ಹೈಕಮಾಂಡ್ ಸಹಕರಿಸಿದ್ದರೆ 3 ಕ್ಷೇತ್ರ ಗೆಲ್ಲಿಸುತ್ತಿದ್ದೆ: ಶ್ರೀನಿವಾಸ್ ಪ್ರಸಾದ್

ಬಿಜೆಪಿ ಹೈಕಮಾಂಡ್ ನನಗೆ ಇನ್ನಷ್ಟು ಸಹಕಾರ ನೀಡಬೇಕಿತ್ತು. ಒಂದು ವೇಳೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಹಕರಿಸಿದ್ದಿದ್ದರೆ ಮೈಸೂರಿನ ಮೂರು ವಿಧಾನಸಭಾ ಕ್ಷೇತ್ರಗಳಲ್ಲೂ ಗೆಲ್ಲಿಸುತ್ತಿದ್ದೆ ಎಂದು ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ನಂಜನಗೂಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವರುಣಾ, ಚಾಮರಾಜನಗರ, ಹನೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಶಕ್ತಿ ನನ್ನಲ್ಲಿತ್ತು. ಸಿದ್ದರಾಮಯ್ಯನ ಮಗ ವರುಣಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಗೆಲ್ಲುತ್ತಿರಲಿಲ್ಲ ಎಂದರು.
ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಹಾಕದ ಕಾರಣ ವರುಣಾದಲ್ಲಿ ಕಾಂಗ್ರೆಸ್ ಗೆದ್ದಿತು. ವರುಣಾದಲ್ಲಿ ಬಿಜೆಪಿಯಿಂದ ಸಾಮಾನ್ಯನಲ್ಲಿ ಸಾಮಾನ್ಯ ಅಭ್ಯರ್ಥಿ ಕಣಕ್ಕಿಳಿಸಲಾಗಿತ್ತು. ಕ್ಯಾಂಟೀನ್ ನಡೆಸುತ್ತಿದ್ದ ಸಾಮಾನ್ಯ ಅಭ್ಯರ್ಥಿ ಕಣಕ್ಕಿಳಿಸಿದ್ದರಿಂದಲೇ ನಮಗೆ ಸೋಲುಂಟಾಯಿತು ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದರು.
ಆಗಿನ ಮುಖ್ಯಮಂತ್ರಿಯನ್ನೇ ಸೋಲಿಸಿದ ನಮಗೆ, ಅವರ ಮಗನನ್ನೂ ಸೋಲಿಸುವ ಶಕ್ತಿಯಿತ್ತು ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಶ್ರೀನಿವಾಸ್ ಪ್ರಸಾದ್, ನಾನು ಹೇಳಿದ ಅಭ್ಯರ್ಥಿಯನ್ನು ಅಲ್ಲಿಗೆ ಹಾಕದ ಕಾರಣ ಸೋಲಾಯಿತು. ಇದರಿಂದ ಅಂದಿನ ಸಿಎಂ ಮಗನಿಗೆ ಅಧಿಕಾರವನ್ನು ಬಿಜೆಪಿ ಪಕ್ಷದಿಂದಲೇ ನೀಡಿದಂತಾಯಿತು ಎಂದು ಬಿಜೆಪಿ ಹಿರಿಯ ನಾಯಕರ ವಿರುದ್ದ ಶ್ರೀನಿವಾಸ್ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.