Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ತೆಲಂಗಾಣ ವಿಧಾನಸಭೆ ಚುನಾವಣೆ ಕಾವೇರುತ್ತಿದ್ದಂತೆಯೇ ಮುಸ್ಲಿಂ ಮತ ಸೆಳೆಯಲು ಕಾಂಗ್ರೆಸ್ ತಂತ್ರ ರೂಪಿಸಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷರಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಸಂಸದ ಮೊಹಮ್ಮದ್ ಅಜರುದ್ದೀನ್ ಅವರನ್ನು ನೇಮಕ ಮಾಡಿದೆ. ತೆಲಂಗಾಣ ಕಾಂಗ್ರೆಸ್ ಸಮಿತಿಗೆ ಎಂಟು ನೂತನ ಪ್ರಧಾನ ಕಾರ್ಯದರ್ಶಿಗಳನ್ನು ಮತ್ತು ನಾಲ್ವರು ಕಾರ್ಯದರ್ಶಿಗಳನ್ನು ಸಹ ರಾಹುಲ್ ನೇಮಕ ಮಾಡಿದ್ದಾರೆ.

2.ಅಡುಗೆ ಅನಿಲ ಸಿಲಿಂಡರ್‌ ಬೆಲೆ ಕಡಿಮೆಯಾಗಿದೆ. ಸಬ್ಸಿಡಿ ಸಹಿತ ಗ್ಯಾಸ್‌ ಸಿಲಿಂಡರ್ ಬೆಲೆ 6 ರೂಪಾಯಿ 52 ಪೈಸೆಯಷ್ಟು ಕಡಿಮೆಯಾಗಿದೆ. ಇಂದು ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಗೆ ಬರಲಿವೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಲಿಂಡರ್‌ ಬೆಲೆ 500 ರೂಪಾಯಿ 90 ಪೈಸೆಗಳಾಗಲಿವೆ. ಇಂಡಿಯನ್‌ ಆಯಿಲ್‌ ನಿಗಮ ಈ ವಿಷಯ ತಿಳಿಸಿದೆ. 14 ಕೆಜಿ ತೂಕದ ಸಿಲಿಂಡರ್‌ ಬೆಲೆ 6 ರೂಪಾಯಿ 52 ಪೈಸೆಯಷ್ಟು ಕಡಿತಗೊಂಡಿದೆ.

3.ನೋವಿನಿಂದ ನರಳುತ್ತಿದ್ದ ತುಂಬು ಗರ್ಭಿಣಿಯನ್ನು ತಮ್ಮ ಸ್ವಂತ ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಮೂಲಕ ಅರುಣಾಚಲ ಪ್ರದೇಶದ ರಾಜ್ಯಪಾಲ ಬಿ.ಡಿ.ಮಿಶ್ರಾ ಮಾನವೀಯತೆ ಮೆರೆದಿದ್ದಾರೆ. ಇವಾಂಗ್‌ನಿಂದ ಇಟಾನಗರದವರೆಗೆ ಕರೆತಂದು ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ. ಮಿಶ್ರಾ ಅವರು ರಾಜಭವನ ಹೆಲಿಪ್ಯಾಡ್‌ನಿಂದ ಪ್ರಸೂತಿ ತಜ್ಞರನ್ನೊಳಗೊಂಡ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಮಹಿಳೆ ಆಸ್ಪತ್ರೆಗೆ ತಲುಪಲು ವಿಳಂಬವಾಗದಂತೆ ನೋಡಿಕೊಂಡಿದ್ದಾರೆ.

4.ಪ್ರಧಾನಿ ಮೋದಿಗೆ ಮಾಜಿ ಪ್ರಧಾನಿ ಕನ್ನಡಿಗ ಹೆಚ್​ಡಿ ದೇವೇಗೌಡ ಕೃಷಿ ಪಾಠ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಪಾಠ ಮಾಡಿರುವ ದೇವೇಗೌಡ, ಸರ್ಕಾರ ಉದ್ಯಮ ಸ್ನೇಹಿ ನೀತಿಯ ಪ್ರಯೋಜನವನ್ನು ಜಾಗತಿಕ ಮಟ್ಟದಲ್ಲಿ ಬೆಳಕು ಚೆಲುವ ಸರಳೀಕೃತ ಉದ್ಯಮ ಕಾರ್ಯ ವಿಧಾನದ (ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌) ಬದಲು 'ಈಸ್​​​​ ಆಫ್ ಡೂಯಿಂಗ್ ಅಗ್ರಿಕಲ್ಚರ್'ನತ್ತ ಗಮನ ಹರಿಸುವುದು ಉತ್ತಮ ಎಂದು ಸಲಹೆ ನೀಡಿದ್ದಾರೆ.

5.ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಕೈ ಶಾಸಕರು ಅಸಮಾಧಾನಗೊಂಡಿದ್ದಾರೆ..ಕೆಲವು ಶಾಸಕರು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಒಟ್ಟಾಗ್ತಿದ್ದಾರೆಂಬ ಮಾಹಿತಿ ಹರಿದಾಡ್ತಿದೆ..ಅಲ್ಲದೆ ಬಿಜೆಪಿಯ ಮೂವರು ಶಾಸಕರು ಒಬ್ಬರಾದ ಮೇಲೆ ಒಬ್ರು ರಮೇಶ್ ಜಾರಕಿಹೊಳಿ ನಿವಾಸಕ್ಕೆ ಭೇಟಿ ನೀಡ್ತಿದ್ದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

6.ಬಹುದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಮೇಕೆದಾಟು ಯೋಜನೆಗೆ ಕೇಂದ್ರ ಜಲ ಆಯೋಗ ಗ್ರೀನ್ ಸಿಗ್ನಲ್ ನೀಡಿದೆ.ಆದರೆ ತಮಿಳುನಾಡು ಮಾತ್ರ ಯೋಜನೆಗೆ ಮತ್ತೆ ಅಡ್ಡಗಾಲು ಹಾಕುವ ಮೂಲಕ ವಿಫ್ನ ತರಲು ಮುಂದಾಗಿದೆ. ಕುಡಿಯುವ ನೀರಿನ ಉದ್ದೇಶಕ್ಕೆ ಕೈಗೆತ್ತಿಕೊಂಡಿರುವ ಯೋಜನೆಗೆ ಅಡ್ಡಿಪಡಿಸದಂತೆ ಮನವಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

7.ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಅರ್ಜೆಂಟಿನಾಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಸೌದಿ ಅರೇಬಿಯಾ ದೊರೆಯನ್ನು ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಆಹಾರ ಭದ್ರತೆ, ಬಂಡವಾಳ ಹೂಡಿಕೆ, ತಂತ್ರಜ್ಞಾನ, ನವೀಕೃತ ಇಂಧನ ಕುರಿತಾಗಿ ಮಾತುಕತೆ ನಡೆಸಿದ್ದಾರೆ. ಸೌದಿ ಅರೇಬಿಯಾದ ದೊರೆ ಮೊಹಮ್ಮದ್‌ ಬಿನ್‌ ಸಲ್ಮಾನ್‌ ಅಲ್‌ ಸೌದ್‌ ಅವರನ್ನು ಭೇಟಿ ಮಾಡಿ ಉಭಯ ರಾಷ್ಟ್ರಗಳ ದ್ವಿಪಕ್ಷಿಯ ಸಂಬಂಧ ಗಟ್ಟಿಗೊಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

8.ಕಾಂಗ್ರೆಸ್‌ ಮುಖಂಡ ರಾಜ್‌ ಬಬ್ಬರ್‌ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗ್ಯಾಂಗ್ ಸ್ಟರ್‌ಗಳೆಂದು ಹೇಳಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿಂದು ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಗುಜರಾತ್‌ನ ಇಬ್ಬರು ಗ್ಯಾಂಗ್‌ಸ್ಟರ್‌ಗಳಿದ್ದಾರೆ. ಇವರಲ್ಲಿ ಒಬ್ಬಾತ ಪಕ್ಷವೊಂದರ ಅಧ್ಯಕ್ಷರೂ ಆಗಿದ್ದಾರೆ. ಇವರು ನಡೆಸುತ್ತಿರುವ ಗ್ಯಾಂಗ್‌ ಬಡಜನರನ್ನು ಕೊಲ್ಲುವುದರಲ್ಲಿ ನಿರತವಾಗಿದೆ ಎಂದು ರಾಜ್‌ ಬಬ್ಬರ್‌ ಹೇಳಿದರು.

