Top

ವೈರಲ್ ಆಗಿದ್ದ ಚಿತ್ರದಲ್ಲಿನ `ಅನಂತ್ ಕುಮಾರ್' ಯಾರು ಗೊತ್ತಾ?

ವೈರಲ್ ಆಗಿದ್ದ ಚಿತ್ರದಲ್ಲಿನ `ಅನಂತ್ ಕುಮಾರ್ ಯಾರು ಗೊತ್ತಾ?
X

ಇತ್ತೀಚಿಗೆ ಕೇಂದ್ರ ಸಚಿವ ಅನಂತ ಕುಮಾರ್ ನಿಧನರಾದಾಗ ವೈರಲ್ ಆಗಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಎತ್ತಿಕೊಂಡು ಹೋಗುತ್ತಿರುವ ದೃಶ್ಯದಲ್ಲಿನ ವ್ಯಕ್ತಿಯ ಅನಂತ್ ಕುಮಾರ್ ಎಂದೇ ಎಲ್ಲರೂ ತಿಳಿದಿದ್ದರು. ಆದರೆ ಇದೀಗ ಆ ವ್ಯಕ್ತಿ ಅನಂತ್ ಕುಮಾರ್ ಅಲ್ಲ, ಅನಂತ್ ಕುಮಾರ್ ಅವರನ್ನೇ ಹೋಲುವ ಮತ್ತೊಬ್ಬ ವ್ಯಕ್ತಿ ಎಂಬುದು ಪತ್ತೆಯಾಗಿದೆ. ಆ ವ್ಯಕ್ತಿ ಯಾರು? ಅವರ ಹಿನ್ನೆಲೆ ಇಲ್ಲಿದೆ.

ಹಾಗೆ ನೋಡಿದರೆ ಅನಂತ್ ಅವರೊಂದಿಗೆ ಒಡನಾಟ ಹೊಂದಿದ್ದ ಆ ವ್ಯಕ್ತಿಯೂ ಇವತ್ತು ರಾಜಕೀಯ ಪಡಸಾಲೆಯಲ್ಲಿ ಸಾಕಷ್ಟು ಹೆಸರು ಮಾಡಿರಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು ಅನ್ನಿಸುತ್ತೆ. ಇವತ್ತು ಅವರ ಪರಿಸ್ಥಿತಿ ಹೇಗಿದೆ ಅನ್ನೋದನ್ನ ನಾವು ತೋರಿಸ್ತೀವಿ ನೋಡಿ.

ಈ ಫೋಟೋ ಗಮನವಿಟ್ಟು ನೋಡಿ. ಇದರಲ್ಲಿ ಕೇಂದ್ರ ಸಚಿವ ಅನಂತ ಕುಮಾರ್ ಸ್ಪಷ್ಟವಾಗಿ ಕಾಣುತ್ತಾರೆ. ಅವರು ವ್ಯಕ್ತಿಯೋರ್ವನನ್ನು ಎತ್ತಿಕೊಂಡು ಅಂಬ್ಯುಲೆನ್ಸ್ ಗೆ ಹಾಕಲು ಕರೆದೊಯ್ಯುತ್ತಿರೋ ದೃಶ್ಯ ಸ್ಪಷ್ಟವಾಗಿ ಕಾಣುತ್ತೆ. ಮೂವರು ಪೊಲೀಸರೊಂದಿಗೆ ಅನಂತ್ ಕುಮಾರ್ ಕೂಡಾ ವ್ಯಕ್ತಿಯನ್ನು ಎತ್ತಿಕೊಂಡು ನಡೆಯುತ್ತಿದ್ದಾರೆ. ಅನಂತ ಕುಮಾರ್ ನಿಧನರಾದಾಗ ಈ ಫೋಟೋ ಸಾಕಷ್ಟು ವೈರಲ್ ಆಗಿತ್ತು.

ಅನಂತ್ ಕುಮಾರ್ ಅವರ ಬಗ್ಗೆಯಷ್ಟೇ ಚರ್ಚೆಯಾಯಿತೇ ವಿನಃ ಗಾಯಗೊಂಡ ವ್ಯಕ್ತಿ ಯಾರು ಅನ್ನೋದರ ಬಗ್ಗೆ ಹೆಚ್ಚು ಚರ್ಚೆ ಆಗಲಿಲ್ಲ. ಆದರೆ ಇದೀಗ ಆ ವ್ಯಕ್ತಿಯ ಬಗ್ಗೆಯೂ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಇವತ್ತು ಆ ವ್ಯಕ್ತಿ ಅನುಭವಿಸುತ್ತಿರೋ ನೋವು. ಹೌದು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣದ ವೇಳೆ ನಡೆದ ಲಾಠಿ ಚಾರ್ಚ್ ಸಂದರ್ಭದಲ್ಲಿ ಗಾಯಗೊಂಡಿದ್ದ ಗುರುನಾಥ ಕುಲಕರ್ಣಿ ಅವರೇ ಆ ಫೋಟೋದಲ್ಲಿದ್ದ ವ್ಯಕ್ತಿ.

