Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ಅಕ್ರಮ ಸಾಗುವಳಿ ಪತ್ರ ವಿತರಣೆ ಮಾಡಿರುವುದನ್ನು ವಿರೋಧಿಸಿ ತಹಶಿಲ್ದಾರ ಕಚೇರಿ ಮುಂದೆ ಗ್ರಾಮಸ್ಥರಿಂದ ಧರಣಿ ಕೈಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ನಡೆದಿದೆ.ದೇವನಹಳ್ಳಿ ತಾಲೂಕಿನ ಸೋಲೂರು ಗ್ರಾಮದಲ್ಲಿ ಸುಮಾರು ಮೂವತ್ತು ಎಕರೆ ಸರ್ಕಾರಿ‌ ಜಾಗವಿದ್ದು, ಗ್ರಾಮದ ಪಕ್ಕದಲ್ಲಿ ಸರ್ವೆ ನಂ ೫ ರ ಸರ್ಕಾರಿ ಜಾಗದಲ್ಲಿ ಎರಡು ಎಕರೆ ಜಾಗವನ್ನು ಅಕ್ರಮವಾಗಿ ದಾಖಲೆಗಳನ್ನು ಸೃಷ್ಟಿಸಿ ಅಶ್ವಥಮ್ಮ ಲೇಟ್ ನಾರಾಯಣಪ್ಪ ಅವರು ತಮ್ಮ ಹೆಸರಿಗೆ ಹೊಸ ಪೋಡ್ ಸರ್ವೆ ನಂ ಸೃಷ್ಟಿಸಿ ಮಾಡಿಕೊಂಡು, ಕಾಂಪೌಂಡ್ ‌ಹಾಕಲು‌ ಮುಂದಾಗಿದ್ದಾರೆ

2. ಮಹದೇವಪುರ ಕ್ಷೇತ್ರದಲ್ಲಿನ ಪರಿಸರ ಸಂರಕ್ಷಣೆ, ಸುರಕ್ಷತೆ, ಕಾನೂನು ಸುವ್ಯವಸ್ಥೆ, ಮೂಲಸೌಕರ್ಯಗಳು, ಕುಂದುಕೊರತೆಗಳು, ಒದಗಿಸಬೇಕಾದ ಸೌಲಭ್ಯಗಳು ಸೇರಿದಂತೆ, ಸಮಾಜದ ಸಮಸ್ಯೆಗಳನ್ನು ಬಗೆಹರಿಸಿ ಒಂದು ಪರಿಹಾರ ಕಂಡುಕೊಳ್ಳುವ ಸಲುವಾಗಿ ಕಾರ್ಯಪಡೆ ಯೋಜನೆಯನ್ನು ಮಾಡಲಾಗಿದೆ. ಆನ್ ಲೈನ್ ಮೂಲಕ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಮಾಹಿತಿ ಪರಿಹಾರ ಒದಗಿಸುವುದು ಮುಂದಿನ ಅಭಿವೃದ್ದಿ ಯೋಜನೆಗಳ ಸಮಗ್ರ ಮಾಹಿತಿಗಳನ್ನು ಒದಗಿಸುವುದು ಕಾರ್ಯಪಡೆಯ ಪ್ರಮುಖ ಉದ್ದೇಶವಾಗಿದ್ದು, ಕಾರ್ಯಪಡೆಯಲ್ಲಿ 7 ವಿಭಾಗಳಿದ್ದು, ತನ್ನದೆಯಾದ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ. 2030 ವೇಳೆಗೆ ಮಹದೇವಪುರವನ್ನು ಮಾದರಿ ಕ್ಷೇತ್ರ ಮಾಡುವ ದೃಷ್ಟಿಯಿಂದ ಈ ಕಾರ್ಯಪಡೆ ಕಾರ್ಯ ನಿರ್ವಹಿಸಲಿದೆ.

3.ಸಮಯ ಪ್ರಜ್ಞೆಗೆ ಉಪೇಂದ್ರ ಬೆಸ್ಟ್ ಎಗ್ಸಾಂಪಲ್.. ತಾನು ಕಮಿಟ್ ಆದ ಟೈಮಿಂಗ್​​​ಗೆ ಸದಾ ಬದ್ಧವಾಗಿ ನಡೆದು ಕೊಳ್ಳುತ್ತಾರೆ.. ಕಳೆದ ದಿನ ಬೆಂಗಳೂರಿನ ಬಿಜಿಎಸ್​​​ ಕಾಲೇಜ್​ನ ಕಾರ್ಯಕ್ರಮವೊಂದಕ್ಕೆ ವಿಶೇಷ ಅತಿಥಿಯಾಗಿ ಹೋಗಿದ್ದ ಉಪೇಂದ್ರ ಶೂಟಿಂಗ್​​ಗೆ ಲೇಟ್ ಆಗುತ್ತದೆ ಎಂದು ಪೊಲೀಸ್ ಜೀಪ್​​ನಲ್ಲೇ ಹೊದ ಘಟನೆ ನಡೆದಿದೆ.

4. ಬೆಂಗಳೂರಿನ ಹೆಗ್ಡೆ ನಗರದಲ್ಲಿರುವ ಹಜ್ ಭವನ ಹಿಂದುಗಡೆ ಇರುವ ವಕ್ಫ್ ಪ್ರಾಪರ್ಟಿಯ ಜಾಗವನ್ನ ಜಿಲ್ಲಾಡಳಿತ ಇಂದು ವಶಪಡಿಸಿಕೊಳಲು ಮಂದಾಗಿತ್ತು. ಸುಮಾರು 650 ಎಕರೆ ವಕ್ಫ್ ಆಸ್ತಿ ಇದ್ದು ಈಗಾಗಲೇ ಖಾಸಗಿ ಸಂಸ್ಥೆಯವರಿಂದ ಜಮೀನು ಒತ್ತುವರಿ ಯಾಗುತ್ತಿರುವ ಹಿನ್ನಲೆ ಎಚ್ಚೆತ್ತಿರುವ ಜಿಲ್ಲಾಡಳಿತ ಬಳಕೆಯಾಗದ 80ಎಕರೆ ಭೂಮಿಯನ್ನ ಒಶಪಡಿಸಿಕೊಳ್ಳಲು ಮುಂದಾಗಿದೆ. ಹಿಂದಿನ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಕೂಡಾ ಆದೇಶಿಸಿದ್ದರು.

5.ಪಾಂಡವಪುರ ತಾಲೂಕಿನ ಕನಗನಮರಡಿ ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಸಾವನ್ನಪ್ಪಿದ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಸಿಎಂ ಘೋಷಣೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ ಸಾಲಾಗಿ ಮಲಗಿಸಿರುವ ಮೃತದೇಹಗಳನ್ನು ನೋಡಿ ಕಣ್ಣೀರಿಟರು.