9.ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಗ್ತಿದಂತೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷ ಕಾಂಗ್ರೆಸ್‌ನಲ್ಲಿ ಬಿರುಸಿನ ರಾಜಕೀಯ ಚಟುವಟಿಕೆ ಆರಂಭವಾಗಿವೆ. ಈ ನಡುವೆ, ಕೈ ಪಡೆಯ ಕೆಲವು ಶಾಸಕರು ಮುಂಬೈಗೆ ಹೋಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅಲ್ಲದೆ, ಬಿಜೆಪಿಗೂ ವಲಸೆ ಹೋಗ್ತಾರೆ ಅಂತ ವದಂತಿ ಹಬ್ಬಿದೆ. ಆದ್ರೆ, ಇಂತಹ ಉಹಾಪೋಹಾ ನಿರಾಕರಿಸಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಚಳಿಗಾಲದ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಆಗುತ್ತೆ. ಶಾಸಕರು ಅಲ್ಲೋಗಿದ್ದಾರೆ ಇಲ್ಲೋಗಿದ್ದಾರೆ ಅಂತ ಯಾಕೆ ಇಂತಹ ಸುದ್ದಿ ಪದೇ ಪದೇ ಸೃಷ್ಟಿಯಾಗುತ್ತೊ ಗೊತ್ತಿಲ್ಲ ಎಂದಿದ್ದಾರೆ.

10.ಹಿರಿಯ ನಟ, ಮಾಜಿ ಸಚಿವ ಅಂಬರೀಶ್​ ನಮ್ಮನ್ನೆಲ್ಲಾ ಅಗಲಿ ಐದು ದಿನಗಳು ಕಳೆದಿವೆ. ಕರುನಾಡ ಕರ್ಣನ ಅಗಲಿಕೆ ನೆನಪಿಗೆ ಕನ್ನಡ ಚಿತ್ರರಂಗ ಇಂದು ನುಡಿ ನಮನ ಹಾಗೂ ಶ್ರದ್ದಾಂಜಲಿ ಕಾರ್ಯಕ್ರಮವನ್ನ ಹಮ್ಮಿಕೊಂಡಿತ್ತು. ವಸಂತನಗರದ ಅಂಬೇಡ್ಕರ್​ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ.. ಸುಮಲತಾ, ಅಭಿಷೇಕ್​, ಶಿವರಾಜ್​ ಕುಮಾರ್​, ಸಿಎಂ ಹೆಚ್​ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವರು ಭಾಗಿಯಾದರು.

11.ಸರ್ಕಾರ ಪ್ರತಿಯೊಬ್ಬ ವಿದ್ಯಾರ್ಥಿಗೂ ಶಿಕ್ಷಣ ಸಿಗಲಿ ಅಂತಾ ಕಡ್ಡಾಯ ಶಿಕ್ಷಣ ಪದ್ಧತಿ ಜಾರಿಗೆ ತಂದಿದೆ. ಆದ್ರೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಗಣತಿಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.ಎರಡು ವರ್ಷದಲ್ಲಿ ರಾಜ್ಯದಲ್ಲಿ ಬರೋಬ್ಬರಿ 82000 ವಿದ್ಯಾರ್ಥಿಗಳು ಅರ್ಧದಲ್ಲೆ ಶಿಕ್ಷಣ ಮೊಟಕುಗೊಳಿಸಿದ್ದಾರೆ.

12.ಭಾರತದಲ್ಲೇ ಯಾವ ರೋಡ್‌ಗೂ ಇರದ ಟೋಲ್ ವಸೂಲಿ ಮೂಲಕ ಪ್ರತಿದಿನ ಕೋಟಿಗಟ್ಟಲೆ ಸಂಪಾದನೆ ಮಾಡುತ್ತಿದ್ದಾನೆ ಅಂತ ಎನ್ಐಸಿಎಲ್ ವರದಿ ನೀಡಿದೆ. ೨೦೧೫ರ ಸರ್ವೆ ಪ್ರಕಾರ ನೈಸ್ ರೋಡ್ ಪ್ರತಿದಿನ ೮೦ ಲಕ್ಷಕ್ಕೂ ಅಧಿಕ ಟೋಲ್ ವಸೂಲಿ ಮಾಡ್ತಿದೆ ಅನ್ನೋ ವರದಿ ನೀಡಿದೆ. ಅಷ್ಟೇ ಅಲ್ಲದೆ ಈ ಟೋಲ್ ದರ ರಾಷ್ಟ್ರೀಯ ಹೆದ್ದಾರಿ ಟೋಲ್ ದರಕ್ಕಿಂತ ೩೦೦ಪಟ್ಟು ಅಧಿಕ ಅನ್ನೋದು ವಾಹನ ಸವಾರರನ್ನು ಬೆಚ್ಚಿಬೀಳಿಸಿದೆ. ಇನ್ನು ಅಶೋಕ್ ಖೇಣಿ ರಾಜ್ಯ ಸರ್ಕಾರದ ಜೊತೆ ಮಾಡಿಕೊಂಡಿರುವ ಒಪ್ಪಂದ ೨೦೧೦ರಲ್ಲೇ ಮುಗಿದಿದ್ರೂ ಟೋಲ್ ವಸೂಲಿ ಮಾತ್ರ ನಿಂತಿಲ್ವಂತೆ.. ರಾಜಕಾರಣಿಗಳು, ಅಧಿಕಾರಿಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು, ಪ್ರತಿವರ್ಷ ಟೋಲ್ ದರ ಜಾಸ್ತಿ ಮಾಡಿಕೊಂಡು ಸವಾರರ ಸೂಲಿಗೆ ಮಾಡ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

13.ಬೀದರ್ ನಗರದಲ್ಲಿರನ ಬ್ರಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆಯ ತಾಣ ಇನ್ನು ಮುಂದುವರೆದ ಭಾಗವಾಗಿ ನಿನ್ನೆ ಬ್ರಿಮ್ಸ್ ನ ಎರಡನೇ ಗೇಟ್ ಒಳಗಡೆ ವ್ಯಕ್ತಿಯೋರ್ವನ ದೇಹದಲ್ಲಿನ ಮಾಂಸದ ತುಂಡುಗಳು ಕೆಳಗೆ ಬಿದ್ದು ಎರಡು ಗಂಟೆಯಾಗಿದ್ರು ಅದನ್ನ ಸ್ವಚ್ಚಗೊಳಿಸದೆ ಬ್ರಿಮ್ಸ್ ಸಿಬ್ಬಂದಿಗಳುಮತ್ತೊಮ್ಮ ತಮ್ಮ ನಿರ್ಲಕ್ಷ್ಯವನ್ನ ಮುಂದುವರೆ ಸಿದ್ದಾರೆ.

14.ವಿಜಯಪುರ ಜಿಲ್ಲಾ ಪಂಚಾಯತ್ ನ 11ನೇ ಸಾಮಾನ್ಯ ಸಭೆಯಲ್ಲಿ ಜಿಪಂ ಅಧ್ಯಕ್ಷೆ ನೀಲಮ್ಮ ಮೇಟಿ ರಾಜೀನಾಮೆ ಪ್ರಕಟಿಸಿದರು. ಹೈಕಮಾಂಡ್ ಆದೇಶದ ಮೇರೆಗೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಸಾಮನ್ಯ ಸಭೆ ಮುಗಿದ ನಂತರ ಒಂದೆರೆಡು ದಿನಗಳಲ್ಲಿ ಪಕ್ಷದ ಸದಸ್ಯರ ಜತೆ ಬೆಂಗಳೂರಿಗೆ ಹೋಗಿ ಆರ್.ಡಿ.ಪಿ. ಆರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸುವೆ ಎಂದು ತಿಳಿಸಿದರು. ಕಳೆದ ಎರಡೂವರೆ ವರ್ಷಗಳಲ್ಲಿ ಜಿಲ್ಲೆ ಅಭಿವೃದ್ದಿಗೆ ಶ್ರಮಿಸಿರುವೆ, ಅಧಿಕಾರಿಗಳು, ಸದಸ್ಯರು ಮತ್ತು ಮಾಧ್ಯಮದವರು ಸಹಕರಿಸಿದ್ದೀರಿ. ಇನ್ನೂ ಎರಡೂವರೆ ವರ್ಷ ಸದಸ್ಯಳಾಗಿ ತಮ್ಮೊಂದಿಗೆ ಇರುವೆ. ಅಧಿಕಾರ ಶಾಶ್ವತವಲ್ಲ, ಅಭಿವೃದ್ಧಿಗೆ ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದರು.

15.ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರು ಹಾಗೂ ನರ್ಸ ಇಲ್ಲದಿರೋದ್ರಿಂದ ಐದಾರು ಗ್ರಾಮ ಪಂಚಾಯತ್ ಗಳ ಜನರು ಸೇರಿ ಶಾಶ್ವತ ವೈದ್ಯರ ನೇಮಕ ಮಾಡುವಂತೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.

16.ಗಡಿ ಜಿಲ್ಲೆ ಚಾಮರಾಜನಗರ ಪ್ರಸಿದ್ಧ ಯಾತ್ರಾಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕಿಂದು ಸಿ.ಎಂ ಎಚ್ಡಿಕೆ ಭೇಟಿ ನೀಡಿದ್ದರು.ಪ್ರಾಧಿಕಾರದ ಹಾಗೂ ಸುತ್ತೂರು ಶಾಖಾ ಮಠದ ವಸತಿಗೃಹ ಮತ್ತು ಅತಿಥಿ ಗೃಹಗಳ ಲೋಕಾರ್ಪಣೆಗೊಳಿಸಲು ಆಗಮಿಸಿದ್ದರು.

17. ಆಕ್ರಮ ಮರಳು ಸಾಗಟ ಮಾಡಲು ಪೊಲೀಸರು ಅನುಮತಿ ನೀಡದ ಕಾರಣ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪೊಲೀಸರಿಗೆ ದಬಾಯಿಸಿದ ಘಟನೆ ದಾವಣಗೆರೆಯಲ್ಲಿ ಶುಕ್ರವಾರ ನಡೆದಿದೆ.

18.ಮಾಜಿ ಸಚಿವ ಸಿ.ಎಸ್ ನಾಡಗೌಡರು ಹಾಗು ಮಾಜಿ ಸಿ.ಎಂ ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿಯಾಗಿದ್ದ ವಿಜಯಪುರ ಜಿ.ಪಂ‌ ಅಧ್ಯಕ್ಷೆ ನೀಲಮ್ಮ ಮೇಟಿ ಇಂದು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಅರೆ. ಹೈಕಮಾಂಡ್ ಆದೇಶದಂತೆ ಆಡಳಿತದ ಒಡಂಬಡಿಕೆ ಮಾಡಿಕೊಂಡಿದ್ದ ಸದಸ್ಯರುಗಳು, ಅವಧಿ ಮುಕ್ತಾಯವಾಗುತ್ತಿದ್ದಂತೆ ಇನ್ನೊಂದು ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದರು. ಐದೂ ವರ್ಷಗಳ ಕಾಲ ಆಡಳಿತ ನಡೆಸುವ ಮನಸ್ಸು ಮಾಡಿದ್ದ ಅಧ್ಯಕ್ಷೆ ಮೇಟಿ ಅವರಿಗೆ ಒಡಂಬಡಿಕೆಯಂತೆ ಪ್ರಕಾರ ಸೀಟು ಬಿಟ್ಟುಕೊಡಲೇ ಬೇಕಾದ ಟೈಂ ಬಂದಿದೆ.

19.ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರ ಜಲಾಶಯವನ್ನು ನಂಬಿದ ಅಚ್ಚುಕಟ್ಟು ರೈತರ ಮೇಲೆ ನೆರೆಯ ಆಂಧ್ರ ಪೊಲೀಸರು ದರ್ಪ ಮೆರೆಯುತ್ತಿದ್ದಾರೆ. ನಮ್ಮ ರಾಜ್ಯದ ರೈತರಿಗೆ ನಮ್ಮ ಪೊಲೀಸರು ರಕ್ಷಣೆ ನೀಡೋದು ನೋಡಿದಿವಿ. ಆದರೆ ನಮ್ಮ ರೈತರಿಗೆ ನೆರೆಯ ಆಂಧ್ರಪ್ರದೇಶದ ಸರ್ಕಾರದ ಪೊಲೀಸರು ಬಳ್ಳಾರಿ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ಓಡಾಡುತ್ತಿದ್ದಾರೆ.ಬಳ್ಳಾರಿ, ಕಂಪ್ಲಿ ಹಾಗೂ ಸಿರುಗುಪ್ಪ ತಾಲೂಕಿನ ಅಚ್ಚುಕಟ್ಟು ಭಾಗದ ರೈತರಿಗೆ ಭತ್ತ ಬೆಳೆಯಬೇಡಿ ಎಂದು ತುಂಗಭದ್ರ ಜಲಾಶಯ ಮಂಡಳಿ ಡಂಗುರು ಹೊಡೆಸಿದ್ದಾರೆ.

20.ಸಿ.ಎಂ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ 6 ತಿಂಗಳು ಕಳೆದ ನಂತ್ರ ಇಂದು ಗಡಿ ಜಿಲ್ಲೆ ಚಾಮರಾಜನಗರದ ಕಡೆ ಮುಖ ಮಾಡಿದ್ದಾರೆ. ಅದು ಚಾಮರಾಜನಗರ ಜಿಲ್ಲಾ ಕೇಂದ್ರಕ್ಕಲ್ಲ, ಬದಲಾಗಿ ಜಿಲ್ಲೆಯ ಪ್ರಸಿದ್ಧ ಧಾಮರ್ಿಕ ಕೇಂದ್ರವಾದ ಮಲೆ ಮಹದೇಶ್ವರ ಬೆಟ್ಟಕ್ಕಿಂದು ಬೇಟಿ ನೀಡಲಿದ್ದಾರೆ. ಇಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಬೆಟ್ಟಕ್ಕೆ ಆಗಮಿಸಿ ಮಲೆಮಹದೇಶ್ವರ ಪ್ರಾಧಿಕಾರದ ವತಿಯಿಂದ ನಿಮರ್ಿಸಿರುವ ಜೇನುಮಲೆ ವಸತಿ ಗೃಹ ಹಾಗೂ ಜೆ.ಎಸ್.ಎಸ್ ಸಂಸ್ಥೆಯಿಂದ ನೂತನವಾಗಿ ನಿಮರ್ಾಣವಾಗಿರುವ ಅತಿಥಿ ಗೃಹಳನ್ನ ಉದ್ಘಾಟಿಸಲಿದ್ದಾರೆ. ನಂತರ ಪ್ರಾಧಿಕಾರದ ಅಧಿಕಾರಿಗಳ ಜೊತೆ ಸಭೆ ನಡೆಸಿ ಕ್ಷೇತ್ರದ ಪ್ರಗತಿಪರಿಶೀಲನೆಬಗ್ಗೆ ಮಾಹಿತಿ ಪಡೆಯಲಿದ್ದಾರೆ.

