ಅಂಬಿ ಜೊತೆ 'ರೆಬೆಲ್' ಸಿನಿಮಾಗೆ ಕೈ ಹಾಕಿದ್ರಂತೆ ಕುಮಾರಸ್ವಾಮಿ

ಕನ್ನಡದ ಮೇರುನಟ ಅಂಬರೀಶ್ ವಿಚಾರದಲ್ಲಿ ಯಾರೆಲ್ಲಾ ಏನೆಲ್ಲಾ ಕನಸು ಕಂಡಿದ್ರೋ, ಅದೆಲ್ಲಾ ಕನಸಾಗಿಯೇ ಉಳಿದುಹೋಗಿದೆ. ಅತ್ತ ಅಂಬಿ ಕಂಡ ಕೊನೆಯ ಕನಸುಗಳು ಕೂಡ ನನಸಾಗಲೇ ಇಲ್ಲ. ಇದ್ದಕ್ಕಿದ್ದಂತೆ ಜವರಾಯನ ದರ್ಪಕ್ಕೆ ಅಂಬಿ ಇಹಲೋಕ ತ್ಯಜಿಸಿಬಿಟ್ಟರು. ಕರ್ಣನಿಲ್ಲದ ಚಿತ್ರರಂಗ ಬಡವಾಗಿ ಹೋಗಿದೆ. ಕಣ್ಣೀರ ಕೋಡಿಯಲ್ಲಿ, ಅವರ ನೆನಪಿನಂಗಳದಲ್ಲಿ ಭಾವತೀರ ಸಾಗಿದೆ.
ಚಿತ್ರರಂಗ ಕಂಡ ಅಪರೂಪದ ಅತ್ಯದ್ಭುತ ಕಲಾವಿದ ಅಂಬಿ ಇಂದು ನಮ್ಮೊಂದಿಗಿಲ್ಲ. ಆದ್ರೆ ಅವ್ರ ಸಿನಿಮಾಗಳು, ಅದರ ಪಾತ್ರಗಳು, ಅವರ ಹಾವ-ಭಾವ, ಆಂಗಿಕ ಭಾಷೆ ಹೀಗೆ ಪ್ರತಿಯೊಂದು ಅಂಶ ಕೂಡ ಕನ್ನಡಿಗರ ನರನಾಡಿಗಳಲ್ಲಿ ತುಂಬಿ ಹೋಗಿದೆ. ಅಂಬಿ ಇನ್ನಿಲ್ಲ ಅನ್ನೋ ನೋವಿಂದ ಹೊರಬರಲಾರದಂತಹ ತೊಳಲಾಟದಲ್ಲಿ ಅವ್ರ ಕುಟುಂಬ ಸೇರಿದಂತೆ, ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಹೀಗಿರುವಾಗ ಅವರ ಒಂದೊಂದೇ ಸ್ವಾರಸ್ಯಕರ ವಿಚಾರಗಳು ಈಗೀಗ ಬೆಳಕಿಗೆ ಬರ್ತಿವೆ. ಅದ್ರಲ್ಲಿ ಸಿಎಂ ಕಂಡ ಮಹತ್ತರ ಕನಸು ಕೂಡ ಒಂದು.
ನನಸಾಗಲೇ ಇಲ್ಲ ಸಿಎಂ ಕುಮಾರಣ್ಣ ಕಂಡ ‘ರೆಬೆಲ್’ ಕನಸು..!
ಸಿಎಂ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಅನ್ನೋದಕ್ಕಿಂತ ಹೆಚ್ಚಾಗಿ ಅಪಾರ ಸಿನಿಮಾಸಕ್ತಿ ಇರೋ ಪ್ಯಾಷನೇಟ್ ಫಿಲ್ಮ್ ಮೇಕರ್. ಸೂರ್ಯವಂಶ, ಚಂದ್ರಚಕೋರಿ ಅಂತಹ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನ ಕನ್ನಡಿಗರಿಗೆ ಕೊಟ್ಟಂತಹ ನಿರ್ಮಾಪಕ ಕುಮಾರಸ್ವಾಮಿ, ಮಗ ನಿಖಿಲ್ನ ಜಾಗ್ವಾರ್ ಸ್ಟಾರ್ ಮಾಡಿದ್ದು ಗೊತ್ತೇಯಿದೆ.