6.ಪ್ರಧಾನಿ ಮೋದಿ ಇಂದು ಮಧ್ಯೆಪ್ರದೇಶದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಅತ್ತ ರಾಹುಲ್​ ಗಾಂಧಿ ಕಾಂಗ್ರೆಸ್​ ಪರ ಪ್ರಚಾರ ನಡೆಸುತ್ತಿದ್ದಾರೆ.ಹಿಂದೆ ರಾಜ ಮಹಾರಾಜರ ನೆಲವಿಡಾಗಿದ್ದ ಚಾತರ್​​ಪುರನಲ್ಲಿ ಇಂದು ಪ್ರಧಾನಿ ಬೃಹತ್ ರ್ಯಾಲಿ ನಡೆಸಿದರು. ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ನಿಮ್ಮ ಮಕ್ಕಳೆಲ್ಲ ಸಮಸ್ಯೆಳನ್ನು ಎದುರಿಸಿದ್ದಾರೆ. ಸಮಸ್ಯೆಗಳ ಆಗರವಾಗಿರುವ ಕಾಂಗ್ರೆಸ್​ ಸರ್ಕಾರ ಮತ್ತೆ ಆಯ್ಕೆ ಆಗಬೇಕಾ ಎಂದು ಮತದಾರರನ್ನು ಪ್ರಧಾನಿ ಪ್ರಶ್ನಿಸಿದರು.

7.ಗೌರಿಬಿದನೂರು ಸುಗಂಧರಾಜ ಹೂ ವಿಗೆ ಎಲ್ಲಿಲ್ಲದ ಬೆಲೆ. ಕಲರ್ ಶೈನಿಂಗ್ ಏಕದಳ ದ್ವೀದಳ ಸೇರಿದಂತೆ ಏಳು ದಳಗಳ ಕೆ.ಜಿ ಹೂವಿಗೆ 50 ರುಪಾಯಿಯಿಂದ ಹಿಡಿದು 150 ರೂಪಾಯಿ ವರೆಗೂ ಬೆಲೆ ಇರುತ್ತೆ. ಸ್ಥಳಿಯ ಮಾರುಕಟ್ಟೆಯಿಂದ ಅಂತರ್ ರಾಜ್ಯ ಮಾರುಕಟ್ಟೆವರೆಗೂ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಗೌರಿಬಿದನೂರು ತಾಲೂಕೊಂದರಲ್ಲೆ ಸರಿಸುಮಾರು ಇನ್ನೂರು ಎಕರೆ ಸುಗಂಧರಾಜ ಹೂ ಬೆಳೆಯಲಾಗುತ್ತಿದ್ದು. ಸಾವಿರಾರು ಜನ ರೈತರು ಸುಗಂಧವನ್ನು ತಮ್ಮ ಪಾಲಿನ ಬಂಗಾರವೆಂದೆ ಬಾವಿಸಿದ್ದಾರೆ, ಇನ್ನೂ ಈ ಹೂ ಬಿಡಿಸಲು ಪ್ರತಿದಿನ ಬೇಳಿಗ್ಗೆ ಎರಡು ಗಂಟೆಗಳ ಕಾಲ ಕೆಲಸ ಮಾಡಿದ್ರೆ ಸಾಕು, ಕೂಲಿಯಾಳುಗಳಿಗೆ ನೂರು ರುಪಾಯಿಯಿಂದ 150 ರೂಪಾಯಿ ವರೆಗೂ ಕೂಲಿ ಸಿಗುತ್ತೆ, ಇದ್ರಿಂದ ಸಾವಿರಾರು ಜನ ಕಾರ್ಮಿಕರಿಗೂ ಕೆಲಸ ದೊರೆತು ಸ್ವಾಬಿಮಾನದ ಬದುಕು ನಡೆಸುತ್ತಿದ್ದಾರೆ.

8.ದಾವಣಗೆರೆ ತಾಲೂಕಿನ ಹರಪ್ಪನಹಳ್ಳಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಮಕ್ಕಳಿಗೆ ಶಾಮಿಯಾನ ಹಾಕಿಸಿ ಅದರ ಕೆಳಗೆ ಕೂರಿಸಿ ಪರೀಕ್ಷೆ ಬರೆಸಿದ್ದಾರೆ. ಇಲ್ಲಿನ ಸರ್ಕಾರ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ, ಬಿಎಸ್ಸಿ, ಬಿಕಾಂ ಹಾಗೂ ಎಂಬಿಎ ವಿದ್ಯಾಭ್ಯಾಸ ಮಾಡಲು ತಾಲ್ಲೂಕಿನ ವಿವಿಧ ಕಡೆಯಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ.

9. ಸತತ ಬರಗಾಲದಿಂದ ಕಂಗೆಟ್ಟ ರೈತನ ಆತ್ಮ ವಿಶ್ವಾಸ ಹೇಚ್ಚಾಗಲಿ ಎಂಬ ಉದ್ದೇಶದಿಂದ ಈ ಬಾರಿಯ ತುಂಗಾರತಿಯನ್ನ ಆಚರಿಸಲಾಯಿತು. ಹೌದು ಪ್ರತಿ ವರ್ಷದಂತೆ ಈ ಬಾರಿಯೂ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ತುಂಗಾರತಿಯನ್ನ ಕಳೆದ ವರ್ಷಕ್ಕಿಂತ ಯಾವುದೇ ಆಡಂಬರವಿಲ್ಲದೇ ಸಾಧಾರಣವಾಗಿ ಆಚರಿಸಲಾಯಿತು. ಕಳೆದ ಮೂರುನಾಲ್ಕು ವರ್ಷದಿಂದ ಸತತ ಬರಗಾಲ ಆವರಿಸಿ ರೈತಾಪಿ ವರ್ಗ ಕಂಗೆಟ್ಟಿದೆ.

10.ಮಂಡ್ಯ ಜಿಲ್ಲೆಯ ಪಾಂಡವಪುರ ಸಮೀಪ ಘನ ಘೋರ ದುರಂತ ಸಂಭವಿಸಿದೆ.. ಕನಗಮಮರಡಿಯಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು VC ನಾಲೆೆಗೆ ರಾಜಕುಮಾರ್‌ ಹೆಸರಿನ ಖಾಸಗಿ ಬಸ್ ಉರುಳಿ ಬಿದ್ದ ಪರಿಣಾಮ 30ಕ್ಕೂ ಹೆಚ್ಚು ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದು ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

11.ಕಾಂಗ್ರೆಸ್‌ನ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೂಡಾ ಟ್ವೀಟ್ ಮಾಡಿದ್ದು ಮಂಡ್ಯದಲ್ಲಿ ನಡೆದ ಬಸ್‌ ದುರಂತದಲ್ಲಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂಬ ಸುದ್ದಿ ಕೇಳಲು ಅತೀವ ಬೇಸವೆನಿಸಿದೆ. ಮೃತರ ಆತ್ಮಕ್ಕೆ ನಾನೂ ಶಾಂತಿ ಕೋರುತ್ತೇನೆ ಎಂದಿದ್ದಾರೆ.

12.ಸಮನ್ವಯ ಸಮಿತಿ ಅಧ್ಯಜ್ಷ ಸಿದ್ದರಾಮಯ್ಯ ಕೂಡಾ ಕನಗನಮರಡಿ ಸೂತಕ ಅತೀವ ನೋವು ಉಂಟು ಮಾಡಿದೆ. ಮೃತರ ಕುಟುಂಬಕ್ಕೆ ನನ್ನ ಸಂತಾಪಗಳು.. ಮುಂದೆ ಇಂತಹ ದುರ್ಘಟನೆ ಸಂಭವಿಸದಿರಲಿ ಅಂತ ಪ್ರಾರ್ಥಿಸುವೆ ಅಂತ ಟ್ವೀಟ್ ಮಾಡಿದ್ದಾರೆ. ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

13.ಮಾಜಿ ಪ್ರಧಾನಿ ದೇವೇಗೌಡರು ಕೂಡ ದುರಂತದಲ್ಲಿ ಸಾವಿಗೀಡಾದವರಿಗೆ ಸಂತಾಪ ಸೂಚಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮಕ್ಕಳು ವಿಧಿಯಾಟಕ್ಕೆ ಬಲಿಯಾಗಿರೋದು ನನ್ನನ್ನು ಅತೀವ ಘಾಸಿಗೊಳಿಸಿದೆ. ನೋವುಣ್ಣುತ್ತಿರುವ ಸಂತ್ರಸ್ತ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಟ್ವೀಟ್ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡ ನುಡಿನಮನ ಸಲ್ಲಿಸಿದ್ದಾರೆ.

