ವನಿತೆಯರ ಟಿ-20 ವಿಶ್ವಕಪ್: ಚೊಚ್ಚಲ ಶತಕ ಸಿಡಿಸಿದ ಹರ್ಮನ್ಪ್ರೀತ್!

ಪುರುಷರ ಬ್ಯಾಟಿಂಗ್ ಅನ್ನು ನಾಚಿಸುವಂತೆ ಬೌಂಡರಿ ಹಾಗೂ ಸಿಕ್ಸರ್ಗಳ ಸುರಿಮಳೆಯೊಂದಿಗೆ ನಾಯಕಿ ಹರ್ಮನ್ಪ್ರೀತ್ ಕೌರ್ ಸಿಡಿಸಿದ ಚೊಚ್ಚಲ ಶತಕದ ಸಹಾಯದಿಂದ ಭಾರತ ತಂಡ 34 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಬಗ್ಗುಬಡಿದು ಟಿ-20 ವಿಶ್ವಕಪ್ನಲ್ಲಿ ಭರ್ಜರಿ ಆರಂಭ ಪಡೆದಿದೆ.
ಶುಕ್ರವಾರ ತಡರಾತ್ರಿ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 194 ರನ್ ಕಲೆ ಹಾಕಿತು. ಬೃಹತ್ ಮೊತ್ತ ಬೆಂಬತ್ತಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 9 ವಿಕೆಟ್ಗೆ 160 ರನ್ ಗಳಿಸಲಷ್ಟೇ ಶಕ್ತವಾಯಿತು.
ನ್ಯೂಜಿಲೆಂಡ್ ಪರ ಸೂಜಿ ಬ್ಯಾಟ್ಸ್ 50 ಎಸೆತಗಳಲ್ಲಿ 8 ಬೌಂಡರಿ ಸೇರಿದ 67 ರನ್ ಕಲೆಹಾಕಿ ಹೋರಾಟ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ಮಾರ್ಟಿನ್ (39) ಹೊರತುಪಡಿಸಿ ಉಳಿದ ಯಾವುದೇ ಬ್ಯಾಟ್ಸ್ಮನ್ ನೆಲೆ ಕಂಡುಕೊಳ್ಳುವ ಮುನ್ನವೇ ನಿರ್ಗಮಿಸಿದರು.
ಭಾರತದ ಪರ ಪೂನಮ್ ಯಾದವ್ ಮತ್ತು ಹೇಮಲತಾ ತಲಾ 3 ವಿಕೆಟ್ ಕಿತ್ತರು. ರಾಧಾ ಯಾದವ್ 2 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ಒಂದು ಹಂತದಲ್ಲಿ 40 ರನ್ ಗೆ 3 ವಿಕೆಟ್ ಕಳೆದುಕೊಂಡು ಸಾಧಾರಣ ಸ್ಥಿತಿಯಲ್ಲಿತ್ತು. ಆದರೆ ನಾಯಕ ಹರ್ಮನ್ ಪ್ರೀತ್ ಕೌರ್ ಕ್ರೀಸ್ಗೆ ಇಳಿಯುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಯಿತು.
ಹರ್ಮನ್ ಪ್ರೀತ್ ಕೌರ್ 51 ಎಸೆತಗಳಲ್ಲಿ 7 ಬೌಂಡರಿ ಹಾಗೂ 8 ಸಿಕ್ಸರ್ ಸೇರಿದಂತೆ 103 ರನ್ ಸಿಡಿಸಿದರು. ಇದು ಕೌರ್ ಅವರ ಮೊದಲ ಟಿ-20 ಶತಕವಾಗಿದೆ. ಹರ್ಮನ್ ಗೆ ಉತ್ತಮ ಬೆಂಬಲ ನೀಡಿದ ಜೆಮಿಹಾ ರೋಡ್ರಿಗಜ್ 45 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 59 ರನ್ ಗಳಿಸಿದರು. ಇವರಿಬ್ಬರು 4ನೇ ವಿಕೆಟ್ಗೆ 134 ರನ್ ಜೊತೆಯಾಟ ನಿಭಾಯಿಸಿ ತಂಡವನ್ನು ಮುನ್ನಡೆಸಿದರು.
- ಸಂಕ್ಷಿಪ್ತ ಸ್ಕೋರ್
- ಭಾರತ 20 ಓವರ್ 5 ವಿಕೆಟ್ 194 (ಹರ್ಮನ್ಪ್ರೀತ್ ಕೌರ್ ಅಜೇಯ 103, ರೋಡ್ರಿಗಜ್ 59, ಹೇಮಲತಾ 15, ತಹುಹು 18/2).
- ನ್ಯೂಜಿಲೆಂಡ್ 20 ಓವರ್ 9 ವಿಕೆಟ್ 160 (ಬ್ಯಾಟ್ಸ್ 67, ಮಾರ್ಟಿನ್ 39, ಪೂನಮ್ 33/3, ಹೇಮಲತಾ 26/3, ರಾಧಾ 31/2).
- ಪಂದ್ಯಶ್ರೇಷ್ಠ: ಹರ್ಮನ್ಪ್ರೀತ್ ಕೌರ್