ನಾನು ಕಾಶ್ಮೀರಿ ಬ್ರಾಹ್ಮಣ, ನನ್ನ ಗೋತ್ರ ದತ್ತಾತ್ರೇಯ- ರಾಹುಲ್ ಗಾಂಧಿ

ರಾಜಸ್ಥಾನದ ಪುಷ್ಕರ ಸರೋವರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ, ತಮ್ಮ ಗೋತ್ರ ಯಾವುದೆಂದು ಬಹಿರಂಗಪಡಿಸಿದ್ದಾರೆ. ತಾವು ಕಾಶ್ಮೀರಿ ಬ್ರಾಹ್ಮಣರೆಂದ ರಾಹುಲ್, ತಮ್ಮದು ದತ್ತಾತ್ರೇಯ ಗೋತ್ರವೆಂದಿದ್ದಾರೆ.
ಪುಷ್ಕರ ಸರೋವರಕ್ಕೆ ರಾಹುಲ್ ಭೇಟಿ ನೀಡಿದಾಗ, ಅಲ್ಲಿನ ಪುರೋಹಿತರು ರಾಹುಲ್ಗೆ ನೆಹರು ಜಾತಕ ತೋರಿಸಿದ್ದು, ಅದರಲ್ಲಿ ನೆಹರು ಕಾಶ್ಮೀರಿ ಬ್ರಾಹ್ಮಣರು ಮತ್ತು ದತ್ತಾತ್ರೇಯ ಗೋತ್ರದವರೆಂದು ಹೇಳಲಾಗಿದೆ.
ಇನ್ನು ರಾಹುಲ್ ಗೋತ್ರದ ಬಗ್ಗೆ ಪುಷ್ಕರ ಸರೋವರದ ಪುರೋಹಿತರು ಮಾತನಾಡಿದ್ದು, ರಾಹುಲ್ ಗಾಂಧಿ ಕಾಶ್ಮೀರಿ ಬ್ರಾಹ್ಮಣರಾಗಿದ್ದು, ಅವರ ಗೋತ್ರ ಕೌಲ ದತ್ತಾತ್ರೇಯ. ಅಲ್ಲದೇ ಇವರ ಪೂರ್ವಜನರು ಇಲಹಾಬಾದ್ನ ನೇರದಲ್ಲಿ ಇದ್ದುದರಿಂದ ನೆಹರು ಎಂದು ಇವರ ಕುಟುಂಬಕ್ಕೆ ಹೆಸರು ಬಂದಿದೆ ಎಂದಿದ್ದಾರೆ.
'ಹಲವು ಬಾರಿ ಬಿಜೆಪಿಯವರು ನನ್ನ ಜಾತಿ ಮತ್ತು ಗೋತ್ರ ಕೇಳಿದ್ದಾರೆ. ಇವತ್ತು ಈ ಬಗ್ಗೆ ನನಗೆ ಸ್ಪಷ್ಟನೆ ಸಿಕ್ಕಿದ್ದು, ಗೋತ್ರದ ಬಗ್ಗೆ ಬಹಿರಂಗಪಡಿಸಿದ್ದೇನೆ ' ಎಂದರು.
ಈ ಮೊದಲು ರಾಹುಲ್ ಗಾಂಧಿ ತಾನು ಜನಿವಾರ ಧರಿಸಿದ್ದೇನೆ, ಅಲ್ಲದೇ ಶಿವನ ಪರ ಭಕ್ತ ಎಂದು ಹೇಳಿಕೊಂಡಿದ್ದರು. ಈ ಕಾರಣಕ್ಕಾಗಿ ಬಿಜೆಪಿಯವರು ರಾಹುಲ್ ಗಾಂಧಿ ಜನಿವಾರ ಧರಿಸಿದ್ದು ಯಾವ ಆಧಾರದ ಮೇಲೆ ಎಂದು ಪ್ರಶ್ನಿಸಿದ್ದರು.
ಇದೀಗ ರಾಹುಲ್ ತಮ್ಮ ಗೋತ್ರ ಯಾವುದೆಂದು ಬಹಿರಂಗಪಡಿಸಿದ್ದು, ಈ ಬಗ್ಗೆಯೂ ಬಿಜೆಪಿ ವ್ಯಂಗ್ಯವಾಡಿದೆ.