Top

ನಿಮಿಷ 10, ವಾರ್ತೆ 50- ನವೆಂಬರ್ 11

ನಿಮಿಷ 10, ವಾರ್ತೆ 50- ನವೆಂಬರ್ 11
X

1..ಟಿಪ್ಪು ಜಯಂತಿ ಹಿನ್ನೆಲೆ, ಇಂದು ಕೊಡಗು ಬಂದ್‌ಗೆ ಕರೆ ನೀಡಲಾಗಿದೆ. ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಜಿಲ್ಲೆಯಾದ್ಯಂತ ಇಂದು ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೆ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿಲ್ಲ. ಇನ್ನು ಬಿಜೆಪಿ, ಹಿಂದೂ ಸಂಘಟನೆಯವರು ಟಿಪ್ಪು ಜಯಂತಿಯಂದೇ ಮೃತಪಟ್ಟಿದ್ದ ದೇವಪಂಡ ಕುಟ್ಟಪ್ಪ ಹುತಾತ್ಮ ದಿನಾಚರಣೆ ಆಚರಿಸಿದ್ದು, ಹಲವು ದೇವಾಲಯಗಳಲ್ಲಿ ಪೂಜೆ ಮಾಡಿಸಿದರು.

2..ಮಾಲೂರಿನಲ್ಲಿ ದರೋಡೆಗೆ ಹೊಂಚು ಹಾಕಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಮಾರಕಾಸ್ತ್ರಗಳನ್ನು ಹಿಡಿದು ರಸ್ತೆ ತಡೆದು ದರೋಡೆ ಮಾಡಲು ಹೊಂಚು ಹಾಕ್ತಿದ್ದ ಆರೋಪಿಗಳಾದ, ಮಣಿ ನಾಯಕ್, ಗೋವಿಂದರಾಜು. ಮುರುಗೇಶ್ ಎಂಬುವರನ್ನ ಬಂಧಿಸಲಾಗಿದೆ. ಈ ಗ್ಯಾಂಗ್ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ಸರಣಿ ದರೋಡೆ ಮಾಡುತ್ತಿದ್ದರು. ಆರೋಪಿಗಳಿಂದ ಎರಡು ಬೈಕ್, ಖಾರದಪುಡಿ, ರಾಡ್ ವಶಕ್ಕೆ ಪಡೆಯಲಾಗಿದ್ದು, ಮಾಲೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

3..ಚಿಕ್ಕಮಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. 20ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯವಾಗಿದೆ. ಎಂ ಆರ್ ಪುರ ತಾಲ್ಲೂಕಿನ ಸೌತಿ ಕೆರೆ ಬಳಿ ಈ ದುರಂತ ಸಂಭವಿಸಿದ್ದು, ಮಕ್ಕಳೆಲ್ಲ ಪ್ರವಾಸಕ್ಕೆ ಹೋಗುತ್ತಿದ್ದರೆನ್ನಲಾಗಿದೆ. ಚಾಲಕನ ನಿಯಂತ್ರಣ ತಪ್ಪಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೂರ್ಣಪ್ರಕ್ಞಾ ಶಾಲೆಗೆ ಸೇರಿದ ಬಸ್ ಪಲ್ಟಿಯಾಗಿದೆ. ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ರವಾನಿಸಲಾಗಿದ್ದು, ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4..ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಮರದ ಕೊಂಬೆ ಬಿದ್ದು, ವಹನ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆಯ ಹಾರೋಹಳ್ಳಿ ಬಳಿ ಹೆಚ್.ಡಿ.ಕೋಟೆ ರಸ್ತೆಯಲ್ಲಿ ನಡೆದಿದೆ. ಮೃತನನ್ನು ಫಯಾಜ್ ಪಾಷ (45) ಎನ್ನಲಾಗಿದೆ. ಇನ್ನು ರಸ್ತೆಯ ಉದ್ದಕ್ಕೂ ಇರುವ ಮರಗಳ ಕೊಂಬೆಗಳು ಒಣಗಿದ್ದು, ಈ ಬಗ್ಗೆ ದೂರು ‌ನೀಡಿದರೂ ಅಧಿಕಾರಿಗಳು ಗಮನ ಹರಿಸಿಲ್ಲ. ಈ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ‌ ನಡೆಸಿದ್ದು, ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

5..ಬಾಗಲಕೋಟೆಯಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದು, ಸಿದ್ದರಾಮಯ್ಯ ಒಬ್ಬ ಮತಾಂಧ. ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದ್ರಲ್ಲಿ ಅನುಮಾನವಿಲ್ಲ. ಆದ್ರೆ ಸಿದ್ದರಾಮಯ್ಯರನ್ನು ಟಿಪ್ಪುಗೆ ಹೋಲಿಸಿರೋದು ಎಷ್ಟರಮಟ್ಟಿಗೆ ಸರಿಯಿದೆ ಅನ್ನೋದು ನನಗೆ ಗೊತ್ತಿಲ್ಲ. ಕಣ್ಣೆದುರು ೨೧ ಜನ ಯುವಕರ ಕಗ್ಗೊಲೆಯಾಯ್ತು. ಆಗ ಸಿದ್ದರಾಮಯ್ಯ ಕೊಲೆಗಡುಕರ ವಿರುದ್ಧ ಕ್ರಮಕೈಗೊಂಡಿದ್ರೆ ಸಿದ್ದರಾಮಯ್ಯರನ್ನು ಸರಿಯಾದ ಮುಖ್ಯಮಂತ್ರಿ ಎಂದು ಒಪ್ಪುತ್ತಿದ್ದೆ. ಕೊಲೆಗಡುಕರನ್ನು ಬಿಟ್ಟು ಕೋಮುವಾದಿ ಹತ್ತಿಕ್ಕುತ್ತೇವೆಂದು ಸಪೋರ್ಟ್ ನೀಡಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಒಬ್ಬ ಮತಾಂಧ ಅನ್ನೋದನ್ನು ಒಪ್ಪುತ್ತೇನೆ ಎಂದು ಹೇಳಿದ್ದಾರೆ.

6..ದಾವಣೆಗೆರೆಯ ಹೊರವಲಯದ ಬೇತೂರು ಗ್ರಾಮದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಇಕೋ ಸ್ಪೋರ್ಟ್ಸ್ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ, ಚಾಲಕ ಸಿದ್ದೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾವಣಗೆರೆ ಪೊಲೀಸ್ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

7..ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು, ಅಪರಿಚಿತ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆನೇಕಲ್ ಪಟ್ಟದ ಅನ್ನಪೂರ್ಣೇಶ್ವರಿ ಚಿತ್ರಮಂದಿರ ಬಳಿ ಈ ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೋರ್ವ ಇನ್ನೋರ್ವನಿಗೆ ಕಲ್ಲಿನಿಂದ ಹೊಡೆದು ಸಾಯಿಸಿದ್ದಾನೆ. ಈ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

8..ರಾಯಚೂರಿನಲ್ಲಿ ಡೆಕ್ಟ್ ಓಪೆರಾ ಹಾರುಬೂದಿ ಸಾಗಿಸುವ ಟ್ಯಾಂಕ್ ಕುಸಿತಗೊಂಡಿದೆ. ಆದ್ರೆ ಯಾವುದೇ ಅನಾಹುತ ಸಂಭವಿಸಿಲ್ಲ. ರಾಯಚೂರಿನ ಯರಮರಸ್ ಹತ್ತಿರ ಇರುವ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ , ವಿದ್ಯುತ್ ಉತ್ಪಾದನೆಗೆ ಕಲ್ಲಿದ್ದಲು ಬಳಕೆ ನಂತರ ಹೊರಬರುವ ಹಾರುಬೂದಿ ಸಂಗ್ರಹ ಕುಸಿತಗೊಂಡಿದೆ.ಆದರೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಅನಾಹುತ ತಪ್ಪಿದೆ.

9..ಮಾಜಿ ಸಿಎಂ ಸಿದ್ದರಾಮಯ್ಯಗೆ ಮುಸ್ಲಿಂ ಧರ್ಮ ಗುರುಗಳು ಬೆಳ್ಳಿ ಖಡ್ಗ, ಬೆಳ್ಳಿ ಹಾರ, ಪೇಟ ತೊಡಿಸಿ ಸನ್ಮಾನ ಮಾಡಿದರು. ಸಚಿವ ಜಮೀರ್ ಅಹಮ್ಮದ್ ನೇತೃತ್ವದಲ್ಲಿ ಸನ್ಮಾನ ನಡೆದಿದ್ದು, ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜಕೀಯ ಕಾರಣಗಳಿಗೆ ಬಿಜೆಪಿ‌ ಟಿಪ್ಪು ಜಯಂತಿ ವಿರೋಧಿಸುತ್ತಿದೆ. ಟಿಪ್ಪು ಖಡ್ಗ ಹಿಡಿದು, ಪೇಟ ತೊಟ್ಟಾಗ ಬಿಜೆಪಿ ಮುಖಂಡರು ವಿರೋಧ ಮಾಡಲಿಲ್ಲ.ಟಿಪ್ಪು ಪುಸ್ತಕಕ್ಕೆ ಜಗದೀಶ್ ಶೆಟ್ಟರ್ ಮುನ್ನುಡಿ ಬರೆದಿದ್ದಾರೆ. ಬಿಜೆಪಿ ನಾಯಕರು ಟಿಪ್ಪು ಬಗ್ಗೆ ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

10..ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವ ವಾಹನವನ್ನು ಸಂಚಾರಿ ಪೋಲಿಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗದಲ್ಲಿ ನಡೆದಿದೆ. ಕಾಳಿ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆದು ಸಾಗಿಸುವ ವೇಳೆ ಪೋಲಿಸರ ಕಾರ್ಯಚರಣೆ ನಡೆಸಿ ನಂದನಗದ್ದೆಯಲ್ಲಿ ವಶಕ್ಕೆ ಪಡೆಯಲಾಗಿದೆ.ಎರಡು ಏಸ್ ಗೂಡ್ಸ್ ವಾಹನ ಮತ್ತು ಮರಳನ್ನು ಪೋಲಿಸರ ವಶಕ್ಕೆ ಪಡೆದಿದ್ದು ಕಾರವಾರದ ವಿಶ್ವನಾಥ್ ಹಾಗೂ ಗಣಪತಿ ಎನ್ನುವವರಿಗೆ ಸೇರಿದ ಮರಳು ಇದಾಗಿದ್ದು ಇವರ ವಿರುದ್ಧ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11..ತುಮಕೂರು ಟಿಪ್ಪು ಜಯಂತಿ ವೇಳೆ ಗಾಯಕರು ಗಣೇಶ ಸ್ತುತಿ ಹಾಡಿ ನೆರೆದಿದ್ದವರನ್ನು ರಂಜಿಸಿದರು. ಇಲ್ಲಿನ ಬಾಲಭವನದಲ್ಲಿ ನಡೆಯುತ್ತಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನೀನಮ್ಮ ಬೆಳಕಾಗಿ ಬಾ ಗಜಮುಖನೇ ಹಾಡು ಹಾಡಿ ಎಲ್ಲರನ್ನು ರಂಜಿಸಿದರು.