14.ಇತ್ತ ನಟ ಗೋಲ್ಡನ್ ಸ್ಟಾರ್ ಗಣೇಶ್ ಕೂಡಾ ದುರಂತ ನಿಜಕ್ಕೂ ದುರದೃಷ್ಟಕರ.. ಮೃತರ ಕುಟುಂಬದ ದುಃಖದಲ್ಲಿ ನಾನೂ ಪಾಲುದಾರ. ಹೀಗಾಗಿ, ಇಂದು ಬಿಡುಗಡೆ ಆಗಬೇಕಿದ್ದ ಆರೇಂಜ್ ಚಿತ್ರದ Trailer ಅನ್ನು ಮುಂದೂಡುತ್ತಿದ್ದೇನೆ ಅಂತ ಹೇಳಿದ್ದಾರೆ.. ಒಟ್ನಲ್ಲಿ ನುಡಿನಮನ ಜೊತೆ ದುಃಖಿತರ ಕುಟುಂಬದ ಸದಸ್ಯರಿಗೆ ಹಲವು ಗಣ್ಯರು ಧೈರ್ಯ ತುಂಬಿದ್ದಾರೆ.

15.ಪ್ರಧಾನಿ ನರೇಂದ್ರ ಮೋದಿ ಕುಟುಂಬಸ್ಥರಿಗೆ ದುಖಃ ಭರಿಸುವ ಶಕ್ತಿ ನೀಡಲಿ ಅಂತ ಟ್ವೀಟ್ ಮಾಡಿದ್ದಾರೆ. ರಾಷ್ಟ್ರಪತಿ ರಮಾನಾಥ್ ಕೋವಿಂದ್ ಸಂತಾಪ ವ್ಯಕ್ತಪಡಿಸಿದ್ದು. ಬಸ್ ಅಪಘಾತದಲ್ಲಿ ಅಮಾಯಕರ ಸಾವು ವಿಚಾರ ಕೇಳಿ ನೋವಾಗಿದೆ. ಮೃತ ಕಟುಂಬಗಳಿಗೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.

16.ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ದಾಖಲೆಯ 6ನೇ ಬಾರಿಗೆ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ವನಿತೆಯರ 48 ಕೆಜಿ ವಿಭಾಗದ ಫೈನಲ್​ನಲ್ಲಿ ಮೇರಿಕೋಮ್ 5-0 ಅಂಕಗಳಿಂದ ಉಕ್ರೇನ್​ನ ಹನಾನಾ ಒಕಾಟ ಅವರನ್ನು ಸೋಲಿಸಿದರು. ಈ ಮೂಲಕ ನಿವೃತ್ತಿ ನಂತರ ಮರಳಿದ ಮೇರಿಕೋಮ್​ ತಮ್ಮಲ್ಲಿ ಇನ್ನೂ ಬಾಕ್ಸಿಂಗ್ ಇದೆ ಎಂಬುದನ್ನು ನಿರೂಪಿಸಿದರು.

17.ಹಿರಿಯ ನಾಯಕರು ಯಾರು ಎಂಬುದು ಗೊತ್ತಿಲ್ಲದೇ ಇದ್ದರೆ ಏನೆಲ್ಲಾ ಅನಾಹುತ ಸಂಭವಿಸಬಹುದು ಎಂಬುದಕ್ಕೆ ಬೆಳಗಾವಿ ಜಿಲ್ಲಾಪಂಚಾಯಿತಿಯಲ್ಲಿ ಭಾರಿ ದೊಡ್ಡ ಎಡವಟ್ಟು ಉತ್ತಮ ಉದಾಹರಣೆ.ಇತ್ತೀಚೆಗೆ ಮೃತಪಟ್ಟ ಬಿಜೆಪಿಯ ಹಿರಿಯ ನಾಯಕರೊಬ್ಬರ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಬದಲು ಜೀವಂತ ಇರುವ ಮತ್ತೊಬ್ಬ ನಾಯಕನ ಫೋಟೋ ಹಾಕಿ ಮುಜುಗರಕ್ಕೆ ಒಳಗಾಗಿದೆ. ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

18.ಮೈಸೂರಿನಲ್ಲಿ ಜೋಗಿ ಪ್ರೇಮ್‌, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್‌ ಅಭಿನಯದ, ರಘು ಹಾಸನ್‌ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್‌ ಭರದಿಂದ ಸಾಗ್ತಿದೆ. ವಿಶೇಷ ಎಂದರೇ, ಶನಿವಾರ ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್‌ ಮತ್ತು ಭಾವನಾರಾವ್‌ಗೆ ಮದುವೆಯಾಗಿದ್ದಾರೆ.ಇದು ರಿಯಲ್ಲಾಗಿ ನಡೆದಿರೋ ಮದುವೆಯಲ್ಲ.

19. ಕನ್ನಡ ಚಿತ್ರರಂಗದಲ್ಲಿ ಟಿಲ್ ಡೇಟ್ ಎಲ್ಲಾ ಆಡಿಯೋ ದಾಖಲೆಗಳನ್ನ ಬ್ರೇಕ್ ಮಾಡಿದಂತಹ ಕೀರ್ತಿ ಹೆಗ್ಗಳಿಕೆ ಯಶ್ ಕೆಜಿಎಫ್​ಗಿದೆ. ಸೌತ್ ಸಿನಿದುನಿಯಾದ ಪ್ರತಿಷ್ಠಿತ ಆಡಿಯೋ ಕಂಪನಿ ಲಹರಿ ಮುಡಿಗೆ ಕೆಜಿಎಫ್ ಆಡಿಯೋ ರೈಟ್ಸ್ ಸಂದಿದೆ. ಅದೂ ದಾಖಲೆಯ ಮೊತ್ತಕ್ಕೆ ಅನ್ನೋದು ವಿಶೇಷ.

20.ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಪೊಲೀಸ್ ಪೇದೆ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಪೊಲೀಸ್ ಇಲಾಖೆಯ ನೇಮಕಾತಿ ವಿಭಾಗದ ಎಡಿಜಿಪಿ ತಿಳಿಸಿದ್ದಾರೆ.ಹಾಸನದ ಸಕಲೇಶಪುರ ತಾಲೂಕಿನ ಕೊಡಲಿಪೇಟೆ ಗಡಿ ಭಾಗದಲ್ಲಿ ಹಣ ಪಡೆದು 150 ಮಂದಿಗೆ ಪ್ರಶ್ನೆ ಪತ್ರಿಕೆಯನ್ನು ಶಿವಕುಮಾರ್ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಬಂಧಿಸಿದ್ದರು.

