Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1. ರಾಜ್ಯದಲ್ಲಿನ ಬಾರ್, ರೆಸ್ಟೋರೆಂಟ್, ಪಬ್​ ಹಾಗೂ ಹೋಟೆಲ್​ಗಳಲ್ಲಿ ಧೂಮಪಾನ ನಿಷೇಧಿಸಿ ಸರಕಾರ ಆದೇಶ ಹೊರಡಿಸಿದೆ. ಪೌರಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಆದೇಶ ಹೊರಡಿಸಿದ್ದು, ಧೂಮಪಾನಕ್ಕೆ ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಹಾಗೂ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಒಂದು ವೇಳೆ ಪಡೆಯದೇ ಇದ್ದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಸೂಚಿಸಲಾಗಿದೆ.

2.9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ 68 ವರ್ಷದ ವೃದ್ಧನಿಗೆ ಮಹಿಳೆಯರು ಸೇರಿದಂತೆ ಸಾರ್ವಜನಿಕರು ಹಿಗ್ಗಾಮುಗ್ಗ ಥಳಿಸಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.ಬಂಕೇನಹಳ್ಳಿ ನಿವಾಸಿ ಗಂಗಾಧರಪ್ಪ ಮಗುವಿಗೆ ಚಾಕೋಲೆಟ್ ಕೊಡಿಸುವ ಆಮೀಷ ಒಡ್ಡಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಇದನ್ನು ಗಮನಿಸಿದ ಸಾರ್ವಜನಿಕರು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

3.ರೈತ ಮಹಿಳೆ ವಿರುದ್ಧ ಅವಹೇಳನಕಾರಿ ವಿಚಾರ ಇಡೀ ದಿನದ ಪ್ರತಿಭಟನೆಗೆ ಕಾರಣವಾಗಿತ್ತು. ರೈತರಿಂದ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಇಷ್ಟೆಲ್ಲಾ ಆದರು ವಿಧಾನಸೌದದಲ್ಲಿ ಸಚಿವ ಕೆಜೆ ಜಾರ್ಜ್ ಮಾತ್ರ ಸಿಎಂ ಹೇಳಿಕೆಯನ್ನು ಸಮರ್ಥಿಸಿಕೊಂಡರು.

4.ಭಾರಿ ಚರ್ಚೆಗೆ ಕಾರಣವಾಗಿದ್ದ 1984ರ ಸಿಖ್‌ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಟ್ಟ ಮೊದಲ ತೀರ್ಪು ಹೊರಬಿದ್ದಿದ್ದು, ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಯಶಪಾಲ್‌ ಸಿಂಗ್‌ಗೆ ಗಲ್ಲು ಶಿಕ್ಷೆ ಹಾಗೂ ನರೇಶ್‌ ಶೇರಾವತ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ದೆಹಲಿಯ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ದಿಲ್ಲಿಯ ಮಹಿಪಾಲಪುರದಲ್ಲಿ ಇಬ್ಬರು ಸಿಖ್‌ ಯುವಕರ ಮೇಲೆ ಹಲ್ಲೆ ನಡೆಸಲಾಗಿತ್ತು.

5.ಮದುವೆ ಸಂಭ್ರಮದಲ್ಲಿರುವ ನವಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಆರತಕ್ಷತೆ ನಿಮಿತ್ತ ಮುಂಬೈಯಿಂದ ಬೆಂಗಳೂರಿಗೆ ಬಂದಿದ್ದಾರೆ. ರಣವೀರ್ ಸಿಂಗ್ ಬಿಳಿ ಬಣ್ಣದ ಕುರ್ತಾ, ಪೈಜಾಮ ಧರಿಸಿದ್ದು, ದೀಪಿಕಾ ಪಡುಕೋಣೆ ತಿಳಿಕೆನೆ ಬಣ್ಣದ ಅನಾರ್ಕಲಿ ಬಟ್ಟೆ ತೊಟ್ಟು ಮಿಂಚುತ್ತಿದ್ದಾರೆ. ಇವರ ಆರತಕ್ಷತೆ ‌ಕಾರ್ಯಕ್ರಮ ನಗರದ ಲೀಲಾ ಪ್ಯಾಲೇಸ್‌ನಲ್ಲಿ ನಾಳೆ ಜರುಗಲಿದೆ

6.ಪ್ರಚಾರಕ್ಕೆ ಬಂದಿದ್ದ ಬಿಜೆಪಿ ಶಾಸಕರೊಬ್ಬರಿಗೆ ಚಪ್ಪಲಿ ಹಾರ ಹಾಕಿ ಅವಮಾನ ಮಾಡಿರುವ ಘಟನೆ ಮಧ್ಯಪ್ರದೇಶದ ಭೋಪಾಲ್​​ ಸಮೀಪದ ನಗಾಡಾ ನಗರದಲ್ಲಿ ನಡೆದಿದೆ. ಅಭಿಮಾನಿ ಸೋಗಿನಲ್ಲಿ ಬಂದ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖಲ್‌ ವೈರಲ್​​ ಆಗಿದೆ. ಈ ಬಾರಿಯೂ ಸ್ಪರ್ಧಿಸಿರುವ ಬಿಜೆಪಿ ಶಾಸಕ ದಿಲೀಪ್ ಶೆಖಾವತ್ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

7.ಮೊದಲು ರಾಮ ಮಂದಿರ ನಂತರ ಸರ್ಕಾರ’ ಎನ್ನುವ ಮೂಲಕ ರಾಮ ಮಂದಿರ ನಿರ್ಮಾಣವಾಗಲೇಬೇಕು ಎಂದು ಇತ್ತೀಚೆಗಷ್ಟೇ ಒತ್ತಾಯಿಸಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಈಗ ರಾಮ ಮಂದಿರದ ಬಗ್ಗೆ ಹೊಸದೊಂದು ಹೇಳಿಕೆ ನೀಡಿದ್ದಾರೆ. ಮುಂಬೈನಲ್ಲಿ ನಡೆದ ಶಿವಸೇನೆಯ ಸಮಾವೇಶವೊಂದರಲ್ಲಿ ಮಾತನಾಡಿರುವ ಅವರು, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಣ ಬಂದು ಬೀಳುತ್ತದೆ ಎಂದಿದ್ದ ಕೇಂದ್ರ ಸರ್ಕಾರದ ಭರವಸೆ ಎಷ್ಟು ಸುಳ್ಳು, ರಾಮ ಮಂದಿರ ನಿರ್ಮಾಣವಾಗುತ್ತದೆ ಎಂಬ ಭರವಸೆಯೂ ಅಷ್ಟೇ ಸುಳ್ಳು ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

8.2019ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಘೋಷಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಅವರು ತಮ್ಮ ಈ ನಿರ್ಧಾರ ಹಂಚಿಕೊಂಡಿದ್ದಾರೆ. ಅನಾರೋಗ್ಯದ ಕಾರಣದಿಂದಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಾರದೆಂಬುದು ನನ್ನ ಮನಸ್ಸಿನ ಭಾವನೆ. ಆದರೆ ಅದನ್ನು ಪಕ್ಷ ನಿರ್ಧರಿಸುತ್ತವೆ ಎಂದು 66 ವಯಸ್ಸಿನ ಸುಷ್ಮಾ ಸ್ವರಾಜ್‌ ಹೇಳಿದ್ದಾರೆ.

9.ಕಬ್ಬಿಗೆ ಬೆಂಬಲ ಬೆಲೆ ನಿಗದಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ರೈತನೊಬ್ಬನಿಗೆ ಕೋರ್ಟ್ ಮೂಲಕ ಬ್ಯಾಂಕ್ ಶಾಕ್ ನೀಡಿದೆ. ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ್ ಕುಸುಗಲ್ ಎಂಬ ರೈತ ಸಾಲ ತುಂಬದ ಹಿನ್ನಲೆ ಇಂಡಿಯನ್ ಬ್ಯಾಂಕ್, ಕೋಟ೯ನಿಂದ ಸಮನ್ಸ್ ಕೊಡಿಸಿದೆ. 2010ರಲ್ಲಿ 16 ಲಕ್ಷ ಬೆಳೆಸಾಲ,ನಿರಾವರಿ ಸಾಲ ಪಡೆದುಕೊಂಡಿದ್ದ ರೈತ ರವಿಶಂಕರ್ ಹಾಗೂ ಜಮೀನ್ದಾರ ಮಲ್ಲಪ್ಪನಿಗೂ ಬ್ಯಾಂಕ್ ನವರು ಬೆನ್ನುಬಿದ್ದಿದ್ದು, ಬೆಂಗಳೂರಿನ ರಿಕವರಿ ಟ್ರಿಬ್ಯೂನಲ್ ನಿಂದ ರೈತ ಹಾಗೂ ಜಾಮೀನದಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

10.ಸಕ್ಕರೆ ಜಿಲ್ಲೆ ಬೆಳಗಾವಿಯ ರೈತನೋರ್ವರ ಬಗ್ಗೆ ಕಳ್ಳ, ದರೋಡೆಕೋರ, ಗುಂಡಾ ಎಂದು ಪದಪ್ರಯೋಗವನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಡಿದ್ದಾರೆ. ಆದರೇ ಎರಡು ವರ್ಷದ ಹಿಂದೆ ಅದೇ ರೈತನ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದ್ದರು ಸಿಎಂ ಎಚ್ ಡಿಕೆ. ಇದಕ್ಕೆ ಪೋಟೋನೇ ಸಾಕ್ಷಿ ಇಲ್ಲಿದೇ ನೋಡಿ. ಖಾನಾಪುರ ತಾಲೂಕಿನ ಗಂದಿಗವಾಡ ಗ್ರಾಮದ ಅಶೋಕ ಯಮಕನಮರಡಿ ರೈತ ಮುಖಂಡ ಅಶೋಕ ಯಮಕನಮರಡಿ ಅವರು ಕಳೆದ ಹಲವು ವರ್ಷಗಳಿಂದ ರೈತ ಪರ ಹೋರಾಟದಲ್ಲಿ ಭಾಗಿಯಾಗಿದ್ದಾರೆ.

11.ಸಿಎಂ ಅಧ್ಯಕ್ಷತೆಯಲ್ಲಿ ಕಬ್ಬು ಬೆಳೆಗಾರರ ಸಭೆ ನಡೆಯಲಿದ್ದು, ಹೋರಾಟದ ಮುಂದಾಳತ್ವ ವಹಿಸಿದ್ದ ರೈತರ ಮುಖಂಡರು ಸಭೆ ಗೈರು ಹಾಜರಾಗುತ್ತಿದ್ದಾರೆ..ಸಿಎಂ ಹೋರಾಟಗಾರರ ಬಗ್ಗೆ ಬಳಸಿದ ಪದಗಳಿಂದ ಮತ್ತು ಜಿಲ್ಲಾಡಳಿತ ಆಯ್ಕೆ ಮಾಡಿದ ರೈತರ ಪಟ್ಟಿಯಿಂದ ಬೇಸರವಾಗಿದ್ದಾರೆ. ಬೆಳಗಾವಿ ಜಿಲ್ಲೆಯಿಂದ 33 ಜನ ರೈತರನ್ನ ಆಯ್ಕೆ ಮಾಡಲಾಗಿದೆ.

12.ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ಪವರ್ ಗ್ರಿಡ್ ಗೆ ಒತ್ತುವರಿಯಾಗಿರುವ ರೈತರ ಜಮೀನುಗಳಿಗೆ ಸಮರ್ಪಕ ಪರಿಹಾರ ನೀಡುವಂತೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆಗೆ ಮನ್ನಣೆ ಸಿಗದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಇಂದು ಗೌರಿಬಿದನೂರು ತಾಲ್ಲೂಕು ಕಚೇರಿ ಬಳಿ ಜಾನುವಾರಗಳನ್ನು ಕಟ್ಟಿ ವಿನೂತನ ಪ್ರತಿಭಟನೆಗೆ ಮುಂದಾಗಿದ್ದಾರೆ.

13.ಸಾಣೇಹಳ್ಳಿ ಮಠದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ್​ ಅವರು ಸೇವಿಸಬೇಕಿದ್ದ ಪ್ರಸಾದವನ್ನು ಪರಿಶೀಲಿಸಿದ ನಂತರ ಪಂಡಿತಾರಾಧ್ಯ ಶ್ರೀ ಅವರು ನೀಡಿದ ಹೇಳಿಕೆ ಈಗ ರಾಜಕೀಯ ತಿರುವು ಪಡೆದುಕೊಂಡಿದ್ದು, ಪರಂ ಪರ ಬ್ಯಾಟ್​ ಮಾಡಿದ್ದ ಪರಿಷತ್ ಸದಸ್ಯ ರಘು ಆಚಾರ್​ ವಿರುದ್ಧ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಡುಗಿದ್ದಾರೆ. ರಘು ಆಚಾರ್, ಡಿಸಿಎಂ ಪರಮೇಶ್ವರ್​​ಗೆ ಬಕೆಟ್ ಹಿಡಿಯುವುದರಲ್ಲಿ ನಂಬರ್ ಒನ್ ಇರಬಹುದು, ಆದ ಕಾರಣ ಅವರ ಮೆಚ್ಚುಗೆ ಪಡೆಯಲು ಇಲ್ಲಿ ಸಾಣೇ ಹಳ್ಳಿ ಶ್ರೀ ವಿರುದ್ಧ ಮಾತನಾಡಿದ್ದಾರೆ.

14.ರೈತ ಮಹಿಳೆಯೊಬ್ಬರ ಕುರಿತು ರಾಜ್ಯದ ಸಿಎಂ ಆಡಿದ ಮಾತು ಸಮಸ್ತ ರೈತರನ್ನು ಅವಮಾನಿಸಿದೆ ಈ ಕೂಡಲೇ CM ಕುಮಾರಸ್ವಾಮಿ ರಾಜ್ಯ ರೈತರ ಮುಂದೆ ಕ್ಷೆಮೆಯಾಚಿಸಬೇಕೆಂದು ಚಿತ್ರದುರ್ಗ ಬಿಜೆಪಿ ಜಿಲ್ಲಾಧ್ಯಕ್ಷ ಕೆಎಸ್ ನವೀನ್ ಒತ್ತಾಯಿಸಿದ್ದಾರೆ. ಈ ರೀತಿ ಕೀಳುಮಟ್ಟದ ಭಾಷೆ ಬಳಸಿರುವುದು ಅವರ ಮನಸ್ಥಿತಿ ಯಾವತರ ಇದೆ ಎಂದು ಸೂಚಿಸುತ್ತದೆ. ರಾಜ್ಯದ ಮುಖ್ಯಮಂತ್ರಗಳಾದ ಅವರು ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವುದು ಅವರ ಕರ್ತವ್ಯ ಆದರೆ ಕರ್ತವ್ಯ ಮರೆತ್ತಿದ್ದಾರೆ.

15. ಹೆಚ್‌ಡಿಕೆ ರೈತ ಮಹಿಳೆ ಜಯಶ್ರೀ ವಿರುದ್ಧ ನೀಡಿದ ಹೇಳಿಕೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಬಜೆಪಿ ಮಹಿಳಾ ಕರ್ಯಕರ್ತೆಯರು ಪ್ರತಿಭಟನೆ ನಡೆಸಿದರು. ನಗರದ ದುರ್ಗದ್ ಬೈಲ್ ವೃತದಲ್ಲಿ ಹುಬ್ಬಳ್ಳಿ - ಧಾರವಾಡ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

16.ಇವರು ಧಾರವಾಡ ಪಶ್ಚಿಮ ಪ್ರಾದೇಶಿಕ ಸಾರಿಗೆ ಹಿರಿಯ ಅಧಿಕಾರಿ. ಇವರು ಮಾಡಿರೋ ಗನಂದಾರಿ ಕೆಲಸದಿಂದ ವಾಹನ ಸವಾರರು ಪರದಾಡುವಂತಾಗಿದೆ. ಹೌದು, ಹುಬ್ಬಳ್ಳಿ- ಧಾರವಾಡ ಅವಳಿ ನಗರದ ಸುಮಾರು‌ 250 ಜನರು ಹೊಸ ಐಷಾರಾಮಿ ಕಾರು ಖರೀದಿ ಮಾಡಿದರು. ಆ ಕಾರಿನ ಮಾಹಿತಿ ಇರೊ ಆರ್‌ಸಿ ಬುಕ್ ಅಥವಾ ಸ್ಮಾರ್ಟ್ ಕಾರ್ಡ್ ನೀಡುವುದು ಈ ರವೀಂದ್ರ ಕವಳಿ ಅವರ ಕೆಲಸ. ಆದ್ರೆ ಎರಡ್ಮೂರು ತಿಂಗಳು ಕಳೆದ್ರು ಆ ಅಧಿಕಾರಿ ಕಾರು ಮಾಲೀಕರಿಗೆ ಸ್ಮಾರ್ಟ್ ಕಾರ್ಡ್ ನೀಡಿಲ್ಲಾ. ಯಾಕೆಂದರೆ ಆ ಸ್ಮಾರ್ಟ್ ಕಾರ್ಡ್ ಕಚೇರಿಯಿಂದ ನಾಪತ್ತೆಯಾಗಿದೆ.

17.ಹುಬ್ಬಳ್ಳಿಯ ರೈಲ್ವೇ ವರ್ಕ್ ಶಾಪ್ ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ ರೈಲ್ವೆ ಬೋಗಿಗೆ ಬೆಂಕಿ ಆವರಿಸಿರುವ ಘಟನೆ ನಡೆದಿದೆ. ರೈಲ್ವೆ ಭೋಗಿಗಳಲ್ಲಿ ವೆಲ್ಡಿಂಗ್ ವರ್ಕ್ ಮಾಡುತ್ತಿರುವಾಗ ಬೆಂಕಿ ಕಿಡಿ ಬೋಗಿಯ ಕುಷನ್ ಶೀಟುಗಳಿಗೆ ಸಿಡಿದು ಬೆಂಕಿ ಹತ್ತಿಕೊಂಡಿದೆ. ಇದರಿಂದ ರೈಲ್ವೆ ಬೋಗಿಯ ಸೀಟುಗಳು ಬೆಂಕಿಗೆ ಆಹುತಿಯಾಗಿವೆ. ಹೋಗೆ ಕಾಣಿಸಿಕೊಳ್ಳುತ್ತಿದಂತೆ ಎಚ್ಚೆತ್ತುಕೊಂಡ ರೈಲ್ವೆ ಸಿಬ್ಬಂದಿ ಬೆಂಕಿ‌ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕೂಡಲೇ ಸಿಬ್ಬಂದಿ ಎಚ್ಚೆತ್ತುಕೊಳ್ಳದಿದ್ರೆ ಭಾರಿ ಅನಾಹುತ ಸಂಭವಿಸುತ್ತಿತ್ತು.

18.ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿಂದು ಸಿಐಟಿಯು ವತಿಯಿಂದ ಬಿಎಸ್ಎನ್ಎಲ್ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು. ನಗರದ ಮಿತ್ರ ಸಮಾಜ ಮೈದಾನದಿಂದ ಬಿಎಸ್ಎನ್ಎಲ್ ಮುಖ್ಯ ಕಛೇರಿ ವರೆಗೆ 50ಕ್ಕೂ ಅಧಿಕ ಹೊರಗುತ್ತಿಗೆ ನೌಕರರು ನಗರದಲ್ಲಿ ರ್ಯಾಲಿ ನಡೆಸುವ ಮೂಲಕ ಪ್ರತಿಭಟಿಸಿದರು.

19.ಉತ್ಥಾನ ದ್ವಾದಸಿಯಂದು ಆಚರಿಸಲ್ಪಡುವ ತುಳಸಿ ವಿವಾಹದ ತಯಾರಿ ಕಾರವಾರದಲ್ಲಿ ಬಲು ಜೋರಾಗಿ ನಡೆಯುತ್ತಿದೆ. ದ್ವಾದಶಿಯಂದು ಕರಾವಳಿಯಲ್ಲಿ ತುಳಸಿ ವಿವಾಹವನ್ನು ಹಿಂದುಗಳು ಆಚರಿಸುತ್ತಾರೆ. ಇನ್ನು ವಿವಾಹಕ್ಕೆ ಬೇಕಾಗುವ ಕಬ್ಬು, ಹೂವುಗಳ ವ್ಯಾಪಾರ ಜೋರಾಗಿದೆ. ಈ ಬಾರಿ ಕಾರವಾರದ ಮಾರುಕಟ್ಟೆಗೆ ಶಿವಮೊಗ್ಗ ಜಿಲ್ಲೆಯ ಕಬ್ಬುಗಳು ಲಗ್ಗೆ ಇಟ್ಟಿದ್ದು, ಕಬ್ಬುಗಳನ್ನು ಕೊಳ್ಳಲು ಗ್ರಾಹಕರು ಮುಗಿ ಬೀಳುತ್ತಿದ್ದಾರೆ. ಇನ್ನು ಕಬ್ಬುಗಳ ಬೆಲೆ ತುಂಬಾನೆ ಇಳಿಕೆಯಾಗಿದೆ.

20.ಲಂಚ ಸ್ವೀಕರಿಸುತಿದ್ದ ಸಂದರ್ಭ ವಿದ್ಯುತ್ ಇಲಾಖೆಯ ಇಂಜಿನಿಯರವೊಬ್ಬರು ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ಬಿದ್ದ ಘಟನೆ ಇಂದು ನಡೆದಿದೆ.ಚಾಮುಂಡೇಶ್ವರಿ ವಿದ್ಯುತ್ ಚಕ್ತಿ ಸರಬರಾಜು ನಿಗಮದ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆಜಾದ್ ಅಲಿ ಸೌಕತ್ ಅಲಿ ದೊಡ್ಡಮನಿ ಎಂಬವರೆ ಎಸಿಬಿ ಬಲೆಗೆ ಬಿದ್ದ ಅಧಿಕಾರಿಯಾಗಿದ್ದಾರೆ.

21.ಮಂಡ್ಯದ ಶ್ರೀರಂಗಪಟ್ಟಣದ ಟಿಪ್ಪು ಸಮಾಧಿಗೆ ಭೇಟಿ ಕೊಟ್ಟು ಟಿಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, ರೈತರ ಸಮಸ್ಯೆಯನ್ನು ಸರ್ಕಾರ ಬಗೆ ಹರಿಸಬೇಕು. ಹೋರಾಟಗಾರರ ಬಗ್ಗೆ ಸಿಎಂ ಲಘುವಾಗಿ ಮಾತನಾಡಬಾರದು. ಸಿಎಂ ಈಗಾಗಲೇ ಮಾತು ವಾಪಸ್ ಪಡೆಯಬೇಕು ಎಂದು ಹೇಳಿದರು.

22.ಸಾಲಬಾಧೆ ತಾಳಲಾರದೆ ಕ್ರೀಮಿನಾಶಕ ಸೇವಿಸಿ ರೈತ ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಅರೆಕಟ್ಟೆದೊಡ್ಡಿಯಲ್ಲಿ ನಡೆದಿದೆ.ವಿಷ ಸೇವಿಸಿ ಮೃತಪಟ್ಟ ರೈತನನ್ನು ಮಾದೇಗೌಡ (40) ಎಂದು ಗುರುತಿಸಲಾಗಿದ್ದು ಈತ ವಿವಿಧ ಬ್ಯಾಂಕುಗಳಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಹಣವನ್ನು ಸಾಲ ಪಡೆದಿದ್ದಾನೆ.ಜೊತೆಗೆ ತನ್ನ ಮನೆಯಲ್ಲಿದ್ದ ಲಕ್ಷ ರೂ ಬೆಲೆಬಾಳುವ ಚಿನ್ನಾಭರಣಗಳನ್ನು ಅಡವಿಟ್ಟಿದ್ದು ತಡರಾತ್ರಿ ತನ್ನ ಜಮೀನಿನಲ್ಲಿ ಬೆಳೆಗೆ ಬಳಸುವ ಕ್ರೀಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಈ ಬಗ್ಗೆ ಸಾತನೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

23.ಈದ್ ಮಿಲಾದ್ ಹಬ್ಬದ ಸಡಗರದಲ್ಲಿ ಸಂಭ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡಿರೋ ಮುಸ್ಲಿಂ ಬಾಂಧವರ ದಂಡು, ಇನ್ನೊಂದು ಕಡೆ ಕೇಸರಿ ಶಾಲು ತೊಟ್ಟು ಮುಸ್ಲಿಂ ಬಾಂಧವರ ಜೊತೆ ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದ ಹಿಂದೂ ಯುವಕರು..ಇಂಥದ್ದೊಂದು ಭಾವೈಕಯತೆ ಸಾರುವ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಮಂಗಳೂರು ಹೊರವಲಯದ ಕಣ್ಣೂರಿನ ಬೋರುಗುಡ್ಡೆ ಪ್ರದೇಶ. ಹೌದು...ಕೋಮು ಸೂಕ್ಷ್ಮ ಹಣೆಪಟ್ಟಿ ಕಟ್ಟಿಕೊಂಡಿರೋ ಕರಾವಳಿ ಭಾಗದಲ್ಲಿ ಹಿಂದೂ-ಮುಸ್ಲಿಮರ ಹಬ್ಬಗಳು ಬಂತೆಂದ್ರೆ ಇಡೀ ಜಿಲ್ಲೆ ಪೊಲೀಸ್ ಸರ್ಪಗಾವಲಿನಲ್ಲಿರುತ್ತೆ. ಕೋಮು ಸಂಘರ್ಷಗಳು ನಡೆಯೋ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರಿಗಂತೂ ಹಬ್ಬಹರಿದಿನಗಳಂದು ದುಪ್ಪಟ್ಟು ಕೆಲಸ. ಆದ್ರೆ ಕಣ್ಣೂರಿನ ಬೋರುಗುಡ್ಡೆ ಗ್ರಾಮದಲ್ಲಿ ಮಾತ್ರ ಇಂತಹ ಯಾವುದೇ ಆತಂಕವಿಲ್ಲ. ಕಳೆದ ಐದು ವರ್ಷಗಳಿಂದ ಇಲ್ಲಿನ ಮುಸ್ಲಿಂ ಹಬ್ಬಗಳನ್ನ ಹಿಂದೂ ಬಾಂಧವರು ಜೊತೆಯಾಗಿಯೇ ಆಚರಿಸ್ತಿದಾರೆ.

24.ನಾಯಿಗೆ ಊಟ ಬಡಿಸುವ ರೀತಿಯಲ್ಲಿ ಮಕ್ಕಳಿಗೆ ಊಟ ಹಾಕಿ ಅಂಗನವಾಡಿಯ ಅಡುಗೆ ಸಹಾಯಕಿಯೋಬ್ಬಳು ವಿವಾದಕ್ಕಿಡಾಗಿದ್ದಾಳೆ. ಮೈಸೂರು ಜಿಲ್ಲೆ ಹೆಚ್.ಡಿ ಕೋಟೆ ತಾಲ್ಲೂಕಿನ ಭೀಮನಹಳ್ಳಿ ಗ್ರಾಮದ ಅಂಗನವಾಡಿಯಲ್ಲಿ ಘಟನೆ ನಡೆದಿದ್ದು, ಅಂಗನವಾಡಿ ಸಹಾಯಕಿ ಲಲಿತಮ್ಮರಿಂದ ಈ ರೀತಿಯ ಹೀನ ಕೃತ್ಯ ನಡೆದಿದೆ. ಮಕ್ಕಳನ್ನು ಸಾಲಿನಲ್ಲಿ ಕೂರಿಸಿ ತಟ್ಟೆಗೆ ಅನ್ನ ಹಾಕಿ ತಟ್ಟೆ ತಳ್ಳುವ ಲಲಿತಮ್ಮ ಮಕ್ಕಳನ್ನ ಹೀನಾಯವಾಗಿ ನೋಡುತ್ತಿದ್ದಾರೆ. ಲಲಿತಮ್ಮ ಊಟ ಬಡಿಸುವ ಅಮಾನವೀಯ ವೈಖರಿ ವಿಡಿಯೋ ವೈರಲ್ ಆಗಿದ್ದು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಲಲಿತಮ್ಮಳಿಗೆ ಹೆದರಿ ಸುಮ್ಮನಿರುವ ಗ್ರಾಮಸ್ಥರು ದೂರು ನೀಡಿದ್ರು ಕ್ರಮವಿಲ್ಲ ಎಂದು ಬೆಸರ ವ್ಯಕ್ತಪಡಿಸಿದರೆ.

25. ಮೈಸೂರು ನಗರದಲ್ಲಿ ಸದ್ದಿಲ್ಲದೇ ಮನೆ ಮನೆಗಳಲ್ಲಿ ಜೇನು ಸಾಕಾಣಿಕೆ ಮಾಡುವ ಟ್ರೆಂಡ್ ಶುರುವಾಗಿದೆ. ಈ ಮೂಲಕ ಪ್ಯೂರ್ ಹನಿಯನ್ನ ಮನೆಯಲ್ಲೇ ತಯಾರಿಸಿ ಸೇವಿಸುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಮೈಸೂರಿನ ಕುವೆಂಪುನಗರ, ಸರಸ್ವತಿಪುರಂ, ಟಿ.ಕೆ.ಲೇಔಟ್, ರೂಪಾನಗರ, ದೀಪನಗರ, ಗೋಕುಲಂ, ಸೇರಿದಂತೆ 6ಕ್ಕೂ ಹೆಚ್ಚು ಬಡಾವಣೆಯಲ್ಲಿ ಜೇನು ಸಾಕಾಣಿಕೆ ನಡೆಯುತ್ತಿದ್ದು, ಜೇನುತುಪ್ಪ ಪಡೆಯುವುದರ ಜೊತೆಗೆ ಮಾರಾಟವೂ ನಡೆಯುತ್ತಿದೆ.