12..ಬನ್ನೇರುಘಟ್ಟ ಕಗಲೀಪುರ ರಸ್ತೆಯಲ್ಲಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋದ ವ್ಯಕ್ತಿಯೋರ್ವ ಮೃತಪಟ್ಟಿದ್ದಾನೆ. ಆಂಧ್ರದ ಮೂಲದ ಕೈಲಾಶ್ (೩೨) ಮೃತ ವ್ಯಕ್ತಿಯಾಗಿದ್ದು, ನಿನ್ನೆ ಸ್ನೇಹಿತರ ಜೊತೆ ಮೀನು ಹಿಡಿಯಲು ಬಂದಾಗ ಮುಳುಗಿ ಸಾವನ್ನಪ್ಪಿದ್ದಾನೆ. ಇಂದು ಕ್ವಾರಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

13..ಟಿಪ್ಪು ಜಯಂತಿಯನ್ನು ವಿರೋಧಿಸಿ ಹುಬ್ಬಳ್ಳಿಯಲ್ಲಿ ಸಂಸದ ಪ್ರಲ್ಹಾದ್ ಜೋಶಿ ಹೇಳಿಕೆ ನೀಡಿದ್ದಾರೆ. ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಹಿಂದೂ ವಿರೋಧಿ, ದುಷ್ಟ. ಕಾಂಗ್ರೆಸ್ ಸರ್ಕಾರ ರಾಜ್ಯದ ಬಹುಸಂಖ್ಯಾತರಿಗೆ ದ್ರೋಹ ಮಾಡಿದೆ. ಕುಮಾರಸ್ವಾಮಿ ಕಾಂಗ್ರೆಸ್ ಒತ್ತಡಕ್ಕೆ ಮಣಿದು ಟಿಪ್ಪು ಜಯಂತಿ ಮಾಡುತ್ತಿದ್ದಾರೆ. ಈಗ ಅನಾರೋಗ್ಯದ ನೆಪವೊಡ್ಡಿ ದೂರವುಳಿದಿದ್ದಾರೆ. ಕುಮಾರಸ್ವಾಮಿ ನಿಲುವು ಈಗ ಎಲ್ಲಿಗೆ ಹೋಯಿತು..?ಎಂದು ಪ್ರಶ್ನೆ ಮಾಡಿದ್ದಾರೆ.

14..ನಿನ್ನೆ ಮಾಜಿ ಸಚಿವ ಟಿ.ಬಿ.ಜಯಚಂದ್ರ ಮೋದಿಗೆ ಜೀವಂತ ಸುಡುವ ಕಾಲ ಬಂದಿದೆ ಎಂಬ ಹೇಳಿಕೆಗೆ, ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌ನವರು ಉದ್ಧಟತನದ ಮಾತು ಬಿಡಬೇಕು. ಇಲ್ಲದಿದ್ರೆ ಇಂತಹ ಮಾತಾಡೋರ ನಾಲಿಗೆ ಸುಡಬೇಕಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

15..ಹಾಸನದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದು, ಟಿಪ್ಪು ಜಯಂತಿ ಮಾಡಿದರೆ ಬಿಜೆಪಿಯವರಿಗೆ ಯಾಕೆ ಹೊಟ್ಟೆ ಉರಿ, ಅವರವರ ಧರ್ಮಕ್ಕನುಗುಣವಾಗಿ ಆಯಾ ಜಯಂತಿ ಮಾಡುತ್ತಾರೆ. ಟಿಪ್ಪು ಜಯಂತಿ ಮಾಡಿದ್ರೆ ಬಿಜೆಪಿ ಮುಖಂಡರಿಗೆ ಏನು ತೊಂದರೆ ಎಂದು ಪ್ರಶ್ನೆಸಿದ್ದಾರೆ.

16..ದಾವಣಗೆರೆಯಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಜಯಂತಿಯಲ್ಲಿ ಭಾಗಿಯಾಗದೆ ಸಿಎಂ ಕಾಣೆಯಾಗಿದ್ದಾರೆ. ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ರೆ ಗೊಂದಲ ಸೃಷ್ಟಿಯಾಗತ್ತೆ ಅಂತ ಅಬ್ಸ್ಕ್ಯಾಂಡ್ ಆಗಿದ್ದಾರೆ. ಅನಾರೋಗ್ಯದ ನೆಪವೊಡ್ಡಿ ಕಾಣೆಯಾಗಿದ್ದಾರೆ. ನಾಳೆ ಕುರ್ಚಿ ಅಲ್ಲಾಡತ್ತೆ ಅಂದ್ರೆ ಎದ್ದು ಬರ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

17..ಬಾಲಿವುಡ್ ನಟ ಶಾಹಿದ್ ಕಪೂರ್ ಮತ್ತು ಪತ್ನಿ ಮೀರಾ ರಜಪೂತ್ ತಮ್ಮ ಎರಡನೇ ಮಗುವನ್ನ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ. ಮೀರಾ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪುತ್ರ ಜೇನ್ ಫೋಟೋ ಹಾಕುವ ಮೂಲಕ ಜೇನ್‌ನನ್ನ ಪರಿಚಯ ಮಾಡಿಸಿದ್ದಾರೆ. ಇನ್ನು ಫೋಟೋಗೆ ಹೆಲೋ ವರ್ಲ್ಡ್ ಎಂಬ ಟ್ಯಾಗ್ ಹಾಕಿದ್ದಾರೆ.

18..ಮಾಜಿ ಸಚಿವ ಜಯಚಂದ್ರ ಮೋದಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ, ತುಮಕೂರು ನಗರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರ ಶಾಸಕ ಜ್ಯೋತಿ ಗಣೇಶ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಹರಕು ಬಾಯಿ‌ ಜಯಚಂದ್ರಗೆ ದಿಕ್ಕಾರ ಎಂದು ಘೋಷಣೆ ಮಾಡಿದರು.

19..ಬಿಜೆಪಿಯವರು ಯಾವಾಗಲೂ ಅವಕಾಶವಾದಿ ರಾಜಕಾರಣ ಮಾಡ್ತಾ ಬಂದಿದ್ದಾರೆ. ಇವರೇ ಸ್ವತಃ ಟಿಪ್ಪು ಜಯಂತಿ ಆಚರಣೆ ಮಾಡಿದ್ದವರು. ಈಗ ರಾಜಕೀಯ ದುರುದ್ದೇಶದಿಂದ ಟಿಪ್ಪುವನ್ನು ವಿರೋಧಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ವಾಗ್ದಾಳಿ ನಡೆಸಿದ್ದಾರೆ. ಟಿಪ್ಪು ಮತಾಂಧ ಅಂತ ಹೇಳ್ತಿದ್ದಾರೆ. ಟಿಪ್ಪು ಆಳ್ವಿಕೆ ಕಾಲದಲ್ಲಿ ಶೃಂಗೇರಿ, ಕಡೂರು,ನಂಜನಗೂಡು ದೇವಾಲಯಗಳು ಸೇರಿದಂತಹ ಹಲವಾರು ಹಿಂದೂ ದೇವಾಲಯಗಳನ್ನು ಅಭಿವೃದ್ಧಿ ಮಾಡಿದ್ದಾನೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದೊಡ್ಡ ಸೇನಾನಿ. ದೇಶಕ್ಕೊಸ್ಕರ ತನ್ನ ಸ್ವಂತ ಮಕ್ಕಳನ್ನೇ ಅಡವಿಟ್ಟ ಮಹಾನ್ ನಾಯಕ ಟಿಪ್ಪು ಎಂದು ಹೇಳಿದ್ದಾರೆ.

20..ಟಿಪ್ಪು ಸುಲ್ತಾನ್ ಒಬ್ಬ ದೇಶಪ್ರೇಮಿ. ಹಾಗಾಗಿಯೇ ಆತನ ಜಯಂತಿ ಆಚರಿಸುತ್ತಿದ್ದೇವೆ ಎಂದು ಎಂಎಲ್‌ಸಿ ಆರ್.ಪ್ರಸನ್ನಕುಮಾರ್ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಸನ್ನ ಕುಮಾರ್, ಟಿಪ್ಪು ಜಯಂತಿ ಆಚರಣೆ ಮಾಡಿರುವುದಕ್ಕೆ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಂಡರು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

21..ಟಿಪ್ಪು ಜಯಂತಿ ಆಚರಿಸುತ್ತಿರುವ ಮೈತ್ರಿ ಸರ್ಕಾರದಿಂದ ಮುಖ್ಯವಾಗಿ ಬರಬೇಕಿದ್ದ ಸಿಎಂ ಕುಮಾರಸ್ವಾಮಿಯವರೇ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಸಿಎಂ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು, ಎಚ್‌.ಡಿ.ಕೋಟೆ ಸಮೀಪದ ಖಾಸಗಿ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದು, ಈ ಕಾರಣಕ್ಕಾಗಿ ಸಿಎಂ ಸಾರ್ವಜನಿಕರು, ಸ್ಥಳೀಯ ಮುಖಂಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ. ಯಾರಿಗೂ ಒಳ ಪ್ರವೇಶಿಸದಂತೆ ಸೂಚನೆ ನೀಡಿದ್ದಾರೆ.

22..ಬೆಂಗಳೂರಿನಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಮಾತನಾಡಿದ ಸಚಿವೆ ಜಯಮಾಲಾ, ಸಿದ್ದರಾಮಯ್ಯನವರು ಟಿಪ್ಪು ಜಯಂತಿಯನ್ನು ಜಾರಿ ಮಾಡಿದರು. ಪ್ರತೀ ಮೂರು ಕಿಲೋ ಮೀಟರ್‌ಗೆ ಸಂತೆಗಳನ್ನ ಕಟ್ಟಿದ್ರು. ಇಂದಿಗೂ ಟಿಪ್ಪು ಕಾಲದಲ್ಲಿ ನಿರ್ಮಾಣವಾದ ಕೆರೆಗಳ ಲಾಭವನ್ನ ಪಡೆಯುತ್ತಿದ್ದೇವೆ. ಅವರ ಆಡಳಿತದಲ್ಲಿ ಕೃಷಿಯಲ್ಲಿ ಸುಧಾರಣೆ ತಂದರು. ಬ್ರಿಟೀಷರನ್ನ ಹತ್ತಿಕ್ಕಲು ಮಕ್ಕಳನ್ನ, ಸಂಪತ್ತನ್ನ ಕಳದುಕೊಂಡ್ರು. ಇಂತಹ ಟಿಪ್ಪು ಬಗ್ಗೆ ವಿರೋಧ ಪಕ್ಷದವರು ತಪ್ಪು ನುಡಿಯುತ್ತಿದ್ದಾರೆ. ಅನಗತ್ಯವಾಗಿ ಗೊಂದಲ ಮೂಡಿಸಿ ವಿರೋಧ ಮೂಡಿಸಿ ಅಪಾರ್ಥ ಬರುವಂತೆ ಅವರು ವರ್ತಿಸಬಾರದು ಎಂದು ಹೇಳಿದರು.

23..ಟಿಪ್ಪು ಜಯಂತಿ ಆಚರಣೆ ಮಾಡಿದ್ರೆ ಅಧಿಕಾರ ಕಳೆದುಕೊಳ್ಳತ್ತಾರೆ ಎಂಬುದು ಕೇವಲ ಊಹಾ ಪೊಹಾ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಕೃಷ್ಣ ಬೈರೇಗೌಡ ಹೇಳಿಕೆ ನೀಡಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಸಚಿವ ರೇವಣ್ಣ ಅವರೇ ಟಿಪ್ಪು ಜಯಂತಿಯಲ್ಲಿ ಭಾಗವಹಿಸುವುದಾಗಿ ಹೇಳಿ, ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಸಿಎಂ ಅನಾರೋಗ್ಯದ ಹಿನ್ನಲೆಯಲ್ಲಿ ಟಿಪ್ಪು ಜಯಂತಿಯಲ್ಲಿ ಭಾಗವಹಿಸುತ್ತಿಲ್ಲ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದ್ದಾರೆ.

24..ರಾಯಚೂರಿನ ರಂಗಮಂದಿರದಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಮಾತನಾಡುವಾಗ ಅಲ್ಲಿನ ಜಿಲ್ಲಾಧಿಕಾರಿ ಶರತ್ ಬಿ, ಟಿಪ್ಪುವಿನ ಬಗ್ಗೆ ಏಕವಚನದಲ್ಲಿ ಮಾತನಾಡಿದ್ದಾರೆ. ಟಿಪ್ಪುವಿನ ಆನೆಗೆ ಗಾಯವಾದ ವೇಳೆಯ ಪ್ರಸಂಗವನ್ನು ಹೇಳುವಾಗ ಅವನು ಅಂದು ಉಚ್ಚರಿಸಿ ಜಿಲ್ಲಾಧಿಕಾರಿ ಶರತ್ ಎಡವಟ್ಟು ಮಾಡಿದ್ದಾರೆ.

25..ಸಾಲಬಾಧೆ ತಾಳಲಾರದೇ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಸುರಪುರ ತಾಲೂಕಿನ ಕಕ್ಕೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗುಡದಪ್ಪ ಟೋಕಾಪುರ ( 55) ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದಾನೆ. ಈತ 2.50 ಲಕ್ಷ ಸಾಲ ಸಿಂಡಿಕೇಟ್ ಬ್ಯಾಂಕ್ ನಲ್ಲಿ ಸಾಲ ಹಾಗೂ 5 ಲಕ್ಷ ಕೈ ಸಾಲ ಮಾಡಿಕೊಂಡಿದ್ದ. ಇನ್ನು ಈ ಘಟನೆ ಕೊಡೇಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

26..ಜಯಚಂದ್ರ ಹೇಳಿಕೆಗೆ ಬಿಜೆಪಿ ಮುಖಂಡ ಬಸನಗೌಡ ಯತ್ನಾಳ್ ಕಾಂಗ್ರೆಸ್ ನವರ ನಾಲಿಗೆ ಸುಡಬೇಕಾಗುತ್ತೆ ಎಂದು ಹೇಳಿದ್ದು, ಈ ಹೇಳಿಕೆಗೆ ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ. ಇವ್ರು ಕಾಂಗ್ರೆಸ್ ನವರ ಬಗ್ಗೆ ಎನೇನ್ ಮಾತಾಡಿದ್ದಾರೆ. ಸೋನಿಯಾ ಬಗ್ಗೆ ಶಶಿ ತರೂರ್ ಪತ್ನಿ ಬಗ್ಗೆ ಮಾತಾಡಿಲ್ವ. ನಾವು ಮಾತಾಡಿದ್ರೆ ಕೆಟ್ಟದ್ದು..ಅವ್ರು ಮಾತಾಡಿದ್ರೆ ಒಳ್ಳೆಯದಾ ಎಂದು ಪ್ರಶ್ನಿಸಿದ್ದಾರೆ.

27..ಉಡುಪಿ ಅದಮಾರು ಮಠದ ಜವಾಬ್ದಾರಿ ಹಸ್ತಾಂತರ ಹಿನ್ನೆಲೆ, ಅದಮಾರು ಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿದ್ದು, ಪೂರ್ಣಪ್ರಮಾಣದ ಜವಾಬ್ದಾರಿ ಕೊಡಲು ಗುರುಗಳು ಮುಂದಾಗಿದ್ದರು. ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ ಸದ್ಯ ನನಗೆ ಭಾರವಾಗುತ್ತದೆ. ಅದಮಾರು ಮಠದ ಜವಾಬ್ದಾರಿ ನನಗೆ ಕೊಟ್ಟಿದ್ದಾರೆ. ಈ ಸ್ಥಾನಕ್ಕೆ ನಾನು ಬಹಳ ಚಿಕ್ಕವನು. ಗುರುಗಳು ನನ್ನ ಕೈಹಿಡಿದು ನಡೆಸಲಿದ್ದಾರೆ. ಶಿಕ್ಷಣ ಸಂಸ್ಥೆಗೆ ಕಾರ್ಯಾಧ್ಯಕ್ಷರಾಗಿ ನೇಮಿಸಿದ್ದಾರೆ. ಆ ಜವಾಬ್ದಾರಿಯನ್ನು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿದರು.

28..ಟಿಪ್ಪು ಜಯಂತಿಯಂದು ಸಿದ್ದರಾಮಯ್ಯನವರ ಸರ್ಕಾರ ಪತನವಾಗತ್ತೆ ಎಂಬ ಬಿಜೆಪಿ ಆರೋಪಕ್ಕೆ, ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಅಧಿಕಾರ ನಡೆಸಿದ್ದಾರೆ. ಚಾಮರಾಜನಗರಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಅಂದ್ರು, ಆದರೆ ಅಧಿಕಾರ ಪೂರ್ಣ ಮಾಡಿದ್ರು. ಜನ ತೀರ್ಮಾನ ಕೊಟ್ಟಿದ್ದಾರೆ, ಅದನ್ನ ನಾವು ಒಪ್ಪಿದ್ದೇವೆ. ಈ ವಿಚಾರಕ್ಕೆ ಟಿಪ್ಪು ವಿಚಾರವನ್ನ ತರೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

29..ಸರ್ಕಾರದಿಂದ ಟಿಪ್ಪು ಜಯಂತಿ ಆಚರಿಸುತ್ತಿರುವ ಹಿನ್ನೆಲೆ, ಆಚರಣೆ ವಿರುದ್ಧ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. ಕಳೆದ ಬಾರಿ ಟಿಪ್ಪು ಜಯಂತಿಗೆ ಸಿಎಂ ಕುಮಾರಸ್ವಾಮಿ ವಿರೋಧಿಸಿದ್ದರು. ಆದರೆ ಇದೀಗ ಜಯಂತಿ ಪರ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ವಿರುದ್ಧ ಯೂ ಟರ್ನ್ ಸ್ವಾಮಿ ಅಂತ ಟ್ವಿಟ್ಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

30..ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ, ಮೈಸೂರು ಸಂಸದ ಪ್ರತಾಪ್ ಸಿಂಹ ಕಾಂಗ್ರೆಸ್ ನಾಯಕರನ್ನ ಟ್ವಿಟರ್ ಮೂಲಕ ಕೆಣಕಿದ್ದಾರೆ.ಟಿಪ್ಪು ಕೋಟೆಯಲ್ಲಿ ಸತ್ತ ಇಲಿ, ಅಂಥ ಇಲಿಯನ್ನು ಹುಲಿಯೆಂದು ಕಾಂಗ್ರೆಸ್ ಬಿಂಬಿಸುತ್ತಿದೆ. ಜಯಂತಿ ಮೂಲಕ ಟಿಪ್ಪುವನ್ನು ಹೊಗಳಲು ಹೊರಟಿದೆ. ಕಾಂಗ್ರೆಸ್ ನವರಿಗೆ ಯಾವಾಗ ಬುದ್ಧಿ ಬರುತ್ತದೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

31..ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿ, 9 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಸ್ಥಳದಲ್ಲಿನ ಮನೆ, ಅರಣ್ಯ ಸಂಪತ್ತು ಕಾಡ್ಗಿಚ್ಚಿನ ನರ್ತನಕ್ಕೆ ನಾಶವಾಗಿದೆ. ಮಾಲೀಬು ಎಂಬಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಹಲವಾರು ಮನೆಗಳು ಬೆಂಕಿಗಾಹುತಿಯಾಗಿದೆ. ಅಗ್ನಿಯ ರೌದ್ರ ನರ್ತನಕ್ಕೆ ಮಾಲೀಬು ಸುಟ್ಟು ಕರಕಲಾಗಿದ್ದು, ಅಲ್ಲಿನ ಜಯರನ್ನು ಸ್ಥಳಾಂತರಿಸಲಾಗಿದೆ.

32..ಕಬ್ಬು ಕಾರ್ಖಾನೆಗಳ ವಿರುದ್ದ ಮತ್ತೆ ರೈತರು ಒಗ್ಗಟ್ಟಾಗಿ ಹೋರಾಟ ನಡೆಸುವಂತೆ ಕುಡಚಿ ಶಾಸಕ ಪಿ ರಾಜೀವ್ ಕರೆ ನೀಡಿದ ವೀಡಿಯೋ ವೈರಲ್ ಆಗಿದೆ. ಬಾಕಿ ಹಣಕ್ಕಾಗಿ ಮತ್ತು ಎಫ್ ಆರ್ ಪಿ ದರಕ್ಕಾಗಿ ರೈತರು ಒಂದಾಗಿ ಹೋರಾಟ ಮಾಡುವಂತೆ ಕರೆ ನೀಡಿದ ವಿಡಿಯೋ ವಾಟ್ಸಪ್ ನಲ್ಲಿ ವೈರಲ್ ಆಗಿದೆ. ಈ ವೀಡಿಯೋದಲ್ಲಿ ರೈತರು ಹೊರಾಟಕ್ಕೆ ಸಿದ್ದರಾಗಿ ಕರೆಕೊಟ್ಟರೆ, ರಾಜೀವ್ ಬರುವದಾಗಿ ಹೇಳಿದ್ದಾರೆ.

34..ಟಿಪ್ಪು ಜಯಂತಿ ಆಚರಣೆ ಬಗ್ಗೆ ಬೀದರ್‌ನಲ್ಲಿ ಮಾತನಾಡಿದ ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್, ಜೆಡಿಎಸ್ ಪಕ್ಷವನ್ನ ಹಾಡಿಹೊಗಳಿದ್ದಾರೆ. ಟಿಪ್ಪು ಜಯಂತಿ ರಾಜ್ಯದಲ್ಲಿ ಆರಂಭಮಾಡಿದ್ದೆ ಜೆಡಿಎಸ್. 20 ವರ್ಷಗಳ ಹಿಂದೆ ದೇವೇಗೌಡರ ಜತೆಯಲ್ಲಿ ದೂಮ್ ಧಡಾಕ್ ಆಚರಣೆ ಮಾಡಿಕೊಂಡು ಬರುತ್ತಿದ್ದೇವೆ. ನಾವು ಟಿಪ್ಪುಜಯಂತಿ ಆಚರಣೆ ಮಾಡಿಂತೆ ಕಾಂಗ್ರೇಸ್ ನವರು ಮಾಡಿಲ್ಲಾ ಎಂದು ಮೈತ್ರಿ ಪಕ್ಷದ ವಿರುದ್ಧವೇ ಹೇಳಿಕೆ ನೀಡಿದ್ದಾರೆ.

35..ಎರ್ ಗನನಿಂದ ಶೂಟ್ ಮಾಡಿ ಮಂಗನ ಹತ್ಯೆ ಮಾಡಿದ ಘಟನೆ ಬೆಳಗಾವಿ ತಾಲೂಕಿನ ಪಂಥಬಾಳೇಕುಂದ್ರಿಯಲ್ಲಿ ನಡೆದಿದೆ. ಮನೆ ಮುಂದಿನ ಮರದ ಮೇಲೆ ಕುಳತಿದ್ದ ಮಂಗನಿಗೆ, ನಿವೃತ್ತ ಏರ್ ಮನ್ ಎಂ.ಐ.ಶೇಖ್ ಎಂಬಾತ, ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆ, ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಆರೋಪಿ ಶೇಖ್ ತಲೆಮರೆಸಿಕೊಂಡಿದ್ದಾನೆ.

36..ಚೀನಾ ಮತ್ತೊಂದು ಹೊಸ ಆವಿಷ್ಕಾರ ಮಾಡಿದ್ದು, ತಮ್ಮ ನ್ಯೂಸ್ ಚಾನೆಲ್‌ ಮೂಲಕ ಜಗತ್ತಿಗೆ ವಿಭಿನ್ನ ವಾರ್ತಾ ನಿರೂಪಕನನ್ನು ಪರಿಚಯಿಸಿದೆ. ಈ ವಾರ್ತಾ ನಿರೂಪಕನ ವಿಭಿನ್ನತೆ ಏನಂದ್ರೆ ಈತ ಮನುಷ್ಯನಲ್ಲ, ಬದಲಾಗಿ ರೋಬೋಟ್. ಚೀನಾದ ರನ್-ಗ್ಸಿನ್ಹುವಾ ನ್ಯೂಸ್ ಏಜೆನ್ಸಿ AI ಅಂದರೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಆ್ಯಂಕರ್‌ನ್ನ ಜಗತ್ತಿದೆ ಪರಿಚಯಿಸಿದೆ.

37..ಬೆಂಗಳೂರಿನಲ್ಲಿ ರಾಮ ಪ್ರತಿಮೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿಕೆ ನೀಡಿದ್ದು, ಅದು ವಿಶ್ವ ಹಿಂದೂಪರಿಷತ್ ಕೆಲಸ ಅಲ್ಲ. ಆದ್ರೆ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ರಾಮನ ಪ್ರತಿಮೆ ನಿರ್ಮಾಣದ ಉದ್ದೇಶ ಇದೆ. ಆರ್.ಎಸ್.ಎಸ್. ನಾಯಕರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಸಂಸ್ಕೃತಿ ಉಳಿಸುವ ಕೆಲಸಗಳಿಗೆ ನಮ್ಮ ಬೆಂಬಲ ಸದಾ ಇರುತ್ತೆ. ಹಾಗಾಗಿ ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಕಡೆಗಳಲ್ಲಿ ರಾಮನ ಪ್ರತಿಮೆ ನಿರ್ಮಾಣಕ್ಕೆ ನಮ್ಮ ಬೆಂಬಲ ಇದೆ ಎಂದು ಹೇಳಿದ್ದಾರೆ.

38..ಕೋಲಾರದ ರಂಗಮಂದಿರದಲ್ಲಿ ಎಮ್ ಎಲ್ ಸಿ ನಜೀರ್ ಅಹಮದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೂರ್ಗ(ಕೊಡಗು)ನಲ್ಲಿ ನಡೆದಿದ್ದು ಕೇವಲ ಎರಡು ರಾಜ್ಯಗಳ ನಡುವಿನ ಯುದ್ಧ. ಒಂದು ಯುದ್ಧಲ್ಲಿ ಎರಡೂ ಕಡೆ ಸಿಪಾಯಿಗಳು ಸಾಯುವುದು ಸಾಮಾನ್ಯ. ಕೂರ್ಗನಲ್ಲಿ ಸತ್ತವರು ಕೆಲವರು ಕೂರ್ಗನವರಾದಕ್ಕೆ ಟಿಪ್ಪು ಜಯಂತಿ ವಿರೂಧಿಸುವುದು ತಪ್ಪು ಎಂದು ಹೇಳಿದ್ದಾರೆ.

39.ಹಾಡುಹಗಲೇ ಅಂಗಡಿಯಲ್ಲಿ ಕಳ್ಳತನ ವಿಫಲ ಯತ್ನ ನಡೆಸಿದ ಘಟನೆ, ಬೆಂಗಳೂರು ಗ್ರಾಮಾಂತರ ಜಿಲ್ಲೆ ವಿಜಯಪುರದಲ್ಲಿ ನಡೆದಿದೆ. ಕಳ್ಳತನ ಮಾಡಲು ಹೋಗಿ ಕಳ್ಳರು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಹಿಗ್ಗಾಮುಗ್ಗಾ ಒದೆ ತಿಂದಿದ್ದಾರೆ. ತಂದನಂತರ ಕಳ್ಳರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

40..ಗೂಗಲ್ ಕಚೇರಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಲೈಂಗಿಕ ಕಿರುಕುಳ ಆರೋಪವನ್ನು ನಿರ್ಲಕ್ಷಿಸಿದ್ದಕ್ಕೆ ಪ್ರತಿಭಟನೆ ನಡೆಸಲಾಗಿತ್ತು. ಈ ಪ್ರತಿಭಟನೆ ನಡೆಸುವ ಮೂಲಕ ಗೂಗಲ್ ಕಚೇರಿಗಳಿಂದ 20,000ಕ್ಕೂ ಹೆಚ್ಚು ಉದ್ಯೋಗಿಗಳು ಗೂಗಲ್‌ನಿಂದ ಹೊರನಡೆದಿದ್ದರು. ಈ ಕಾರಣಕ್ಕಾಗಿ ಗೂಗಲ್ ಕ್ಷಮೆಯಾಚಿಸಿದ್ದು, ಕಂಪೆನಿಯ ಮಹಿಳಾ ಉದ್ಯೋಗಿಗಳಿಗೆ ಸುರಕ್ಷತೆ ಒದಗಿಸುತ್ತೇವೆ, ಮತ್ತು ಕಚೇರಿಯಲ್ಲಿ ಹಲವು ಬದಲಾವಣೆಗಳನ್ನು ತರುತ್ತೇವೆಂದು ಹೇಳಿದೆ.

