ಗೌರಿ ಹತ್ಯೆ: 9235 ಪುಟಗಳ ಜಾರ್ಜ್ಶೀಟ್ನಲ್ಲಿ ಏನಿದೆ ಗೊತ್ತಾ?

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ಒಂದು ವರ್ಷದ ನಂತರ ಎಸ್ಐಟಿ ಪೊಲೀಸರು ನ್ಯಾಯಾಲಯಕ್ಕೆ 9,235 ಪುಟಗಳ ಎರಡನೇ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. 2023ರ ಹೊತ್ತಿಗೆ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರ ಮಾಡಲು ವಿರೋಧಿಗಳ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಆಘಾತಕಾರಿ ವಿಷಯವನ್ನು ಚಾರ್ಜ್ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳ ಹೇಳಿಕೆ ಆಧರಿಸಿ ಪೊಲೀಸರು ಸಮಗ್ರ ವರದಿ ಸಲ್ಲಿಸಿದ್ದು, ಸಂಪೂರ್ಣ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗುವವರನ್ನು ಹತ್ಯೆಗೈಯ್ಯಲು 26 ಜನರ ಪಟ್ಟಿ ತಯಾರಿಸಲಾಗಿತ್ತು ಎಂದು ಹೇಳಲಾಗಿದೆ.
ಗೌರಿ ಹತ್ಯೆಯ ಆರೋಪಿಗಳಿಗೆ ಸನಾತನ ಸಂಸ್ಥೆಯ ನಂಟಿದೆ. ಆದರೆ ಸನಾತನ ಸಂಸ್ಥೆಗೂ ಗೌರಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಸನಾತನ ಸಂಸ್ಥೆಯಲ್ಲಿದ್ದ ಕೆಲವರು ಹಿಂದೂ ಜನ ಜಾಗ್ರತಿ ಸಮಿತಿಯನ್ನ ಈ ಹಿಂದೆ ಸೇರಿಕೊಂಡಿದ್ದಾರೆ.
ವಿಚಾರಧಾರೆಗಳ ಒಡಕಿನಿಂದ ಅಲ್ಲಿಂದಲೂ ಹೊರಬಂದು ಹತ್ಯಾ ಜಾಲವನ್ನು ರೂಪಿಸಲಾಗಿತ್ತು. ಹಿಂದೂ ವಿರೋಧಿ ಜಾಲಕ್ಕೆ ಯಾವುದೇ ಹೆಸರೂ ಕೂಡ ಇಲ್ಲ. 2023ರ ಹೊತ್ತಿಗೆ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿ ರೂಪಿಸಲು ಅಡ್ಡಿಪಡಿಸುವವರನ್ನು ಕೊಲೆಗೈಯ್ಯುವುದು ಈ ಜಾಲದ ಉದ್ದೇಶ.
ಮೂರು ಗುಂಪುಗಳಾಗಿ ಹಿಂದೂ ವಿರೋಧಿಗಳನ್ನ ವಿಂಗಡಿಸಲಾಗಿತ್ತು. ಹಿಂದೂಗಳಾಗಿದ್ದುಕೊಂಡು ಹಿಂದೂ ವಿರೋಧಿಸುವವರು, ಹಿಂದೂ ಧರ್ಮ ವಿರೋಧಿಸುವ ಅನ್ಯ ಧರ್ಮಿಯರು, ದೇವರು-ಧರ್ಮವನ್ನ ನಂಬದ ನಾಸ್ತಕರನ್ನು ಗುರಿಯಾಗಿ ದಾಳಿ ಮಾಡಲು ಸಂಚು ರೂಪಿಸಲಾಗಿತ್ತು.
ಈ ಎಲ್ಲಾ ವಿಚಾರಗಳ ಕಿಂಗ್ ಪಿನ್ ಅಮೋಲ್ ಕಾಳೆ ಇದ್ದು, ಆತನ ಬಳಿ ಸಿಕ್ಕ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಹತ್ಯೆ ಲೀಸ್ಟ್ ನಲ್ಲಿ ಕೇವಲ ಕನ್ನಡಿಗರು ಮಾತ್ರವಲ್ಲದೆ ಇತರ ಭಾಷಿಕರೂ ಇದ್ದಾರೆ. ಅದರಲ್ಲಿ ದಿ ವೈರ್ ಸಂಪಾದಕ ಸಿದ್ದಾರ್ಥ್ ವರದರಾಜನ್, ಪತ್ರಕರ್ತೆ ಅಂತರಾ ದೇವಸೇನ್, ಜೆಎನ್ ಯು ಫ್ರೊಫೆಸರ್ ಚಮನ್ ಲಾಲ್, ಪಂಜಾಬ್ ನ ಖ್ಯಾತ ನಾಟಕಕಾರ ಆತ್ಮಜೀತ್ ಸಿಂಗ್ ಸೇರಿದಂತೆ 26 ಗಣ್ಯರ ಪಟ್ಟಿ ಸಿದ್ಧವಾಗಿತ್ತು.
ಹಿಟ್ ಲೀಸ್ಟ್ ನಲ್ಲಿರುವ ಎಲ್ಲರನ್ನೂ ಗುಂಡಿಟ್ಟು ಕೊಲ್ಲಬೇಕೆಂದು ನಿರ್ಧಾರವಾಗಿತ್ತು. ಅಷ್ಟರಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಸಭೆಯೊಂದರಲ್ಲಿ ಹಿಂದೂ ಧರ್ಮಕ್ಕೆ ಅಪ್ಪ ಅಮ್ಮ ಇಲ್ಲ, ಅದು ಧರ್ಮವೇ ಅಲ್ಲ ಎಂದು ಹೇಳಿಕೆ ನೀಡಿದ್ದರು. ಅದಕ್ಕಾಗಿ ಗೌರಿಯನ್ನ ಮೊದಲೇ ಮುಗಿಸಲು ಸ್ಕೆಚ್ ರೂಪಿಸಲಾಯ್ತಂತೆ. ಅದರಂತೆ 2017 ರ ಸೆಪ್ಟೆಂಬರ್ 5 ನೇ ತಾರೀಕಿನಂದು ಗೌರಿ ಹತ್ಯೆ ಮಾಡಿ ಮುಗಿಸಿದ್ದರು.