Top

ರಾಮನಗರದಲ್ಲಿ ಮೋಸ ಹೋದೆವು: ಯಡಿಯೂರಪ್ಪ

ರಾಮನಗರದಲ್ಲಿ ಮೋಸ ಹೋದೆವು: ಯಡಿಯೂರಪ್ಪ
X

ಸ್ಥಳೀಯ ಕಾರ್ಯಕರ್ತರು ಎಚ್ಚರಿಸಿದರೂ ರಾಮನಗರ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣವಾಗಿ ಮೋಸ ಹೋದೆವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಹಾಲಿ ಎಂಎಲ್​ಸಿ ಪುತ್ರರೊಬ್ಬರು ಬಂದರೆ ಸುಲಭವಾಗಿ ಗೆಲ್ಲಬಹುದು ಎಂದು ಭಾವಿಸಿ ಟಿಕೆಟ್ ನೀಡಿದ್ದೆವು. ಸ್ಥಳೀಯ ಕಾರ್ಯಕರ್ತರು ಚಂದ್ರಶೇಖರ್ ಅವರನ್ನು ನಂಬಬೇಡಿ ಎಂದು ಹೇಳಿದರೂ ನಂಬಿ ಮೋಸ ಹೋದೆವು ಎಂದರು.

ಜಮಖಂಡಿಯಲ್ಲಿ ಜಾತಿ ಮತಗಳು ಒಡೆದಿದ್ದರಿಂದ ಸೋಲಾಯಿತು. ಮತ್ತೊಂದೆಡೆ ಶಿವಮೊಗ್ಗ ಬಿಟ್ಟು ನಾನು ಹೊರಗೆ ಹೋಗದಂತೆ ಎಲ್ಲಾ ಕಾಂಗ್ರೆಸ್- ಜೆಡಿಎಸ್​ನ ನಾಯಕರು ಶಿವಮೊಗ್ಗದಲ್ಲಿ ಠಿಕಾಣಿ ಹೂಡಿದ್ದರು. ಇದರಿಂದ ನಾನು ಇತರೆ ಕ್ಷೇತ್ರಗಳಿಗೆ ಹೋಗಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಲಿಲ್ಲ ಎಂದು ಯಡಿಯೂರಪ್ಪ ವಿಶ್ಲೇಷಿಸಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪಕ್ಷ ಗೆಲ್ಲಲು ಲಿಂಗಾಯತ ಅಭ್ಯರ್ಥಿಯ ಆಯ್ಕೆಗೆ ಹೆಚ್ಚು ಒತ್ತು ನೀಡಬೇಕು. ಅದರಲ್ಲೂ ಉತ್ತರ ಕರ್ನಾಟಕ ಹಾಗೂ ಹೈದರಾಬಾದ್​-ಕರ್ನಾಟಕ ಭಾಗದಲ್ಲಿ ಲಿಂಗಾಯತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಣಕ್ಕಿಳಿಸಬೇಕು ಎಂದು ಅವರು ಸಲಹೆ ನೀಡಿದರು.

ಹಾಲಿ ಸಂಸದರ ಕ್ಷೇತ್ರದಲ್ಲಿ ಇತರೆ ಯಾರಿಗೂ ಪಕ್ಷದಿಂದ ಟಿಕೆಟ್ ನೀಡಲಾಗುವುದಿಲ್ಲ. ಹಾಲಿ ಸಂಸದರಿಗೆ ಮತ್ತೆ ಅವಕಾಶ ನೀಡಲಾಗುವುದು. ಸ್ಥಳೀಯ ಮುಖಂಡರು ನಾನೇ ಅಭ್ಯರ್ಥಿ ಎಂದು ಹೇಳಿಕೊಂಡು ಓಡಾಡುತ್ತಿರುವುದು ಗಮನಕ್ಕೆ ಬಂದಿದೆ. ಹಾಗೆ ಮಾಡಬೇಡಿ ಎಂದು ಯಡಿಯೂರಪ್ಪ ಹಾಲಿ 18 ಸಂಸದರಿಗೆ ಟಿಕೆಟ್ ನೀಡುವುದನ್ನು ಖಚಿತಪಡಿಸಿದರು.

Next Story

RELATED STORIES