Top

ಸೋಲಿಲ್ಲದ ಸರದಾರನ ನಿಧನಕ್ಕೆ ಗಣ್ಯರ ಕಂಬನಿ

ಸೋಲಿಲ್ಲದ ಸರದಾರನ ನಿಧನಕ್ಕೆ ಗಣ್ಯರ ಕಂಬನಿ
X

ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ ಹಿನ್ನೆಲೆ, ರಾಜಕೀಯ ಗಣ್ಯರೆಲ್ಲ ತೀವ್ರ ಸಂತಾಪ ಸೂಚಿಸಿದ್ದಾರೆ.

ಅನಂತ್ ಕುಮಾರ್ ನಿಧನಕ್ಕೆ ಪ್ರಧಾನಿ ಮೋದಿ ಟ್ವಿಟರ್ ಮೂಲಕ ಸಂತಾಪ ಸೂಚಿಸಿದ್ದು, ಕರ್ನಾಟಕದಲ್ಲಿ ಬಿಜೆಪಿ ಬೆಳವಣಿಗೆಗೆ ಅನಂತ ಕುಮಾರ್ ಕೊಡುಗೆ ಅನನ್ಯ. ಅವರು ಹಲವು ಖಾತೆಗಳನ್ನು ನಿಭಾಯಿಸಿದ್ದ ಅನುಭವಿ ಆಡಳಿತಗಾರ. ಬೆಂಗಳೂರಿನಲ್ಲಿ ಬಿಜೆಪಿ ಬಲ ವರ್ಧನೆಗೆ ಅನಂತ್ ಕುಮಾರ್ ಶ್ರಮಿಸಿದ್ದರು. ಯುವಕರಿದ್ದಾಗಲೇ ನಾಯಕರಾಗಿ ಹೊರಹೊಮ್ಮಿದವರು.ನಾನು ಈಗಾಗಲೇ ಅನಂತ್ ಕುಮಾರ್‌ರವರ ಪತ್ನಿ ತೇಜಸ್ವಿಯವರ ಜೊತೆ ಮಾತಾಡಿ ಸಾಂತ್ವನ ಹೇಳಿದ್ದೇನೆ. ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕೂಡ ಅನಂತ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದು, ರಾಜಕಾರಣ ಮೀರಿದ ಸ್ನೇಹ ನಮ್ಮ ಕುಟುಂಬಗಳ ನಡುವೆ ಇತ್ತು. ಸ್ನೇಹಕ್ಕೆ ಅತ್ಯಂತ ಮಹತ್ವ ನೀಡುತ್ತಿದ್ದ ವ್ಯಕ್ತಿ ಅವರು. ಇಂದು ಓರ್ವ ಆತ್ಮೀಯ ಗೆಳೆಯನನ್ನು ಕಳೆದುಕೊಂಡಂತಾಗಿದೆ ಎಂದು ಹೆಚ್ಡಿಕೆ ಅವರು ಕಂಬನಿ ಮಿಡಿದಿದ್ದಾರೆ. ಅಲ್ಲದೇ ಮೌಲ್ಯಾಧಾರಿತ ರಾಜಕಾರಣದಲ್ಲಿ ನಂಬಿಕೆ ಇಟ್ಟ ವ್ಯಕ್ತಿ ಅನಂತ್ ಕುಮಾರ್. ಕೇಂದ್ರ ಸಚಿವರಾಗಿ ದೇಶಕ್ಕೆ ನೀಡಿದ ಕೊಡುಗೆ ಆನನ್ಯವಾದದ್ದು. ತಮ್ಮ ಜನಪರ ಕಾಳಜಿ, ಕಾರ್ಯಚಟುವಟಿಕೆಗಳಿಂದಾಗಿ ಬೆಂಗಳೂರಿಗರ ಕಣ್ಮಣಿ ಆಗಿದ್ದರು . ಭಗವಂತನು ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲಿ. ಕುಟುಂಬ ವರ್ಗ ಹಾಗೂ ಅಪಾರ ಅಭಿಮಾನಿಗಳಿಗೆ ದುಃಖ ಸಹಿಸುವ ಶಕ್ತಿಯನ್ನ ನೀಡಲಿ ಎಂದು ಹೇಳಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ಅನಂತ್ ಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅನಂತ ಕುಮಾರ್‌ರವರು ನಾನು ಪ್ರಧಾನಿ ಆದ ಸಂದರ್ಭದಲ್ಲಿ , ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸದಸ್ಯರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಸಮಾಜಕ್ಕೆ ಉತ್ತಮ ಸೇವೆಸಲ್ಲಿಸುತ್ತಿದ್ದರು. ನಾವೆಲ್ಲ ಒಬ್ಬ ಸೃಜನಶೀಲ ವ್ಯಕ್ತಿಯನ್ನು ಕಳೆದುಕೊಂಡಿದ್ದೀವಿ ಎಂದು ಬೇಸರ ವ್ಯಕ್ತಪಡಿಸಿದರು. ನನ್ನ ಮತ್ತು ಅವರ ಸಂಬಂಧ ಸುಮಾರು 3 ದಶಕಗಳದ್ದು. ನಾನು ಈ ದಿನ ನನ್ನ ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೀನಿ. ವಯಕ್ತಿಕವಾಗಿ ಮನಸ್ಸಿಗೆ ಬಹಳ ನೋವುಂಟಾಗಿದೆ. ಅವರ ಅಗಲಿಕೆಯಿಂದ ದೇಶಕ್ಕೆ ತುಂಬಲಾಗದ ನಷ್ಟವುಂಟಾಗಿದೆ. ಆ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ . ಕುಟುಂಬಕ್ಕೆ ಮತ್ತು ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೇಂದ್ರ ಸಚಿವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸಚಿವ ಅನಂತ್‌ಕುಮಾರ್ ಸಾವಿನ ಸುದ್ದಿ ಕೇಳಿ‌ ಆಘಾತಗೊಂಡಿದ್ದೇನೆ. ಕರ್ನಾಟಕ ಮತ್ತು ದೆಹಲಿ ನಡುವಿನ ಕೊಂಡಿಯೊಂದು‌ ಕಳಚಿಬಿದ್ದಿದೆ. ರಾಜಕೀಯವಾಗಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಅವಕಾಶ ಮತ್ತು ವಯಸ್ಸಿತ್ತು. ಅವರ ಕುಟುಂಬ ವರ್ಗದ ದು:ಖದಲ್ಲಿ‌ ನಾನೂ ಭಾಗಿಯಾಗಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅನಂತಕುಮಾರ್ ನಿಧನಕ್ಕೆ ಮಾಧ್ಯಮ ಪ್ರಕಟಣೆ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. ಹಿರಿಯ ನೇತಾರ ,ನಮ್ಮ ಜೊತೆಗಾರ. ಅನಂತಕುಮಾರ್ ಅವರ ನಿಧನವು ಪಕ್ಷಕ್ಕೆ ಹಾಗೂ ವೈಯಕ್ತಿಕವಾಗಿ ನನಗೆ ಆದ ಭಾರೀ ನಷ್ಟ. ಅವರನ್ನು ಕಳೆದುಕೊಂಡು ಪಕ್ಷ,ನಾಡು,ದೇಶ ಬಡವಾಗಿದೆ. ಪ್ರತಿನಿತ್ಯ ಪಕ್ಷದ ಸಂಘಟನೆಯನ್ನು ಬೆಳೆಸಲು ನಾವು ಸಮಾಲೋಚನೆ ಮಾಡುತ್ತಿದ್ದುದನ್ನು ಮರೆಯಲಾಗದು. ರಾಜಕೀಯವಾಗಿ ಬಹಳ ಬೇಗ ಉನ್ನತ ಸ್ಥಾನದವರೆಗೂ ಏರಿದ್ದರು. ರಾಜಕೀಯವಾಗಿ ಬಹಳಷ್ಟು ಕ್ಲಿಷ್ಟ ಸಂದರ್ಭಗಳಲ್ಲಿ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಪ್ರಮುಖಪಾತ್ರ ವಹಿಸಿದ್ದರು. ಒಮ್ಮೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೂ ಅವರು ಪಕ್ಷದ ಬೆಳವಣಿಗೆಗೆ ಕಾರಣರಾಗಿದ್ದ ಅನಂತಕುಮಾರ್ ಅವರ ಕೊಡುಗೆಯನ್ನು ಮರೆಯಲಾಗದು. ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತೇನೆ. ಅವರ ಕುಟುಂಬಕ್ಕೆ ದುಃಖ ಭರಿಸಲು ದೇವರು ಶಕ್ತಿ ನೀಡಲಿ ಎಂದು ಹೇಳಿದ್ದಾರೆ.

