ಪ್ರತಿಭಟನೆ ಹೆಸರಿನಲ್ಲಿ ಟಿವಿ5 ಕಚೇರಿ ಮುಂದೆ ಜೆಡಿಎಸ್ ಕಾರ್ಯಕರ್ತರ ಗೂಂಡಾಗಿರಿ

ಮುಖ್ಯಮಂತ್ರಿ ಕುಮಾರಸ್ವಾಮಿ ಕುರಿತು ಟಿವಿ5 ಸುದ್ದಿ ಪ್ರಚಾರ ಮಾಡಿದ್ದನ್ನು ಖಂಡಿಸಿ ಗುರುವಾರ ಬೆಳಗ್ಗೆ ಪ್ರತಿಭಟನೆಗೆ ಆಗಮಿಸಿದ್ದ ಜೆಡಿಎಸ್ನ ಕಾರ್ಯಕರ್ತರು ಗೂಂಡಾಗಿರಿ ವರ್ತನೆ ತೋರಿದ್ದಾರೆ.
ಪ್ರತಿಭಟನೆಗೆ ನೂರಾರು ಜೆಡಿಎಸ್ ಕಾರ್ಯಕರ್ತರು ಆಗಮಿಸಿದ್ದು, ಟಿವಿ5 ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಗೆ ಟಿವಿ5 ಬಗ್ಗದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಾರ್ಯಕರ್ತರು ಟಿವಿ5 ಕಚೇರಿಯ ಬಾಗಿಲು ಮುರಿದು ಒಳನುಗ್ಗಲು ಯತ್ನಿಸಿದರು.
ಪೊಲೀಸರು ಬಿಗಿ ಪೊಲೀಸ್ ಭದ್ರತೆ ಒದಗಿಸಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಒಳನುಗ್ಗುವ ಪ್ರಯತ್ನಕ್ಕೆ ಹಿನ್ನಡೆ ಉಂಟಾಯಿತು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ಕೆಲವು ಕಾರ್ಯಕರ್ತರು ಗೇಟು ಮುರಿದು ಒಳನುಗ್ಗಲು ಯತ್ನಿಸಿದರು. ಕೆಲವು ಕಾರ್ಯಕರ್ತರು ಕಲ್ಲುತೂರಾಟ ನಡೆಸಿದ್ದರಿಂದ ಕಚೇರಿಯ ಮೊದಲ ಮಹಡಿಯ ಗಾಜು ಒಡೆಯಿತು.
ಜೆಡಿಎಸ್ ಕಾರ್ಯಕರ್ತರ ಉದ್ಧಟತನವನ್ನು ತಡೆಯಲು ಪೊಲೀಸರು ಯತ್ನಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಪರಿಸ್ಥಿತಿ ಉದ್ವಿಗ್ನತೆ ಪಡೆಯುತ್ತಿದ್ದಂತೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಕಾರ್ಯಕರ್ತರಿಗೆ ಕರೆ ಮಾಡಿ ಪ್ರತಿಭಟನೆ ವಾಪಸ್ ಪಡೆಯುವಂತೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ದಿಢೀರನೆ ಪ್ರತಿಭಟನೆ ವಾಪಸ್ ಪಡೆದರು.