Top

ಮತಪ್ರಚಾರಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಯುವಕ

ಮತಪ್ರಚಾರಕ್ಕೆ ಹೋಗಿ ಪ್ರಾಣ ಕಳೆದುಕೊಂಡ ಯುವಕ
X

ಪೋರ್ಟ್ ಬ್ಲೇರ್: ಕ್ರಿಶ್ಚಿಯನ್ ಧರ್ಮ ಪ್ರಚಾರಕ ಮತ್ತು ಸಾಹಸಿ ಎನ್ನಿಸಿಕೊಂಡಿದ್ದ ಯುವಕನೊಬ್ಬ ಬುಡಕಟ್ಟು ಜನರನ್ನು ಭೇಟಿಯಾಗಲು ಹೋಗಿ ಪ್ರಾಣತೆತ್ತ ಘಟನೆ ನಡೆದಿದೆ.

ಎಲ್ಲರಿಂದ ದೂರವಿದ್ದ ಬುಡಕಟ್ಟು ಜನಾಂಗದವರನ್ನು ಭೇಟಿಯಾಗಲು ಹೋಗಿದ್ದ ಜಾನ್ ಅಲೆನ್ ಚೈ(26) ಬುಡಕಟ್ಟು ಜನಾಂಗದವರು ಬಿಟ್ಟ ಬಾಣಕ್ಕೆ ಪ್ರಾಣ ತೆತ್ತಿದ್ದಾನೆ.

ಕ್ರಿಶ್ಚಿಯನ್ ಧರ್ಮ ಪ್ರಚಾರಕನಾಗಿದ್ದ ಜಾನ್, ಅಂಡಮಾನ್ ನಿಕೋಬಾರ್ ದ್ವೀಪದಲ್ಲಿರುವ ಬುಡಕಟ್ಟು ಜನಾಂಗದವರನ್ನ ಭೇಟಿ ಮಾಡಿ, ಅವರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿಕೊಳ್ಳಬೇಕೆಂದು ಹೋಗಿದ್ದ. ಆದರೆ ಆ ಸ್ಥಳವನ್ನು ಪ್ರವೇಶಿಸುವ ಮುನ್ನವೇ ಅಲ್ಲಿನ ಬೇಟೆಗಾರರು ಜಾನ್‌ನನ್ನು ಬಾಣ ಬಿಟ್ಟು ಕೊಂದಿದ್ದಾರೆ.

ಜಾನ್ ಸಾವಿನ ಬಗ್ಗೆ ಆತನ ಕುಟುಂಬಸ್ಥರಲ್ಲಿ ವಿಚಾರಿಸಿದಾಗ, ಜಿಸಸ್ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದು, ಕಷ್ಟದಲ್ಲಿರುವವರಿಗೆ ಯಾವಾಗಲೂ ಸಹಾಯ ಮಾಡುತ್ತಿದ್ದ ಎಂದು ಆತನ ಕುಟುಂಬಸ್ಥರು ಹೇಳಿದ್ದಾರೆ. ಅಲ್ಲದೇ ಈ ಕಾರಣಕ್ಕಾಗಿ ಆತ ಮತ ಪ್ರಚಾರಕನಾಗಿದ್ದನೆಂದು ಹೇಳಿದ್ದಾರೆ.

ಅಲ್ಲದೇ ಈತ ಮತಪ್ರಚಾರಕ್ಕಾಗಿ ಬೇರೆ ಬೇರೆ ದೇಶಗಳಿಗೂ ಭೇಟಿ ನೀಡುತ್ತಿದ್ದನೆನ್ನಲಾಗಿದೆ. ಈ ಮೊದಲು ಜಾನ್ ಈ ದ್ವೀಪಕ್ಕೆ ಭೇಟಿ ನೀಡಿದ್ದು, ಆಗಲೂ ಅವರು ಬಾಣ ಬಿಟ್ಟಿದ್ದು, ಅದು ಬೈಬಲ್ ಹೊಕ್ಕಿತ್ತು. ಆದ್ರೆ ಅದೃಷ್ಟವಶಾತ್ ಜಾನ್ ಪ್ರಾಣ ಉಳಿದಿತ್ತು. ಈ ಅನುಭವವನ್ನ ಆತ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದ.

ಅಲ್ಲದೇ ತಾನು ಪ್ರೀತಿ ಹಂಚಲಿಕ್ಕಾಗಿ ಈ ದ್ವೀಪಕ್ಕೆ ಹೋಗಿದ್ದು, ನಾನೇನಾದರೂ ಕೊಲ್ಲಲ್ಪಟ್ಟರೆ ಇಲ್ಲಿನ ಜನರನ್ನು ದೂಷಿಸಬೇಡಿ ಎಂದು ಆತ ತನ್ನ ಡೈರಿಯಲ್ಲಿ ಬರೆದಿಟ್ಟಿದ್ದ.

ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ಅನಾಮಿಕ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ವಿಚಾರಣೆ ಮುಂದುವರೆದಿದೆ.

Next Story

RELATED STORIES