21.ಪ್ರೇಮಿಗಳು ಹೆತ್ತವರಿಂದ ತಪ್ಪಿಸಿಕೊಂಡು ದೇವಸ್ಥಾನದಲ್ಲಿ ಮದುವೆ ಆಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ದೇವಸ್ಥಾನದಲ್ಲಿ ಪ್ರೇಮಿಗಳು ಮದುವೆ ಆಗುವುದಕ್ಕೆ ತಡೆ ಹಾಕಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.ದೇವಸ್ಥಾನಗಳಲ್ಲಿ ಪ್ರೇಮ ವಿವಾಹ ಮಾಡಬಾರದು ಎಂದು ಮುಜರಾಯಿ ಇಲಾಖೆ ಸುತ್ತೋಲೆ ಹೊರಡಿಸಲು ಚಿಂತನೆ ನಡೆಸಿದ್ದು, ಒಂದು ವೇಳೆ ಇಂತಹ ಮದುವೆಗಳು ನಡೆದಿದ್ದು ಕಂಡು ಬಂದರೆ ಪುರೋಹಿತರ ಮೇಲೆಯೇ ಪ್ರಕರಣ ದಾಖಲಾಗಲಿದೆ.

22.ತೀರ್ಥಹಳ್ಳಿ ತಾಲೂಕಿನ ಮರಗಳಲೆಯಲ್ಲಿ ನಾಗಪಾತ್ರಿಯದ ನಾಗರಾಜ್ ಅವರಿಂದ ದೈವ ಶಕ್ತಿ ಪ್ರದರ್ಶನ ಕಾರ್ಯ ಶುರುವಾಗಿದೆ.ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್, ಮರಗಳಲೆ ಗ್ರಾಮದ ನಾಗಪ್ಪ ಪೂಜಾರಿಯವರ ಮನೆಯ ಹಿಂಭಾಗದ ನಾಗರ ಬನದಲ್ಲಿ ನಾಗಬಿಂಬ ಹೊರತೆಗೆದಿದ್ದಾರೆ.

23.ಇದು ದೇಶದಲ್ಲಿಯೇ ಬಲು ಅಪರೂಪವಾದ ಶ್ರೀ ಚಕ್ರಾಂಕಿತ ಹೊಂದಿರುವ ಶಿವಲಿಂಗವಿರುವ ಏಕೈಕ ದೇವಸ್ಥಾನ ಸುಂದರೇಶ್ವರ ದೇವಸ್ಥಾನ. ಇಲ್ಲಿಗೆ ಬಂದ್ರೆ ಸಾಕು ಸಕಲ ಸಂಕಷ್ಟಗಳು ಪರಿಹಾರವಾಗುತ್ತದೆ. ಇಲ್ಲಿನ ತ್ರಿಕಾಲ ಜ್ಞಾನಿಯಾಗಿರುವ ಜೋತಿರ್ಲಿಂಗವಿದು. ಎಂಟು ನೂರು ವರ್ಷಗಳ ಪುರಾತನ ದೇವಾಲಯವಿದು. ಮಳೆ ಬಾರದೆ ಇದ್ದ ಬರಗಾಲದಲ್ಲೂ ಮಳೆ ಸುರಿಸಿದ್ದ ಇತಿಹಾಸ ಈ ಶಿವಲಿಂಗಕ್ಕಿದೆ.

24.ಪೊಲೀಸ್ ಇಲಾಖೆಯಲ್ಲಿ ಮೇಲಾಧಿಕಾರಿಗಳ ದೌರ್ಜನ್ಯ ಮತ್ತೆ ಮರುಕಳಿಸುತ್ತಿದೆ. ಪೇದೆ ಮೇಲೆ ಪಿ ಎಸ್ ಐ ಹಲ್ಲೆ, ನಿಂದನೆ ಪ್ರಕರಣ ಇದೀಗ ಚಿಕ್ಕಮಗಳೂರು ಪೊಲೀಸರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಈ ಪ್ರಕರಣ ದಿನೇ ದಿನೇ ಜಟೀಲವಾಗುತ್ತಿದೆ. ಅಧಿಕಾರಿಗಳಿಗೆ ಒಂದು ನ್ಯಾಯ ಸಿಬ್ಬಂದಿಗೆ ಒಂದು ನ್ಯಾಯ ಎಂಬ ಇಬ್ಬಗೆ ನೀತಿ ಮತ್ತೆ ಸಾಭೀತಾಗಿದ್ದು ಪಿ ಎಸ್ ಐ ವಿರುದ್ಧ ಕ್ರಮ ಕೈಗೊಳ್ಳದೇ ಇರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ.

25.ಕೋಟೆ ನಾಡು ಚಿತ್ರದುರ್ಗ ಇದೀಗ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದೆ, ಚಿತ್ರದುರ್ಗ ತಾಲೂಕಿನ ಹೊಸಕಲ್ಲಹಳ್ಳಿಯಲ್ಲಿರುವ ಅಂಗನವಾಡಿ ಕಾರ್ಯಕರ್ತೆಯ ಸೇವೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರದ ಮಹಿಳ ಮತ್ತು ಮಕ್ಕಳ ಇಲಾಖೆ ಅದೇ ಗ್ರಾಮದ ಶಾಂತಮ್ಮನವರಿಗೆ ರಾಷ್ಟ್ರ ಪ್ರಶಸ್ತಿ ಘೋಷಣೆ ಮಾಡಿದೆ.

26.ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಬೆಂಡಿಗೇರಿ ಸಣ್ಣ ತಾಂಡದಲ್ಲಿ.ಕಳೆದ ನಾಲ್ಕೈದು ವರ್ಷಗಳಿಂದ ದಾವಣಗೆರೆ ಜಿಲ್ಲೆ ಬೀಕರ ಬರಗಾಲಕ್ಕೆ ತುತ್ತಾಗಿದ್ದು, ಸಕಾಲಕ್ಕೆ ಮಳೆ ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ.

27.ದಾವಣಗೆರೆಯ ಮಾಗನೂರು ಬಸಪ್ಪ ಶಾಲೆಯಲ್ಲಿ ಮಕ್ಕಳ ವೇಷ ಭೂಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಪುಟಾಣಿ ಮಕ್ಕಳು ವಿವಿಧ ಹುಡುಗೆಗಳನ್ನು ತೊಟ್ಟು ಕಂಗೊಳಿಸಿದರು. ಶಿವ,ಪಾರ್ವತಿ, ಲಕ್ಷ್ಮೀ,ಸರಸ್ಪತಿ ಸೇರಿದಂತೆ ದೇವತೆಗಳ ವೇಷ ತೊಟ್ಟ ಮಕ್ಕಳನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು. ದೇವತೆಯ ವೇಷದ ಜೊತೆಗೆ ಸಂಗೋಳ್ಳಿ ರಾಯಣ್ಣ, ಓಬವ್ವ, ಸ್ವಾಮೀ ವಿವೇಕಾನಂದ ಸೇರಿದಂತೆ ವಿವಿಧ ವೇಷಗಳಲ್ಲಿ ಮಕ್ಕಳು ಕಂಗೊಳಿಸಿದರು.

