ತುಳಸಿ ಪೂಜೆಯ ಮಹತ್ವವೇನು..? ತುಳಸಿ ಪೂಜೆ ಮಾಡುವುದು ಹೇಗೆ..?

ಹಿಂದೂ ಸಂಪ್ರದಾಯದ ಪ್ರಕಾರ ಕಾರ್ತಿಕ ಮಾಸ ಪವಿತ್ರ ಮಾಸ. ಈ ಮಾಸದಲ್ಲಿ ಬರುವ ಬೆಳಕಿನ ಹಬ್ಬ ದೀಪಾವಳಿ ಹಿಂದೂಗಳ ಪಾಲಿನ ಪ್ರಮುಖ ಹಬ್ಬ. ದೀಪಾವಳಿ ನಡೆದು ಕೆಲ ದಿನಗಳಲ್ಲೇ ಬರುವ ಹಬ್ಬ ತುಳಸಿ ಮದುವೆ. ಕಾರ್ತಿಕ ಮಾಸದಲ್ಲಿ ದೀಪಗಳನ್ನ ದಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ.

ತುಳಸಿ ಮದುವೆ ಯಾಕೆ ಆಚರಿಸುತ್ತಾರೆ. ಇದರ ಹಿಂದಿನ ಕಥೆಯೇನು..?
ಪುರಾಣದ ಪ್ರಕಾರ ಕಾರ್ತಿಕ ಮಾಸದ ಉತ್ತಾನ ದ್ವಾದಶಿಯಂದು ತುಳಸಿ ಪೂಜೆ ಮಾಡಲಾಗುವುದು. ಶ್ರೀವಿಷ್ಣು ತುಳಸಿಯೊಂದಿಗೆ ವಿವಾಹವಾಗಿದ್ದು, ಇದೇ ದಿನ ವಿಷ್ಣು ಯೋಗನಿದ್ರೆಯಿಂದ ಎದ್ದನೆಂಬ ಪ್ರತೀತಿ ಇದೆ. ಈ ಕಾರಣಕ್ಕಾಗಿ ತುಳಸಿ ಪೂಜೆ ಆಚರಿಸಲಾಗುತ್ತದೆ ಎನ್ನಲಾಗಿದೆ.

ತುಳಸಿ ಎಂದರೆ ಯಾವ ರೀತಿಯಲ್ಲೂ ಕೂಡ ತುಲನೆ ಮಾಡಲಾಗದವಳು ಎಂದರ್ಥ. ಶ್ರೀಕೃಷ್ಣನನ್ನು ರುಕ್ಮಿಣಿ-ಸತ್ಯಭಾಮೆ ತುಲನೆ ಮಾಡುವ ಸಂದರ್ಭ ಬಂದಾಗ, ಸತ್ಯಭಾಮೆ ತನ್ನ ಹತ್ತಿರವಿದ್ದ ಎಲ್ಲ ಒಡವೆಗಳನ್ನು ತಂದು, ತಕ್ಕಡಿಯ ಒಂದು ಭಾಗದಲ್ಲಿ ಶ್ರೀಕೃಷ್ಣನನ್ನು ಕೂರಿಸಿ, ಇನ್ನೊಂದು ಭಾಗದಲ್ಲಿ ತನ್ನೆಲ್ಲ ಒಡವೆಗಳನ್ನು ಇಡುತ್ತಾಳೆ.

