Top

ಹಿಂದೂ ನಾಯಕಿ ಬಂಧನ: ಕೇರಳ ಬಂದ್​ಗೆ ಹಿಂದೂ ಸಂಘಟನೆಗಳ ಕರೆ

ಹಿಂದೂ ನಾಯಕಿ ಬಂಧನ: ಕೇರಳ ಬಂದ್​ಗೆ ಹಿಂದೂ ಸಂಘಟನೆಗಳ ಕರೆ
X

ಇರುಮುಡಿ ಹೊತ್ತು ಶಬರಿಮಲೆಯತ್ತ ಸಾಗುತ್ತಿದ್ದ ಹಿಂದೂ ಐಕ್ಯ ವೇದಿ ರಾಜ್ಯಾಧ್ಯಕ್ಷೆ ಕೆಪಿ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ ಹಿನ್ನೆಲೆಯಲ್ಲಿ ಬಲ ಪಂಥೀಯ ಸಂಘಟನೆಗಳು ಕೇರಳ ಬಂದ್​ಗೆ ಕರೆ ನೀಡಿವೆ.

ಹಿಂದೂ ಐಕ್ಯವೇದಿಯ ರಾಜ್ಯಾಧ್ಯಕ್ಷೆ ಕೆಪಿ ಶಶಿಕಲಾ ಅವರನ್ನು ಬಂಧಿಸಿರುವ ಕೇರಳ ಪೊಲೀಸರ ನಡೆಯನ್ನು ಖಂಡಿಸಿ ಶಬರಿಮಲೆ ಕ್ರಿಯಾ ಸಮಿತಿ ಖಂಡಿಸಿದ್ದು, ರಾಜ್ಯಾದ್ಯಂತ ಬಂದ್​ಗೆ ಕರೆ ನೀಡಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೂ ತಮ್ಮ ಪ್ರತಿಭಟನೆಗೆ ಬೆಂಬಲ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಬಂದ್ ಹಿನ್ನೆಲೆಯಲ್ಲಿ ಕೇರಳದಲ್ಲಿ ಬಸ್ ಸಂಚಾರ ಸಂಪೂರ್ಣ ಮೊಟಕುಗೊಂಡಿದ್ದು, ರಾಜ್ಯ ಸಾರಿಗೆ ಸಂಸ್ಥೆ ಬಸ್ ಸೇರಿದಂತೆ ಯಾವುದೇ ಬಸ್ಸುಗಳು ರಸ್ತೆಗಿಳಿದಿಲ್ಲ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಸನ್ನಿಧಾನಂ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಪೊಲೀಸರು ನಿಷೇಧಾಜ್ಞೆ ವಿಧಿಸಿದ್ದರು. ಇದನ್ನು ಉಲ್ಲಂಘಿಸಿ ಸನ್ನಿಧಾನಂಗೆ ಆಗಮಿಸಿದ ಹಿನ್ನಲೆಯಲ್ಲಿ ಶಶಿಕಲಾ ಅವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮುಂಜಾನೆ ಎರಡು ಗಂಟೆ ಸುಮಾರಿನಲ್ಲಿ ಮರಕ್ಕೊಟ್ಟಂ ತಲುಪಿದ್ದ ಶಶಿಕಲಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಮುಂಜಾಗ್ರತಾ ಕ್ರಮವಾಗಿ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ವಿಎಚ್‌ಪಿ ರಾಜ್ಯ ಘಟಕದ ಅಧ್ಯಕ್ಷ ಎಸ್‌ ಜೆ ಆರ್‌ ಕುಮಾರ್‌ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ಶನಿವಾರ ನಸುಕಿನ 2.30ರ ವೇಳೆಗೆ ಶಬರಿಮಲೆ ಸಮೀಪದ ಮರಕ್ಕೂಟಂ ಎಂಬಲ್ಲಿ ಪೊಲೀಸರು ಹಿಂದೂ ಐಕ್ಯವೇದಿ ರಾಜ್ಯ ಘಟಕದ ಅಧ್ಯಕ್ಷೆ ಕೆ ಪಿ ಶಶಿಕಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದರು.

ಶಶಿಕಲಾ ಅವರು ಇರುಮುಡಿಕಟ್ಟನ್ನು ಶಬರಿಮಲೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಒಯ್ಯುತ್ತಿದ್ದ ವೇಳೆ ಪೊಲೀಸರು ಅವರನ್ನು ಬಂಧಿಸಿದರು. ಅವರ ಜತೆಗೆ ಇನ್ನೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕೇರಳ ಸರಕಾರ ಶಬರಿಮಲೆ ದೇವಸ್ಥಾನವನ್ನು ನಾಶ ಮಾಡಲು ಯತ್ನಿಸುತ್ತಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ಅವರು ನುಡಿದರು.

ಶನಿವಾರ ಬೆಳಗ್ಗಿನಿಂದ ಸಂಜೆಯ ತನಕ ನಡೆಯುವ ಮುಷ್ಕರದಿಂದ ಆವಶ್ಯಕ ಸೇವೆಗಳ ಮತ್ತು ಅಯ್ಯಪ್ಪ ಭಕ್ತರ ವಾಹನಗಳ ಸಂಚಾರಕ್ಕೆ ಯಾವುದೇ ಬಾಧೆ ಇರುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

Next Story

RELATED STORIES