ಆದ್ರೆ ಸದ್ಯ ಸೀತಾರಾಮ ಕಲ್ಯಾಣ ಚಿತ್ರದ ಪ್ರೊಡಕ್ಷನ್ನಲ್ಲಿ ಬ್ಯುಸಿ ಇರೋ ಕುಮಾರಣ್ಣ, ಇದಾದ ಬಳಿಕ ಅಂಬರೀಶ್ ಜೊತೆ ನಿಖಿಲ್ ಸಿನಿಮಾ ಮಾಡಿಸೋ ದೊಡ್ಡ ಕನಸು ಕಂಡಿದ್ರು. ಅದೂ ತಮ್ಮದೇ ಚನ್ನಾಂಬಿಕ ಫಿಲಂಸ್ ಬ್ಯಾನರ್ನಡಿ ತಾವೇ ನಿರ್ಮಾಣ ಮಾಡ್ಬೇಕು ಅಂತ, ತೆಲುಗಿನ ರೆಬೆಲ್ ಸಿನಿಮಾದ ಕನ್ನಡ ರಿಮೇಕ್ ರೈಟ್ಸ್ನ ಖರೀದಿಸಿದ್ದರಂತೆ.
ಟಾಲಿವುಡ್ ರೆಬೆಲ್ ಸ್ಟಾರ್ ಪಾತ್ರದಲ್ಲಿ ಕನ್ನಡದ ರೆಬೆಲ್ ಸ್ಟಾರ್..?
ಪ್ರಭಾಸ್ ಪಾತ್ರಕ್ಕೆ ಸ್ಯಾಂಡಲ್ವುಡ್ ಯುವರಾಜ ನಿಖಿಲ್ ಫಿಕ್ಸ್..!!
2012ರಲ್ಲಿ ರೆಬೆಲ್ ಸ್ಟಾರ್ ಕೃಷ್ಣಂರಾಜು ಹಾಗೂ ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಜೋಡಿಯ ರೆಬೆಲ್ ಸಿನಿಮಾ ಪಕ್ಕದ ಟಾಲಿವುಡ್ನಲ್ಲಿ ತೆರೆಕಂಡಿತ್ತು. ಫ್ಯಾಮಿಲಿ ಕಮ್ ಮಾಸ್ ಎಂಟ್ರಟೈನರ್ ಸಿನಿಮಾದ ಸ್ಟೋರಿಲೈನ್ ಸಖತ್ ಇಂಪ್ರೆಸ್ಸೀವ್ ಆಗಿತ್ತು. ಹಾಗಾಗಿ ಅದನ್ನ ಕನ್ನಡದಲ್ಲಿ ಸ್ಯಾಂಡಲ್ವುಡ್ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ನಿಖಿಲ್ ಕೈಲಿ ಮಾಡಿಸೋ ಪ್ಲಾನ್ನಲ್ಲಿದ್ದರು.
ಕುರುಕ್ಷೇತ್ರ ಚಿತ್ರದಲ್ಲಿ ಅಂಬರೀಶ್ ಹಾಗೂ ನಿಖಿಲ್ ಸ್ಕ್ರೀನ್ ಶೇರ್ ಮಾಡಿದ್ರೂ ಸಹ, ಫುಲ್ ಫ್ಲೆಡ್ಜ್ಡ್ ಆಗಿ ಒಂದೇ ಸಿನಿಮಾದಲ್ಲಿ ತಂದೆ-ಮಗನನ್ನಾಗಿಸಿ ಸಿನಿಮಾ ಮಾಡೋಕ್ಕೆ ಸಿಎಂ ಕುಮಾರಸ್ವಾಮಿ ಸಕಲ ಸಿದ್ದತೆ ನಡೆಸಿದ್ರು. ಆದ್ರೀಗ ಸಿಎಂರ ಆ ಕನಸು ಕನಸಾಗಿಯೇ ಉಳಿದುಹೋಗಿದೆ.
ಅಂದಹಾಗೆ ಸಿಎಂ ಕುಮಾರಸ್ವಾಮಿ ಈ ಮಾತನ್ನ ಫಿಲ್ಮ್ ಚೇಂಬರ್ ಅಂಬೇಡ್ಕರ್ ಭವನದಲ್ಲಿ ನಡೆಸಿದ ಅಂಬಿ ಶ್ರದ್ಧಾಂಜಲಿ ಸಭೆಯಲ್ಲಿ ಭಾವುಕವಾಗಿ ನುಡಿದಿದ್ದಾರೆ. ಅದೇನೇ ಇರಲಿ, ಅಂಬಿ ಇದ್ದು ಆ ರೆಬೆಲ್ ಸಿನಿಮಾ ಮಾಡಿದ್ದಿದ್ರೆ, ನಮ್ಮ ಕನ್ನಡದ ಸಿನಿಪ್ರಿಯರಿಗೆ ಎಲ್ಲಿಲ್ಲದ ಖುಷಿ ಕೊಡ್ತಿತ್ತು. ಇತ್ತ ಕುಮಾರಣ್ಣನ ರೆಬೆಲ್ ಕನಸೂ ನನಸಾಗ್ತಿತ್ತು.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ ಹೆಡ್, ಟಿವಿ5