28.ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ವರ್ಗಾವಣೆ ದಂದೆ ಮಾಡುತ್ತಿದ್ದು, ಹಣ ಲೂಟಿ ಹೊಡೆಯುತ್ತಿದ್ದಾರೆ, ಸಿಎಂ ಕುಮಾರ್ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಕುಳಿತು ಸರ್ಕಾರ ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ,ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

29.ನನ್ನ ಮಾಲೀಕತ್ವದಲ್ಲಿ ಯಾವುದೇ ಶುಗರ್ ಪ್ಯಾಕ್ಟರಿಗಳಿಲ್ಲಾ, ಎಲ್ಲಾ ಮೂರು ಜನ ಮಕ್ಕಳ ಹೆಸರಿನಲ್ಲಿದ್ದು, ಈ ಪ್ಯಾಕ್ಟರಿಗಳು ರೈತರ ಯಾವುದೇ ಹಣ ಬಾಕೀ ಉಳಿಸಿಕೊಂಡಿಲ್ಲಾ ಎಂದು ಮಾಜಿ ಸಚಿವ,ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

30.ಕಬ್ಬೂರು ಕೆರೆಯಲ್ಲಿ ಬೆಳ್ಳಕ್ಕಿ, ನೀರುಕಾಗೇ,ಗೊರವಂಕ, ಬ್ಲಾಕ್ ಎಡೆಡ್ ಬರ್ಡ ಗಳ ಜೊತೆಗೆ ವಿದೇಶಿ ಹಕ್ಕಿಗಳು ಈ ಕೆರೆಗೆ ಲಜ್ಜೆ ಇಡುತ್ತಿದ್ದು, ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿದೆ....ಇದರ ಜೊತೆಗೆ ಬೆಳ್ಳಕ್ಕಿಗಳು ರೈತ ಮಿತ್ರವಾಗಿ ಮಾರ್ಪಟ್ಟಿವೆ. ಪಕ್ಷಿಗಳು ಜಮೀನಿಗಳಿಗೆ ಲಗ್ಗೆ ಇಟ್ಟು ಬೆಳೆಗಳಲ್ಲಿರುವ ಹುಳಗಳನ್ನು ತಿಂದು ಬೆಳೆಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ರೈತರ ಸಂತಸಕ್ಕೆ ಕಾರಣವಾಗಿದೆ.

31.ಕರೆಂಟ್ ಬಿಲ್ ಕಟ್ಟದ ಹಿನ್ನೆಲೆಯಲ್ಲಿ ಕೆಲವು ಸರ್ಕಾರಿ ಕಚೇರಿಗಳ ಕರಂಟ್ ಕಟ್ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ಮೂರು ತಿಂಗಳ ಹಿಂದೆ ಹೆಸ್ಕಾಂ ಅಧಿಕಾರಿಗಳು ಬಾಕಿ ಇರುವ ಕರೆಂಟ್ ಬಿಲ್ ಕಟ್ಟುವಂತೆ ನೋಟೀಸ್ ನೀಡಲಾಗಿತ್ತು. ಈ ಕುರಿತು ಟಿವಿ5 ವಿಸ್ತೃತ ವರದಿಯನ್ನು ಕೂಡ ಬಿತ್ತರಿಸಿತ್ತು. ಆದರೆ ಅಧಿಕಾರಿಗಳು ಈ ಕುರಿತು ಎಚ್ಚೆತ್ತುಕೊಳ್ಳದೇ ಇರುವುದರಿಂದ ಇಂದು ಹೆಸ್ಕಾಂ ಅಧಿಕಾರಿಗಳು ಸರ್ಕಾರಿ ಕಚೇರಿಗಳ ಫ್ಯೂಸ್ ಕಿತ್ತಕೊಂಡು ಹೋಗಿದ್ದಾರೆ. ಇನ್ನು ಧಾರವಾಡ ಪ್ರಮುಖ ಕಚೇರಿಗಳಾದ ತಹಶೀಲ್ದಾರ ಕಚೇರಿ, ಜಲಮಂಡಳಿ ಹಾಗೂ ವಾರ್ತಾಇಲಾಖೆಯ ಕರೆಂಟ್ ಕಟ್ ಮಾಡಲಾಗಿದ್ದು, ಅಧಿಕಾರಿಗಳಿಗೆ ಕತ್ತಲೆ ಭಾಗ್ಯವನ್ನು ನೀಡಿದೆ.

32.ದೆಹಲಿಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಮಹಾತ್ಮಾ ಗಾಂಧೀಜಿಯ 150 ನೇ ಜಯಂತಿ ಅಂಗವಾಗಿ ದೇಶಾದ್ಯಂತ ಸ್ವಸ್ಥ ಭಾರತ ಯಾತ್ರೆ ಹಮ್ಮಿಕೊಂಡಿದೆ. ಇದರ ನಿಮಿತ್ತ ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ನಗರದಲ್ಲಿ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಕರ್ನಾಟಕ ಕಾಲೇಜಿನಿಂದ-ನರೇಂದ್ರ ಬೈಪಾಸ್ ರಸ್ತೆವೆರೆಗಿನ ಎನ್‌ಸಿಸಿ ಕೆಡೆಟ್‌ಗಳ ಸೈಕಲ್ ಜಾಥಾಗೆ ರಾಜ್ಯ ಹೈಕೋರ್ಟ್ ನ್ಯಾಯಾಧೀಶ ದೇವದಾಸ್ ಚಾಲನೆ ನೀಡಿದರು. ಜಾಥಾದಲ್ಲಿ ಆರ್.ಕೆ.ಪ್ಯಾರಾ ಮೆಡಿಕಲ್ ಕಾಲೇಜು ಮತ್ತು ರೇಣಕಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಗಮನಸೆಳೆದರು.

33. ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯಲ್ಲಿ ಬರುವ ತಡಸಿನಕೊಪ್ಪ ಗ್ರಾಮವನ್ನು ಸಂಪೂರ್ಣವಾಗಿ ವಾರ್ಡ್ ನಂಬರ್ 24ಕ್ಕೆ ಸೇರಿಸುವಂತೆ ಆಗ್ರಹಿಸಿ ವಾರ್ಡಿನ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಸ್ಥಳೀಯರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

34.ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಮತ್ತು ಹಿರಿಯ ದಲಿತ ಲೀಡರ್ ಮಲ್ಲಿಕಾರ್ಜುನ ಖರ್ಗೆ ಎಂದೋ ಸಿಎಂ ಆಗ್ಲೇ ಬೇಕಿತ್ತು.ಇದು ರಾಜ್ಯದ ಅದೆಸ್ಟೋ ಜನರ ಮಾತು..ಅದ್ರಲ್ಲೂ ದಲಿತ ಸಮುದಾಯದ ಮಾತು.. 2013 ರಲ್ಲಿಯೇ ಅವಕಾಶ ಬಂದಾಗ ಖರ್ಗೆಯವರನ್ನ ಬದಿಗಿಟ್ಟು ಸಿದ್ರಾಮಯ್ಯ ಸಿಎಂ ಆದ್ರು..ಹೀಗಂತ ಕಲಬುರಗಿಯ ವಿವಿಯಲ್ಲಿಂದು ಬಿಡುಗಡೆಯಾದ ದಲಿತ ಚಳುವಳಿ ಕಥನ ಪುಸ್ತಕದಲ್ಲಿ ಉಲ್ಲೇಖವಾಗಿದೆ.. ಪುಸ್ತಕ ಬರೆದಿರುವ ಲೇಖಕರ ಪ್ರಕಾರ ಓಟು ಕೇಳುವ ವೇಳೆ ದಲಿತರು ನೆನಪಾಗ್ತಾರೆ ಆದ್ರೆ ಅಧಿಕಾರದ ವೇಳೆ ದಲಿತರು ನಗಣ್ಯ ಆಗ್ತಾರೆ ಅಂತ ನಮೂದಿಸಿದ್ದಾರೆ.