21.ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದಲ್ಲಿ ರೈತರ ಅನುಕೂಲಕ್ಕಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ತೆರೆಯಲಾಗಿದ್ದು, ನೂರಾರು ರೈತರು ಆ ಸಂಘದಲ್ಲಿ ಹೂಡಿಕೆದಾರರಾಗಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಹಕಾಸಿನ ವಹಿವಾಟಿನ ಜೊತೆಗೆ, ಪಡಿತರ ಸರಬರಾಜನ್ನು ಮಾಡುತ್ತಾ ಬಂದಿರುವ ಸಹಕಾರಿ ಸಂಘ ವಾಸ್ತವದಲ್ಲಿ ಲಕ್ಷಾಂತರ ರೂಪಾಯಿ ಲಾಭ ಗಳಿಸುತ್ತಿದ್ದು, ರೈತರಿಗೆ ಕೃಷಿ ಸಾಲವನ್ನು ವಿತರಣೆ ಮಾಡಿದೆ. ಹೀಗಿರುವಾಗ ಈ ಹಿಂದಿನ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ರೈತರ 50ಸಾವಿರ ರೂಪಾಯಿ ವರೆಗಿನ ಸಾಲ ಮನ್ನಾ ಮಾಡಿದರು.

22.ಟ್ಯಾಕ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ರೈತನ ನೇತ್ರದಾನ ಮಾಡುವ ಮೂಲಕ ಕುಟುಂಬವೊಂದು ಮಾನವೀಯತೆ ಮರೆದಿದೆ....ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬೆಳಲಗೆರೆ ಗ್ರಾಮದ ಹನುಮಂತಪ್ಪ ಇಂದು ಮುಂಜಾನೆ ಟ್ಯಾಕ್ಟರ್ ಓಡಿಸುತ್ತಿದ್ದಾರೆ ಲೋ ಬೀಪಿಯಾಗಿ ಕಳೆಗಡೆ ಬಿದಿದ್ದಾರೆ. ಆಗ ಅವರು ಓಡಿಸುತ್ತಿದ್ದ ಟ್ಯಾಕ್ಟರ್ ಅವರ ಮೇಲೆ ಹರಿದ ಪರಿಣಾಮ ರೈತ ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದರು.

23.ರಾಜ್ಯಾದ್ಯಂತ 13 ಸಾವಿರ ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಆರುವರೆ ಸಾವಿರ ಮಹಿಳಾ ಅತಿಥಿ ಉಪನ್ಯಾಸಕರಿದ್ದಾರೆ.ಸಾಕಷ್ಟು ಕಾಲೇಜುಗಳು ಅತಿಥಿ ಉಪನ್ಯಾಸಕರಿಂದಲೇ ನಡೆಯುತ್ತಿದ್ದರೂ ಸರ್ಕಾರ ಮಾತ್ರ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆಯನ್ನು ನೀಡುವ ಕೆಲಸ ಮಾಡಿಲ್ಲಾ.ಕಳೆದ ಹಲವು ವರ್ಷಗಳಿಂದ ಅತಿಥಿ ಉಪನ್ಯಾಸಕರು ಸೇವಾ ಭದ್ರತೆಗಾಗೀ ಹೊರಾಟ ಮಾಡಿಕೊಂಡು ಬರುತ್ತಿದ್ದರೂ ಸರ್ಕಾರ ಮಾತ್ರ ಅವರ ಸಮಸ್ಯೆಯನ್ನು ಬಗೆ ಹರಿಸುವ ಕೆಲಸ ಮಾಡುತ್ತಿಲ್ಲಾ.ಇದರ ಜೊತೆ ಕಳೆದ ಐದು ತಿಂಗಳಿನಿಂದ ಅತಿಥಿ ಉಪನ್ಯಾಸಕರು ಸಂಬಂದವಿಲ್ಲದೇ ಕೆಲಸ ಮಾಡುತ್ತಿದ್ದಾರೆ.ಇದರಿಂದ ಬೇಸತ್ತ ಅತಿಥಿ ಉಪನ್ಯಾಸಕರಿಂದು ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯ ಸಮನ್ವಯ ಸಮಿತಿ ಸಭೆಯನ್ನು ದಾವಣಗೆರೆಯಲ್ಲಿ ನಡೆಸಿದರು.

24.ಲೋಕಸಭಾ ಚುನಾವಣಗೆ ನೇಮಿಸಿರುವ ಉಸ್ತುವಾರಿಗಳ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಟಿವಿ5ಗೆ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ‌ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದ ಮುರಘಾಮಠಕ್ಕೆ ಭೇಟಿ ನೀಡಿದ ಬಳಿಕ ಟಿವಿ5 ಜೊತೆಗೆ ಮಾತನಾಡಿದ ಅವರು, ಲೋಕಸಭಾ ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಬಹಳ ಮಹತ್ವ ಕೊಡಬೇಡಿ. ಭಾರತೀಯ ಜನತಾ ಪಾರ್ಟಿ ಲೋಕಸಭಾ ಚುನಾವಣೆಗೆ ಬಹಳ ಪ್ರಾಮುಖ್ಯತೆ ಕೊಟ್ಟಿದ್ದೇವೆ. ಇದು ದೇಶದ ಭವಿಷ್ಯದ ಪ್ರಶ್ನೆಯಾಗಿದೆ. ಇದಕ್ಕೋಸ್ಕರ ಈಗಾಗಲೇ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿ ಭೂತಗೂ ಪ್ರಮುಖರನ್ನು ನೇಮಕ ಮಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಸ್ತುವಾರಿಗಳಿಂದಲೇ ನಾವು ಯಶಸ್ವಿ ಆಗಿದ್ದೇವೆ. ಅಲ್ಲದೇ 104 ಸ್ಥಾನವನ್ನು ಪಡೆದು, ಕಾಂಗ್ರೆಸ್ ಸರ್ಕಾರವನ್ನು ಕೆಡವಿದ್ದೆವು. ಅಲ್ಲದೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಸೋತು ಮಂತ್ರಿ ಸ್ಥಾನ ಕಳೆದುಕೊಂಡರು. ಇದಕ್ಕೆ ಕಾರಣ ಪಕ್ಷ ಸಂಘಟನೆ ಕಾರಣ. ಈ ಬಾರಿ 24 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ. ರಾಜ್ಯಾಧ್ಯಕ್ಷರ ಜೊತೆ ಕುಳಿತು ಲೋಕಸಭಾ ಉಸ್ತುವಾರಿ ಬದಲಾವಣೆ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದರು.

25.ಅಕ್ರಮ ಗೋಮಾಂಸ ಸಾಗಾಟದ ವಿಷಯ ಹಿಂದೂ ಕಾರ್ಯಕರ್ತರಿಗೆ ಗೊತ್ತಾಗುತ್ತದೆ. ಪೊಲೀಸರಿಗೆ ಸಾಗಾಟದ ಬಗ್ಗೆ ಮಾಹಿತಿ ಗೊತ್ತಿಲ್ಲವೇ? ಪೊಲೀಸರು ನಿಮ್ಮ ಕೆಲಸ ಇರೋದೆ ಅದು. ನೀವೇನು ಕತ್ತೆ ಕಾಯ್ತಿರಾ? ಅಂತಾ ರಾಜ್ಯ ಪೊಲೀಸ್ ಇಲಾಖೆ ವಿರುದ್ಧ ಮುತಾಲಿಕ ಆಕ್ರೋಶ ವ್ಯಕ್ತಪಡಿಸಿದರು. ಧಾರವಾಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಗೋರಕ್ಷಕರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮವಾಗಿ‌ ಗೋಮಾಂಸ ಸಾಗಿಸುತ್ತಾರೆ. ಅವರ ಹಿಂದೆ ಕಾರುಗಳು ಫಾಲೋ ಮಾಡಿ, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಪೊಲೀಸರೇ ಅಕ್ರಮ ಚಟುವಟಿಕೆಗಳ ನಿಲ್ಲಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ಪೊಲೀಸರೇ ಅಕ್ರಮ ಇಲ್ಲ, ಪರವಾನಿಗೆ ಇದೆ ಅಂತೀರಿ. ಪರವಾನಗಿ ದಾಖಲೆಗಳು ಇದ್ದರೆ ತೋರಿಸಬೇಕಲ್ಲವೆ? ಪರವಾನಗಿ ಇದ್ದರೆ ಕಾರುಗಳಲ್ಲಿ ತಲ್ವಾರ್ ಯಾಕೆ? ಎಂದು ಪ್ರಮೋದ ಮುತಾಲಿಕ್ ಪೊಲೀಸರು ನೀಡುವ ಹೇಳಿಕೆಗೆ ಕಿಡಿಕಾರಿದರು.