26.ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನಾ‌ ಕೈದಿ ಹೃದಯಾಘಾತದಿಂದ ಮೃತಪಟ್ಟಿದ್ದು, ಸಾವಿನ ಸುತ್ತಾ ಅನುಮಾನದ ಹುತ್ತ ಬೆಳೆದಿದೆ. ಕೌಟುಂಬಿಕ ಕಲಹದಿಂದ ಜೈಲು ಸೇರಿರುವ ಆರೋಪಿ ಮಲ್ಲೇಶ್, ನಿನ್ನೆ ರಾತ್ರಿ ಮೃತಪಟ್ಟಿರುವುದಾಗಿ ಕುಟುಂಬಸ್ಥರಿಗೆ ಮಾಹಿತಿ ಬಂದಿದೆ. ಆದ್ರೆ, ಅಧಿಕಾರಿಗಳ ಹೇಳಿಕೆಯಲ್ಲೇ ಗೊಂದಲ ಇದ್ದು, ಇದು ಹೃದಯಾಘಾತವಲ್ಲ, ಇದು ಕೊಲೆ ಎಂದು ಕುಟುಂಬಸ್ಥರು ಆರೋಪಿದ್ದಾರೆ.

27.ಮೈಸೂರಿನಲ್ಲಿ ಜೆಡಿಎಸ್ ಮುಖಂಡನ ಪುತ್ರನೋಬ್ಬ ನೇಣಿಗೆ ಶರಣಾಗಿದ್ದು, ವಿಜಯನಗರದ 3ನೇ ಹಂತದ ಬಸವರಾಜ ವೃತ್ತದ ಸಮೀಪ ಘಟನೆ ನಡೆದಿದೆ. ಜೆಡಿಎಸ್ ಮುಖಂಡ, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತರೂ ಆಗಿರುವ ಕೆಂಪನಾಯಕ ಪುತ್ರ ಶ್ರೇಯಸ್ ಮೃತ ದುರ್ದೈವಿಯಾಗಿದ್ದು, ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿ.ಯುಸಿ ಓದುತ್ತಿದ್ದ ಶ್ರೇಯಸ್ ಮನೆಯಲ್ಲಿ ಯಾರು ಇಲ್ಲದ ವೇಳೆ ರೂಮಿನಲ್ಲಿ ನೇಣಿಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ವಿಜಯನಗರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

28.ಬಿಜೆಪಿ ಹೈಕಮಾಂಡ್ ನನಗೆ ಇನ್ನಷ್ಟು ಸಹಕಾರ ನೀಡಬೇಕಿತ್ತು. ಆವಾಗ ನಾನೂ ಮೂವರು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಿದ್ದೆ ಅಂತ ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದ್ದಾರೆ. ಹಲವು ದಿನಗಳ ನಂತರ ನಂಜನಗೂಡಿಗೆ ಭೇಟಿ ನೀಡಿದ ಶ್ರೀನಿವಾಸ್‌ ಪ್ರಸಾದ್ ಇನ್ನು ಮೂರು ಸ್ಥಾನ ಬಿಜೆಪಿಗೆ ಗೆಲ್ಲಿಸುವ ತಾಕತ್ತು ನನ್ನಲ್ಲಿ ಇತ್ತು ಅಂತ ಹೇಳಿಕೊಂಡಿದ್ದಾರೆ. ವರುಣಾ, ಚಾಮರಾಜನಗರ, ಹನೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಶಕ್ತಿ ನನ್ನಲ್ಲಿತ್ತು. ಆವಾಗ ಸಿದ್ದರಾಮಯ್ಯನ ಮಗ ವರುಣಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ಗೆಲ್ಲುತ್ತಿರಲಿಲ್ಲ. ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಹಾಕದ ಕಾರಣ ವರುಣಾದಲ್ಲಿ ಕಾಂಗ್ರೆಸ್ ಗೆದ್ದಿತು. ವರುಣಾದಲ್ಲಿ ಬಿಜೆಪಿಯಿಂದ ಸಾಮಾನ್ಯನಲ್ಲಿ ಸಾಮಾನ್ಯ ಅಭ್ಯರ್ಥಿ ಇದ್ದ ಆತನನ್ನ ಕಣಕ್ಕಿಳಿಸಿದ್ದರಿಂದಲೇ ನಮಗೆ ಸೋಲುಂಟಾಯಿತು ಎಂದು ಬೆಸರ ವ್ಯಕ್ತಪಡಿಸಿದರು.

29.ಜೆಡಿಎಸ್ ಮುಖಂಡ ಟಿ.ಆರ್.ರಾಜ್ ಗೋಪಾಲ್ ಹತ್ಯೆ ಸಂಬಂಧ ಆರೋಪಿ ಕೌಶಿಕ್ ಸಹೋದರ ದೀಪು ಎಂಬಾತನಿಗೆ ಪೋಲೀಸರಿಂದ ಗುಂಡೇಟು ಮಾಡಿ ನವೆಂಬರ್ 12 ರಂದು ದಲಿತ ಮುಖಂಡ ಟಿ.ಆರ್. ರಾಜಗೋಪಾಲ್ ಎಂಬ ಜೆಡಿಎಸ್ ಮುಖಂಡನನ್ನು ಕೌಶಿಕ್ ಹಾಗೂ ರಾಮು ಹಾಗೂ ದೀಪು ಹತ್ಯೆ ಮಾಡಿದ್ದಾರೆಂಬ ಮಾಹಿತಿ ಸಿಕ್ಕಿದೆ. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೋಲೀಸರಿಗೆ ಆರೋಪಿಗಳ ಸುಳಿವು ದೊರೆತು ತಡರಾತ್ರಿ ಅವರನ್ನು ಬಂಧಿಸಲು ಹೋಗಿದ್ದ ವೇಳೆ ಪೋಲೀಸರಿಂದ ಆರೋಪಿಗಳು ತಪ್ಪಿಸಿಕೊಳ್ಳಲು ಹೋದಾಗ ಪೋಲೀಸರು ಗುಂಡು ಹಾರಿಸಿದ್ದು ದೀಪು ಹಾಗೂ ರಾಮು ಇಬ್ಬರಿಗೂ ಗುಂಡು ತಗುಲಿದ್ದು ಇಬ್ಬರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

30.ರೈತರ ಬೇಡಿಕೆ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ನಡೆದುಕೊಂಡ ರೀತಿಗೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ‌ಅವರು ರೈತರ ಸಮಸ್ಯೆಯನ್ನು ಸರ್ಕಾರ ಅತ್ಯಂತ ಸಹಾನುಭೂತಿ ಯಿಂದ ಆಲಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ರೈತರ ಮನವಿಯನ್ನು ಜಾಗೃತೆಯಿಂದ ಪರಿಗಣಿಸಬೇಕು, ಅನ್ನದಾತರ ಸಮಸ್ಯೆ ಬಂದಾಗ ನಾನೂ ಕೂಡಾ ಅತ್ಯಂತ ಪ್ರಾಮುಖ್ಯತೆ ಕೊಟ್ಟು ಚರ್ಚೆ ಮಾಡುತ್ತಿದ್ದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

31.ನಿನ್ನೆ ಉಡುಪಿ ಜಿಲ್ಲೆಯ ಹೆಬ್ರಿಯ ಬರ್ಸಬೆಟ್ಟು ಮನೆಯಲ್ಲಿ ನಡೆದ ನಾಗ ಪವಾಡ ಹೊಸ ತಿರುವು ಪಡೆದು ಕೊಂಡಿದೆ. ಶಿವಮೊಗ್ಗದ ನಾಗಪಾತ್ರಿ ನಾಗರಾಜ್ ಭಟ್ ಬರ್ಸಬೆಟ್ಟು ಮನೆಯ ಹಾಲ್ ಅಡಿಭಾಗದಲ್ಲಿ ನಾಗನ ಮೂರ್ತಿ ಇದೆ ಎಂದು ಮನೆಯವರಿಗೆ ತಿಳಿಸಿದ್ದರು . ಅದರಂತೆ ಹಲವು ಜನರ ಸಮ್ಮುಖದಲ್ಲಿ ಅಗೆದಾಗ ಮೂರ್ತಿ ಪತ್ತೆಯಾಗಿದೆ. ಆದ್ರೆ ನಂತರ ಪರ ವಿರೋಧ ವಾದ ಆಡಿಯೋಗಳು ಹರಿದಾಡುತ್ತಿದ್ದೆ. ಪೂನಾದಿಂದ ಕರೆ ಮಾಡಿದ ವ್ಯಕ್ತಿ ತಾನು ಮೋಸ ಹೋಗಿದ್ದೇನೆ.ಆ ನಾಗ ಪಾತ್ರಿ ಇದೆ ತರ ತುಂಬ ಜನಕ್ಕೆ ಮೋಸ ಮಾಡಿದ್ದಾರೆ ಅನ್ನುವ ಒಂದು‌ ಆಡಿಯೋ ಹರಿದಾಡಿದೆ.ನಾಗಪಾತ್ರಿ ನಾಗರಾಜ್ ಬಟ್ ಪರವಾಗಿ ಮತ್ತೊಂದು ಆಡಿಯೊ ಕೂಡ ಹರಿದಾಡುತ್ತಿದ್ದು.ರಘ ಎಂಬ ವ್ಯಕ್ತಿ ಕಾಲ್ ಮಾಡಿ ಆಡಿಯೋ ಕೂಡ ವೈರಲ್ ಅಗಿದೆ.

32.ಕಬ್ಬಿಗೆ ಬೆಂಬಲ ಬೆಲೆ ನಿಗದಿ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿರುವ ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ರೈತನೊಬ್ಬನಿಗೆ ಕೋರ್ಟ್ ಮೂಲಕ ಬ್ಯಾಂಕ್ ಶಾಕ್ ನೀಡಿದೆ. ಮುಧೋಳ ತಾಲೂಕಿನ ಹಲಗಲಿ ಗ್ರಾಮದ ರೈತ ರವಿಶಂಕರ್ ಕುಸುಗಲ್ ಎಂಬ ರೈತ ಸಾಲ ತುಂಬದ ಹಿನ್ನಲೆ ಇಂಡಿಯನ್ ಬ್ಯಾಂಕ್, ಕೋಟ೯ನಿಂದ ಸಮನ್ಸ್ ಕೊಡಿಸಿದೆ. 2010ರಲ್ಲಿ 16 ಲಕ್ಷ ಬೆಳೆಸಾಲ,ನಿರಾವರಿ ಸಾಲ ಪಡೆದುಕೊಂಡಿದ್ದ ರೈತ ರವಿಶಂಕರ್ ಹಾಗೂ ಜಮೀನ್ದಾರ ಮಲ್ಲಪ್ಪನಿಗೂ ಬ್ಯಾಂಕ್ ನವರು ಬೆನ್ನುಬಿದ್ದಿದ್ದು, ಬೆಂಗಳೂರಿನ ರಿಕವರಿ ಟ್ರಿಬ್ಯೂನಲ್ ನಿಂದ ರೈತ ಹಾಗೂ ಜಾಮೀನದಾರರಿಗೆ ಸಮನ್ಸ್ ಜಾರಿ ಮಾಡಲಾಗಿದೆ.

33.ಅಲಿಖಾನ್ ನ್ಯಾಯಾಲಯಕ್ಕೇ ಬಂದು ಶರಣಾದ. ಕೂಡಲೇ ನ್ಯಾಯಾಧೀಶರು ಅಲಿಖಾನ್​ನನ್ನು 7ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿದರು. ಕೆಲ ಸಮಯದಲ್ಲೇ ತನಿಖಾಧಿಕಾರಿ ವೆಂಕಟೇಶ್ ಪ್ರಸನ್ನ ಪೊಲೀಸ್ ಕಸ್ಟಡಿ ನೀಡಬೇಕೆಂದು ಮನವಿ ಮಾಡಿಕೊಂಡರು. ಆದರೆ ಮನವಿ ವಿಚಾರಣೆಗೆ ತಡವಾಗಿರೋದ್ರಿಂದ ಅಲಿಖಾನ್​ ನ್ಯಾಯಾಂಗ ಬಂಧನಕ್ಕೆ ಕಳಿಸಲಾಯಿತು.

34.ಚಲನಚಿತ್ರ ನಿರ್ಮಾಪಕ ಸಾರಾ ಗೋವಿಂದ್ ಪುತ್ರನ ಪ್ರಚೋದನೆಯಿಂದ ವ್ಯಕ್ತಿಯೊಬ್ಬರ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.ಹರೀಶ್ ಎಂಬಾತನನ್ನು ಕರೆ ಮಾಡಿ ಕರೆಸಿಕೊಂಡ ಅನೂಪ್ ಆ್ಯಂಡ್ ಗ್ಯಾಂಗ್, ಬಸವೇಶ್ವರ ನಗರದ ಪವಿತ್ರ ಪ್ಯಾರಡೈಸ್‌ನಿಂದ ಕಿಡ್ನ್ಯಾಪ್ ಮಾಡಿ, ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ. ಪ್ರಭಾಕರ್ ಮತ್ತು ಸತ್ಯ ಎಂಬುವವರು ಹಲ್ಲೆ ನಡೆಸಿದ್ದು, ಹಲ್ಲೆ ನಡೆಸುವ ಸಂದರ್ಭದಲ್ಲಿ ಸ್ಥಳದಲ್ಲಿ ಅನೂಪ್ ಸಾರಾಗೋವಿಂದ್ ಕೂಡ ಇದ್ದರು ಎನ್ನಲಾಗಿದೆ.

35.ಮೇಕಿಂಗ್​ ಹಂತದಿಂದ್ಲೇ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿರೋ ತಾರಕಾಸುರ ಸಿನಿಮಾ ರಿಲೀಸ್​ಗೆ ಕೌಂಟ್​ಡೌನ್​ ಸ್ಟಾರ್ಟ್ ಆಗಿದೆ. ರಥಾವರ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಈ ಕಮರ್ಷಿಯಲ್ ಆ್ಯಕ್ಷನ್​ ಎಂಟ್ರಟ್ರೈನರ್​, ಡಿಸ್ಟ್ರಿಬ್ಯೂಷನ್​​ ರೈಟ್ಸ್ ಭರ್ಜರಿ ನಿರ್ಮಾಪಕರ ಪಾಲಾಗಿದೆ.

36.ಪೊಗರು ಸಿನಿಮಾಕ್ಕಾಗಿ ಶ್ರಮಿಸುತ್ತಿರುವ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಈಗ ತಮ್ಮ ಬಾಳಿನ ಹೊಸ ಪಯಣಕ್ಕೆ ಸಜ್ಜಾಗುತ್ತಿದ್ದಾರೆ. ತಾವು ಮೆಚ್ಚಿದ ಹುಡ್ಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಅಲ್ಲಿಗೆ ಈ ವರ್ಷ ಧ್ರುವ ಸರ್ಜಾ ಫುಲ್​​ ಬ್ಯುಸಿಯಾಗಿದ್ದರೆ.

37.ಅನುಕ್ತ ಸಿನಿಮಾ ಆಡಿಯೋ ಲಾಂಚ್‌ ನಡೆದಿದ್ದು, ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ಕನ್ನಡ ಸಿನಿಮಾಗಳ ಬಗ್ಗೆ ಒಂದಿಷ್ಟು ಮಾತನಾಡಿದ್ದಾರೆ.ನಮ್ಮ ಕನ್ನಡಿಗರು ಬುದ್ಧಿವಂತರು. ಅನ್ಯ ಭಾಷೆಯವರ ಜೊತೆಗೆ ಅವರದ್ದೇ ಆದ ಭಾಷೆಯಲ್ಲಿ ಮಾತನಾಡುತ್ತಾರೆ. ಆದರೆ ನಮ್ಮ ಕನ್ನಡ ಭಾಷೆಯನ್ನ ಅವರಿಗೆ ಕಲಿಸುವ ಪ್ರಯತ್ನ ಮಾಡುವುದಿಲ್ಲ. ಈ ಕಾರಣಕ್ಕಾಗಿ ಕರ್ನಾಟಕದಲ್ಲಿ ಬೇರೆ ಭಾಷೆಯ ಸಿನಿಮಾಗಳು ಹೆಚ್ಚು ಸೌಂಡ್ ಮಾಡ್ತಿವೆ ಎಂದರು.

38.ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಲಿಖಾನ್ ಮತ್ತು ವಹಾಬ್​ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ.ಬಿಜೆಪಿ ಮಾಜಿ ಶಾಸಕ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ಪೂರೈಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟೀಸ್ ನೀಡಿದ್ದರು. ಅಲ್ಲದೇ ನವೆಂಬರ್ 27ರವರೆಗೆ ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯದಲ್ಲಿ ಮನವಿ ಮಾಡಿದ್ದರು.

39.ಕಬ್ಬು ಬೆಳೆಗಾರರ ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರ ಜೊತೆ ಸಭೆಯನ್ನು ನಡೆಸಿದ್ದಾರು.ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ರೈತರು ಹಾಗೂ ಮಾಲಿಕರ ಸಮಸ್ಯೆಗಳನ್ನ ಆಲಿಸುವ ಮೂಲಕ ಒಂದು ಸ್ಪಷ್ಟ ತೀರ್ಮಾನಕ್ಕೆ ಬಂದಿದ್ದಾರೆ. ಕಾರ್ಖಾನೆ ಮಾಲಿಕರನ್ನು ಮನವೊಲಿಸಿ ಅವರಿಂದ ಬರಬೇಕಾದ 48 ಕೋಟಿ ಬಾಕಿಯನ್ನು ರೈತರಿಗೆ ಕೊಡಿಸುವ ಭರವಸೆಯನ್ನು ನೀಡಿದ್ದಾರೆ. ಆದರೆ ಬಹುತೇಖ ಸಕ್ಕರೆ ಕಾರ್ಖಾನೆ ಮಾಲೀಕರೆ ಇಂದಿನ ಸಭೆಗೆ ಗೈರಾಗಿರೋದ್ರಿಂದ ಸಿಎಂ ಭರವಸೆ ಉಳಿಯುತ್ತಾ ಹೇಗೆ ಅನ್ನೋ ಪ್ರಶ್ನೆ ಉದ್ಬವಿಸಿದೆ.

40.ಚುನಾವಣಾ ಪ್ರಚಾರದ ವೇಳೆ ಮತ ಯಾಚನೆಗೆ ಬಂದಿದ್ದ ಬಿಜೆಪಿ ಶಾಸಕನಿಗೆ ಯುವಕನೊಬ್ಬ ಚಪ್ಪಲಿ ಹಾರ ಹಾಕಿದ ಘಟನೆ ಮಧ್ಯಪ್ರದೇಶದ ಭೋಪಾಲ್​ ಸಮೀಪದ ನಗಾಡಾದಲ್ಲಿ ನಡೆದಿದ್ದು, ಈ ವೀಡಿಯೋ ವೈರಲ್ ಆಗಿದೆ.ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ನಡೆಯುತ್ತಿದ್ದು, ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್​​ ಸೇರಿದಂತೆ ಎಲ್ಲಾ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

41.ನಾನು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ ಎಂದರೇ ವಿವಾದ ಇಲ್ಲ ಎಂದರ್ಥ ಎಂದು ಸಕ್ಕರೆ ಖಾತೆ ಸಚಿವ ಕೆ.ಜೆ.ಜಾರ್ಜ್​ ಮಾರ್ಮಿಕವಾಗಿ ಹೇಳಿದ್ದಾರೆ.ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಕಬ್ಬು ಬೆಳೆಗಾರರೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳು, ಇತ್ತೀಚೆಗೆ ನೀವು ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ನಿಮ್ಮ ಖಾತೆ ಕೆಲಸದಲ್ಲಿ ವಿಫಲರಾಗಿದ್ದೀರಾ ಎಂಬ ಪ್ರಶ್ನೆಗೆ ಈ ರೀತಿ ಉತ್ತರಿಸಿದರು.

42.ಬಳ್ಳಾರಿಯ ರೌಂಡ್ ಟೇಬಲ್ ಆಫ್ ಇಂಡಿಯಾದ ಸದಸ್ಯರು ನಗರದ ಬಸವರಾಜೇಶ್ವರಿ ಶಾಲೆಯಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಿದ್ರು. ಈ ಚಿತ್ರಕಲಾ ಸ್ಪರ್ಧೆಯಲ್ಲಿ ೨೦ಕ್ಕೂ ಹೆಚ್ಚು ಶಾಲೆಯ ೨೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಮಕ್ಕಳು ಚಿತ್ರಕಲೆ ಬಿಡಿಸುವ ಮೂಲಕ ನಮ್ಮ ದೇಶದ ಪರಿಕಲ್ಪನೆಯನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಈ ಶಿಬಿರಗಳನ್ನು ದೇಶ್ಯಾದ್ಯಂತ ನಡೆಸಲಾಗುತ್ತಿದೆ.

