. ಸರ್ಕಾರ ಸದಾಶಿವ ಡೊಮ್ಮಗೋಳ ಎಂಬ ಅಧಿಕಾರಿಯನ್ನು ಬೆಳಗಾವಿ ಸಬ್ ರಜಿಸ್ಟಾರ್ ಎಂದು 30/10/2018 ರಲ್ಲಿ ಆದೇಶ್ ಹೋರಡಿಸಿದೆ. ಅದರಂತೆ ಸದಾಶಿವ ಡೋಮ್ಮಗೋಳ ಅಧಿಕಾರ ಸ್ವೀಕಾರ ಮಾಡಿದ್ದಾರೆ . ಆದ್ರೆ ಮೊದಲು ಕಾರ್ಯನಿರ್ವಹಣೆ ಮಾಡಿದ ವಿಷ್ಣುತಿರ್ಥ ಎಂಬ ಸಬ್ ರಜಿಸ್ಟಾರ್ ಕೋರ್ಟ ಮೊರೆ ಹೊಗಿದ್ದಾರೆ. ಆದ್ರೇ ಕೋರ್ಟ ಚಾರ್ಜ ತಗೆದುಕೊಂಡ ಅಧಿಕಾರಿಯೇ ಅಧಿಕಾರ ನಡೆಸಬೇಕು ಎಂದು ತಿಳಿಸಿದೆ.

33.ನೌಕಾಪಡೆಯ ಎರಡು ರಹಸ್ಯ ಯುದ್ಧನೌಕೆಗಳಿಗೆ ಬ್ರಹ್ಮೋಸ್‌ ಸೂಪರ್‌ಸಾನಿಕ್ ಕ್ರೂಯಿಸ್ ಕ್ಷಿಪಣಿಗಳು ಮತ್ತು ಭೂಸೇನೆಯ 'ಅರ್ಜುನ್‌' ಪ್ರಧಾನ ಸಮರ ಟ್ಯಾಂಕ್‌ಗಳಿಗೆ ಸಶಸ್ತ್ರ ರಿಕವರಿ ವಾಹನಗಳ ಸಹಿತ 3,000 ಕೋಟಿ ರೂ ಮೌಲ್ಯದ ಮಿಲಿಟರಿ ಖರೀದಿಗೆ ರಕ್ಷಣಾ ಸಚಿವಾಲಯ ಶನಿವಾರ ಅನುಮತಿ ನೀಡಿದೆ.

34.ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್‌.ಡಬ್ಲ್ಯು.ಬುಷ್‌ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು. ಎಂಟು ತಿಂಗಳ ಹಿಂದೆಯಷ್ಟೇ ಪತ್ನಿ ಬಾರ್ಬರಾ ಬುಷ್‌ ನಿಧನರಾದರು. 94 ವರ್ಷಗಳ ಮರೆಯಲಾಗದ ಕ್ಷಣಗಳನ್ನು ನನ್ನ ತಂದೆ ಬಿಟ್ಟು ಹೋಗಿದ್ದಾರೆ. ಈ ವಿಷಯನ್ನು ತಿಳಿಸಲು ಜೆಬ್‌, ನೀಲ್‌, ಮಾರ್ವಿನ್‌, ಡೋರೊ ಹಾಗೂ ನನಗೆ ಅತೀವ ದುಃಖವಾಗಿದೆ ಎಂದು ಬುಷ್‌ ಪುತ್ರ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್‌ ಡಬ್ಲ್ಯು ಬುಷ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬುಷ್‌ 1989ರಿಂದ 1993ರವರೆಗೆ ಅಮೆರಿಕದ 41ನೇ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದರು.

35. ಸಮ್ಮಿಶ್ರ ಸರ್ಕಾರದಲ್ಲೀಗ ಸಂಪುಟ ವಿಸ್ತರಣೆ ಒಳಗುದಿ. ಜೆಡಿಎಸ್‌ ಏನೋ ನಿರಾಳವಾಗಿದೆ. ಆದ್ರೆ, ಕಾಂಗ್ರೆಸ್‌ನಲ್ಲಿ ಚಟವಟಿಕೆ ಶುರುವಾಗಿದೆ. ರೆಬಲ್‌ ಶಾಸಕರ ಸಂಖ್ಯೆ ಹೆಚ್ಚಾಗುತ್ತಿರುವಂತೆ, ಚಳಿಗಾಲದ ಅಧಿವೇಶನಕ್ಕೂ ಮೊದಲೇ ಡಿಸೆಂಬರ್10ರೊಳಗೆ ಸಂಪುಟ ವಿಸ್ತರಣೆ ಮಾಡ್ತೇವೆ ಅಂತ ಕೈ ನಾಯಕರು ಹೇಳ್ತಿದ್ದಾರೆ. ನಿಗಮ - ಮಂಡಳಿಗೂ ನೇಮಕ ಮಾಡ್ತೇವೆ ಅಂತಿದ್ದಾರೆ ಸಿದ್ದರಾಮಯ್ಯ. ಡಿಸಿಎಂ ಪರಮೇಶ್ವರ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರದ್ದೂ ಇದೇ ಮಾತು.

36.2019ರ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಯುವರಾಜ ಶಕ್ತಿ ಯೋಜನೆ ಪರಿಚಯಿಸಿದ್ದರು. ಹೆಚ್ಚು ಸದಸ್ಯತ್ವ ನೋಂದಣಿ ಮೂಲಕ ಕಾಂಗ್ರೆಸ್‌ಗೆ ಬಲ ತುಂಬುವ ನಿಟ್ಟಿನಲ್ಲಿ ರಾಹುಲ್ ಈ ಕನಸಿನ ಯೋಜನೆ ಜಾರಿಗೆ ತಂದಿದ್ದರು. ಇದಕ್ಕಾಗಿ ಬೂತ್ ಮಟ್ಟದಿಂದ ಬ್ಲಾಕ್, ಜಿಲ್ಲಾ ಮಟ್ಟದವರೆಗೆ ಸಂಘಟಕರು ಹಾಗೂ ಉಸ್ತುವಾರಿಗಳನ್ನ ನೇಮಿಸಿದ್ದರು. ರಾಜ್ಯಮಟ್ಟದಲ್ಲಿ ಪ್ರತ್ಯೇಕ ಸಮಿತಿ ರಚಿಸಿದ್ದರು.

37.ಅರ್ಜೆಂಟೀನಾ ರಾಜಧಾನಿ ಬ್ಯೂನಸ್ ಎರೆಸ್‌ನಲ್ಲಿ ಜಿ - 20 ದೇಶಗಳ ಶೃಂಗಸಭೆ ನಡೆಯಿತು. ದೇಶಭ್ರಷ್ಟ ಆರ್ಥಿಕ ಅಪರಾಧಿಗಳನ್ನು ಪರಿಣಾಮಕಾರಿಯಾಗಿ ಮಟ್ಟಹಾಕಲು ಬಲವಾದ ಮತ್ತು ಸಕ್ರಿಯ ಸಹಕಾರಕ್ಕೆ ಜಿ- 20 ಸದಸ್ಯ ರಾಷ್ಟ್ರಗಳಿಗೆ ಕರೆ ನೀಡಿರುವ ಭಾರತ, 9 ಅಂಶಗಳ ಕಾರ್ಯಸೂಚಿ ಸಲಹೆ ಮುಂದಿಟ್ಟಿದೆ. ಶೃಂಗಸಭೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ವ್ಯಾಪಾರ, ಅಂತರರಾಷ್ಟ್ರೀಯ ಹಣಕಾಸು ಮತ್ತು ತೆರಿಗೆ ವ್ಯವಸ್ಥೆ ಕುರಿತ 9 ಅಂಶಗಳ ಕಾರ್ಯಸೂಚಿ ಮುಂದಿಟ್ಟಿದ್ದಾರೆ.

38.ಕಾಂಗ್ರೆಸ್ - ಜೆಡಿಎಸ್ ನಾಯಕರು ಬಿಜೆಪಿ ಮುಖಂಡರನ್ನ ಭೇಟಿ ಮಾಡಿ 2 ಪಕ್ಷಗಳ ಹೈಕಮಾಂಡ್​ಗೆ ಬ್ಲಾಕ್ ಮೇಲ್ ಮಾಡ್ತಿದ್ದಾರೆ ಅಂತ ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ. ಗದಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ರೆಸಾರ್ಟ್ ರಾಜಕೀಯಕ್ಕೂ ಬಿಜೆಪಿಗೂ ಸಂಬಂಧವಿಲ್ಲ. ಕಾಂಗ್ರೆಸ್ - ಜೆಡಿಎಸ್ ನಾಯಕರು ಜಗಳ ಮಾಡಿಕೊಂಡು ರಾಜೀನಾಮೆ ನೀಡಿ ನಮ್ಮ ಜೊತೆ ಬಂದ್ರೆ ನಾವು ಏನ್ ಮಾಡೋಕೆ ಆಗಲ್ಲ. ಅನಿವಾರ್ಯವಾಗಿ ಸರ್ಕಾರ ಮಾಡ್ತೀವಿ ಅಂತ ಹೇಳಿದ್ದಾರೆ.

39.ದೇಶದಾದ್ಯಂತ ಭಾರೀ ಸುದ್ದಿಯಾಗಿದ್ದ ಮೀಟೂ ಚಳವಳಿಯಲ್ಲಿ ಹಲವಾರು ಮಹಿಳೆಯರು, ನಟಿ ಮಣಿಯರು ಲೈಂಗಿಕ ದೌರ್ಜನ್ಯ ಹೇಳಿಕೊಂಡು ಸುದ್ದಿಯಲ್ಲಿದ್ದರು. ಅದೇ ವೇಳೆ ನಟಿ ಶ್ರುತಿ ಹರಿಹರನ್‌, ನಟ ಅರ್ಜುನ್‌ ಸರ್ಜಾ ವಿರುದ್ಧ ಮಾಡಿದ್ದ ಆರೋಪದ ಬೆನ್ನಲ್ಲೇ ಶ್ರುತಿ ಪರ ನಿಂತು ಚೇತನ್‌ ಸುದ್ದಿಯಾಗಿದ್ದರು. ಇದೀಗ ಕಲುಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಚೇತನ್‌, ಮೀಟೂ ಎನ್ನುವುದು ದಶಕಗಳಿಂದ ಬಂದಿರುವ ಕಾಯಿಲೆ. ಒಟ್ಟಾಗಿ ಕೈಜೋಡಿಸಿ ತೆಗೆದು ಹಾಕುವುದು ನಮ್ಮೆಲ್ಲರ ಕರ್ತವ್ಯ. ಚಿತ್ರರಂಗ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮೀಟೂ ಇದೆ. ಅಲೆಮಾರಿ ಜನಾಂಗದವರಿಗೂ ಲೈಂಗಿಕ ಕಿರುಕುಳ ಆಗುತ್ತಿದೆ ಎಂದು ಹೇಳಿದ್ದಾರೆ.

40.ಕಬ್ಬು ಬಾಕಿ ಸಂಬಂಧ ರಾಜ್ಯ ಸರ್ಕಾರಕ್ಕೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್‌ ಮತ್ತೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ‌ 629 ಕೋಟಿ ರೂಪಾಯಿ ಕಬ್ಬು ಬಾಕಿ ಇದ್ದು, ಬೆಳಗಾವಿ ಅಧಿವೇಶನದ ಒಳಗೆ ಪಾವತಿಸಬೇಕು. ಇಲ್ಲದಿದ್ದರೆ ಡಿಸೆಂಬರ್‌ 10ರಿಂದ ಬೆಳಗಾವಿ ಸುವರ್ಣಸೌಧದ ಮುಂದೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಚಳಿಗಾಲ ಅಧಿವೇಶನದ ಒಳಗೆ ಕಬ್ಬು ಬಾಕಿ ಪಾವತಿ ಮಾಡಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಭರವಸೆ ನೀಡಿದರು.

41.ಗೌರಿ ಲಂಕೇಶ್ ಹತ್ಯೆ ಆರೋಪಿಗಳ ಬಂಧನದ ಬಳಿಕ ಇದೀಗ ಎಸ್‌ಐಟಿ ಪೊಲೀಸರಿಗೆ ಮತ್ತೊಂದು ಸವಾಲು ಎದುರಾಗಿದೆ. ಹಿರಿಯ ಸಾಹಿತಿ, ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ ಕೂಡ ಎಸ್‌ಐಟಿಗೆ ವರ್ಗಾವಣೆಯಾಗಿದೆ. 2015ರ ಆಗಸ್ಟ್ 30ರಂದು ಅವರ ಮನೆಯಲ್ಲೇ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಕೊಲೆಗೈದಿದ್ದ. ಅಂದಿನಿಂದ ಇಂದಿನವರೆಗೆ ಸಿಐಡಿ ತನಿಖೆ ನಡೆಸುತಿತ್ತು.

42.ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ತೆರೆ ಬಿದ್ದ ಬೆನ್ನಲ್ಲೆ ಹಲವು ವಿವಾದ ತಲೆದೋರಿವೆ. ಹೋಟೆಲ್‌ನಲ್ಲಿ ಇವಿಎಂ ಪತ್ತೆ ಬೆನ್ನೆಲ್ಲ ಇದೀಗ ಮತ್ತೊಂದು ವಿವಾದ ಬೆಳಕಿಗೆ ಬಂದಿದೆ. ಮತದಾನದ ಬಳಿಕ 2 ದಿನಗಳ ನಂತರ ಮತಯಂತ್ರ ಸಂಗ್ರಹ ಕೊಠಡಿಗೆ 34 ಇವಿಎಂ ತರಲಾಗಿದೆ. ಇದು ವಿವಾದ ಎಬ್ಬಿಸಿದ್ದು, ಮತದಾನದ ಬಳಿಕ ಎರಡು ದಿನಗಳ ಕಾಲ ಮತಯಂತ್ರಗಳು ಎಲ್ಲಿ ಹೋಗಿದ್ದವು? ಎಂಬ ಪ್ರಶ್ನೆ ಉದ್ಭವಿಸಿದೆ.

43.ನಟ ಪ್ರಕಾಶ್ ರಾಜ್ ಮೂರು ಓಟರ್ ಐಡಿ ಹೊಂದಿರುವ ಆರೋಪ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಬೆಂಗಳೂರು ನಿವಾಸಿ ಜಗನ್ ಕುಮಾರ್ ದೂರು ನೀಡಿದ್ದಾರೆ. ದೂರು ನೀಡಿರುವುದಕ್ಕೆ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್, ನನ್ನ ಬಳಿ ಇರುವುದು ಒಂದೇ ಓಟರ್ ಐಡಿ ಕಾರ್ಡ್. ಆದ್ರೆ ನನ್ನ ವಿರುದ್ಧ ಮಾಡಿರುವ ಆರೋಪಕ್ಕೆ ಅವರಲ್ಲಿ ತಪ್ಪು ಗ್ರಹಿಕೆ ಇರಬಹುದು. ತಮಿಳುನಾಡಿನ ಅಡ್ಯಾರ್‌ನಲ್ಲಿ ನನಗೆ ಓಟರ್ ಐಡಿ ಇದೆ ಅಂತ ಹೇಳಿದ್ದಾರೆ.

44.ಪಂಚರಾಜ್ಯಗಳ ಚುನಾವಣೆ ನಡುವೆಯೇ ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ. ಸರ್ಜಿಕಲ್ ಸ್ಟ್ರೈಕ್‌ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಮೋದಿ ಯತ್ನಿಸುತ್ತಿದ್ದಾರೆ. ಇದು ಬಿಜೆಪಿಯ ರಾಜಕೀಯ ಆಸ್ತಿಯಂತೆ ಆಗಿದೆ ಎಂದು ಟೀಕಿಸಿದ್ದಾರೆ. ಮೋದಿ ಸರ್ಕಾರದ ಅವಧಿಯಂತೆ ಮನಮೋಹನ್‌ ಸಿಂಗ್‌ ಅಧಿಕಾರಾವಧಿಯಲ್ಲೂ ಮೂರು ಬಾರಿ ಪಾಕಿಸ್ತಾನದ ಮೇಲೆ ಸರ್ಜಿಕಲ್‌ ಸ್ಟ್ರ್ರೈಕ್‌ ನಡೆದಿತ್ತು. ಇದರ ಬಗ್ಗೆ ನಿಮಗೆ ಅರಿವಿದೆಯೇ? ಎಂದು ಮೋದಿಗೆ ರಾಹುಲ್‌ ಪ್ರಶ್ನಿಸಿದ್ದಾರೆ.