26.ಸಚಿವ ಸಂಪುಟ ವಿಸ್ತರಣೆ ಆದ ದಿನವೇ ಈ ಸರ್ಕಾರ ಪತನ ವಾಗಲಿದೆ. ಬಿಜೆಪಿ ಯಾವುದೇ ಆಪರೇಷನ್ ಕಮಲ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಅವರೇ ಕಚ್ಚಾಡಿ ಸರ್ಕಾರ ಬಿಳಿಸಲಿದ್ದಾರೆ. ರಾಜ್ಯದಲ್ಲಿ ಸರ್ಕಾರ ಇದೇನಾ ಅನ್ನೊದು ಅನುಮಾನ. ಮಂತ್ರಿ ಸ್ಥಾನಕ್ಕೆ ಆಸೆಪಟ್ಟು ಕಾಂಗ್ರೆಸ್ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದೆ. ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇದ್ದಿದ್ದರೆ ಮೈತ್ರಿ ಮಾಡಿಕೊಳ್ಳುತ್ತಿರಲಿಲ್ಲ. ಜೆಡಿಎಸ್ ನವರು ಸಿದ್ದರಾಮಯ್ಯ ನನ್ನು ಹೀನಾಯವಾಗಿ ಸೋಲಿಸಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋತ ಸಿದ್ದರಾಮಯ್ಯ ಯಾವ ಮುಖ ಇಟ್ಟುಕೊಂಡು ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ.?ಅಧಿಕಾರಕ್ಕೆ ಆಸೆಪಟ್ಟು ಎಲ್ಲ ಸಿದ್ದಾಂತ ಮರೆತು ಹೊಂದಾಣಿಕೆ ಮಾಡಿಕೊಂಡಿದೆ. ಕಾಂಗ್ರೆಸ್ ಇಂತಹ ದುಸ್ಥಿತಿ ಎಂದು ಬಂದಿರಲಿಲ್ಲ. ಇದು ಸರ್ಕಾರನೇನ್ರೀ.? ಯಾವ ಭಾಷೆಯಲ್ಲಿ ಹೇಳಬೇಕು.ಇದು ದೇವೇಗೌಡ- ರೇವಣ್ಣ ಸರ್ಕಾರ.? ಈ ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್‌ನ ಆಟ ನಡೆಯುತ್ತಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲುವು ಸಾಧಿಸಲಿದೆ. ಬಳ್ಳಾರಿ ಒಂದು ಸೀಟು ಗೆದ್ದು ಪ್ರಧಾನಿ ಆದಂತೆ ಖುಷಿ ಪಟ್ಟಿದ್ದಾರೆಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

27.ರಾಜ್ಯ ಪ್ರವಾಸ ಹಾಗೂ ಅಧಿವೇಶನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಸಜ್ಜಾಗ್ತಿದ್ದಾರೆ. ರಾಜ್ಯ ಸುತ್ತೋಕೆ ಅಂತಾನೇ ಫಿಟ್ ಆಂಡ್ ಫೈನ್ ಆಗೋಕೆ ಹೊರಟಿರುವ ಯಡಿಯೂರಪ್ಪ

ಆರೋಗ್ಯದ ಕಡೆ ಒತ್ತುಕೊಟ್ಟಿದ್ದಾರೆ.

28.ಮನೆಯಲ್ಲಿ ಗ್ಯಾಸ್ ಗೀಜರ್ ನ ಸಿಲಿಂಡರ್ ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿ ಮನೆಯಲ್ಲಿರುವ ವಸ್ತುಗಳು ಬೆಂಕಿಗಾಹುತಿಯಾದ ಘಟನೆ ಸಂಭವಿಸಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಲಕ್ಷ್ಮೀಪುರ ಗ್ರಾಮದ ಸಂಜೀವಿನಿ ಲೇಔಟ್ ನಲ್ಲಿ ಈ ದುರ್ಘಟನೆ ನಡೆದಿದೆ. ಮನೆಯ ಗೃಹಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಅದೃಷ್ಟ ವಶಾತ್ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಗೌರಮ್ಮ ಮತ್ತು ರಂಗಪ್ಪ ಎಂಬುವರ ಮನೆಯಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ.

29.ಆ್ಯಂಬಿಡೆಂಟ್ ಕಂಪನಿಯಿಂದ ಹೂಡಿಕೆದಾರಿಗೆ ವಂಚನೆ ಪ್ರಕರಣವನ್ನು ರೆಡ್ಡಿ ಆಪ್ತ ಅಲಿಖಾನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 1ನೇ ಎಸಿಎಂಎಂ ನ್ಯಾ.ಜಗದೀಶ್ ರಿಂದ ವಿಚಾರಣೆ ನಡೆಸಲಾಗುತ್ತೀದೆ. ಜಾಮೀನು ಅರ್ಜಿಗೆ ಸಿಸಿಬಿಯಿಂದ ಆಕ್ಷೇಪಣೆ ಸಲ್ಲಿಕೆ ಮಾಡಲಾಗಿದ್ದು.ವಾದ‌ ಮಂಡಿಸಲು ನಾಳೆಗೆ ನಿಗದಿ ಮಾಡಿದ ಕೋರ್ಟ್ ಅರ್ಜಿ ವಿಚಾರಣೆಯನ್ನು ನಾಳೆಗೆ‌ ಮುಂದೂಡಿಕೆ ಮಾಡಲಾಗಿದೆ.

30.ಕಡೂರು ತಾಲೂಕು ಬೀರೂರು ಹೋಬಳಿ ಹರಳಘಟ್ಟ ಗ್ರಾಮದ ಜನರು ಕಣ್ಣೀರು ಹಾಕುವಂತಾಗಿದೆ. ಹರಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸುಮಾರು 45 ಕುಟುಂಗಳು 45 ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಸರ್ಕಾರವೇ ಹಕ್ಕು ಪತ್ರ ನೀಡಿ ಜೀವನ ಕಟ್ಟಿಕೊಳ್ಳಲು ಜಾಗ ನೀಡಿ ಇದೀಗ ಅದೇ ಸರ್ಕಾರವೇ ಜನರ ಬದುಕಿಗೆ ಸ್ಮಶಾಣದಲೇ ಕೊಳ್ಳಿ ಹಿಡಲು ಮುಂದಾಗಿದೆ. ಸರ್ವೇ ನಂ.4 ರ ವ್ಯಾಪ್ತಿಯಲ್ಲಿ ಬರೋ ಈ ಗ್ರಾಮವನ್ನ ಇತ್ತೀಚೇಗೆ ಅಧಿಕಾರಿಗಳು ನಿಮ್ಮ ಗ್ರಾಮ ಸ್ಮಶಾಣಕ್ಕೆ ಸೇರಿದ್ದು. ಯಾವುದೇ ಮೂಲಭೂತ ಸೌಕರ್ಯ ಕಲ್ಪಿಸೋದಲಕ್ಕೆ ಆಗಲ್ಲ. ಯಾವಾಗ ಬೇಕಾದ್ರೂ ನೋಟಿಸ್​ ನೀಡಬಹುದು ಅಂತಾ ಎಚ್ಚರಿಕೆ ನೀಡಿದ್ದಾರೆ. ಇದರಿಂದ ನಾಲ್ಕು ವರೇ ದಶಕಗಳಿಂದ ಬದುಕು ಕಟ್ಟಿಕೊಂಡಿದ್ದ ಗ್ರಾಮಸ್ಥರಿಗೆ ನೆಲೆ ಕಳೆದುಕೊಳ್ಳೋ ಭೀತಿ ಎದುರಾಗಿದೆ.

