ರಾಜ್ಯಮಟ್ಟದ ಕ್ರೀಡಾಪಟುಗಳಿಗಿಲ್ಲ ಸರಿಯಾದ ಸೌಲಭ್ಯ..!

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯೊಂದರಲ್ಲಿ ಭಾಗವಹಿಸಲು ರಾಜ್ಯದ ನಾನಾ ಭಾಗಗಳಿಂದ ಬಂದ ವಿದ್ಯಾರ್ಥಿಗಳಿಗೆ ಸರಿಯಾದ ಸೌಲಭ್ಯ ನೀಡದೇ ನಿರ್ಲಕ್ಷ್ಯ ತೋರಿದ ಘಟನೆ ಬೆಳಕಿಗೆ ಬಂದಿದೆ.
ಧಾರವಾಡ, ರಾಯಚೂರು, ಬೆಳಗಾವಿ, ಗದಗ, ಕೋಲಾರ ಸೇರಿದಂತೆ ಹಲವೆಡೆಯಿಂದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಬಂದಿದ್ದ 1000-1500 ವಿದ್ಯಾರ್ಥಿಗಳಿಗೆ ತಂಗಲು ಕೊಠಡಿ, ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ, ಶೌಚಾಲಯದ ವ್ಯವಸ್ಥೆ ಇಲ್ಲದ ಕಾರಣ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ವಿದ್ಯಾರ್ಥಿಯೊಬ್ಬನು ಬೇಸರ ವ್ಯಕ್ತಪಡಿಸಿದ್ದು, ಕೊಠಡಿಯಲ್ಲಿ ಮಲಗಲು ಸರಿಯಾದ ವ್ಯವಸ್ಥೆ ಇಲ್ಲ, ನಾಲ್ಕು ಶೌಚಾಲಯವಿದ್ದು, ಅದೂ ಕೂಡ ಸ್ವಚ್ಛವಾಗಿಲ್ಲ. ತಮಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವೆಂದಿದ್ದಾನೆ. ಅಲ್ಲದೇ ಈತನ ಗೆಳೆಯನ ಮೊಬೈಲ್‌ ಫೋನ್ ಕೂಡ ಕಳ್ಳತನವಾಗಿದ್ದು, ಕೊಠಡಿಯಲ್ಲಿ ಸಿಸಿಟಿವಿ ಅಳವಡಿಸಿದ್ದೂ ಕೂಡ ನಿಷ್ಪ್ರಯೋಜಕವಾಗಿದೆ. ಈ ಬಗ್ಗೆ ದೂರು ನೀಡಿದರೂ ಕೂಡ, ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾನೆ.

ಈ ಬಗ್ಗೆ ಧಾರವಾಡದಿಂದ ಬಂದಿದ್ದ ಶಿಕ್ಷಕರೊಬ್ಬರು ಮಾತನಾಡಿದ್ದು, ಪ್ರತಿವರ್ಷ ಹೀಗೆ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಬರುವ ವಿದ್ಯಾರ್ಥಿಗಳಿಗೆ ಈ ತೊಂದರೆ ಎದುರಾಗುತ್ತದೆ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ನಾವು ದೊಡ್ಡ ದೊಡ್ಡ ಅಥ್ಲೀಟ್ಸ್‌ ಬಗ್ಗೆ ಮಾತನಾಡುತ್ತೇವೆ. ಆದರೆ ಈ ರೀತಿಯ ಚಿಕ್ಕ ಗ್ರಾಮಗಳಿಂದ ಬಂದ ಕ್ರೀಡಾಪಟುಗಳಿಗೆ ಸರಿಯಾದ ಮೂಲಭೂತ ಸೌಕರ್ವೇ ಇರುವುದಿಲ್ಲ, ವೈದ್ಯಕೀಯ ಸೌಲಭ್ಯವೂ ಇರುವುದಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲದೇ ಕ್ರೀಡೆಯಲ್ಲಿ ಭಾಗವಹಿಸಲು ವಯಸ್ಸಿನ ಮಿತಿ ಇರುತ್ತದೆ. ಆದರೆ ಕೆಲ ವಿದ್ಯಾರ್ಥಿಗಳು ವಯಸ್ಸು ಮೀರಿದ್ದರೂ ಸುಳ್ಳು ಪ್ರಮಾಣಪತ್ರಗಳನ್ನು ತೋರಿಸಿ, ಕ್ರೀಡೆಯಲ್ಲಿ ಭಾಗವಹಿಸಿ, ಚಿಕ್ಕವರ ಜೊತೆ ಸ್ಪರ್ಧೆ ನಡೆಸಿ ಗೆದ್ದು ಬಿಡುತ್ತಾರೆ. ಈ ಬಗ್ಗೆ ಯಾರೂ ಗಮನ ಹರಿಸುವುದಿಲ್ಲವೆಂದಿದ್ದಾರೆ.

ಒಟ್ಟಾರೆಯಾಗಿ, ರಾಜ್ಯ ಮಟ್ಟದ ಸ್ಪರ್ಧೆಯಲ್ಲೇ ಈ ರೀತಿಯ ನ್ಯೂನ್ಯತೆಗಳು ಕಂಡುಬಂದಿದ್ದು, ಇಂಥ ಅವ್ಯವಸ್ಥೆಗಳಿಂದ ಕ್ರೀಡಾಪಟುಗಳ ಸಾಮರ್ಥ್ಯ ಕುಗ್ಗಿ ಹೋಗುವ ಸಾಧ್ಯತೆ ಇದೆ. ಮುಂದೊಂದು ದಿನ ದೇಶವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳಿಗೆ ಈ ರೀತಿ ಸೌಲಭ್ಯದ ಕೊರತೆ ಇರುವುದು ವಿಪರ್ಯಾಸದ ಸಂಗತಿ. ಈ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ.