Top

ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿದ ರೈತರು

ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿದ ರೈತರು
X

ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಭರವಸೆ ಹಿನ್ನೆಲೆಯಲ್ಲಿ ತಮ್ಮ ಹೋರಾಟವನ್ನು ಹಿಂಪಡೆದಿದ್ದ ಕಬ್ಬು ಬೆಳೆಗಾರರು ಸಭೆಯನ್ನು ಬೆಂಗಳೂರಿಗೆ ವರ್ಗಾಯಿಸಿದ್ದನ್ನು ಖಂಡಿಸಿ ಭಾನುವಾರ ಬೆಳಗ್ಗೆ ಕಬ್ಬು ತುಂಬಿದ ಲಾರಿಗಳನ್ನು ಬೆಳಗಾವಿಯ ಸುವರ್ಣ ಸೌಧದೊಳಗೆ ನುಗ್ಗಿಸಿ ಪ್ರತಿಭಟನೆ ನಡೆಸಿದ್ಧಾರೆ.

ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ನಿಗದಿಯಾಗಿದ್ದ ಸಭೆಯನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಸಲು ನಿರ್ಧರಿಸಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಕಬ್ಬು ತುಂಬಿಕೊಂಡು ಸುವರ್ಣ ಸೌಧದ ಒಳಗಡೆಯೇ ಲಾರಿಯನ್ನು ನುಗ್ಗಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ಮಾತಿನ ಚಕಮಕಿ ಏರ್ಪಟ್ಟಿದ್ದು, ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಮಾರು 200 ವಾಹನಗಳ ಮೂಲಕ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಸಿಎಂ ನಾಳೆ ಸುವರ್ಣ ಸೌಧಕ್ಕೆ ಆಗಮಿಸಬೇಕು. ಇಲ್ಲವಾದರೆ ನಮ್ಮ ಹೋರಾಟ ತೀವ್ರವಾಗುತ್ತದೆ ಎಂದು ಈ ಹಿಂದೆಯೇ ಕಬ್ಬು ಬೆಳೆಗಾರರು ಎಚ್ಚರಿಕೆ ನೀಡಿದ್ದರು.

ರೈತರ ದಿಢೀರ್ ಹೋರಾಟದಿಂದ ಕೆಲವೇ ಸಂಖ್ಯೆಯಲ್ಲಿದ್ದ ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿದ್ದ ರೈತರನ್ನ ತಡೆಯಲು ಹರಸಾಹಸ ಪಟ್ಟರು. ಸುವರ್ಣಸೌಧದ ಗೇಟ್ ಬಂದ್ ಮಾಡಿದ ಬಳಿಕವೂ ಶಾಂತರಾದ ರೈತರು ಕಲ್ಲಿನಿಂದ ಗೇಟ್ ಬಾಗಿಲು ಮುರಿಯಲು ಯತ್ನಿಸಿದರು. ಅಲ್ಲದೇ ಗೇಟ್ ಕೀ ಯನ್ನು ಪೊಲೀಸರಿಂದ ಕಿತ್ತುಕೊಳ್ಳುವ ಪ್ರಯತ್ನವೂ ನಡೆಯಿತು.

ಈ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಪೊಲೀಸರು ಕೂಡ ರೈತರನ್ನು ನಿಯಂತ್ರಣ ಮಾಡಲು ವಿಫಲರಾದರು. ಸುವರ್ಣ ಸೌಧದ ಗೇಟ್ ಮುಂಭಾಗದಲ್ಲೂ ಲಾರಿಗಳನ್ನು ನಿಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು, ವಾಹನದಿಂದ ಕಬ್ಬನ್ನು ರಸ್ತೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಕಬ್ಬು ಬೆಳೆಗಾರರ ಜೊತೆ ಬೆಳಗಾವಿಯಲ್ಲಿ ಸೋಮವಾರ ಸಿಎಂ ಸಭೆ ನಿಗದಿಯಾಗಿತ್ತು. ಆದರೆ ಶನಿವಾರ ಈ ಸಭೆಯನ್ನು ರದ್ದುಗೊಳಿಸಲಾಗಿತ್ತು. ಅಲ್ಲದೇ ಮಂಗಳವಾರ ರಾಜ್ಯದ ಎಲ್ಲ ಕಬ್ಬು ಬೆಳೆಗಾರರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ತೀರ್ಮಾನ ಮಾಡಲಾಗಿತ್ತು. ಈ ಸಭೆಯಲ್ಲಿ ಬೆಳಗಾವಿ, ಬೀದರ್, ಬಾಗಲಕೋಟೆ, ಬಿಜಾಪುರ ಜಿಲ್ಲೆ ಕಬ್ಬು ಬೆಳೆಗಾರರು ಭಾಗವಹಿಸಲಿದ್ದಾರೆ.

Next Story

RELATED STORIES