31.ಉಡುಪಿ ಸಾಸ್ತಾನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ನಿರ್ಮಾಣವಾಗಿರುವ ನವಯುಗ ಟೋಲ್ ಪ್ಲಾಝಾದಲ್ಲಿ ಮತ್ತೆ ಬಲವಂತವಾಗಿ ಟೋಲ್ ವಸೂಲಿ ಆರಂಭಸಿದ್ದಾರೆ. ಮೂರು ದಿನಗಳ ಹಿಂದೆ ನಡೆದ ಜನಾಕ್ರೋಶದ ಪ್ರತಿಭಟನೆಯ ಬಳಿಕ ಉಸ್ತುವಾರಿ ಸಚಿವೆ ಜಯಮಾಲ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯ ಶಾಸಕರು ಮತ್ತು ಹೆದ್ದಾರಿ ಜಾಗೃತಿ ಸಮಿತಿಯ ಪದಾಧಿಕಾರಿಗಳು ಬೆಂಗಳೂರಿನಲ್ಲಿ ಸಚಿವ ರೇವಣ್ಣ ಅವರೊಂದಿಗಿನ ಸಭೆಯಲ್ಲಿ ಭಾಗವಹಿಸಿದ್ದರು.

32.ಬೆಂಗಳೂರಿನ ಬ್ಯಾಟರಾಯನಪುರ ಪೊಲೀಸ್​​ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದೆ. ರಾಕೇಶ್ ಜೈನ್ ಎಂಬಾತನ ಕೊಲೆಯಾಗಿದ್ದು, ಮನೆ ಬಾಡಿಗೆ ಹಣದ ವಿಚಾರಕ್ಕಾಗಿ ಗಲಾಟೆ ನಡೆದಿದೆ. ಬಾಡಿಗೆ ಗಲಾಟೆ ಓರ್ವನ ಕೊಲೆಯಿಂದ ಅಂತ್ಯಗೊಂಡಿದ್ದು, ಇಸ್ಲಾಮ್ ಪಾಶ ಎಂಬ ವ್ಯಕ್ತಿಯಿಂದ ಮರ್ಡರ್ ನಡೆದಿದೆ. ಇನ್ನು ಕೊಲೆ ನಂತರ ಆರೋಪಿಗಳು ಶವವನ್ನು ಕೆಂಗೇರಿ ನಾಲೆಗೆ ಎಸೆದಿದ್ದು, ಘಟನೆ ಸಂಬಂಧ ನಾಲ್ಕು ಜನ ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

33.ಆ್ಯಂಬಿಡೆಂಟ್ ಕಂಪನಿಯಿಂದ ಹೂಡಿಕೆದಾರರ ವಂಚನೆ ಪ್ರಕರಣದ ಆರೋಪಿ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಜಾಮೀನು ಕೋರಿ ಮ್ಯಾಜಿಸ್ಟ್ರೇಟ್​ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್ ಸಿಸಿಬಿ ಪೊಲೀಸರಿಗೆ ನೋಟಿಸ್‌ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ. ಜೊತೆಗೆ ಡಿಸೆಂಬರ್ 12ರವರೆಗೂ ನ್ಯಾಯಾಂಗ ಬಂಧನಕ್ಕೆ ಹಾಗೂ ಇಂದಿಗೆ ಜಾಮೀನು ಅರ್ಜಿ ವಿಚಾರಣೆಯನ್ನ ಮುಂದೂಡಲಾಗಿದೆ.

34.ಮಂಡ್ಯ ಜಿಲ್ಲೆಯ ಕನಗನಮರಡಿಯಲ್ಲಿ ಮತ್ತೊಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಳೆದ ಶನಿವಾರ ಖಾಸಗಿ ಬಸ್‌ ಉರುಳಿದ್ದ ನಾಲೆಯ ಬಳಿಯೇ ಮತ್ತೊಂದು ಅಪಘಾತ ಸಂಭವಿಸಿದೆ. ಗ್ರಾಮದ ವಿ.ಸಿ.ನಾಲೆಗೆ ಬಸ್ ಉರುಳಿ 30 ಮಂದಿ ಜಲಸಮಾಧಿಯಾಗಿದ್ರು.. ಇದೇ ಸ್ಥಳದಲ್ಲಿ ಇವತ್ತು ಕಾರೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಪಲ್ಟಿ ಹೊಡೆದಿದೆ.. ಆದ್ರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಚಾಲಕ ಮತ್ತು ಮೂವರು ವೈದ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

35.ನಿರ್ಮಾಣ ಹಂತದಲ್ಲಿದ್ದ ಮನೆಯಲ್ಲಿ ವೆಲ್ಡಿಂಗ್ ಕೆಲಸ ಮಾಡುವ ವೇಳೆ ವ್ಯಕ್ತಿಯೋರ್ವನ ಮೇಲೆ ಚಿರತೆ ದಾಳಿ ನಡೆಸಿದೆ. ನೆಲಮಂಗಲದ ಸೋಲೂರು ಬಳಿಯ ಚನ್ನೋಹಳ್ಳಿ ಬಳಿ ಈ ಘಟನೆ ನಡೆದಿದೆ. ಆಂಜಿನಪ್ಪ ಹಾಗೂ ರಂಗಸ್ವಾಮಿ ಎಂಬುವರ ಮೇಲೆ ಚಿರತೆ ದಾಳಿ ನಡೆಸಿದ್ದು, ಇಬ್ಬರು ಪ್ರಾಣಪಾಯದಿಂದ ಪಾರಾಗಿದ್ಧಾರೆ. ಇನ್ನು ರಂಗಸ್ವಾಮಿ ಎಂಬುವರ ತಲೆಗೆ ಗಂಭೀರ ಗಾಯವಾಗಿದ್ದು, ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.

36.ಕರ್ನಾಟಕ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದೂಡಲಾಗಿದ್ದ ಪರೀಕ್ಷೆ ಇದೇ ಡಿಸೆಂಬರ್ 23ಕ್ಕೆ ನಡೆಯಲಿದೆ. 2 ಸಾವಿರ 113 ಪೇದೆಗಳ ಹುದ್ದೆಗೆ ನವೆಂಬರ್ 25ರಂದು ರಾಜ್ಯವ್ಯಾಪಿ ಲಿಖಿತ ಪರೀಕ್ಷೆ ನಿಗದಿ ಮಾಡಲಾಗಿತ್ತು. ಆದ್ರೆ ಅದಕ್ಕೂ ಮುನ್ನ ನವೆಂಬರ್ 24ರಂದು ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ಬೆಳಕಿಗೆ ಬಂದಿತ್ತು. ಇದ್ರಿಂದ ಪರೀಕ್ಷೆಯನ್ನ ಮುಂದೂಡಲಾಗಿತ್ತು.

37.ಮಂಡ್ಯದಲ್ಲಿ ಮತ್ತೆ ಭೂಮಿ ಕಂಪಿಸಿದೆ. ನಿನ್ನೆ ಮಧ್ಯಾಹ್ನ 3.42ರ ಸುಮಾರಿಗೆ ಭೂಮಿಯಿಂದ ಭಾರೀ ಸ್ಪೋಟದ ಶಬ್ದ ಕೇಳಿಬಂದಿದೆ. ಕಳೆದ ತಿಂಗಳು ಕೂಡ ಇಂತಹದ್ದೇ ಶಬ್ದ ಕೇಳಿಬಂದಿದ್ದು, ವಿಜ್ಞಾನಿಗಳು ಕಲ್ಲು ಗಣಿಗಾರಿಕೆ ಶಬ್ದ ಅಂತ ಹೇಳಿದ್ರು. ಆದ್ರೀಗ ಮತ್ತೆ ಭೂಮಿ ಕಂಪಿಸಿದ್ದು, ಭೂಕಂಪನಕ್ಕೆ ಏನು ಕಾರಣ ಎಂಬುದು ಮಾತ್ರ ನಿಗೂಢವಾಗಿದೆ.

