ಒಕ್ಕಲಿಗ ಸಂಪ್ರದಾಯದಂತೆ ಅಂಬಿ ಅಂತ್ಯಸಂಸ್ಕಾರ

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬಿ ಅಂತಿಮ ಸಂಸ್ಕಾರ ನಡೆಯಲಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ.
ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ರೆಬಲ್ ಸ್ಟಾರ್ ಅಂಬರೀಶ್ ಪಾರ್ಥೀವ ಶರೀರವನ್ನಿರಿಸಲಾಗಿದ್ದು, ಅಂಬಿ ಅಭಿಮಾನಿಗಳು ಮಧ್ಯರಾತ್ರಿಯೆಂದೂ ಲೆಕ್ಕಿಸದೇ, ನೆಚ್ಚಿನ ನಟನ ಅಂತಿಮ ದರ್ಶನ ಪಡೆದರು.
ಅಂಬಿ ಅಭಿಮಾನಿಗಳು ಅಂಬಿ ಪುತ್ರ ಅಭಿಶೇಕ್ಗೆ ಕಬ್ಬು ಕೊಡುವುದರ ಮೂಲಕ ಸಾಂತ್ವನ ಹೇಳಿದರು. ಅಲ್ಲದೇ ತಮಟೆ ಹೊಡೆದು ನೃತ್ಯ ಮಾಡಿದರಾದರೂ, ಶೋಕಾಚರಣೆ ವೇಳೆ ನೃತ್ಯ ಮಾಡುವುದು ಸರಿಯಲ್ಲವೆಂದು ಪೊಲೀಸರು ಅಲ್ಲಿದ್ದ ಗುಂಪನ್ನು ಚದುರಿಸಿದರು.
ಅಂಬಿ ಪಾರ್ಥೀವ ಶರೀರದ ಬಳಿ ಹೆಚ್ಚುವರಿ ಪೊಲೀಸರನ್ನ ನಿಯೋಜಿಸಿದ್ದು, ಬಿಗಿಬಂದೋಬಸ್ತ್ ಮಾಡಲಾಗಿದೆ. ಇನ್ನು ಮಂಡ್ಯದಲ್ಲಿ ಅಂತಿಮ ದರ್ಶನ ಆರಂಭವಾಗಿ 9ಗಂಟೆ ಕಳೆದರೂ ಜನಸಾಗರ ಮಾತ್ರ ಕಡಿಮೆಯಾಗಿಲ್ಲ. 2-3ಲಕ್ಷ ಅಭಿಮಾನಿಗಳು ಅಂಬಿ ಅಂತಿಮ ದರ್ಶನ ಪಡೆದಿದ್ದು, ತಡರಾತ್ರಿ ಕಳೆದು ಮುಂಜಾವಾದರೂ ಕೂಡ ಅಂಬಿ ಅಭಿಮಾನಿಗಳ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
ಇನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅಂತ್ಯಕ್ರಿಯೆ ಹಿನ್ನೆಲೆ, ಅಂತ್ಯಕ್ರಿಯೆಗೆ ಪೂರ್ಣ ಸಿದ್ಧತೆ ನಡೆದಿದೆ. ಸಿಬ್ಬಂದಿಗಳು ಸಮಾಧಿಯನ್ನು ಸ್ವಚ್ಛಗೊಳಿಸಿದ್ದು, ಅಂತ್ಯಕ್ರಿಯೆಗೆ ಬೇಕಾದ, ಶ್ರೀಗಂಧದ ಕಟ್ಟಿಗೆ, ಹುಣಸೆ, ಅತ್ತಿ, ನೀಲಗಿರಿ, ಸರ್ವೆ ಕಟ್ಟಿಗೆಗಳನ್ನಿರಿಸಲಾಗಿದೆ. ಅಲ್ಲದೇ ಬೆಣ್ಣೆ, ತುಪ್ಪ, ಬೆರಣಿಯನ್ನಿರಿಸಲಾಗಿದೆ.
ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಬಾಂಬ್ ಸ್ಕ್ವಾಡ್, ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ.
ಇನ್ನು ಅಂತ್ಯಸಂಸ್ಕಾರದಲ್ಲಿ ಅಂಬಿ ಪುತ್ರ ಅಭಿಶೇಕ್ ಒಕ್ಕಲಿಗ ಸಂಪ್ರದಾಯದಂತೆ ಅಗ್ನಿ ಸ್ಪರ್ಶ ಮಾಡಲಿದ್ದಾರೆ.