ಕೃನಾಲ್, ಕೊಹ್ಲಿ ಆಟಕ್ಕೆ `ಕೊನೆ’ಗೂ ಒಲಿದ ಜಯ

ಆಲ್​ರೌಂಡರ್ ಕೃನಾಲ್ ಪಾಂಡ್ಯ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಮಿಂಚಿನ ಅರ್ಧಶತಕದ ನೆರವಿನಿಂದ ಭಾರತ ತಂಡ 6 ವಿಕೆಟ್​ಗಳಿಂದ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿದು ಮೂರು ಪಂದ್ಯಗಳ ಟಿ-20ಸರಣಿಯಲ್ಲಿ 1-1ರಿಂದ ಸಮಬಲ ಸಾಧಿಸಿದೆ.

ಸಿಡ್ನಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನು 20 ಓವರ್ ಗಳಲ್ಲಿ 6 ವಿಕೆಟ್​ಗೆ 164 ರನ್​ಗಳಿಗೆ ನಿಯಂತ್ರಿಸಿದ ಭಾರತ ತಂಡ ಭಾರತ 2 ಎಸೆತಗಳು ಬಾಕಿ ಇರುವಂತೆಯೇ 4 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.

ನಾಯಕ ಕೊಹ್ಲಿ 41 ಎಸೆತಗಳಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 61 ರನ್ ಬಾರಿಸಿ ಔಟಾಗದೇ ಉಳಿದರೆ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ 18 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ ಸಿಕ್ಸರ್ ಸೇರಿದ 22 ರನ್ ಬಾರಿಸಿ ಅಜೇಯರಾಗಿ ಉಳಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್​ಗೆ 60 ರನ್ ಪೇರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರಂಭಿಕರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮ ಮೊದಲ ವಿಕೆಟ್​ಗೆ 5.3 ಓವರ್ ಗಳಲ್ಲಿ 67 ರನ್ ಜೊತೆಯಾಟ ನಿಭಾಯಿಸಿ ಭರ್ಜರಿ ಆರಂಭ ಒದಗಿಸಿದರು. ಧವನ್ 23 ರನ್ ಗಳಿಸಿದರೆ, ರೋಹಿತ್ 22 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 41 ರನ್ ಚಚ್ಚಿದರು.

ಭಾರತ ಮೊದಲ ಪಂದ್ಯದಲ್ಲಿ ಸೋಲುಂಡಿದ್ದರೆ ಎರಡನೇ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ ಟಿ-20ಯಲ್ಲಿ ಸರಣಿ ಸೋಲದ ದಾಖಲೆಯನ್ನು ಉಳಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು.

ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡರೂ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು.

ನಾಯಕ ಏರಾನ್ ಫಿಂಚ್ (28) ಮತ್ತು ಡಿಆರ್ಕೆ ಶಾರ್ಟ್ (33) ಮೊದಲ ವಿಕೆಟ್​ಗೆ 8.3 ಓವರ್ಗಳಲ್ಲಿ 68 ರನ್ ಪೇರಿಸಿ ಬೃಹತ್ ಮೊತ್ತದ ಸೂಚನೆ ನೀಡಿದರು. ಈ ಹಂತದಲ್ಲಿ ಕೃನಾಲ್ ಪಾಂಡ್ಯ ಮಾರಕ ದಾಳಿ ನಡೆಸಿ ಮಧ್ಯಮ ಕ್ರಮಾಂಕದ ಬೆನ್ನೆಲುಬು ಮುರಿದರು.

ಆದರೆ ಕ್ಯಾರಿ (27), ಸ್ಟೋನಿಸಿಸ್ 15 ಎಸೆತಗಳಲ್ಲಿ 3 ಬೌಂಡರಿ ನೆರವಿನಿಂದ 25 ರನ್ ಗಳಿಸಿದರು. ಕೌಲ್ಟರ್ ನೀಲ್ 7 ಎಸೆತಗಳಲ್ಲಿ 3 ಬೌಂಡರಿ ಸಹಾಯದಿಂದ 13 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

  • ಸಂಕ್ಷಿಪ್ತ ಸ್ಕೋರ್
  • ಆಸ್ಟ್ರೇಲಿಯಾ 20 ಓವರ್ 6 ವಿಕೆಟ್​ಗೆ 164 (ಶಾರ್ಟ್ 33, ಫಿಂಚ್ 28, ಕ್ಯಾರಿ 27, ಸ್ಟೊನಿಸಿಸ್ 25, ಕೃನಾಲ್ 36/4).
  • ಭಾರತ 19.4 ಓವರ್ 4 ವಿಕೆಟ್ 168 (ಕೊಹ್ಲಿ ಅಜೇಯ 61, ರೊಹಿತ್ 41, ಧವನ್ 23, ಕಾರ್ತಿಕ್ ಅಜೇಯ 22, ಜಾಂಪ 22/1).

Recommended For You

Leave a Reply

Your email address will not be published. Required fields are marked *