ಅನಂತ್ ಕುಮಾರ್ ಆಪ್ತ ಆರ್.ಅಶೋಕ್ ಕೂಡ ಅನಂತ್ ಸಾವಿಗೆ ಕಂಬನಿ ಮಿಡಿದಿದ್ದು, ಅನಂತ್ ಕುಮಾರ್ ರವರ ಜೊತೆ 30 ವರ್ಷ ಕೆಲಸ ಮಾಡಿದ್ದೇನೆ. ಒಟ್ಟಿಗೆ ಪಕ್ಷ ಕಟ್ಟಿದ್ದೇವೆ. ಇದು ನಮಗೆ ಎರಡನೇ ಆಘಾತ. ವಿಜಯ್ ಕುಮಾರ್ ಕೂಡಾ ತೀರಿ ಹೋದ್ರು. ಈಗ ಅನಂತ್ ಕುಮಾರ್ ನಿಧನ ಆಘಾತ ಉಂಟು ಮಾಡಿದೆ. ಒಬ್ಬ ನಾಯಕನನ್ನ ಕಳೆದುಕೊಂಡಿದ್ದೇವೆ. ಮೊದಲಿನಂತೆ ಆಗಬೇಕು ಅಂತ ಅನಂತ್ ಕುಮಾರ್ ತುಂಬಾ ಆಸೆ ಇಟ್ಟುಕೊಂಡಿದ್ದರು. ಆದರೆ ವಿಧಿಯಾಟ. ನಮಗೆ ಒಂಟಿತನ ಕಾಣ್ತಿದೆ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಅನಂತ್ ಕುಮಾರ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಸೀತಾರಾಮನ್, ಅನಂತ್ ಕುಮಾರ್‌ರವರು ನಿಧನರಾದ ಸುದ್ದಿ ತಿಳಿದು ಮನಸ್ಸಿಗೆ ತುಂಬಾ ಆಘಾತವಾಗಿದೆ. ಬೆಂಗಳೂರು ಅಂದರೆ ಅನಂತ್ ಕುಮಾರ್ ಅವರ ಹೃದಯವೇ ಆಗಿತ್ತು. ಬೆಂಗಳೂರಿನ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ ಇತ್ತು. ಅವರ ನಿಧನದ ದುಃಖ ಬರಿಸುವ ಶಕ್ತಿಯನ್ನ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಕೂಡ ಅನಂತ್ ಕುಮಾರ್ ನಿಧನಕ್ಕೆ ಟ್ವಿಟರ್‌ ಮೂಲಕ ಸಂತಾಪ ಸೂಚಿಸಿದ್ದಾರೆ. ಮನಸ್ಸು, ಹೃದಯ ತುಂಬಾ ಭಾರವಾಗಿದೆ. ಪ್ರೀತಿಯ ಸಹೋದರ ,ಸ್ನೇಹಿತ ಅನಂತ್ ಕುಮಾರ್ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದಿದ್ದಾರೆ.

ಕೇಂದ್ರ ಸಂಸದೀಯ ವ್ಯವಹಾರ ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ನಿಧನದ ಸುದ್ದಿ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಬೆಂಗಳೂರು ದಕ್ಷಿಣದಿಂದ ಸತತವಾಗಿ ಲೋಕಸಭೆಗೆ ಆಯ್ಕೆಯಾಗುತ್ತಿದ್ದ ಜನಾನುರಾಗಿ ನಾಯಕರಾಗಿದ್ದ ಇವರ ಹಠಾತ್ ನಿಧನದಿಂದ ಉತ್ತಮ ಸಂಸದೀಯ ಪಟುವನ್ನು ಕಳೆದುಕೊಂಡಂತಾಗಿದೆ. ಇವರ ಕುಟುಂಬಕ್ಕೆ ತಾಯಿ ಚಾಮುಂಡೇಶ್ವರಿ ದುಃಖವನ್ನು ಭರಿಸುವ ಶಕ್ತಿ ನೀಡಲಿ‌ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜಿ.ಟಿ.ದೇವೇಗೌಡ ಟ್ವೀಟ್ ಮಾಡಿದ್ದಾರೆ.

ತುಮಕೂರು‌: ಅನಂತ್ ಕುಮಾರ್ ನಿಧನಕ್ಕೆ ಸಿದ್ಧಗಂಗಾ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅನಂತ್ ಕುಮಾರ್ ಅನಂತದಲ್ಲಿ ಲೀನರಾಗಿದ್ದಾರೆ‌‌‌. ಅನಂತ್ ಕುಮಾರ್ ಅಕಾಲಿಕ ಮರಣ ತುಂಬಾ ನೋವು ತಂದಿದೆ. ದೆಹಲಿ ರಾಜಕಾರಣದಲ್ಲಿ ಮಹತ್ವದ ಸ್ಥಾನ ಪಡೆದಿದ್ದರು. ಕರ್ನಾಟಕ ರಾಜಕಾರಣದಲ್ಲಿ ತಮ್ಮದೇ ಆದ ವಿಶಿಷ್ಟ ಚಾಪು ಮೂಡಿಸಿದ್ದರು. ರಾಜಕಾರಣದ ಹೊರತಾಗಿ ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅವರ ಸಾವಿನಿಂದ ಒಂದು‌ ದೊಡ್ಡ ಶಕ್ತಿ ಕಳೆದುಕೊಂಡತಾಗಿದೆ. ಅವರ‌ ಕುಟುಂಬ ವರ್ಗಕ್ಕೆ ನೋವು ಭರಿಸುವ ಶಕ್ತಿ‌ ನೀಡಲಿ. ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದ ಅವರ‌ ಕೊಡುಗೆ ಮರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Next Story

RELATED STORIES