ತಮ್ಮನ ಪತ್ನಿ ಮೇಲೆ ರೌಡಿ ಶೀಟರ್ ನಾಗ ಗೂಂಡಾಗಿರಿ

ಅಕ್ರಮವಾಗಿ ನೋಟು ಬದಲಾವಣೆ, ಬ್ಲ್ಯಾಕ್ಮೇಲ್ ಸೇರಿದಂತೆ ನಾನಾ ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ರೌಡಿಶೀಟರ್ ನಾಗ, ತಮ್ಮನ ಪತ್ನಿಯ ಮೇಲೆ ಗೂಂಡಾಗಿರಿ ಪ್ರದರ್ಶಿಸಿದ್ದಾನೆ.
ಆಸ್ತಿ ವಿಚಾರವಾಗಿ ರೌಡಿ ಶೀಟರ್ ನಾಗ, ತನ್ನ ತಮ್ಮನ ಪತ್ನಿ ಹಾಗೂ ಮಕ್ಕಳ ಮೇಲೆಯೇ ಸುತ್ತಿಗೆ ಮತ್ತು ಕೋಲಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.
ತಮ್ಮನ ಪತ್ನಿ ಚಾಮುಂಡೇಶ್ವರಿ ಹಾಗೂ ಆಕೆಯ ಪುತ್ರಿ ಶ್ವೇತಾ ಮೇಲೆ ನಾಗ ಹಲ್ಲೆ ನಡೆಸಿದ್ದು, ಎರಡು ಕಾಲುಗಳ ಮೂಳೆ ಮುರಿತದಿಂದ ಅಸ್ವಸ್ಥರಾಗಿರುವ ಚಾಮುಂಡೇಶ್ವರಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಕಳೆದ ಭಾನುವಾರ ಶ್ರೀರಾಮ್ಪುರದಲ್ಲಿರುವ ಮನೆಗೆ ಬಂದು ನಾಗ ಹಲ್ಲೆ ನಡೆಸಿದ್ದು, ಆಸ್ತಿ ವಿಚಾರವಾಗಿ ನಾಗ ಮತ್ತು ಆತನ ತಮ್ಮ ಧರ್ಮನಿಗೆ ಜಗಳವಾಗುತ್ತಿತ್ತು. ಇದೇ ದ್ವೇಷದ ಹಿನ್ನೆಲೆಯ್ಲಿ ಹಲ್ಲೆ ಆಗಿದೆ ಎಂದು ಆರೋಪಿಸಲಾಗಿದೆ.
ಶ್ರೀರಾಮ್ಪುರ ಪೊಲೀಸ್ ಠಾಣೆಯಲ್ಲಿ ನಾಗನ ವಿರುದ್ಧ ದೂರು ದಾಖಲಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚಾಮುಂಡೇಶ್ವರಿ ಮತ್ತು ಶ್ವೇತಾ ಹೇಳಿಕೆಯನ್ನು ಪೊಲೀಸರು ಪಡೆದಿದ್ದಾರೆ ಎನ್ನಲಾಗಿದೆ.