45.ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌ ಯಡಿಯೂರಪ್ಪ ಚಿಕಿತ್ಸೆ ಪಡೆಯಲು ಕೇರಳಕ್ಕೆ ಹೋಗಿಲ್ಲ.. ಬದಲಾಗಿ ಮಂತ್ರ-ತಂತ್ರ ಮಾಡಲು ಕೇರಳಕ್ಕೆ ಹೋಗಿದ್ದಾರೆ ಅಂತ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ವ್ಯಂಗ್ಯವಾಡಿದ್ದಾರೆ.. ಶಿವಮೊಗ್ಗದಲ್ಲಿ ಮಾತನಾಡಿದ ಅವ್ರು, ಯಡಿಯೂರಪ್ಪರ ರೈತಪರ ಕಾಳಜಿ ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತಾಗಿದೆ. ರೈತರಿಗೆ ಮರಣ ಶಾಸನ ತಂದ ಯಡಿಯೂರಪ್ಪಗೆ ರೈತರ ಬಗ್ಗೆ ಮಾತಾಡುವ ಹಕ್ಕಿಲ್ಲ ಅಂತ ಆರೋಪಿಸಿದ್ರು.. ಅಲ್ಲದೇ ಸುಳ್ಳು ಹೇಳೋದ್ರಲ್ಲಿ ಅಪ್ಪ ಮಕ್ಕಳು ಮೂರೂ ಬಹುಮಾನ ಹೊಡೀತಾರೆ, ಅಪ್ಪ-ಮಕ್ಕಳ ಜಾತಕ ನನ್ನ ಹತ್ರ ಇದೆ.. ಬರಲಿ ನನ್ನ ಹತ್ರ ನೋಡೋಣ ಅಂತ ಸವಾಲ್ ಹಾಕಿದ್ದಾರೆ.

46.ಪಾಕಿಸ್ತಾನದ ರುಪಾಯಿ ಮೌಲ್ಯ ಶುಕ್ರವಾರ ಹತ್ತಿರ ಹತ್ತಿರ ಐದು ಪರ್ಸೆಂಟ್ ನಷ್ಟು ಕುಸಿತ ದಾಖಲಿಸಿದ್ದು, ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ. ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆರನೇ ಬಾರಿಗೆ ದೇಶದ ರುಪಾಯಿ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದೆ. ನಿರಂತರವಾಗಿ ವಿತ್ತೀಯ ಕೊರತೆ ಬಿಕ್ಕಟ್ಟು ಎದುರಿಸುತ್ತಿರುವ ಆ ದೇಶ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

47.ಕರ್ನಾಟಕದ ಮೀನುಗಳ ಆಮದು ನಿಷೇಧವನ್ನು ತೆರವುಗೊಳಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಗೋವಾ ಸಿಎಂ ಮನೋಹರ್ ಪರಿಕ್ಕರ್​ಗೆ ಪತ್ರ ಬರೆದಿದ್ದಾರೆ. ಕರ್ನಾಟಕದ ಮೀನು ಬಳಕೆ ಮಾಡುವುದರಿಂದ ಕ್ಯಾನ್ಸರ್ ಭಯದಿಂದಾಗಿ ನವೆಂಬರ್ 10ರಂದು ಗೋವಾ ಸರ್ಕಾರ ಕರ್ನಾಟಕ ಮೀನಿನ ಮೇಲೆ ನಿಷೇಧ ಹೇರಿತ್ತು. ಇದೀಗ ಮೀನುಗಳ ಸಂಸ್ಕರಣೆಗೆ ಬಳಸುವ ರಾಸಾಯನಿಕದಿಂದಾಗಿ ಕ್ಯಾನ್ಸರ್ ಕಾರಕ ಅಂಶವಿದೆ ಎಂದು ಹೇಳಲಾಗ್ತಿದೆ.

