ಬಿಜೆಪಿ ಅಷ್ಟೊಂದು ಅಪಾಯಕಾರಿನಾ? ರಜನಿಕಾಂತ್ ಪ್ರಶ್ನೆ

ಬಿಜೆಪಿ ವಿರುದ್ಧ ದೇಶಾದ್ಯಂತ ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ರಾಜಕಾರಣಕ್ಕೆ ಕಾಲಿಡುತ್ತಿರುವ ನಟ ರಜನಿಕಾಂತ್, ಬಿಜೆಪಿ ಅಷ್ಟೊಂದು ಅಪಾಯಕಾರಿನಾ? ಎಂದು ಮರು ಪ್ರಶ್ನೆ ಹಾಕಿದ್ದಾರೆ.
ಬಿಜೆಪಿಯನ್ನು ಆಡಳಿತದಿಂದ ದೂರ ಇಡುವುದಕ್ಕಾಗಿ ದೇಶಾದಂತ್ಯ ಪ್ರಾದೇಶಿಕ ಪಕ್ಷಗಳು ಒಂದಾಗುತ್ತಿವೆ. ನೀವು ಬಿಜೆಪಿ ಸೇರುತ್ತಿರಾ? ಅಥವಾ ಪ್ರತ್ಯೇಕ ಪಕ್ಷ ರಚಿಸಿ ತೃತೀಯ ರಂಗದ ಜೊತೆ ಕೈ ಜೋಡಿಸುತ್ತಿರಾ ಎಂದು ಚೆನ್ನೈನಲ್ಲಿ ಪತ್ರಕರ್ತರು ಪ್ರಶ್ನಿಸಿದರು.
ಬಿಜೆಪಿ ಅಷ್ಟೊಂದು ಅಪಾಯಕಾರಿನಾ ಎಂದು ಮರು ಪ್ರಶ್ನೆ ಹಾಕಿದ ರಜನಿಕಾಂತ್, ಎಲ್ಲರೂ ಒಂದಾಗುತ್ತಿದ್ದಾರೆ ಅಂದರೆ ಬಹುಶಃ ಇರಬಹುದು ಎಂದು ಅವರೇ ಉತ್ತರಿಸಿದರು.
ನಿಮ್ಮ ರಾಜಕೀಯ ನಿಲುವಿನ ಹಿಂದೆ ಬಿಜೆಪಿ ಪಕ್ಷ ಇದೆ ಎಂಬ ಮಾತು ಕೇಳಿ ಬರುತ್ತಿದೆ ಎಂಬ ಮತ್ತೊಂದು ಪ್ರಶ್ನೆಗೆ ರಜನಿಕಾಂತ್, ನನ್ನ ಹಿಂದೆ ಯಾವುದೇ ಪಕ್ಷವಿಲ್ಲ. ನನ್ನ ಹಿಂದೆ ದೇವರು ಮತ್ತು ಜನರು ಮಾತ್ರ ಇರುವುದು ಎಂದರು.
ರಜನಿಕಾಂತ್ ರಾಜಕಾರಣಕ್ಕೆ ಪ್ರವೇಶಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ದ ಸ್ನೇಹಿತ ಹಾಗೂ ನಟ ಕಮಲ್ ಹಾಸನ್, ರಜನಿಕಾಂತ್ ಕೇಸರಿ ಬಣ್ಣ ಆಯ್ದುಕೊಳ್ಳಲಾರರು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದರು.