ಹೆಚ್ಡಿಡಿ, ಹೆಚ್ಡಿಕೆ ಸಮಯ ಸಾಧಕರು: ಬಿಎಸ್ವೈ ಕಿಡಿ

ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ದೇಶದ ಅತಿ ದೊಡ್ಡ ಸಮಯ ಸಾಧಕ ರಾಜಕಾರಣಿಗಳು ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಂಬಿಕೆ ದ್ರೋಹ ಹಾಗೂ ವಿಶ್ವಾಸ ದ್ರೋಹಕ್ಕೆ ಇನ್ನೊಂದು ಹೆಸರೇ ಕುಮಾರಸ್ವಾಮಿ. ದೇವೇಗೌಡರ ರಾಜಕೀಯ ದೊಂಬರಾಟ ನೋಡಿಕೊಂಡು ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದರು.
ಇಪ್ಪತ್ತು ತಿಂಗಳು ನಮ್ಮ ಸರ್ಕಾರದಲ್ಲಿ ಮಜಾ ಮಾಡಿ ನನಗೆ ದ್ರೋಹ ಮಾಡಿದರು. ಕಳೆದ ಆರು ತಿಂಗಳಲ್ಲಿ ಅವರ ಕೊಡುಗೆ ಏನು ಎಂದು ಗೊತ್ತಿದೆ. ಸಾಲಮನ್ನ ಮಾಡಿದ್ದೇ ಎಂದು ಹೇಳಿಕೊಳ್ಳುತ್ತೀರ. ಎಷ್ಟು ಸಾಲಮನ್ನಾ ಇಲ್ಲಿವರೆಗೆ ಆಗಿದೆ. ಈಗಲೂ ರೈತರಿಗೆ ನೋಟೀಸ್ ಹೋಗುತ್ತಿದೆ ಎಂದು ಬಿಎಸ್ವೈ ಹೇಳಿದರು.
ನಾನು ನಿಮ್ಮ ಬಳಿ ಮಂತ್ರಿ ಮಾಡಿ ಎಂದು ಕೇಳಲು ಬಂದಿದ್ದೆ ಎನ್ನಲು ನಿಮಗೆ ನಾಚಿಕೆಯಾಗುವುದಿಲ್ಲವೆ? ನನಗೆ ನೀವು ವಿಶ್ವಾಸ ದ್ರೋಹ ಮಾಡಿರುವುದು ಜನರಿಗೆ ಗೊತ್ತಿದೆ. ನೀವು ಕಾಂಗ್ರೆಸ್ ಬೆಂಬಲವಿಲ್ಲದಿದ್ದರೆ, ತಬ್ಬಲಿಗಳಂತೆ ರಸ್ತೆಯಲ್ಲಿರಬೇಕಿತ್ತು. ನೀವು ಅಧಿಕಾರಕ್ಕೆ ಬಂದಮೇಲೆ 225 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಯಡಿಯೂರಪ್ಪ ಹೇಳಿದರು.
ಬೆಳಗಾವಿ ಅಧಿವೇಶನ ನಡೆಯುತ್ತಿರುವುದೇ ರೈತರು ಸೇರಿದಂತೆ ಎಲ್ಲ ವಿಚಾರ ಚರ್ಚೆ ಮಾಡೋಕೆ. ನಮಗೂ ಗೊತ್ತಿದೆ ಹೇಗೆ ಸದನದಲ್ಲಿ ಚರ್ಚೆ ಮಾಡಬೇಕು ಎಂಬುದು. ರಾಜಕೀಯ ದೊಂಬರಾಟ ಮಾಡುತ್ತಿದ್ದೀರಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಆದರೂ ರೈತರ ಪರ ನಿಲ್ಲಬೇಕು ಎಂದು ಯಡಿಯೂರಪ್ಪ ಗುಡುಗಿದರು.
ರೈತರ ಜೊತೆ ನಿಲ್ಲುವುದು ನಮ್ಮ ಕರ್ತವ್ಯ. ರೈತ ಮಹಿಳೆ ಬಗ್ಗೆ ಇವರು ಕೀಳು ಮಟ್ಟದಲ್ಲಿ ಮಾತಾಡುವಾಗ ಸುಮ್ಮನಿರಬೇಕಾ? ಎಂದು ರೈತರ ಪ್ರತಿಭಟನೆ ಹಿಂದೆ ಬಿಜೆಪಿ ಕುಮ್ಮಕ್ಕು ಇದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
- BAGALKOT Belagavi belagavi farmers bjp BS Yeddyurappa bs yeddyurappa speech Farmers farmers protest HD Kumaraswamy karnataka karnataka cm karnataka farmers karnataka farmers protest karnataka news karnataka politics Kumaraswamy news kumarswamy sugarcane farmers tv5 kannada Yeddyurappa yeddyurappa press meet