ಲಾರಿ-ಬೊಲೆರೊ ಡಿಕ್ಕಿ: ಐವರು ಕಾರ್ಮಿಕರ ದಾರುಣ ಸಾವು

ಲಾರಿ ಹಾಗೂ ಬೊಲೆರೊ ಮಧ್ಯೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಐವರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 218ರ ವಿಜಯಪುರ ಹುಬ್ಬಳ್ಳಿ ನಡುವಿನ ವಿಜಯಪುರ ತಾಲ್ಲೂಕಿನ ಹೊನಗನಹಳ್ಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಎಲ್ಲರೂ ಮಹಾರಾಷ್ಟ್ರದ ಪುಣೆ ಮೂಲದವರು ಎಂದು ತಿಳಿದು ಬಂದಿದೆ.
ಘಟನೆಗೆ ಬುಲೆರೊ ಚಾಲಕನ ಅಜಾಗರೂಕತೆ ಹಾಗೂ ಅತೀಯಾದ ವೇಗದ ಚಾಲನೆ ಕಾರಣ ಎಂದು ಹೇಳಲಾಗಿದೆ. ಘಟನೆಯಲ್ಲಿ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ವಿಜಯಪುರ ಗ್ರಾಮೀಣ ಹಾಗೂ ಬಬಲೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಮೃತರ ಗುರುತು ಪತ್ತೆ ಕಾರ್ಯ ನಡೆಸಿದ್ದಾರೆ. ಮೃತರು ಮಹಾರಾಷ್ಟ್ರದ ರಾಜ್ ಗ್ರೂಪ್ ಆಫ್ ಕಂಪನಿ ಕಾರ್ಮಿಕರಾಗಿದ್ದು ವಿಜಯಪುರ ಹುಬ್ಬಳ್ಳಿ ಹೆದ್ದಾರಿ ಕಾಮಗಾರಿಗೆ ಇಲ್ಲಿಗೆ ಬಂದಿದ್ದರು.
ಕೋಲ್ಹಾರ ಪಟ್ಟಣ ಬಳಿ ಕಾಮಗಾರಿ ಕೆಲಸ ಮುಗಿಸಿ ವಿಜಯಪುರಕ್ಕೆ ವಾಪಸ್ ಆಗುವ ವೇಳೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಚಾಲಕ ಹಾಗೂ ನಿರ್ವಾಹಕ ಇಬ್ಬರು ಪರಾರಿಯಾಗಿದ್ದಾರೆ.
ಬಬಲೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಹೆಸರು ಗುರುತು ಪತ್ತೆಯಾಗದ ಕಾರಣ ರಾಜ್ ಗ್ರೂಪ್ಗೆ ಮಾಹಿತಿ ಕಳುಹಿಸಲಾಗಿದೆ.