ಲಂಕಾದ ಕಣಿವೆಯಲ್ಲಿ 230 ಅಸ್ಥಿಪಂಜರ ಪತ್ತೆ!

ಶ್ರೀಲಂಕಾದ ಕಣಿವೆಯೊಂದರಲ್ಲಿ 230 ಅಸ್ಥಿ ಪಂಜರಗಳು ಪತ್ತೆಯಾಗಿದ್ದು, ಇದು ದೇಶದಲ್ಲೇ ಪತ್ತೆಯಾದ ಅತೀ ದೊಡ್ಡ ಪ್ರಕರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಲಂಕಾದಲ್ಲಿನ ಹಳೆಯ ಯುದ್ಧಪೀಡಿತ ಪ್ರದೇಶ ಎಂದು ಹೇಳಲಾಗುವ ಆಗುಸ್ಟದ 90 ಕಿ.ಮೀ. ದೂರದಲ್ಲಿರುವ ಕಣಿವೆಯಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಸ್ಥಿ ಪಂಜರ ಲಭಿಸಿದೆ.
2009ರಲ್ಲಿ ಅಂತ್ಯಗೊಂಡ ನಾಗರೀಕ ಹೋರಾಟದಲ್ಲಿ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದರು. ಹಲವಾರು ವರ್ಷಗಳ ಕಾಲ ನಡೆದ ಸೇನೆ ಹಾಗೂ ಬಂಡುಕೋರ ತಮಿಳು ಪ್ರತ್ಯೇಕತಾವಾದಿ ನಡುವಿನ ಹೋರಾಟದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು.
ವರ್ಷದ ಆರಂಭದಲ್ಲಿ ಕಟ್ಟಡ ಕಟ್ಟಲು ತಳಪಾಯ ಹಾಕಲು ಕಾರ್ಮಿಕರು ಆಳವಾದ ಗುಂಡಿ ತೋಡುತ್ತಿದ್ದಾಗ ಅಸ್ಥಿಪಂಜರಗಳು ಲಭಿಸಿವೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ನ್ಯಾಯಾಲಯ ಪ್ರಕರಣದ ಕೂಲಂಕಷ ತನಿಖೆಗೆ ಆದೇಶಿಸಿದೆ.
ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ತಜ್ಞರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಇದು ಅತ್ಯಂತ ಅಮಾನವೀಯ ರೀತಿಯ ಸಮೂಹ ಕೊಲೆ ಎಂದು ಹೇಳಲಾಗುತ್ತಿದೆ.