48.ರಾಹುಲ್​ ಹೆಸರಿನ ಮುಂದೆ ಗಾಂಧಿ ಎಂಬ ಪದ ಇರದೇ ಇದ್ದರೆ ಜಿಲ್ಲಾಧ್ಯಕ್ಷರಾಗಿಯೂ ಕೂಡ ಆಯ್ಕೆಯಾಗುತ್ತಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್​ ಒಂದು ಹಳೆಯ ಪಕ್ಷ. ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್​ರಂತಹ ಹಲವು ಪ್ರಮುಖ ವ್ಯಕ್ತಿಗಳಿಂದ ಪಕ್ಷ ಎತ್ತರಕ್ಕೆ ತಲುಪಿದೆ. ಆದರೆ, ಒಂದಂತೂ ಖಚಿತಪಡಿಸುತ್ತೇನೆ. ಒಂದು ವೇಳೆ ರಾಹುಲ್ ಈ​ ಗಾಂಧಿ ಕುಟುಂಬದಲ್ಲಿ ಹುಟ್ಟಿರದಿದ್ದರೆ, ಅವರು ಕಾಂಗ್ರೆಸ್​ನ ಜಿಲ್ಲಾಧ್ಯಕ್ಷರೂ ಆಗುತ್ತಿರಲಿಲ್ಲ ಅಂತ ಹೇಳಿದ್ದಾರೆ.

49.ಭಾರತದೊಂದಿಗೆ ಶಾಂತಿ ಮಾತುಕತೆಗೆ ಆಗ್ರಹಿಸುತ್ತಿರುವ ಪಾಕಿಸ್ತಾನ ಮೊದಲು ಜಾತ್ಯಾತೀತವಾಗಬೇಕು ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಪುಣೆ ಸೇನಾ ಕಾರ್ಯಕ್ರಮದಲ್ಲಿ ಪ್ರತಿಕ್ರಿಯಿಸಿರುವ ಅವರು, ಶಾಂತಿ ಮಾತುಕತೆಗೆ ಭಾರತ ಎಂದಿಗೂ ಅಡ್ಡಿ ಪಡಿಸಿಲ್ಲ. ಆದರೆ ಪಾಕಿಸ್ತಾನ ಒಂದು ಕೈಯಲ್ಲಿ ಉಗ್ರರ ಉತ್ತೇಜನ ಮಾಡಿ ಮತ್ತೊಂದು ಕೈಯಲ್ಲಿ ಭಾರತದೊಂದಿಗೆ ಶಾಂತಿ ಮಾತುಕತೆ ಆಹ್ವಾನ ನೀಡಿದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಅಂತ ಹೇಳಿದ್ದಾರೆ.

50.ಕಾಫಿ ನಾಡು ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಸ್ಪೋರ್ಟ್ಸ್ ಕಾರ್‌ ರೇಸ್‌ನಲ್ಲಿ ಸ್ಪರ್ಧಾಳುಗಳು ಪ್ರೇಕ್ಷಕರ ಮೈನವಿರೇಳಿಸಿದ್ರು. 3 ಕಿ.ಮೀ. ವ್ಯಾಪ್ತಿಯ ಹಾವು-ಬಳುಕಿನ ಮೈಕಟ್ಟಿನ ಮಣ್ಣಿನ ಹಾದಿಯಲ್ಲಿ ಚಾಲಕರ ಧೂಳೆಬ್ಬಿಸ್ತಾ ಓಡಿಸ್ತಿದ್ದ ಕಾರುಗಳು ನೋಡ್ದೋರ ಎದೆ ಮೇಲೆ ಹೋದಂತಿತ್ತು.

Next Story

RELATED STORIES