Top

ನನ್ನ ಮೇಲೆ 50 ಕೇಸಿದೆ, ಜೈಲಿಗೂ ಹೋಗಿದ್ದೆ: ಬಿಜೆಪಿ ಶಾಸಕ

ನನ್ನ ಮೇಲೆ 50 ಕೇಸಿದೆ, ಜೈಲಿಗೂ ಹೋಗಿದ್ದೆ: ಬಿಜೆಪಿ ಶಾಸಕ
X

ನನಗೆ ಪೊಲೀಸ್​ ಕೇಸು ಹೊಸದೇನಲ್ಲ. ಶಾಸಕನಾಗುವ ಮುಂಚೆಯೇ ನನ್ನ ಮೇಲೆ 50 ಕೇಸು ಇದ್ದವು. ಜೈಲಿಗೂ ಹೋಗಿ ಬಂದಿದ್ದೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಳ್ಳಿಯ ಶಾಸಕ ರೇಣುಕಾಚಾರ್ಯ, ದಾವಣಗೆರೆ ಬಳಿ ತುಂಗಾಭದ್ರ ನದಿಗಿಳಿದು ಅಕ್ರಮವಾಗಿ ಮರಳು ಸಾಗಿಸಿದ ಆರೋಪದ ಮೇಲೆ ಪೊಲೀಸರು ತಮ್ಮ ವಿರುದ್ಧ ಎಫ್​ಐಆರ್ ದಾಖಲಿಸಿರುವುದಕ್ಕೆ ಪ್ರತಿಕ್ರಿಯಿಸಿದರು.

ನಾನು, ರೈತರು ಹಾಗೂ ಸಾಮಾನ್ಯ ಜನರೆಲ್ಲಾ ಸೇರಿ ಪ್ರತಿಭಟನೆ ರೂಪದಲ್ಲಿ ಮರಳು ತುಂಬಿದೆವು. ಸಾವಿರಾರು ಬಡವರು ಎತ್ತಿನಗಾಡಿಯಲ್ಲಿ ಬಂದರು. ಅವರನ್ನೂ ಸೇರಿಸಿ ನನ್ನ ಮೇಲೆ ಪೊಲೀಸರು ಐಪಿಸಿ 143, 114, 379 ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಇದಕ್ಕೆಲ್ಲಾ ನಾನು ಬಗ್ಗುವುದಿಲ್ಲ ಎಂದು ಅವರು ಹೇಳಿದರು.

ದಾವಣಗೆರೆಯ ನಾಲಾಯಕ್ ಉಸ್ತುವಾರಿ ಸಚಿವ ಶ್ರೀನಿವಾಸ್. ಅವರು ನನ್ನ ವಿರುದ್ಧ ಹೇಳಿಕೆ ನೀಡಿದರು. ಅವರು ಸೌಜನ್ಯಕ್ಕಾದರೂ ನನ್ನೊಂದಿಗೆ ಮಾತನಾಡಿಲ್ಲ. ಯಾರೊಂದಿಗೂ ಸಭೆ ನಡೆಸಿಲ್ಲ. ಅವರು ಮಜಾ ಮಾಡಲು ಮಂತ್ರಿಯಾಗಿದ್ದಾರೆ. ಅವರ ಫೇಸ್ ಬುಕ್ ಪೇಜ್ ನಲ್ಲಿ ನನ್ನ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಮಾಡುತ್ತಾರೆ. ನಾನು ನಿಮಗಿಂತ ಮೊದಲು ಮಂತ್ರಿಯಾಗಿದ್ದವನು ಎಂದು ರೇಣುಕಾಚಾರ್ಯ ನುಡಿದರು.

ಇವತ್ತು ಸಾಮಾನ್ಯ ಜನರಿಗೆ ಆಶ್ರಯ ಮನೆಗಳು, ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಸರ್ಕಾರಿ ಕೆಲಸಗಳಿಗೂ ಮರಳು ಸಿಗುತ್ತಿಲ್ಲ. ಇವತ್ತಿನ ಸಮ್ಮಿಶ್ರ ಸರ್ಕಾರ ಬಂದ ನಂತರ ಹೊನ್ನಾಳಿಯ ಸಂಪತ್ತಾದ ಮರಳು ಸ್ಥಳೀಯರಿಗೇ ಸಿಗುತ್ತಿಲ್ಲ. 6ರಿಂದ 7 ಸಾವಿರ ಆಶ್ರಯ ಮನೆಗಳು ಅರ್ಧಕ್ಕೆ ನಿಂತಿವೆ. ಸಾಮಾನ್ಯ ಜನರು ಮರಳಿಗಾಗಿ ಪರದಾಡುವಂತಾಗಿದೆ ಎಂದು ಅವರು ಆರೋಪಿಸಿದರು.

ನಾನು ಶಾಸಕನಾದ ನಂತರ 5 ಬಾರಿ ಸಭೆ ಮಾಡಿ 1800ರೂ.ಗೆ ಒಂದು ಟ್ರ್ಯಾಕ್ಟರ್ ಮರಳು ನೀಡಬೇಕೆಂದು ಸೂಚಿಸಿದ್ದೆ. ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ಹೊನ್ನಾಳಿಗೆ ಬಂದಾಗಲೂ ಕೇಳಿಕೊಂಡಿದ್ದೆ. ಈಗ ಹೊಸ ಜಿಲ್ಲಾಧಿಕಾರಿ ಬಂದಿದ್ದಾರೆ. ಇವರಿಗೂ ಹಲವು ಬಾರಿ ಒತ್ತಾಯಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

ಪೊಲೀರು 10 ಜನರನ್ನು ಬಂದಿಸಿದ್ದಾರೆ. ಅಕ್ರಮವಾಗಿ ಮರಳು ಸಾಗಿಸುವವರನ್ನು ಬಿಟ್ಟು ಬಡವರನ್ನು ಹಿಡಿಯುತ್ತಾರೆ. ಕೇಳಿದರೆ ಕಾನೂನು ಸುವ್ಯವಸ್ಥೆ ಕದಡಬೇಡಿ ಎನ್ನುತ್ತಾರೆ. ನಾನು 3 ಬಾರಿ ಶಾಸಕನಾಗಿದ್ದೇನೆ. ನನಗೆ ಕಾನೂನಿನ ಅರಿವಿದೆ ಎಂದು ರೇಣುಕಾಚಾರ್ಯ ಹೇಳಿದರು.

Next Story

RELATED STORIES