ಆದರೆ ಶ್ರೀಕೃಷ್ಣನ ತುಲನೆ ಆ ಆಭರಣಗಳಿಂದ ಆಗುವುದಿಲ್ಲ. ಆದರೆ ರುಕ್ಮಿಣಿ ಒಂದೇ ಒಂದು ತುಳಸಿ ದಳವನ್ನು ಇಟ್ಟು, ಭಗವಂತನನ್ನು ಪ್ರಾರ್ಥಿಸಿ ತುಳಸಿಯ ಜೊತೆಗೆ ಶ್ರೀಕೃಷ್ಣನ ತುಲನೆ ಮಾಡುತ್ತಾಳೆ. ಈ ಮೂಲಕ ಭಗವಂತ ತೃಪ್ತನಾಗುವುದು ಭಕ್ತಿಯಿಂದ ಎಂದು ತೋರಿಸಿಕೊಡುತ್ತಾಳೆ. ತುಳಸಿ ಬಳಸದೇ ಮಾಡಿದ ವಿಷ್ಣುವಿನ ಪೂಜೆ ನಿಷ್ಪ್ರಯೋಜಕ ಎನ್ನಲಾಗುತ್ತದೆ.(ಆದರೆ ಶಿವ ಪೂಜೆ ಮತ್ತು ಗಣೇಶನ ಪೂಜೆಯಲ್ಲಿ ತುಳಸಿ ಉಪಯೋಗ ನಿಷಿದ್ಧವಾಗಿದೆ.)

ಮನೆಯ ಅಂಗಳದಲ್ಲಿ ತುಳಸಿ ಗಿಡ ಬೆಳೆಸುವುದರಿಂದ ನಕಾರಾತ್ಮಕ ಶಕ್ತಿಗಳು ದೂರಾಗಿ, ಸಕಾರಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚುತ್ತದೆ. ದೈವಿಕ ಮತ್ತು ವೈಜ್ಞಾನಿಕ ಗುಣವನ್ನು ಹೊಂದಿದ ತುಳಸಿ ಹಲವು ರೋಗಗಳಿಗೆ ರಾಮಬಾಣ. ಇಂಥ ಧನ್ವಂತರಿ ಗುಣ ಹೊಂದಿರುವ ತುಳಸಿ ಪೂಜೆಗೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮಹತ್ವವಿದೆ.

ಅಲ್ಲದೇ ದೇವರಿಗೆ ಮಾಡುವ ನೈವೇದ್ಯದಲ್ಲಿ ತುಳಸಿ ದಳ ಹಾಕಲಾಗುತ್ತದೆ. ಇದರಿಂದ ಆಹಾರದಲ್ಲಿರುವ ಅಶುದ್ಧಿ ಹೋಗಿ, ಅದು ದೇವರಿಗೆ ಸಮರ್ಪಿತವಾಗುತ್ತದೆ ಎಂಬ ನಂಬಿಕೆ ಇದೆ.

ತುಳಸಿ ಪೂಜೆ ಮಾಡುವ ರೀತಿ
ಸಂಜೆ ಹೊತ್ತಿನಲ್ಲಿ ತುಳಸಿ ಪೂಜೆ ಮಾಡುವುದು ವಾಡಿಕೆ. ತುಳಸಿ ಪೂಜೆ ಮಾಡುವುದಕ್ಕೂ ಮುನ್ನ ತುಳಸಿ ವೃಂದಾವನವನ್ನು ಶುಭ್ರಗೊಳಿಸಿ, ರಂಗೋಲಿ, ಅರಿಷಿನ-ಕುಂಕುಮ, ಅಕ್ಷತೆ, ನೆಲ್ಲಿಕಾಯಿ, ಹುಣಸೆಹಣ್ಣಿನ ಗಿಡ, ಹೂವುಗಳಿಂದ ಅಲಂಕರಿಸಬೇಕು. ತುಪ್ಪದ ದೀಪ ಹಚ್ಚಿ, ಪೂಜೆ ಮಾಡಿ, ಪ್ರಾರ್ಥನೆ ಸಲ್ಲಿಸಬೇಕು. ವಿಷ್ಣುವಿಗೆ ಪ್ರಿಯವಾದ ನೈವೆದ್ಯವೆಂದರೆ ಅವಲಕ್ಕಿ. ಅವಲಕ್ಕಿಯನ್ನು ಹಾಲಿನಲ್ಲಿ ಬೆರೆಸಿ, ನೈವೆದ್ಯ ತಯಾರಿಸುವುದು ವಾಡಿಕೆ. ಈ ನೈವೇದ್ಯದಿಂದ ಶ್ರೀವಿಷ್ಣು ಸಂತೃಪ್ತನಾಗುತ್ತಾನೆಂಬ ನಂಬಿಕೆ ಇದೆ.