`ನಾನು ಪ್ರೆಷರ್ ಕುಕ್ಕರ್ ಇದ್ದಂತೆ, ಇನ್ನಷ್ಟು ಹೆಸರು ಬಹಿರಂಗ: ಶ್ರುತಿ ಹರಿಹರನ್

ನಾನು ಪ್ರೆಷರ್ ಕುಕ್ಕರ್ ಇದ್ದಂತೆ. ಈಗಷ್ಟೇ ಬಿಸಿ ಶುರುವಾಗಿದೆ. ಜಾಸ್ತಿ ಆದಾಗ ಇನ್ನಷ್ಟು ಹೆಸರು ಹೊರಗೆ ಬರುತ್ತೆ ಎಂದು ನಟಿ ಶ್ರುತಿ ಹರಿಹರನ್ ಹೊಸ ಬಾಂಬ್ ಸಿಡಿಸಿದ್ದಾರೆ.
ಬುಧವಾರ ಮಹಿಳಾ ಆಯೋಗದ ಮುಂದೆ ಹಾಜರಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರೆಷರ್ ಕುಕ್ಕರ್ ಇದ್ದಂತೆ. ಪ್ರೆಷರ್ ಕುಕ್ಕರ್ ಬಿಸಿ ಆದ ನಂತರ ವಿಶಿಲ್ ಬೀಳುತ್ತೆ. ಇನ್ನಷ್ಟು ಬಿಸಿ ಆದಾಗ ಬ್ಲಾಸ್ಟ್ ಆಗುತ್ತೆ. ಅದೇ ರೀತಿ ಈಗಷ್ಟೇ ಒಂದು ಹೆಸರು ಹೊರಬಂದಿದೆ. ಇನ್ನಷ್ಟು ಹೆಸರುಗಳು ಹೊರ ಬರಲಿವೆ ಎಂದರು.
ಮೀಟೂ ಅಭಿಯಾನ ಎಂಬುದು ಸಾಮಾಜಿಕ ಜಾಲತಾಣದಲ್ಲಿ ನೋವು ಹಂಚಿಕೊಳ್ಳಲು ಇರುವ ವೇದಿಕೆ. ಈ ಹಿನ್ನೆಲೆಯಲ್ಲಿ ನಾನು ನೋವು ಹಂಚಿಕೊಂಡಿದ್ದೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದ್ದು, ನ್ಯಾಯ ಸಿಗುವ ವಿಶ್ವಾಸವಿದೆ ಎಂದು ಶ್ರುತಿ ಹರಿಹರನ್ ಹೇಳಿದರು.
ನನ್ನ ವಿರುದ್ಧ ಅರ್ಜುನ್ ಸರ್ಜಾ ಸಾಕ್ಷ್ಯಗಳಿವೆ ಎಂದು ಹೇಳಿರಬಹುದು. ನನ್ನ ಬಳಿಯೂ ಸಾಕಷ್ಟು ಸಾಕ್ಷ್ಯಗಳಿವೆ. ಅವುಗಳನ್ನು ನ್ಯಾಯಾಲಯದ ಮುಂದೆ ಕೊಟ್ಟಿದ್ದೇನೆ. ಮಹಿಳಾ ಆಯೋಗದ ಮುಂದೆ ಅರ್ಜುನ್ ಸರ್ಜಾ ಕುಟುಂಬ ಹಾಗೂ ಅಭಿಮಾನಿಗಳಿಂದ ಬೆದರಿಕೆ ಕರೆಗಳು ಬರುತ್ತಿರುವ ಬಗ್ಗೆ ಹೇಳಿದ್ದೇನೆ ಎಂದು ಶ್ರುತಿ ವಿವರಿಸಿದರು.
ನಾನು ಸಕ್ಕರೆ ಇದ್ದಂತೆ.. ಅದಕ್ಕೆ ನನ್ನ ಮುತ್ತಿಕೊಳ್ತಾರೆ... ಎಂದು ಮಾಧ್ಯಮಗಳನ್ನು ನಿಂದಿಸಿದ ಬೆನ್ನಲ್ಲೇ ಶ್ರುತಿ ಹರಿಹರನ್, ನನಗೆ ಮಾಧ್ಯಮಗಳ ಮೇಲೆ ಗೌರವವಿದೆ ಎಂದು ನುಣುಚಿಕೊಂಡರು.