Top

ನಟ ಅಂಬರೀಶ್ ನಿಧನಕ್ಕೆ ಗಣ್ಯರ ಕಂಬನಿ

ನಟ ಅಂಬರೀಶ್ ನಿಧನಕ್ಕೆ ಗಣ್ಯರ ಕಂಬನಿ
X

ಸ್ಯಾಂಡಲ್‌ವುಡ್‌ನ ಮೇರು ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಅಂಬಿ ಕನ್ನಡ ಚಿತ್ರರಂಗದ ಕಂಡ ಮಹತ್ವದ ಕಲಾವಿದ. ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ನನ್ನಲ್ಲಿ ಅಪಾರ ದುಃಖವನ್ನುಂಟುಮಾಡಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಮಹತ್ತರವಾದದ್ದು. ನನ್ನ ಆತ್ಮೀಯರೂ ಆಗಿದ್ದ ಅಂಬರೀಷ್ ಅಕಾಲಿಕ ಮರಣ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬ ವರ್ಗಕ್ಕೂ ಹಾಗೂ ಅವರ ಅಪಾರ ಅಭಿಮಾನಿಗಳಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಪ್ರಧಾನಿ ಮೋದಿ ಕೂಡ ಟ್ವೀಟರ್ ಮೂಲಕ ಅಂಬಿ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಜಿ ಪ್ರಧಾನಿ ದೇವೇಗೌಡರು ಸ್ಯಾಂಡಲ್‌ವುಡ್ ಕರ್ಣನ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮಂಡ್ಯದ ಘೋರ ದುರಂತವೊಂದನ್ನು ಕೇಳಿದ ನಂತರ, ಇದೀಗ ರಾಜಕೀಯವಾಗಿ ನನ್ನ ಜೊತೆ ಹೆಜ್ಜೆ ಹಾಕಿದ್ದ ಅಂಬರೀಶ್ ಅವರು ಸಹಾ ಇನ್ನಿಲ್ಲ ಎನ್ನುವ ಸುದ್ದಿ ಬರಸಿಡಿಲಿನಂತೆ ಬಂದೆರಗಿದೆ. ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕವು ಅಮೂಲ್ಯವಾದ ರತ್ನವನ್ನು ಕಳೆದುಕೊಂಡಿದ್ದು, ನಮ್ಮನ್ನು ಅಗಲಿರುವ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂಬಿ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದು, ಹಿರಿಯ ನಟ, ಮಾಜಿ ಸಚಿವ ಮತ್ತು ದೀರ್ಘಕಾಲದ ನನ್ನ ಗೆಳೆಯ. ಅಂಬರೀಷ್ ಅವರ ಸಾವು ದಿಗ್ಭ್ರಮೆ‌ ಉಂಟು ಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯರಂಗ ಎರಡರಲ್ಲಿಯೂ ಜನಮನ ಗೆದ್ದ ನಾಯಕ ಅಂಬರೀಷ್. ನಿಜವಾದ ಅರ್ಥದಲ್ಲಿ‌ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ ಭಾಗಿ ಎಂದಿದ್ದಾರೆ.

ಹಿರಿಯ ರಾಜಕಾರಣಿಯನ್ನು ಕಳೆದುಕೊಂಡು ರಾಜ್ಯ ಬಡವಾಗಿದೆ. ಉತ್ತಮ ಸ್ನೇಹಿತರಾಗಿದ್ದ ಅವರ ಸಾವು ಅರಗಿಸಿಕೊಳ್ಳಲಾಗ್ತಿಲ್ಲ. ಅವರ ನಿಧನ ತುಂಬ ನೋವನ್ನುಂಟು ಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದಾರೆ.

ಇನ್ನು ಕೆಪಿಸಿಸಿ ಕೂಡ ಅಂಬಿ ನಿಧನಕ್ಕೆ ಸಂತಾಪ ಪ್ರಕಟಿಸಿದೆ. ಅಂಬರೀಶ್ ನಿಧನ ಆಘಾತಕಾರಿ ಸುದ್ದಿ, ನೇರ ನಡೆ ನುಡಿಯ ವ್ಯಕ್ತಿತ್ವದ ವ್ಯಕ್ತಿ ಅವರಾಗಿದ್ದರು. ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ದೇವರು ದುಃಖ ತಡೆಯುವ ಶಕ್ತಿ ನೀಡಲಿ ಎಂದು ಸಂತಾಪ ಸೂಚಿಸಿದೆ.