35.ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನಾನುಕೂಲ ಆಗೋ ಹಿನ್ನಲೆಯಲ್ಲಿ ಇನ್ಮುಂದೆ ಮುಜರಾಯಿ ದೇವಸ್ಥಾನಗಳಲ್ಲಿ ಮದ್ವೆ ಬ್ಯಾನ್ ..ಇಂತಹ ಸುತ್ತೋಲೆಯೊಂದನ್ನ ಹೊರಡಿಸಲು ಸರ್ಕಾರ ನಿರ್ಧರಿಸಿದೆ...ಕಲಬುರಗಿಯಲ್ಲಿಂದು ಮಾತನಾಡಿದ ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಈ ತೀರ್ಮಾನ 1996 ರಲ್ಲಿಯೇ ಮಾಡಲಾಗಿದೆ.

36.ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮ ಪಂಚಾಯತಿ ಅಧ್ಯಕ್ಷನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಬಸವರಾಜ್ ಕಡಪಟ್ಟಿ (28) ಕೊಲೆಯಾದ ವ್ಯಕ್ತಿ. ನಿನ್ನೆ ರಾತ್ರಿ ತಡರಾತ್ರಿ ಹುಬ್ಬಳ್ಳಿ ತಾಲೂಕಿನ ಅಗಡಿ ಕ್ರಾಸ್ ಬಳಿಯ ಡಾಬಾದಲ್ಲಿ ಊಟ ಮುಗಿಸಿಕೊಂಡು, ಸ್ನೇಹಿತರ ಜೊತೆ ಬೈಕ್‌ನಲ್ಲಿ ಮನೆಗೆ ಮರಳುವಾಗ ಹಿಂಬದಿಯಿಂದ ಟಾಟಾ ಸುಮೋದಿಂದ ಡಿಕ್ಕಿ ಹೊಡೆಸಿದ ದುಷ್ಕರ್ಮಿಗಳು, ಕೆಳಗೆ ಬಿದ್ದ ಬಸವರಾಜ್ ಹಾಗೂ ಆತನ ಸ್ನೇಹಿತರಾದ ಜಗದೀಶ್ ಪಾಚಾಪುರ್, ಮತ್ತು ಮೈಲಾರಿ ಮೇಲೆ ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು ಆತನ ಸ್ನೇಹಿತರಾದ ಜಗದೀಶ್ ಹಾಗೂ ಮೈಲಾರಿಗೆ ಸಣ್ಣಪುಟ್ಟ ಗಾಯಗಳೊಂದಿಗೆ ಪರಾಗಿ ಓಡಿ ಬಂದಿದ್ದಾರೆ.

37.ಪಿಹೆಚ್ಡಿ ಪದವಿ ಪಡೆದಿದ್ರೆ ಅದಕ್ಕೊಂದು ಗೌರವ ಇರ್ತಾ ಇತ್ತು. ಅದರಲ್ಲೂ ನೂರಾರು ವರ್ಷ ಇತಿಹಾಸವಿರೋ ಪ್ರತಿಷ್ಠಿತ ಮೈಸೂರು ವಿವಿ ಪಿ.ಹೆಚ್.ಡಿ ಪದವಿ ಪಡೆದ್ರೆ, ಅದಕ್ಕಿರುವ ಬೆಲೆಯೇ ಬೇರೆ. ಆದ್ರೆ ಇದೀಗಾ ಮೈಸೂರು ವಿವಿ ಪಿ.ಹೆಚ್.ಡಿ ಪದವಿಗಳ ಬಗ್ಗೆ ಅನುಮಾನ ಮೂಡ ತೊಡಗಿದ್ದು, ಮೈಸೂರು ವಿವಿಯಲ್ಲಿ ನಿಯಮಬಾಹಿರವಾಗಿ ಪಿ.ಹೆಚ್.ಡಿ ಸಿಗ್ತಾ ಇದೆ ಅನ್ನೋ ಆರೋಪ ಕೇಳಿ ಬಂದಿದೆ. ಅಲ್ಲದೆ ಈ ಬಗ್ಗೆ ರಾಜ್ಯಪಾಲರಿಗು ಮಾಹಿತಿ ತಿಳಿಸಿದ್ದು, ಕಾಲೇಜು ಶಿಕ್ಷಣ ಇಲಾಖೆಯಿಂದ ತನಿಖೆಗೆ ಆದೇಶವಾಗಿದೆ.

38.ಕೋಲಾರದಲ್ಲಿ ಪ್ರತಿ ವರ್ಷ ಎಂದಿನಂತೆ ಕಾತರ್ಿಕ ಸೋಮವಾರಗಕ ಪೌರ್ಣಮಿ ದಿನದಂದು ಆಚರಿಸೋ ಲಕ್ಷ ದೀಪೋತ್ಸವ ಈ ಬಾರಿಯೂ ಕಳೆಗಟ್ಟಿತ್ತು, ದಕ್ಷಿಣ ಕಾಶಿಯೆಂದೆ ಖ್ಯಾತಿಯನ್ನು ಪಡೆದಿರುವ ಅಂತರಗಂಗೆ ಬೆಟ್ಟದಲ್ಲಿ ಭಕ್ತರು ಹಮ್ಮಿಕೊಂಡಿದ್ದ ಸಾಮೂಹಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗವಹಿಸಿ ಬೆಟ್ಟದ ಪ್ರತಿ ಮೆಟ್ಟಿಲುಗಳ ಎರಡು ಬದಿಯಲ್ಲಿಯೂ ಎಣ್ಣೆ ದೀಪಗಳನ್ನು ಬೆಳಗಿ ಲಕ್ಷ ದೀಪೋತ್ಸವದಲ್ಲಿ ಭಾಗಿಯಾಗಿದರು.

39. ಗೋವಾ ಗಡಿ ಪ್ರದೇಶವಾದ ಕಾರವಾರದ ಅಭಿವೃದ್ದಿಗಾಗಿ ಇದೀಗ ಜನರು ಹೋರಾಟಕ್ಕೆ ಮುಂದಾಗಿದ್ದಾರೆ. ಕಾರವಾರ ಗಡಿ ಜಿಲ್ಲೆಯಾದರು ಅಭಿವೃದ್ದಿಯಲ್ಲಿ ಸಾಕಷ್ಟು ಕುಂಟಿತವಾಗಿದ್ದು ಇದುವರೆಗೂ ದೊಡ್ಡ ಕೈಗಾರಿಕೆಗಳು ಕಾರವಾರಕ್ಕೆ ಬಂದಿಲ್ಲ. ಯುವಕರಿಗೆ ಕೆಲಸ ಇಲ್ಲದೇ ಪ್ರತಿನಿತ್ಯ ಗೋವಾ ರಾಜ್ಯಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದ್ದು ಉದ್ಯೋಗ ಸೃಷ್ಟಿ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿದೆ.