43.ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಡೆಡ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಲಾಲ್‌ಬಾಗ್‌ನ ಸಿದ್ದಾಪುರದಲ್ಲಿ ಗೀತಾ ಎಂಬುವರ ಮೇಲೆ 10ಕ್ಕೂ ಹೆಚ್ಚುಬೀದಿ ನಾಯಿಗಳು ದಾಳಿ ಮಾಡಿವೆ.. ಗಾಯಾಳು ಗೀತಾಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಕಳೆದ ಶುಕ್ರವಾಗ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಾದರೂ ಕ್ರಮ ಕೈಗೊಳ್ಳದ ಪಾಲಿಕೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

44.ಜ್ಞಾನಭಾರತಿ ಪೊಲೀಸ್ ಠಾಣೆ ಪೇದೆ ಚಂದ್ರಶೇಖರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದೆ. ಇದೇ ತಿಂಗಳ 17ರಂದು ಹೋಂಗಾರ್ಡ್ ಮನೆಗೆ ನುಗ್ಗಿ ಅತ್ಯಾಚಾರ ವೆಸಗಿದ್ದಾಗಿ ಮಹಿಳೆ ಆರೋಪಿಸಿದ್ದಾರೆ. ಜ್ಞಾನಭಾರತಿ ಪೊಲೀಸರ ವಾರ್ನಿಂಗ್ ಬಳಿಕವೂ ತನ್ನ ಚಾಳಿ ಮುಂದುವರೆಸಿದ್ದ ಚಂದ್ರೇಶೇಖರ್ ಡ್ಯೂಟಿ ವೇಳೆಯೇ ಸೊಂಟಕ್ಕೆ ಕೈ ಹಾಕಿ ಅಸಭ್ಯವಾಗಿ ವರ್ತಿಸ್ತಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.. ಪ್ರಕರಣ ಸಂಬಂಧ ನಂದಿನಿ ಲೇಔಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

45.ರಾಜ್ಯದ ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹ ಸ್ಥಿತಿ ನಿರ್ವಹಣೆಗಾಗಿ ಕೇಂದ್ರ ಸರ್ಕಾರ 546 ಕೋಟಿ 21 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಲು ಒಪ್ಪಿಗೆ ಸೂಚಿಸಿದೆ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಹಾಗೂ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ನಿನ್ನೆ ದೆಹಲಿಯಲ್ಲಿ ನಡೆದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣೆ ನಿಧಿ ಅಡಿ ಈ ಅನುದಾನ ಮಂಜೂರು ಮಾಡಲು ನಿರ್ಧರಿಸಲಾಗಿದೆ.

46.ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ನಟಿ ದೀಪಿಕಾ ಪಡುಕೋಣೆ ಭಾರತ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ..ಸುಮಾರು 60 ಟಾಪ್ ಬಾಲಿವುಡ್ ಪ್ರಸಿದ್ಧ ವ್ಯಕ್ತಿಗಳು ಮತ್ತು ಕ್ರೀಡಾ ಕ್ಷೇತ್ರದ ವ್ಯಕ್ತಿಗಳ ಬಗೆಗೆ ಜನರ ಗ್ರಹಿಕೆಗಳನ್ನು ಒಳಗೊಂಡು ಯುವೌ ಇನ್ಫ್ಲುಎನ್ಸರ್ ಇಂಡೆಕ್ಸ್ 2018 ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

47.ಹೋಮ್​ ಗ್ರೌಂಡ್​ನಲ್ಲಿ ಆಸೀಸ್ ಬೌಲರ್​ ಗಳಿಗೆ ಉತ್ತಮ ಅವಕಾಶಗಳಿರುವುದು ಸಹಜ. ಆದರೆ, ಕಾಂಗರೂ ಬೌಲರ್​ಗಳು ಒಡ್ಡುವ ಯಾವುದೇ ಸವಾಲುಗಳನ್ನ ಎದುರಿಸಲು ಭಾರತದ ಬ್ಯಾಟ್ಸ್​ಮನ್​ಗಳು ಸದಾ ಸಿದ್ಧ ಎಂದು ಟೀಂ ಇಂಡಿಯಾ ಉಪ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

48.ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧ ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್​ ಖಾನ್​ ವಾಗ್ದಾಳಿ ನಡೆಸಿದ್ದಾರೆ. ನಿಮ್ಮ ಸೇನಾ ವೈಫಲ್ಯಗಳಿಗಾಗಿ ಪಾಕಿಸ್ತಾನವನ್ನ ಬಲಿಪಶು ಮಾಡಬೇಡಿ ಎಂದು ಇಮ್ರಾನ್​ ಖಾನ್​ ಸರಣಿ ಟ್ವೀಟ್​ ಮಾಡಿದ್ದಾರೆ. ಅಮೆರಿಕ​ ಯುದ್ಧದ ಸಮಯದಲ್ಲಿ ಪಾಕ್​ 75 ಸಾವಿರ ಸಾವು-ನೋವು ಅನುಭವಿಸಿದೆ. ಬರೋಬ್ಬರಿ 123 ಶತಕೋಟಿ ನಷ್ಟ ಅನುಭವಿಸಿದೆ ಎಂದು ಆರೋಪಿಸಿದರು.

49.ಮುಂಬೈ ತೀರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಛತ್ರಪತಿ ಶಿವಾಜಿ ಪ್ರತಿಮೆ, ವಿಶ್ವದಲ್ಲೇ ಅತೀ ಎತ್ತರದ ಪ್ರತಿಮೆಯಾಗಲಿದೆ ಎಂದು ಘೋಷಿಸಲು ಫಡಣವೀಸ್‌ ಮುಂದಾಗಬೇಕು ಎಂದು ಶಿವಸೇನಾ ಆಗ್ರಹಿಸಿದೆ. ಈ ಬಗ್ಗೆ ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಫಡ್ನಾವೀಸ್‌ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಗುಜರಾತ್‌ನಲ್ಲಿ ನಿರ್ಮಿಸಿರುವ ಸರ್ದಾರ್‌ ವಲ್ಲಭ ಭಾಯಿ ಪಟೇಲ್‌ ಅವರ ‘ಏಕತಾ ಪ್ರತಿಮೆ’ ಜಗತ್ತಿನಲ್ಲೆ ಅತೀ ಎತ್ತರದ ಪ್ರತಿಮೆಯಾಗಿರಬೇಕೆಂಬ ಕಾರಣಕ್ಕೆ ಶಿವಾಜಿ ಪ್ರತಿಮೆಯ ಎತ್ತರವನ್ನು ಕಡಿಮೆಗೊಳಿಸಲಾಗಿದೆ ಎಂದು ಎನ್‌ಸಿಪಿ ಮುಖಂಡ ಜಯಂತ್‌ ಪಾಟೀಲ್‌ ಆರೋಪಿಸಿದ್ದಾರೆ’ ಎಂದೂ ಶಿವಸೇನಾ ಹೇಳಿದೆ.

50.2002 ಗುಜರಾತ್​ ಗಲಭೆ ಪ್ರಕರಣದಲ್ಲಿ ಅಂದಿನ ಗುಜರಾತ್​ ಸಿಎಂ ನರೇಂದ್ರ ಮೋದಿ ಪಾತ್ರದ ಕುರಿತು ಎಸ್​ಐಟಿ ನೀಡಿರುವ ಕ್ಲಿನ್​ಚಿಟ್​ ಪ್ರಶ್ನಿಸಿ, ಜಾಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ನವೆಂಬರ್​ 26ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ. ಎ.ಎಂ ಖಾನ್ವಿಲ್ಕರ್​ ನೇತೃತ್ವದ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಈ ಪ್ರಕರಣದ ವಿಚಾರಣೆ ಕೆಲ ಸಮಯಬೇಕಾಗುತ್ತದೆ. ನವೆಂಬರ್ 26ಕ್ಕೆ ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿದರು.

Next Story

RELATED STORIES