ಅಂಬಿ ನಿಧನಕ್ಕೆ ನಟ ರಜನಿಕಾಂತ್ ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ನನ್ನ ಬೆಸ್ಟ್ ಫ್ರೆಂಡ್ ಆಗಿದ್ದರು. ನಾನು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರ ಆತ್ಮಕ್ಕೆ ದೇವರು ಶಾಂತಿ ಕೊಡಲಿ ಎಂದು ಅಂಬರೀಶ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅಂಬಿ ಸಾವಿನ ಬಗ್ಗೆ ಶೋಕ ಸಂದೇಶ ಕಳುಹಿಸಿದ್ದು, ಕನ್ನಡ ಚಿತ್ರರಂಗದ ದಿಗ್ಗಜ,ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಚಲನಚಿತ್ರ ನಟ, ಅಂಬರೀಶ್ ಅವರ ನಿಧನವು ರಾಜ್ಯಕ್ಕೆ,ಕನ್ನಡ ಚಿತ್ರರಂಗಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರಾಗಿ, ಕರ್ನಾಟಕದ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಗುರುತಿಸಿದ್ದರು. ಅಂಬರೀಶ್‌ರವರು ಸಮಾಜಕ್ಕೆ ನೀಡಿದ ಕೊಡುಗೆಗಳು ಶಾಶ್ವತವಾಗಿ ಉಳಿಯುತ್ತವೆ. ಅಂಬರೀಶ್‌ರವರ ಸಾವು ನಿಜಕ್ಕೂ ನೋವಿನ ಸಂಗತಿ. ಅವರ ಅತ್ಮಕ್ಕೆ ಭಗವಂತನು ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ದಿಗ್ಗಜ ಕಲಾವಿದ ಅಂಬರೀಶ್ ನಿಧನದ ಬಗ್ಗೆ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ. ಅಂಬರೀಶ್ ನಿಧನ ದಿಗ್ಭ್ರಾಂತಿ ಮೂಡಿಸಿದೆ. ಅಂಬರೀಶ್ ಅವರ ನಿಧನದ ಸುದ್ದಿ ಇಡೀ ಮಂಡ್ಯ, ರಾಜ್ಯ ಹಾಗೂ ದೇಶವನ್ನೇ ಶೋಕದಲ್ಲಿ ಮುಳುಗಿಸಿದೆ. ಇಡೀ ರಾಜ್ಯಕ್ಕೆ ಇದು ಮತ್ತೊಂದು ಮರ್ಮಾಘಾತ ಉಂಟು ಮಾಡಿದೆ. ನೇರ ನುಡಿಯಿಂದಲೇ ಎಲ್ಲರಿಗೂ ಮೆಚ್ಚುಗೆ ಆಗುತ್ತಿದ್ದರು. ಡಾ.ರಾಜಕುಮಾರ್, ವಿಷ್ಣು ವರ್ಧನ್‌ ಅವರ ಸಾಲಿನ ಅಂಬರೀಶ್‌ ಇಲ್ಲವೆಂದರೆ ನಂಬಲು ಸಾಧ್ಯವಾಗುತ್ತಿಲ್ಲ. ರಾಜಕೀಯದಲ್ಲೂ ಸಾಕಷ್ಟು ಗುರುತಿಸಿಕೊಂಡು ಸಚಿವರಾಗಿ ಉತ್ತಮ ಕಾರ್ಯ ಮಾಡಿದವರು. ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರವು ಒಬ್ಬ ನಾಯಕನ್ನು ಕಳೆದುಕೊಂಡು ಅನಾಥವಾಗಿದೆ. ಇವರ ಆತ್ಮಕ್ಕೆ ದೇವರು ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.

ಸಚಿವ ಜಿ.ಟಿ.ದೇವೇಗೌಡ ಕೂಡ ರೆಬೆಲ್ ಸ್ಟಾರ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದು, ಕನ್ನಡ ಚಿತ್ರರಂಗದ ದಿಗ್ಗಜ,ರೆಬೆಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಚಲನಚಿತ್ರ ನಟ, ಅಂಬರೀಶ್ ಅವರ ಸಾವು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಚಿವರಾಗಿ, ಕರ್ನಾಟಕದ ಚಿತ್ರರಂಗವನ್ನು ವಿಶ್ವಮಟ್ಟಕ್ಕೆ ಗುರುತಿಸಿದ್ದ, ಅಂಬಿ ಅವರ ಸಾವು ನಿಜಕ್ಕೂ ನೋವಿನ ಸಂಗತಿ. ಅವರ ಅತ್ಮಕ್ಕೆ ತಾಯಿ ಚಾಮುಂಡೇಶ್ವರಿ ಶಾಂತಿ ನೀಡಲಿ. ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.

ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಕೂಡ ಅಂಬರೀಶ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಮಾಜಿ ಸಚಿವ ಮತ್ತು ಖ್ಯಾತ ಚಿತ್ರನಟ ಅಂಬರೀಶ್ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ತೆರೆದ ಮನಸ್ಸಿನ ವ್ಯಕ್ತಿಯಾಗಿದ್ದ ಅವರು ಉದಾರ ವ್ಯಕ್ತಿತ್ವದವರಾಗಿದ್ದರು. ಅವರ ನಿಧನದಿಂದ ನಾವೊಬ್ಬ ಸಜ್ಜನರನ್ನು ಕಳೆದುಕೊಂಡೊದ್ದೇವೆ. ಅವರ ನಿಧನದಿಂದ ಉಂಟಾಗಿರುವ ನೋವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೂ ಅಭಿಮಾನಿಗಳಿಗೂ ದಯಪಾಲಿಸಲಿ ಎಂದಿದ್ದಾರೆ.

ಅಂಬಿ ನಿಧನದ ಸುದ್ದಿ ಕೇಳಿ ಆಶ್ಚರ್ಯ ಆಯ್ತು. ಅವನ ನಿಧನ ದುಃಖ ತಂದಿದೆ. ಅಂಬಿ ನಿಧನದ ಆಘಾತ ತಡೆದುಕೊಳ್ಳುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.ಸ್ವೀಡನ್ ಅಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್ ರದ್ದುಗೊಳಿಸಿ ಇಡೀ ತಂಡ ಆದಷ್ಟೂ ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ ಎಂದು ಲಂಡನ್‌ನಲ್ಲಿ ಶೂಟಿಂಗ್‌ನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟ್ವೀಟ್ ಮಾಡಿದ್ದಾರೆ.

Next Story

RELATED STORIES