40.ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ಜೂನ್ ತಿಂಗಳಿನಿಂದ ಕಾರ್ಯಾಚರಣೆ ನಡೆಸಿದ ಅಬಕಾರಿ ಸಿಬ್ಬಂದಿ ಹಾಗು ಪೊಲೀಸರು ವಶಪಡಿಸಿಕೊಂಡಿದ್ದ 22 ಲಕ್ಷ ಮೌಲ್ಯದ ಅಕ್ರಮ ಸರಾಯಿಯನ್ನು ಇಂದು ಕಾರವಾರದ ಮಾಜಾಳಿ ಚೆಕ್ ಪೋಸ್ಟ್ ಬಳಿಯ ಅರಣ್ಯ ಪ್ರದೇಶದಲ್ಲಿ ನಾಶ ಪಡಿಸಲಾಯಿತು. ಪೊಲೀಸರು ಹಾಗು ಅಬಕಾರಿ ಸಿಬ್ಬಂದಿಗಳು ಜಿಲ್ಲೆಯ ವಿವಿದೆಡೆ ದಾಳಿ ನಡೆಸಿ ಈ ವರೆಗೆ ಒಟ್ಟು 56 ಪ್ರಕರಣಗಳಲ್ಲಿ 4591 ಲೀಟರ್ ಮದ್ಯ ಫೆನ್ನಿ ಹಾಗು ಬೀರ್ ಸೇರಿದಂತೆ ಒಟ್ಟು 22 ಲಕ್ಷ ಮೌಲ್ಯದ ಮದ್ಯವನ್ನ ನಾಶಪಡಿಸಲಾಯಿತು.

41.ಗಡಿ ಜಿಲ್ಲೆ ಕಾರವಾರದ ಅಭಿವೃದ್ದಿಗಾಗಿ ಇಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಾರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ನಗರದ ಮಾಲಾದೇವಿ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಪ್ರಾರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಗಡಿ ಭಾಗವಾಗಿದ್ದರು ಕಾರವಾರ ಅಭಿವೃದ್ದಿಯಲ್ಲಿ ಸಾಕಷ್ಟು ಹಿಂದಿದೆ. ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ, ಪ್ರತಿನಿತ್ಯ ಉದ್ಯೋಗಕ್ಕಾಗಿ ಗೋವಾಕ್ಕೆ ಕಾರವಾರದಿಂದ ಯುವಕರು ತೆರಳುತ್ತಿದ್ದು ಈ ನಿಟ್ಟಿನಲ್ಲಿ ಕಾರವಾರ ಅಭಿವೃದ್ದಿ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇನ್ನು ಹೈದರಾಬಾದ್ ಕರ್ನಾಟಕ ಮಾದರಿಯಲ್ಲಿ ಗೋವಾ ಕರ್ನಾಟಕವೆಂದು ಕಾರವಾರಕ್ಕೆ ವಿಶೇಷ ಸ್ಥಾನಮಾನ ನೀಡಬೇಕು. ಕೈಗಾರಿಕೆಗಳು ಸ್ಥಾಪನೆ ಮಾಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

42. ಮಂಗಳೂರಿನಲ್ಲಿ ಹಿಂದೂ ಪರ ಸಂಘಟನೆಗಳು ನಡೆಸ್ತಿರೋ ಆಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಜನಾಗ್ರಹ ರ್ಯಾಲಿಗೆ ಉಚಿತವಾಗಿ ಖಾಸಗಿ ಬಸ್ಗಳನ್ನು ನೀಡಿರೋದಕ್ಕೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ. ವಿಶ್ವಹಿಂದೂ ಪರಿಷತ್, ಬಜರಂಗದಳದ ನೇತೃತ್ವದಲ್ಲಿ ಭಾನುವಾರ ಬೃಹತ್ ಜನಾಗ್ರಹ ಸಮಾವೇಶ ನಡೆಯಲಿದ್ದು, ಜಿಲ್ಲೆಯ ಮೂಲೆಮೂಲೆಗಳಿಂದಲೂ ಹಿಂದೂ ಕಾರ್ಯಕರ್ತರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮನವಿಯಂತೆ ದ.ಕ ಬಸ್ ಮಾಲಕರ ಸಂಘ ಸಮಾವೇಶಕ್ಕೆ ಬರುವ ಕಾರ್ಯಕರ್ತರಿಗೆ ಉಚಿತವಾಗಿ ಬಸ್ಗಳನ್ನು ಒದಗಿಸಲು ನಿರ್ಧರಿಸಿದೆ.

43.ಜ್ಯುವೆಲ್ಲರಿ ಮಾಲಿಕನ ದರೋಡೆ ಸಂಚು ಪ್ರಕರಣ ಸಂಬಂಧ ಮಂಗಳೂರಿನಲ್ಲಿ ಹನ್ನೊಂದು ಮಂದಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಮಂಗಳೂರಿನ ಪಚ್ಚನಾಡಿ ಎಂಬಲ್ಲಿ ಮಾರಕಾಸ್ತ್ರಗಳಿಂದ ಸಿದ್ದವಾಗಿದ್ದ ತಂಡವನ್ನು ನಗರದ ರೌಡಿ‌ ನಿಗ್ರಹ ದಳವು ಬಂಧಿಸಿದೆ. ಬಂಧಿತ ಹನ್ನೊಂದು ಮಂದಿಯಲ್ಲಿ ಇಬ್ಬರು ಬ್ಯಾರಿ ( ಕರಾವಳಿಯ ಮುಸ್ಲಿಂ ಭಾಷೆ) ಭಾಷೆಯ ಸಂಗೀತ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದವರು. ಅದ್ರಲ್ಲೂ ಬ್ಯಾರಿ ಸಿಂಗರ್ ಅಲಿ ಸಜಿಪ ಎಂದೇ ಹೆಸರಾದ ಬಂಧಿತ ಮಹಮ್ಮದ್ ಅಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿದವನಾಗಿದ್ದಾನೆ.

44.ಸತತ ಬರಗಾಲದಿಂದ ಕಂಗೆಟ್ಟ ರೈತನ ಆತ್ಮ ವಿಶ್ವಾಸ ಹೇಚ್ಚಾಗಲಿ ಎಂಬ ಉದ್ದೇಶದಿಂದ ಈ ಬಾರಿಯ ತುಂಗಾರತಿಯನ್ನ ಆಚರಿಸಲಾಯಿತು. ಹೌದು ಪ್ರತಿ ವರ್ಷದಂತೆ ಈ ಬಾರಿಯೂ ರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ ತುಂಗಾರತಿಯನ್ನ ಕಳೆದ ವರ್ಷಕ್ಕಿಂತ ಯಾವುದೇ ಆಡಂಬರವಿಲ್ಲದೇ ಸಾಧಾರಣವಾಗಿ ಆಚರಿಸಲಾಯಿತು.

45.ತೀರ್ಥಹಳ್ಳಿ ತಾಲೂಕಿನ ಆರಗ ಗ್ರಾಮದ ನಾಗಪಾತ್ರಿ ನಾಗರಾಜ್ ಭಟ್ ಎಂಬುವರೇ ನಾಗಬಿಂಬವನ್ನು ಹೊರತೆಗೆದು ಅಚ್ಚರಿ ಮೂಡಿಸಿದವರು. ನಾಗರಾಜ್ ಭಟ್ ಅವರು ತಾವೇ ನಾಗ ಬಿಂಬವನ್ನು ಒಯ್ದು ಯಾರಿಗೂ ತಿಳಿಯದಂತೆ ಇಟ್ಡು ಬಳಿಕ ಜನರೆದುರು ನಾಗಬಿಂಬ ತೆಗೆಯುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶನಿವಾರ ನಾಗರಾಜ್ ಭಟ್ ಮಾಧ್ಯಮದವರ ಎದುರೇ ತೀರ್ಥಹಳ್ಳಿ ತಾಲೂಕಿನ ಮರಗಳಲೆ ಗ್ರಾಮದ ನಾಗಪ್ಪ ಎಂಬುವರಿಗೆ ಸೇರಿದ ನಾಗಬನದಲ್ಲಿ ಮಣ್ಣಿನ ಒಳಗೆ ಸೇರಿಕೊಂಡಿದ್ದ ನಾಗಬಿಂಬವನ್ನು ಮಣ್ಣಿನಿಂದ ಹೊರತೆಗೆಯುವ ಮೂಲಕ ಅಚ್ಚರಿ ಮೂಡಿಸಿದರು.

46.ಆರು ದಶಕದಿಂದ ಜಮೀನಿಗೆ ಹಕ್ಕುಪತ್ರಕ್ಕಾಗಿ ಕಾದುಕುಳಿತಿರುವ ಶರಾವತಿ ಸಂತ್ರಸ್ತರ ಮೇಲೆ‌ ರಾಜ್ಯ ಸರ್ಕಾರ ಗದಾಪ್ರಹಾರ ನಡೆಸಿದೆ. ರಾಜ್ಯಕ್ಕೆ ಬೆಳಕು ನೀಡುವ ಸಲುವಾಗಿ ತಮ್ಮ ಮನೆ, ಜಮೀನುಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಭೂಮಿಯ ಹಕ್ಕು ಕೊಡುವ ಪ್ರಸ್ತಾವನೆಯನ್ನು ಇನ್ಮುಂದೆ ಸುಪ್ರೀಂ ಕೋರ್ಟ್ ನ ಪೂರ್ವಾನುಮತಿಯೊಂದಿಗೆ ನೀಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು, ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ಮಧ್ಯಂತರ ಅರ್ಜಿ ಸಲ್ಲಿಸುವಂತೆ ಪತ್ರ ಬರೆಯಲಾಗಿದೆ.

47.ಅಣ್ಣ ತಮ್ಮಂದಿರ ಜಗಳ ವಿಕೋಪಕ್ಕೆ ಹೋಗಿ ಚಿಕ್ಕಪ್ಪನ ಮೇಲೆಯೇ ಗುಂಪೊಂದು ಮಾರಣಾಂತಿಕ ಹಲ್ಲೆ‌ ನಡೆಸಿರೋ ಆರೋಪ ಕೇಳಿಬಂದಿದೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮಲ್ಲೇಶಪುರ ಗ್ರಾಮದಲ್ಲಿ, ತುಮಕೂರು-ರಾಯದುರ್ಗ ರೈಲ್ವೆ ಪರಿಹಾರ ತೆಗೆದುಕೊಳ್ಳಲು ಸಹಿ ಹಾಕದ ಹಿನ್ನೆಲೆ ಚಿಕ್ಕಪ್ಪನ ಮೇಲೆಯೇ ತನ್ನ ಅಣ್ಣನ ಮಕ್ಕಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಅಂತಾ ದೂರಿದ್ದಾರೆ. ವೀರಭದ್ರಯ್ಯನ ಅಣ್ಣನ ಮಗ ಮಹೇಶ್ ಹಾಗೂ ಆತನ 6 ಜನ ಸಹಚರರಿಂದ ಹಲ್ಲೆ ನಡೆಸಿದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ದಾರೆ‌.

48.ಜೊತೆಗಿದ್ದವರೇ ಮನೆಗೆ ಕನ್ನ ಕೊರೆದು ಯದ್ವಾತದ್ವಾ ಹೊಡೆಸಿಕೊಂಡ ಘಟನೆ ನಡೆದಿದೆ. ಉಡುಪಿಯ ಮಣಿಪಾಲದಲ್ಲಿ ನಡೆದಿದೆ ಎನ್ನಲಾದ ಒಂದು ‘ಡಿಶುಂ ಡಿಶುಂ’ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಕಾರ್ ನ ಬಿಡಿಭಾಗಗಳನ್ನು ಕದ್ದ ಹುಡುಗರನ್ನು ಹೊಡೆದು ಪುಡಿಪುಡಿ ಮಾಡಿದ್ದಾರೆ. ಈ ಇಬ್ಬರು ಚೋರರಿಗೆ ಸಖತ್ತಾಗಿ ಧರ್ಮದೇಟು ಬಿದ್ದಿದೆ. ಏಟು ತಿಂದು ಸುಸ್ತಾದವರು ತಪ್ಪೊಪ್ಪೊಗೆಯನ್ನೂ ಮಾಡಿಕೊಂಡಿದ್ದಾರೆ.

49.ಸುವ್ಯವಸ್ಥೆಯಲ್ಲಿರುವ ಹಳೆ ಬಟ್ಟೆಗಳಿಗೆ ಉಡುಪಿ ನಾಗರಿಕ ಸಮಿತಿ ಮರುಜೀವ ನೀಡಿದೆ. ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬಳಸಿದ ಹಳೆ ಬಟ್ಟೆಗ‌ಳ ಸಂಗ್ರಹವಿರುತ್ತೆ ಅಂತಹ ಬಟ್ಟೆಗಳನ್ನು‌

ಕೆಲವರು ಗಂಟುಕಟ್ಟಿ ಮೂಲೆಯಲ್ಲಿ ಇಟ್ಟಿರುತ್ತಾರೆ. ಅವುಗಳಲ್ಲಿ ಮರು ಬಳಕೆಗೆ ಬರುವಂತಹ ಉತ್ತಮ ಗುಣಮಟ್ಟದ ಒಳ್ಳೆಯ ಬಟ್ಟೆಗಳನ್ನು ನಮ್ಮ ಜನಸೇವೆಯ ಕಾರ್ಯಕ್ಕೆ ಒದಗಿಸಿದರೆ, ನಾವು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತೆವೆ ಎಂದು ನಾಗರಿಕ ಸಮಿತಿ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಪ್ರಕಟಣೆ ನೀಡಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಟ್ಟೆ ನೀಡುವ ವಿನಂತಿಗೆ ಸ್ಪಂದನೆ ದೊರಕಿದ್ದು ಉಡುಪಿಯಲ್ಲಿರುವ ಸಮಿತಿಯ ಕಚೇರಿಗೆ ಬಟ್ಟೆಗಳ ಸುರಿಮಳೆಯೇ ಹರಿದುಬಂದಿದೆ.

50.ಮೈಸೂರಿನಲ್ಲಿ ಜೋಗಿ ಪ್ರೇಮ್‌, ರಾಗಿಣಿ ದ್ವಿವೇದಿ, ಅರುಂಧತ್ತಿನಾಗ್‌ ಅಭಿನಯದ, ರಘು ಹಾಸನ್‌ ನಿರ್ದೇಶನದ ಗಾಂಧಿಗಿರಿ ಚಿತ್ರದ ಶೂಟಿಂಗ್‌ ಭರದಿಂದ ಸಾಗ್ತಿದೆ. ವಿಶೇಷ ಎಂದರೇ, ಶನಿವಾರ ಮದುವೆಯ ಸನ್ನಿವೇಷದ ಚಿತ್ರೀಕರಣ ನಡೀತಿದೆ. ಈ ಸನ್ನಿವೇಷದಲ್ಲಿ ಪುಟ್ಟಗೌರಿ ಖ್ಯಾತಿಯ ರಕ್ಷಿತ್‌ ಮತ್ತು ಭಾವನಾರಾವ್‌ಗೆ ಮದುವೆಯಾಗಿದ್ದಾರೆ.

Next Story

RELATED STORIES