ಇವತ್ತು ಅವರ ಸ್ಥಿತಿ ಹೇಗಿದೆ ನೋಡಿ. 67 ವರ್ಷದ ಗುರುನಾಥ ಕುಲಕರ್ಣಿ ಇವತ್ತು ಧಾರವಾಡ ನಗರದ ಸಂಗೊಳ್ಳಿ ರಾಯಣ್ಣ ಬಡಾವಣೆಯ ಚಿಕ್ಕ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನೋ ಬಡತನ. ಹಿರಿಯ ಮಗಳಿಗೆ ಮದುವೆ ಮಾಡಿ ಕೊಡಲಾಗಿದೆ. ಇನ್ನು ಎರಡನೇ ಮಗಳು ಆರ್ಕೆಸ್ಟ್ರಾಗಳಲ್ಲಿ ಹಾಡು ಹಾಡುತ್ತಾ ಮನೆಯವರನ್ನು ಸಾಕುತ್ತಿದ್ದಾಳೆ. ಅವತ್ತು ಬಿಜೆಪಿಗಾಗಿ ಅಷ್ಟೊಂದು ಹೋರಾಡಿದ್ದ ಗುರುನಾಥ ಕುಲಕರ್ಣಿ ಅವರನ್ನು ಇವತ್ತು ಯಾರೂ ಕೇಳೋರೇ ಇಲ್ಲ.

ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ಸೇರಿದಂತೆ ಬಿಜೆಪಿಯ ಅನೇಕ ಹೋರಾಟಗಳಲ್ಲಿ ಭಾಗವಹಿಸಿ, ಅನೇಕ ಬಾರಿ ಜೈಲು ಸೇರಿದ್ದ ಗುರುನಾಥ ಕುಲಕರ್ಣಿ ಇವತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಬೇಕಿತ್ತು. ಆದರೆ ಯಾವಾಗ ಹೋರಾಟದ ವೇಳೆ ಲಾಠಿ ಏಟು ಬಿದ್ದವೋ ಆಗ ಆಸ್ಪತ್ರೆಗಳಲ್ಲಿಯೇ ಸಾಕಷ್ಟು ಕಾಲ ಕಳೆಯುವಂತಾಯಿತು.

ಅಂದು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸೋ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನಂತ ಕುಮಾರ ಅವರು ಕೈಯಲ್ಲಿ ಧ್ವಜ ಹಿಡಿದು ಮುನ್ನುಗ್ಗುವಾಗ ಪೊಲೀಸರು ತಡೆದರು. ಅವರು ತಮ್ಮಲ್ಲಿದ್ದ ಧ್ವಜವನ್ನು ಗುರುನಾಥ ಕುಲಕರ್ಣಿ ಅವರ ಕೈಗೆ ನೀಡುತ್ತಿದ್ದಂತೆಯೇ ಪೊಲೀಸರು ಲಾಠಿ ಚಾರ್ಜ್ ಶುರು ಮಾಡಿದರು. ತೀವ್ರವಾಗಿ ಗಾಯಗೊಂಡಿದ್ದ ಗುರುನಾಥ ಅವರನ್ನು ಪೊಲೀಸರೊಂದಿಗೆ ಅನಂಕ ಕುಮಾರ್ ಅವರೂ ಸೇರಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿದ್ದರು.

ಬಳಿಕ ಪಕ್ಷದ ಮುಖಂಡರಾರೂ ಇತ್ತ ಸುಳಿಯಲೇ ಇಲ್ಲ. ಜೈಲಿಗೆ ಬಿದ್ದವರನ್ನಾಗಲೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋರನ್ನಾಗಲೀ ಯಾವ ನಾಯಕರೂ ಭೇಟಿಯಾಗಲು ಬರಲೇ ಇಲ್ಲ. ಹೇಗೋ ಚಿಕಿತ್ಸೆ ಪಡೆದು ಮನೆಗೆ ಬಂದ ಗುರುನಾಥ ಕುಲಕರ್ಣಿ ಅವರಿಗೆ ಆರೋಗ್ಯ ಸುಧಾರಿಸಿಕೊಳ್ಳುವಲ್ಲಿ ವರ್ಷಗಳೇ ಹಿಡಿದವು. ಬಳಿಕ ಈದ್ಗಾ ಮೈದಾನದಲ್ಲಿ ಧ್ವಜಾರೋಹಣದ ವೇಳೆಯಲ್ಲಿ ಬಾಧಿತರಿಗೆ ಸರಕಾರ 37 ಲಕ್ಷ ರೂಪಾಯಿ ಬಿಡುಗಡೆ ಮಾಡಿತ್ತು. ಆಗ ಗುರುನಾಥ ಅವರು ಸಹಾಯ ಧನಕ್ಕಾಗಿ ಸಲ್ಲಿಸಿದ್ದು ಇದೇ ಚಿತ್ರವನ್ನು.

