ಬಿಜೆಪಿ ಅಂದರೆ ಯೂಟರ್ನ್ ಪಕ್ಷ: ಜಮೀರ್ ಅಹಮ್ಮದ್ ಟಾಂಗ್

ವಿಚಾರ ಚೆನ್ನಾಗಿದ್ದರೆ ಜೊತೆಗಿರುತ್ತಾರೆ. ಹೆಚ್ಚು ಕಡಿಮೆ ಆದರೆ ಬಿಟ್ಟುಬಿಡುತ್ತಾರೆ. ಕೆಟ್ಟ ಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಬಿಜೆಪಿಗೆ ಮಾಮೂಲು. ಹಾಗಾಗಿ ಬಿಜೆಪಿ ಅಂದರೆ ಯೂ ಟರ್ನ್ ಪಕ್ಷ ಎನ್ನುತ್ತಾರೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ವಿಶ್ಲೇಷಿಸಿದ್ದಾರೆ.
ಉಡುಪಿಯಲ್ಲಿ ಮಧ್ಯಮಗಳೊಂದಿಗೆ ಶನಿವಾರ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಬಿಜೆಪಿಯಲ್ಲೇ ಇದ್ದಾರೆ ಎಂಬುದಕ್ಕೆ ಪಕ್ಷದ ಅಧ್ಯಕ್ಷರನ್ನು ಭೇಟಿ ಮಾಡಿ ಮಾತನಾಡಿರುವುದೇ ಸಾಕ್ಷಿ ಎಂದರು.
ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರುತ್ತಾರೆ. ತಿಪ್ಪರಲಾಗ ಹಾಕಿದರೂ ಏನೂ ಮಾಡೋಕಾಗಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತರೇ ನನ್ನ ಬಳಿ ಹೇಳುತ್ತಾರೆ, ಮೂರ್ನಾಲ್ಕು ತಿಂಗಳಿಂದ ಯಡಿಯೂರಪ್ಪ ನಿದ್ದೇನೆ ಮಾಡದೇ ಮುಖ್ಯಮಂತ್ರಿ ಆದೆ ಅಂತ ಕನಸು ಕಾಣುತ್ತಿದ್ದಾರೆ ಅಂತ. ಎಲ್ಲರೂ ರಾತ್ರಿ ಕನಸು ಕಂಡರೆ ಯಡಿಯೂರಪ್ಪ ಹಗಲುಗನಸು ಕಾಣುತ್ತಾರೆ ಎಂದು ಜಮೀರ್ ವ್ಯಂಗ್ಯವಾಡಿದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ರಾಮಮಂದಿರ ಜ್ಞಾಪಕಕ್ಕೆ ಬಂದಿಲ್ಲ. ಲೋಕಸಭಾ ಚುನಾವಣೆ ಬಂದರೆ ರಾಮಮಂದಿರ ನೆನಪಾಗುತ್ತೆ. ಮಂದಿರ ಕಟ್ಟೋಕೆ ಮುಸಲ್ಮಾನರ ವಿರೋಧ ಇಲ್ಲ. ನಮಗೆ ಮಂದಿರವೂ ಆಗಬೇಕು. ಮಸೀದಿಯೂ ಆಗಬೇಕು. ಸರ್ವಧರ್ಮೀಯರೂ ಸಹೋದರರಂತೆ ಬಾಳುವ ಇನ್ನೊಂದು ದೇಶ ನೋಡಿಲ್ಲ ಎಂದು ಜಮೀರ್ ಹೇಳಿದರು.