ಅಂಬರದಲ್ಲಿ ಲೀನರಾದ ಅಂಬರೀಶ

ವೃತ್ತಿ, ಪ್ರವೃತ್ತಿಗಳಲ್ಲಿ ನಟ ಹಾಗೂ ರಾಜಕಾರಣಿ ಆಗಿದ್ದಕ್ಕಿಂತಲೂ ದಾನ, ಸ್ನೇಹದಿಂದ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದ ಅಂಬರೀಶ್ ಪಂಚಭೂತಗಳಲ್ಲಿ ಲೀನರಾದರು.
ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು, ನೂರಾರು ಕಲಾವಿದರು, ಕುಟುಂಬಸ್ಥರ ಕಣ್ಣೀರ ವಿದಾಯದೊಂದಿಗೆ ನಡೆದ ಒಕ್ಕಲಿಗ ವಿಧಿವಿಧಾನದ ಪ್ರಕಾರ ಅಂಬರೀಶ್ ಅಂತ್ಯ ಸಂಸ್ಕಾರ ನೆರವೇರಿತು. ಮೂರು ಸುತ್ತು ಕುಶಾಲತೋಪು ಹಾರಿಸಿದ್ದೂ ಅಲ್ಲದೇ ರಾಷ್ಟ್ರಗೀತೆ ಹಾಡುವ ಮೂಲಕ ಸರಕಾರಿ ಗೌರವ ಸಲ್ಲಿಸಲಾಯಿತು.
ಡಾ.ರಾಜ್ ಕುಮಾರ್ ಸಮಾಧಿ ಮಾಡಿದ ಪಕ್ಕದಲ್ಲಿಯೇ ಅಂಬರೀಶ್ ಅವರ ಅಂತ್ಯ ಸಂಸ್ಕಾರ ನೆರವೇರಿದ್ದು, ಪುತ್ರ ಅಭಿಷೇಕ್ ಅಗ್ನಿಸ್ಪರ್ಶ ಮಾಡಿದರು.
ನಗರದ ಕಂಠೀರವ ಕ್ರೀಡಾಂಗಣದಿಂದ 13 ಕಿ.ಮೀ.ದೂರದ ಕಂಠೀರವ ಸ್ಟುಡಿಯೋವರೆಗೂ ಅಂಬರೀಶ್ ಪಾರ್ಥಿವ ಶರೀರ ಹೊತ್ತು ವಿಶೇಷ ವಾಹನದಲ್ಲಿ ಸಾಗಿದ ಮೆರವಣಿಗೆಯುದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸಿದರು.
ಡಾ. ರಾಜ್ಕುಮಾರ್ ಸಮಾಧಿ ಬಳಿ ಅತ್ಯಂತ ವ್ಯವಸ್ಥಿತವಾಗಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿಯೊಬ್ಬ ಗಣ್ಯರಿಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಿಎಂ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಸಚಿವ ಆರ್. ಅಶೋಕ್ ಮುಂತಾದವರು ಅಂತಿಮ ನಮನ ಸಲ್ಲಿಸಿದರು.
ಚಿತ್ರರಂಗದ ನಟ-ನಟಿಯರಾದ ದರ್ಶನ್, ಶಿವರಾಜ್ ಕುಮಾರ್, ಪುನೀತ್, ಧ್ರುವ ಸರ್ಜಾ, ಗಣೇಶ್, ಯಶ್, ಉಪೇಂದ್ರ, ಜಯಮಾಲಾ, ಬಿ. ಸರೋಜಾದೇವಿ, ಜಯಪ್ರದಾ, ಮೋಹನ್ ಬಾಬು, ಸಾಧು ಕೋಕಿಲ, ಎಸ್. ನಾರಾಯಣ್, ರಾಕ್ಲೈನ್ ವೆಂಕಟೇಶ್, ಸಾರಾ ಗೋವಿಂದು ಮುಂತಾದ ಹಲವಾರು ಅಂತಿಮ ಗೌರವ ಸಲ್ಲಿಸಿದರು.