ಮೈಸೂರಲ್ಲಿ ಫಿಲ್ಮ್ ಸಿಟಿ ಆಗಲಿ, ಅದಕ್ಕೆ ಅಂಬಿ ಹೆಸರಿಡಲಿ: ಸಿದ್ದು ಸಲಹೆ

ಅಂಬರೀಶ್ ಅವರ ಆಸೆಯಂತೆ ಮೈಸೂರಿನಲ್ಲಿ ಫಿಲ್ಮ್ ಸಿಟಿ ಆಗಲಿ. ಮತ್ತು ಅದಕ್ಕೆ ಅವರ ಹೆಸರನ್ನೇ ಇಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಅಂಬರೀಶ್ ನುಡಿ-ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕು ಎಂಬುದು ಕನ್ನಡ ಚಿತ್ರರಂಗದ ದಿಗ್ಗಜರಾದ ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರ ಕನಸಾಗಿತ್ತು. ನಾನು ಮುಖ್ಯಮಂತ್ರಿ ಆಗಿದ್ದಾಗ ಮೈಸೂರು ಸಮೀಪದ ಹುಣಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಭೂಮಿ ನೀಡಿದ್ದೆ. ಈಗಿನ ಬಜೆಟ್ನಲ್ಲಿ ರಾಮನಗರದಲ್ಲಿ ಫಿಲ್ಮ್ ಸಿಟಿ ನಿರ್ಮಿಸುವ ಪ್ರಸ್ತಾಪ ಮಾಡಲಾಗಿದೆ. ಅದರ ಬದಲು ಮೈಸೂರಿನಲ್ಲೇ ಸ್ಥಾಪಿಸಬೇಕು ಎಂದರು.
ಇಬ್ಬರು ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು. ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬೇರೆ ಭಾಷೆಯ ದೊಡ್ಡ ನಟರು ಕೂಡ ಇವರಿಗೆ ಆತ್ಮೀಯ ಸ್ನೇಹಿತರಾಗಿದ್ದರು ಎಂದು ಸಿದ್ದರಾಮಯ್ಯ ನುಡಿದರು.
ಅಂಬರೀಶ್ ಮತ್ತು ನನ್ನ ಸ್ನೇಹ 35 ವರ್ಷಕ್ಕಿಂತ ಹೆಚ್ಚು. ಮೈಸೂರಿನ ಹೋಟೆಲ್ನಲ್ಲಿ ಅವರ ಪರಿಚಯವಾಗಿತ್ತು. ಆದರೆ ಅವರು ನಂತರ ಆತ್ಮೀಯ ಸ್ನೇಹಿತರಲ್ಲಿ ಒಬ್ಬರಾಗಿದ್ದರು. ನಾನು ವಕೀಲನಾಗಿದ್ದೆ. ಆಗಷ್ಟೇ ಅವರು ನಾಗರಹಾವು ಚಿತ್ರದಲ್ಲಿ ನಟಿಸಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.