Top

37 ಸ್ಥಾನ ಗೆದ್ದಿದ್ದರೂ ಎಷ್ಟು ಕೊಬ್ಬು ನಿಮಗೆ: ಬಿಎಸ್​ವೈ ಆಕ್ರೋಶ

37 ಸ್ಥಾನ ಗೆದ್ದಿದ್ದರೂ ಎಷ್ಟು ಕೊಬ್ಬು ನಿಮಗೆ: ಬಿಎಸ್​ವೈ ಆಕ್ರೋಶ
X

ವಿಧಾನಸಭಾ ಚುನಾವಣೆಯಲ್ಲಿ 37 ಸ್ಥಾನ ಗೆದ್ದಿದ್ದರೂ ರೈತ ಮಹಿಳೆ ಬಳಿ ಕ್ಷಮೆ ಕೇಳಿ ಅಂದರೆ ಕೇಳುವುದಕ್ಕೆ ಆಗುವುದಿಲ್ಲವಾ? ಎಷ್ಟು ಕೊಬ್ಬು ನಿಮಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ರೈತ ಮಹಿಳೆಗೆ ಕ್ಷಮೆ ಕೇಳಬೇಕು ಹಾಗೂ ಕಬ್ಬು ಬೆಳೆಗಾರರ ಸಮಸ್ಯೆ ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕುಮಾರಸ್ವಾಮಿ ರೈತ ವಿರೋಧಿ ಹಾಗೂ ಭಂಡ ಮುಖ್ಯಮಂತ್ರಿ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಹೋರಾಟ ಮುಂದುವರಿಯಲಿದೆ. ನಾಲ್ಕು ವರ್ಷ ಎಲ್ಲಿ ಮಲಗಿದ್ದೆ ಎಂದು ಹೇಳುವ ಮೂಲಕ ನಾಡಿನ ಮಹಿಳಾ ಸಮೂಹಕ್ಕೆ ಅಪಮಾನ ಮಾಡಿದ್ದೀರಿ. ಅಧಿಕಾರ ಬಿಸಾಕಿ ಹೋಗ್ತೇನೆ ಎಂದು ಪದೇಪದೆ ಹೇಳುವ ನೀವು ರಾಜೀನಾಮೆ ಬಿಸಾಕಿ ಹೋಗಿ ಎಂದು ಯಡಿಯೂರಪ್ಪ ಹೇಳಿದರು.

ನಿನ್ನೆ ವಿಧಾನಸೌಧದಲ್ಲಿ ಕುಮಾರಸ್ವಾಮಿ ರಾಜಕೀಯ ದೊಂಬರಾಟ ಮಾಡಿದರು. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದೀರಿ. ಯಾವುದೇ ತೀರ್ಮಾನಕ್ಕೆ ಬರಲು ಆಗಲಿಲ್ಲ. ಬೆಳಗಾವಿಯಲ್ಲಿ 10ರಿಂದ ಆರಂಭವಾಗುವ ಅಧಿವೇಶನದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬದ್ಧ ಎಂದು ಹೇಳಿಕೊಂಡು ಹುಬ್ಬಳ್ಳಿಯಲ್ಲಿ ಮನೆ ಮಾಡಿದಿರಿ. ಚುನಾವಣೆ ನಂತರ ಒಂದು ದಿನ ಕೂಡ ಅಲ್ಲಿಗೆ ಹೋಗಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಮನೆ ಕಾಲಿ ಮಾಡಿದಿರಿ. 100 ತಾಲೂಕುಗಳಲ್ಲಿ ಭೀಕರ ಬರ ಇದ್ದರೂ ಯಾವ ಸಚಿವರು ಭೇಟಿ ನೀಡಿಲ್ಲ ಎಂದು ಬಿಎಸ್​ವೈ ಆರೋಪಿಸಿದರು.

Next Story

RELATED STORIES