38.ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಇಂದಿರಾ ಕ್ಯಾಂಟೀನ್ ಅನುದಾನ ನೀಡುವ ವಿಚಾರಕ್ಕೆ ಸದಸ್ಯರ ನಡುವೆ ಜಟಾಪಟಿ ನಡೆದಿದೆ. ಸಾಮಾನ್ಯ ಸಭೆಯಲ್ಲಿ ಇಂದಿರಾ ಕ್ಯಾಂಟಿನ್ ಸ್ಥಾಪನೆ ಹಾಗೂ ಅನುದಾನ ನೀಡುವ ವಿಚಾರಕ್ಕೆ ಗಲಾಟೆ ಶುರುವಾಗಿದ್ದು. ಸದಸ್ಯರಾದ ವೀರಣ್ಣ ಸವಡಿ ಹಾಗೂ ಗಣೇಶ ಟಗರಗುಂಟೆ ಪರಸ್ಪರ ವಾಗ್ವಾದಕ್ಕಿಳಿದ್ರು. ಸಭೆಯಲ್ಲಿಯೇ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿದ ಕಾಂಗ್ರೆಸ್, ಬಿಜೆಪಿ ಸದಸ್ಯರು ಸದನದ ಬಾವಿಗಿಳಿದು ಗಲಾಟೆ ಮಾಡಿದ್ರು. ಹೀಗಾಗಿ ಮೇಯರ್​​ ಸುಧೀರ್​​​ ಸರಾಫ್​​​ ಸಭೆಯನ್ನ ಮುಂದೂಡಿದ್ರು.

39.ಹೆಚ್.ಡಿ.ರೇವಣ್ಣ ವಿರುದ್ಧ ಸಿದ್ದರಾಮಯ್ಯಗೆ ಹಾಸನ ಕೈ ಮುಖಂಡರು ದೂರು ನೀಡಿದ ವಿಚಾರಕ್ಕೆ ಸ್ವತಃ ಸಚಿವ ಪ್ರತಿಕ್ರಿಯಿಸಿದ್ದಾರೆ. ನಾನು ಅನುದಾನ ವಿಚಾರದಲ್ಲಿ ತಾರತಮ್ಯ ಮಾಡಿಲ್ಲ. ಬೇಕಾದರೆ ಮುಕ್ತ ಚರ್ಚೆಗೆ ನಾನು ಸಿದ್ಧನಿದ್ದೇನೆ ಅಂತ ಹೇಳಿದ್ರು. ಅದು ಅಲ್ದೆ ಸಿದ್ದರಾಮಯ್ಯ ,ಪರಮೇಶ್ವರ್ ಇಬ್ಬರೂ ಇರಲಿ ಎಂದು ಹೇಳುವ ಮೂಲಕ ದೂರು ಕೊಟ್ಟವರಿಗೆ ಟಾಂಗ್ ಕೊಟ್ಟಿದ್ದಾರೆ.

40.ರಾಜ್ಯದಲ್ಲಿ ಇಸ್ರೇಲ್​​​ ಮಾದರಿ ಕೃಷಿ ಪದ್ಧತಿ ಬದಲಾವಣೆಗೆ ಸಿಎಂ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವ್ರು, ಕೃಷಿ ಪದ್ಧತಿಯ ಲೋಪದೋಷಗಳ ಬಗ್ಗೆ ರೈತರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆದಿದೆ. ಇಸ್ತ್ರೇಲ್ ಮಾದರಿಯಲ್ಲಿ ಕೃಷಿ ಪದ್ಧತಿ ಅಳವಡಿಸಿಕೊಳ್ಳುವ ಚಿಂತನೆ ನಡೆಸಿದ್ದೇವೆ ಅಂತ ಹೇಳಿದರು.

41.ವಿಷ್ಣು ಸ್ಮಾರಕ ಮೈಸೂರಲ್ಲಿ ನಿರ್ಮಿಸುವಂತೆ ಆಗ್ರಹಿಸಿ ಸಾಹಸ ಸಿಂಹನ ಅಭಿಮಾನಿಗಳಿಂದ ಪ್ರತಿಭಟನೆ ನಡೆಯಿತು. ವಿಷ್ಣುವರ್ಧನ್ ಉದ್ಯಾನದ ಮುಂಭಾಗ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಬೆಂಗಳೂರಿನಲ್ಲಿ ಪುಣ್ಯಭೂಮಿ ಇರಲಿ. ವಿಷ್ಣು ಹುಟ್ಟಿ ಬೆಳೆದದ್ದು ಮೈಸೂರಿನಲ್ಲಿ. ಮೈಸೂರಲ್ಲೇ ಸ್ಮಾರಕವಾಗಬೇಕು ಎಂದು ಆಗ್ರಹಿಸಿದ್ರು. ಆದ್ರೆ, ಅತ್ತ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಅಭಿಮಾನ ಸ್ಟುಡಿಯೋದಲ್ಲಿಯೇ ನಿರ್ಮಿಸುವಂತೆ ಒತ್ತಾಯಿಸಿದರು.

42.ಡಿಕೆಶಿ - ಬಿಎಸ್‌ವೈ ಭೇಟಿ ಬಗ್ಗೆ ಹರಡಿರುವ ಉಹಾಪೋಹಾಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಕೃಷ್ಣೇಭೈರೇಗೌಡ, ಅದರಲ್ಲೇನೂ ಏನೂ ವಿಶೇಷತೆ ಇಲ್ಲ. ಶಿವಮೊಗ್ಗ ಜಿಲ್ಲೆಯ ನೀರಾವಾರಿ ಯೋಜನೆಗಳ ಅನುಮೋದನೆಗಾಗಿ ಯಡಿಯೂರಪ್ಪ ಅವರು ಡಿಕೆಶಿಯನ್ನು ಭೇಟಿಯಾಗಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

43.ಚಿಕ್ಕಮಗಳೂರಿನಲ್ಲಿ ನಡೆಯಲಿರುವ ದತ್ತ ಜಯಂತಿಗೆ BJP ಶಾಸಕ ಸುನಿಲ್​ಕುಮಾರ್ ಟಿಟ್ಟರ್ ಮೂಲಕ ರಾಹುಲ್ ಗಾಂಧಿಗೆ ​ ಆಹ್ವಾನ ನೀಡಿದ್ದಾರೆ. ಡಿಸೆಂಬರ್ 22 ರಂದು ದತ್ತ ಜಯಂತಿ ನಡೆಯಲಿದೆ. 40 ವರ್ಷದ ಬಳಿಕ ನಿಮ್ಮ ಗೋತ್ರ ಘೋಷಣೆಯಾಗಿದೆ. ದತ್ತಾತ್ರೇಯ ಗೋತ್ರಾದವರಾದ ನೀವು ದತ್ತ ಪೀಠಕ್ಕೆ ಬರಬೇಕು. ದತ್ತ ಜಯಂತಿಯಲ್ಲಿ ನೀವು ನಮ್ಮ ಜೊತೆ ಪಾಲ್ಗೊಳ್ಳಬೇಕು. ಜೊತೆಗೆ ದತ್ತ ಸಮಸ್ಯೆ ಪರಿಹರಿಸಲು ನೀವು ಪ್ರಯತ್ನಿಸಿ ಅಂತ ಟ್ವಿಟರ್​​ ಮೂಲಕ BJP ಶಾಸಕ ಸುನಿಲ್​ಕುಮಾರ್​ ಮನವಿ ಮಾಡಿದ್ದಾರೆ.

44.ಉತ್ತರ ಪ್ರದೇಶದ ರೈತರ ಬಳಿಕ ಇದೀಗ ದೇಶದ ವಿವಿಧ ಭಾಗದ ಅನ್ನದಾತರು ಕೇಂದ್ರ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎರಡು ದಿನ ದಿಲ್ಲಿ ಚಲೋ ಹಮ್ಮಿಕೊಂಡಿದ್ದಾರೆ. ದೇಶದ ವಿವಿಧೆಡೆಯಿಂದ ಬಂದಿರುವ ರೈತರು, ನಿನ್ನೆ ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನಲ್ಲಿ ಪ್ರತಿಭಟನೆ ಆರಂಭಿಸಿದ್ದು,ಇಂದು ಕೂಡ ಮುಂದುವರೆಯಲಿದೆ. ಇತ್ತ ಮಾಜಿ ಪ್ರಧಾನಿ ಹೆಚ್​​ಡಿ ದೇವೇಗೌಡ ಪ್ರತಿಭಟಗೆ ಬೆಂಬಲ ಸೂಚಿಸಿದ್ದಾರೆ

