ಮತ್ತೆ ರಾಜ್ಯಕ್ಕೆ ಬರುತ್ತಿದ್ದಾರೆ ಯೋಗಿ ಆದಿತ್ಯನಾಥ್!

ವಿಧಾನಸಭಾ ಚುನಾವಣೆ ವೇಳೆ ರಾಜ್ಯದ ಹಲವೆಡೆ ಪ್ರವಾಸ ಮಾಡಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ವಿವಾದಾತ್ಮಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದೀಗ ಮತ್ತೊಮ್ಮೆ ರಾಜ್ಯ ಪ್ರವಾಸಕ್ಕಾಗಿ ಆಗಮಿಸಲಿದ್ದಾರೆ.
ಡಿಸೆಂಬರ್ 16 ರಂದು ಆಗಮಿಸಲಿರುವ ಯೋಗಿ ಆದಿತ್ಯನಾಥ್, ರಾಜ್ಯದಲ್ಲಿ ಮೂರು ದಿನ ಪ್ರವಾಸ ಕೈಗೊಳ್ಳಲಿದ್ದಾರೆ. ಕರ್ನಾಟಕದ ಗಡಿ ಭಾಗವಾದ ಕಾಸರಗೂಡಿನಲ್ಲಿ ನಡೆಯಲಿರುವ ಬೃಹತ್ ಹಿಂದೂ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಂತ್ರಗಾರಿಕೆ ಆರಂಭಿಸಿರುವ ಬಿಜೆಪಿ ಯೋಗಿ ಆದಿತ್ಯನಾಥ್ ಅವರನ್ನು ವಿಶೇಷವಾಗಿ ಆಹ್ವಾನಿಸಿದೆ ಎಂದು ಹೇಳಲಾಗಿದೆ.
ಲೋಕಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯಾನಾಥ್ ಅವರನ್ನು ಹೆಚ್ಚಾಗಿ ಬಳಸಿಕೊಳ್ಳಲು ರಾಜ್ಯ ಬಿಜೆಪಿ ನಿರ್ಧರಿಸಲು ಕಾರಣ ಆದಿತ್ಯನಾಥ್ ಪ್ರಚಾರ ಕೈಗೊಂಡ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದು ಎನ್ನಲಾಗಿದೆ.
ಯೋಗಿ ಆದಿತ್ಯನಾಥ್ ಪ್ರಚಾರ ಕೈಗೊಂಡಿದ್ದ ಗೋವಿಂದರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ ಗೆಲುವು ಸಾಧಿಸಿದರೆ, ಕರಾವಳಿ ಪ್ರದೇಶಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಹುಬ್ಬಳ್ಳಿಯ ಸುತ್ತಮುತ್ತಲಿನ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿತ್ತು.
ಕಾಸರಗೂಡು ಕೇರಳ ರಾಜ್ಯಕ್ಕೆ ಸಂಬಂಧಿಸಿದ್ದರೂ ಈ ಭಾಗದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಬಯಸಿದ್ದು, ಗಡಿ ಪ್ರದೇಶದಲ್ಲಿರುವ ಹಿಂದುತ್ವ ಮತಗಳ ಮೇಲೆ ಬಿಜೆಪಿ ಕಣ್ಣು ಹಾಕಿದೆ.