Top

ಬಾಯಿ ಚಪಲಕ್ಕಾಗಿ ನಿಂದಿಸಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಬಾಯಿ ಚಪಲಕ್ಕಾಗಿ ನಿಂದಿಸಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ
X

ಪದ ಬಳಕೆ ಮಾಡಬೇಕಾದರೆ ಬಾಯಿ ಚಪಲಕ್ಕೋ, ಯಾರಿಗಾದರೂ ಅಗೌರವ ಮಾಡಲು ಮಾತಾಡಲ್ಲ. ಪದಗಳ ಅರ್ಥ ಏನು ಅನ್ನೋ ತಿಳುವಳಿಕೆ ನನಗೆ ಇದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುವ ಮೂಲಕ ಕ್ಷಮೆ ಕೇಳದೇ ಸ್ಪಷ್ಟನೆ ನೀಡಿದರು.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕವಾಗಿ ಏನೋ ಆಗಬಾರದ್ದಾಗಿದೆ ಎಂಬಂತೆ ವ್ಯವಸ್ಥಿತವಾಗಿ ಘಟನೆಗಳಾಗುತ್ತಿವೆ. ನನ್ನನ್ನು ಯಾರೂ ಹಗುರವಾಗಿ ತೆಗೆದುಕೊಳ್ಳುವ ಅವಶ್ಕಕತೆ ಇಲ್ಲ. ನನ್ನ ಜವಾಬ್ದಾರಿ ನನಗೆ ಗೊತ್ತಿದೆ ಎಂದು ಪುನರುಚ್ಚರಿಸಿದರು.

ನಿಮ್ಮ ತೀರ್ಮಾನಕ್ಕೇ ಬಿಡ್ತೀನಿ, ನಾನೇನು ತಪ್ಪು ಮಾಡಿದ್ದೇನೆ? ನಾನು ರೈತ ಮಹಿಳೆ ಬಗ್ಗೆ ವಿಷಾದ ವ್ಯಕ್ತಪಡಿಸುವ ಯಾವ ಪದ ಬಳಕೆ ಮಾಡಿದ್ದೇನೆ? ನಾನು ಆ ಮಹಿಳೆಗೆ ತಾಯಿ ಅನ್ನೋ ಪದ ಬಳಸಿದ್ದೇನೆ. ಇದು ಅಗೌರವವೇ? ಇಷ್ಟು ದಿನ ಎಲ್ಲಿ ಮಲಗಿದ್ದೆ ಅಂತ ಕೇಳಿದ್ದೇನೆ. ನಾಲಾಯಕ್ ಮುಖ್ಯಮಂತ್ರಿ ಅಂತ ಆ ಮಹಿಳೆ ಹೇಳಿದ್ದು ರಾಜ್ಯದ ಜನತೆಗೆ ಅವಮಾನ ಮಾಡಿದ ಹಾಗೆ. ಕುಮಾರಸ್ವಾಮಿಗೆ ಅಲ್ಲ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ರೈತ ಮಹಿಳೆ ವಿಚಾರದಲ್ಲಿ ಬಾಯಿ ತಪ್ಪಿ ಹೇಳಿರುವ ಪದ ಅಲ್ಲ. ಗ್ರಾಮೀಣ ಪ್ರದೇಶದ ಕಡೆ ನಿದ್ದೆ ಮಾಡ್ತಿದ್ರಾ ಅಂತ ಕೇಳ್ತಾರೆ. ಮಹಿಳೆಯರಿಗೆ ಗೌರವ ಕೊಟ್ಟೇ ಕೆಲಸ ಮಾಡಿದ್ದೇನೆ. ಹಿಂದಿನಿಂದ ನಾನು ಯಾರಾದರೂ ಮಹಿಳೆಗೆ ಅವಮಾನ ಮಾಡೋ ರೀತಿ ಕೆಲಸ ಮಾಡಿದ್ದರೆ ಒಂದು ಕ್ಷಣ ಸಿಎಂ ಸ್ಥಾನದಲ್ಲಿ ಇರಲ್ಲ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.

ಶಾಂತಿಯುತ ಪ್ರತಿಭಟನೆಯ ಹಕ್ಕನ್ನು ಹತ್ತಿಕ್ಕುವ ಕೆಲಸ ನಾನು ಮಾಡಲ್ಲ. ಅವರಿಗೆ ಮುಕ್ತ ಸ್ವಾತಂತ್ರ್ಯ ಕೊಟ್ಟಿದ್ದೇನೆ. ಪ್ರತಿಭಟನೆ ಮಾಡಲು ಅನುಮತಿ ಕೊಟ್ಟಿದ್ದೇನೆ. ಬೆಂಗಳೂರಿಗೆ ಬನ್ನಿ ಎಂದು ಆಹ್ವಾನ ಮಾಡಿದ್ದೆ. ಆದರೆ ನನ್ನನ್ನೇ ಅಲ್ಲಿಗೆ ಕರೆದರು. ಅವಶ್ಯಕತೆ ಇದ್ದರೆ ನಾನೇ ಬೆಳಗಾವಿಗೆ ಹೋಗಿ ಮಾತನಾಡುವುದಾಗಿ ಹೇಳಿದ್ದೆ ಎಂದು ಅವರು ವಿವರಿಸಿದರು.

ಸಂಪುಟ ಉಪ ಸಮಿತಿ ಸಭೆಗಳಾಗಿರಲಿಲ್ಲ. ಫೆರಿಪೆರಲ್ ರಿಂಗ್ ರೋಡ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿತ್ತು. ಈ ರೀತಿ ಮಹತ್ವದ ತೀರ್ಮಾನಗಳನ್ನು ಮಾಡುವ ಅನಿವಾರ್ಯತೆ ಇತ್ತು. ಹೀಗಾಗಿ ಬೆಳಗಾವಿಗೆ ಹೋಗಲು ಆಗಲಿಲ್ಲ. ಅದಕ್ಕೆ ಪ್ರತಿಭಟನಾಕಾರರನ್ನು ಬೆಂಗಳೂರಿಗೆ ಕರೆದಿದ್ದೆ. ಬೆಂಗಳೂರಲ್ಲೇ ಅವರಿಗೆ ವಸತಿ, ಊಟದ ವ್ಯವಸ್ಥೆ ಮಾಡಲು ಡಿಸಿಗೂ ಸೂಚಿಸಿದ್ದೇನೆ ಎಂದರು.

Next Story

RELATED STORIES