45.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಗೋಮಾಂಸದ ಬಿರಿಯಾನಿ ಕಳುಹಿಸಲು ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಅವರಿಗೆ ಹೇಳುತ್ತೇನೆ ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ರಾಜ್ಯದ ಮುಸ್ಲಿಮರಿಗೆ ಗೋಮಾಂಸದ ಬಿರಿಯಾನಿ ಕಳುಹಿಸುತ್ತಿರುವುದನ್ನು ಅಮಿತ್ ಶಾ ಪ್ರಶ್ನಿಸಿದ್ದಕ್ಕೆ ಓವೈಸಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಓವೈಸಿ, ಚಂದ್ರಶೇಖರ ರಾವ್ ಮುಸ್ಲಿಮರಿಗೆ ಬಿರಿಯಾನಿ ಕಳುಹಿಸುತ್ತಾರೆ ಎಂದು ಅಮಿತ್ ಶಾ ಹೇಳುತ್ತಾರೆ. ಅವರಿಗೆ ಇಷ್ಟ ಇದ್ದರೆ ಅವರಿಗೂ ಗೋಮಾಂಸದ ಬಿರಿಯಾನಿ ಪಾರ್ಸೆಲ್ ಕಳುಹಿಸಿಕೊಡಲಿದ್ದೇವೆ ಎಂದು ವ್ಯಂಗ್ಯ ಮಾಡಿದ್ದಾರೆ.

46.ಮರಾಠಿಗರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇಕಡ 16ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾಗಿದೆ. ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶೈಕ್ಷಣಿಕವಾಗಿ ಮೀಸಲಾತಿ ನೀಡುವ ಕುರಿತು ಮಹಾರಾಷ್ಟ್ರ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿತ್ತು. ವರದಿ ಆಧರಿಸಿ ನಿರ್ಣಯ ಕೈಗೊಳ್ಳಲು ವಿಧಾನಸಭೆಯಲ್ಲಿ ಮಸೂದೆ ಮಂಡಿಸಲಾಗಿತ್ತು. ಮಸೂದೆಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದ್ದು ಅವಿರೋಧವಾಗಿ ಅಂಗೀಕಾರವಾಗಿದೆ.

47.ಖಾಲಿಸ್ತಾನ ಪರ ಹೋರಾಟಗಾರ ಗೋಪಾಲ್​ ಸಿಂಗ್​ ಚಾವ್ಲಾ ಅವರೊಂದಿಗೆ ಪಂಜಾಬ್​ ಸಚಿವ ನವಜೋತ್​​ ಸಿಂಗ್​​ ಸಿಧು ಫೋಟೋ ತೆಗೆಸಿಕೊಂಡಿದ್ದು, ಇದೀಗ ಭಾರೀ ಟೀಕೆಗೆ ಕಾರಣವಾಗಿದೆ. ಪಾಕಿಸ್ತಾನದಲ್ಲಿ ಕರ್ತಾರ​ಪುರ ಕಾರಿಡಾರ್​ ಯೋಜನೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಈ ಫೋಟೋ ಕ್ಲಿಕ್ಕಿಸಿಲಾಗಿತ್ತು. ಈ ಸಂಬಂಧ ಪ್ರತಿಕ್ರಿಯೆ ನೀಡಿದ ಸಿಧು, ನಾನು ಪಾಕಿಸ್ತಾನಕ್ಕೆ ತೆರಳಿದ ವೇಳೆ ಸಾಕಷ್ಟು ಪ್ರೀತಿ ತೋರಿಸಲಾಯಿತು. ಪ್ರತಿ ದಿನ ಸಾವಿರಾರು ಫೋಟೋ ಕ್ಲಿಕ್ಕಿಸಲಾಗಿದೆ. ಅದರಲ್ಲಿ ಚಾವ್ಲಾ ಯಾರು ಚೀಮಾ ಯಾರು ಅಂತ ಗೊತ್ತಿಲ್ಲ ಎಂದಿದ್ದಾರೆ.

48.ಬೇರೆ ರಾಷ್ಟ್ರಗಳ ವಿರುದ್ಧ ಭಯೋತ್ಪಾದಕ ಚಟುವಟಿಕೆ ನಡೆಸಲು ನಮ್ಮ ನೆಲ ಬಳಸಿಕೊಳ್ಳೋದನ್ನ ಪಾಕಿಸ್ತಾನ ಇಷ್ಟಪಡೋದಿಲ್ಲ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ್ - ಎ - ತೆಹ್ರೀಕ್ ಸರ್ಕಾರ ಅಧಿಕಾರ ವಹಿಸಿಕೊಂಡು 100 ದಿನ ಪೂರ್ಣಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಭಯೋತ್ಪಾದನೆ ವಿಚಾರ ಪ್ರಸ್ತಾಪಿಸಿದ್ದಾರೆ. ಪಾಕಿಸ್ತಾನದ ಜನತೆ ಭಾರತದೊಂದಿಗೆ ಶಾಂತಿ ಬಯಸಿದ್ದಾರೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆಗೆ ಸಿದ್ಧನಿದ್ದೇನೆ. ಆದ್ರೆ, ಶಾಂತಿ ಮಾತುಕತೆ ಏಕಮುಖವಾಗಿರಲು ಸಾಧ್ಯವಿಲ್ಲ ಎಂದಿದ್ದಾರೆ.

49.ವಿಜ್ಞಾನ ಲೋಕಕ್ಕೆ ಅಪ್ರತಿಮ ಕೊಡುಗೆ ನೀಡಿದ ಭಾರತೀಯ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌ ಭಾವಚಿತ್ರ ಇನ್ಮುಂದೆ ಇಂಗ್ಲೆಂಡ್​ನ ನೋಟುಗಳಲ್ಲಿ ರಾರಾಜಿಸಲಿದೆ. 50 ಪೌಂಡ್​ ಮುಖಬೆಲೆಯ ನೋಟಿನಲ್ಲಿ ಬೋಸ್‌ ಭಾವಚಿತ್ರ ಮುದ್ರಿಸುವಂತೆ ಅಲ್ಲಿನ ಸ್ಥಳೀಯರು ನಾಮನಿರ್ದೇಶನ ಮಾಡಿದ್ದಾರೆ. ಬ್ಯಾಂಕ್‌ ಆಫ್‌ ಇಂಗ್ಲೆಂಡ್‌ 50 ಪೌಂಡ್‌ ಮುಖಬೆಲೆ ನೋಟಿನ ವಿನ್ಯಾಸ ಬದಲಿಸಿ ಹೊಸ ಕರೆನ್ಸಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ. ನೋಟು ವಿನ್ಯಾಸದ ನಾಮ ನಿರ್ದೇಶನ ಮಾಡುವಂತೆ ಜನತೆಗೆ ಕೋರಿತ್ತು. ಹೀಗಾಗಿ, ಜನರು ವಿಜ್ಞಾನದ ತರಂಗಾಂತರ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದ ಭಾರತದ ವಿಜ್ಞಾನಿ ಜಗದೀಶ್‌ ಚಂದ್ರ ಬೋಸ್‌ ಹೆಸರು ಸೂಚಿಸಿದ್ದಾರೆ.

50.ಹಿಂದೂ ದೇವರು ಹನುಮಂತನನ್ನು ದಲಿತ ಎಂದು ಉಲ್ಲೇಖಿಸದ ಕಾರಣಕ್ಕೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ರಾಜಸ್ಥಾನದ ಬಲಪಂಥೀಯ ಗುಂಪೊಂದು ಲೀಗಲ್ ನೋಟಿಸ್ ಜಾರಿ ಮಾಡಿದೆ. ಮಾಳಖೇಡದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ್ದ ಯೋಗಿ, ಹನುಮಂತ ಒಬ್ಬ ದಲಿತ ಎಂದು ಹೇಳಿದ್ದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರಾಜಸ್ಥಾನದ ಸರ್ವ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸುರೇಶ್ ಮಿಶ್ರಾ, ಯೋಗಿ ಆದಿತ್ಯನಾಥ್ ಅವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಅಲ್ಲದೆ, 3 ದಿನಗಳ ಒಳಗಾಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

Next Story

RELATED STORIES