ವಿಚಿತ್ರವೆಂದರೆ ಗುರುನಾಥ ಅವರ ಹೆಸರು ಮಾತ್ರ ಬಾಧಿತರ ಪಟ್ಟಿಯಿಂದ ಹಾರಿ ಹೋಗಿತ್ತು. ಆ ಬಳಿಕ ಅನೇಕ ಜನಪ್ರತಿನಿಧಿಗಳು, ಪಕ್ಷದ ಮುಖಂಡರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲೇ ಇಲ್ಲ. ಹಳೆಯ ಏಟುಗಳು ಇದೀಗ ಕಾಡಲಾರಂಭಿಸಿದ್ದು, ನಡೆಯಲು ಕೂಡ ಅವರಿಗೆ ಸಾಧ್ಯವಾಗುತ್ತಿಲ್ಲ. ಇತ್ತೀಚಿಗೆ ನಡೆಯಲು ಹೋಗಿ ಬಿದ್ದಿದ್ದರಿಂದ ಎರಡೂ ಕೈಗಳು ಮುರಿದು ಹೋಗಿದ್ದು, ಮನೆಯಲ್ಲಿಯೇ ಚಿಕಿತ್ಸೆ ಮುಂದುವರೆದಿದೆ. ಇನ್ನು ಅಯೋಧ್ಯಾ ಹೋರಾಟದಲ್ಲಿ ನಡೆದ ಲಾಠಿ ಚಾರ್ಜ್ ವೇಳೆ ಅವರ ಕಿವಿಗೆ ಏಟು ಬಿದ್ದು, ಒಂದು ಕಿವಿ ಶ್ರವಣ ಶಕ್ತಿಯನ್ನೇ ಕಳೆದುಕೊಂಡಿತು. ಹೀಗೆ ಕಳೆದ ಹಲವಾರು ವರ್ಷಗಳಿಂದಲೂ ಮನೆಯಲ್ಲಿಯೇ ಕಾಲ ಕಳೆಯುತ್ತಿರೋ ಗುರುನಾಥ ಕುಟುಂಬಕ್ಕೆ ಇವರ ಹೋರಾಟದಿಂದ ಸಿಕ್ಕಿದ್ದು ಬರೀ ನೋವು ಮಾತ್ರ.

ಮೂರು ಮಹತ್ವದ ಹೋರಾಟಗಳಲ್ಲಿ ಪಾಲ್ಗೊಂಡಿದ್ದರಿಂದ ಗುರುನಾಥ್ ಅವರಿಗೆ ಸಾಕಷ್ಟು ಹೆಸರು ಬಂದಿತ್ತು. ಆಗಲೇ ಅವಕಾಶ ಸಿಕ್ಕಿದ್ದಿದ್ದರೆ ಇವತ್ತು ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುತ್ತಿದ್ದರು. ಆದರೆ ಹೋರಾಟದ ವೇಳೆ ಗಾಯಗೊಂಡಿದ್ದೊಂದೇ ಆಯಿತೇ ವಿನಾ ಯಾವುದೇ ಹುದ್ದೆ ಅವರಿಗೆ ಸಿಗಲಿಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿಯೂ ಅವಕಾಶ ಸಿಗಲಿಲ್ಲ.

ಇತ್ತ ಬಿಜೆಪಿಯಲ್ಲಿಯೂ ಅವಕಾಶ ಸಿಗಲಿಲ್ಲ. ಹೀಗಾಗಿ ಇವತ್ತು ಹಳೆ ನೋವಿನಿಂದಲೇ ಜೀವನ ನಡೆಸುವಂತಾಗಿದೆ. ತಮಗೆ ಬೇಕಾದಾಗ ಉತ್ಸಾಹಿ ಕಾರ್ಯಕರ್ತರನ್ನು ಬಳಸಿಕೊಂಡು, ಆಮೇಲೆ ಇತ್ತ ತಿರುಗಿಯೂ ನೋಡದ ರಾಜಕಾರಣ ಅಂದ್ರೆ ಏನು ಅನ್ನೋದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. 'ಹರಾ ಹರಾ ಅನ್ನೋರು ಹಜಾರ್ ಮಂದಿ, ಆದರೆ ಹಾರೋವನು ಒಬ್ಬವನೇ' ಅನ್ನೋ ಮಾತಿಗೆ ಗುರುನಾಥ ಪ್ರಕರಣ ಕನ್ನಡಿ ಹಿಡಿದಂತಿದೆ.

ದುರ್ಗೇಶ ನಾಯಿಕ ಟಿವಿ೫ ಧಾರವಾಡ

Next Story

RELATED STORIES