41..ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್ ಗೌಡ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ೨೦೧೯ ರ ಲೋಕಸಭಾ ಚುನಾವಣೆ ಹಿನ್ನೆಲೆ, ಕಾಂಗ್ರೆಸ್ ಮ್ಯಾನಿಫ್ಯಾಸ್ಟೋ ಕಮಿಟಿ ರಚಿಸಿದೆ. ಚಿದಂಬರಂ ಸಮಿತಿ ೨೦ ವಿಷಯಗಳ ಥೀಮ್ ಸಿದ್ಧಪಡಿಸಿದೆ. ಜನಧ್ವನಿ ಹೆಸರಲ್ಲಿ ಜನರ ಅಭಿಪ್ರಾಯ ಪಡೆದು ನೂತನ ಮ್ಯಾನಿಫ್ಯಾಸ್ಟೋ ತಯಾರಿಸಲಿದೆ ಎಂದು ಹೇಳಿದರು.

42.ವಿಧಾನಸೌಧದಲ್ಲಿ ಟಿಪ್ಪು ಜಯಂತಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಬಂದ ಓರ್ವನ ಕೈಯಲ್ಲಿ ಚಾಕು, ಬೆಂಕಿಪಟ್ಟಣ, ಸಿಗರೇಟು, ಬೀಡಿ ಪತ್ತೆಯಾಗಿದ್ದು, ಭದ್ರತಾ ಸಿಬ್ಬಂದಿ ವ್ಯಕ್ತಿಯಿಂದ ಚಾಕು ವಶಪಡಿಸಿಕೊಂಡರು.

43.ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ದೇವನಹಳ್ಳಿಯಲ್ಲಿ ಟಿಪ್ಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಟಿಪ್ಪು ಜಯಂತಿ ಆಚರಿಸಿದರು. ಈ ವೇಳೆ ಮಾತನಾಡಿದ ಅವರು, ಟಿಪ್ಪು ಮಹಾ ವೀರ, ದೇಶಕ್ಕಾಗಿ ಹೊರಾಟ ಮಾಡಿದವರು ಟಿಪ್ಪು. ನಾವು ಟಿಪ್ಪು ಜಯಂತಿಗೆ ಸಂಪೂರ್ಣ ಬೆಂಬಲವಿದೆ. ದೇವನಹಳ್ಳಿ ಪವಿತ್ರವಾದ ಸ್ಥಳ, ಇದನ್ನ ಅಭಿವೃದ್ದಿ ಪಡಿಸಬೇಕಿದೆ. ಇಲ್ಲಿ ಸ್ಮಾರಕ ನಿರ್ಮಾಣ ಮಾಡಬೇಕು, ಆರು ತಿಂಗಳಲ್ಲಿ ಪ್ರತಿಮೆ ನಿರ್ಮಾಣ ಆಗಬೇಕು. ಇಲ್ಲವಾದರೆ ನಾನು ಪ್ರತಿಭಟನೆ ಮಾಡುತ್ತೇನೆ ಎಂದಿದ್ದಾರೆ.

44.ಸಚಿವ ಡಿ.ಕೆ.ಶಿವಕುಮಾರ್‌ ಅವರನ್ನು ಶಿವಮೊಗ್ಗ ಲೋಕಸಭೆ ಉಪ ಚುನಾವಣೆಯ ಜೆಡಿಎಸ್‌-ಕಾಂಗ್ರೆಸ್‌ ಅಭ್ಯರ್ಥಿ ಮಧು ಬಂಗಾರಪ್ಪ ಭೇಟಿ ಮಾಡಿದರು. ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಭೇಟಿ ನೀಡಿದ ಮಧು ಬಂಗಾರಪ್ಪ, ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಗೆದ್ದಿದ್ದಕ್ಕೆ ಶುಭ ಕೋರಿದರು.

45.ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಪ್ಪಾಲಹಳ್ಳಿ ಗ್ರಾಮದಲ್ಲಿ, ಸಿಲಿಂಡರ್ ಸ್ಪೋಟಗೊಂಡು ಮನೆ ಭಸ್ಮವಾಗಿದೆ. ಗ್ರಾಮದ ಜಗದೀಶ್ ರಿಗೆ ಸೇರಿದ ತೋಟದ ಮನೆ ನೆಲಸಮವಾಗಿದ್ದು, ಮನೆಯಲ್ಲಿ ಯಾರು ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಎರಡು ಕುರಿಗಳು ಸಾವನ್ನಪ್ಪಿದೆ.

46..ಬೆಂಗಳೂರಿನ ಬಸವೇಶ್ವರ ನಗರದಲ್ಲಿ ತಡರಾತ್ರಿ ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿದ ಕಾಮುಕನೊಬ್ಬ, ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಇದಕ್ಕೂ ಮೊದಲು ಮಹಿಳೆಯನ್ನು ಹಿಂಬಾಲಿಸಿದ ಕಾಮುಕ, ಮನೆಯ ಬೆಲ್ ಬಾರಿಸಿ, ಬಾಗಿಲು ತೆಗೆದಾಗ ಆಕೆಯ ಕುತ್ತಿಗೆಗೆ ಚಾಕು ಇಟ್ಟು, ಹಲ್ಲೆ ಮಾಡಿ, ಇಂಥ ದುಷ್ಕೃತ್ಯ ನಡೆಸಿದ್ದಾನೆ. ಅಲ್ಲದೇ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಈ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

47..ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲಿಂಗ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗಾಲಿ ಜನಾರ್ಧನ ರೆಡ್ಡಿ ಆಪ್ತ ಆಲಿಖಾನ್ ಬಂಧಿಸಲಾಗಿದೆ. ಮನೆಯಲ್ಲಿ ಜೀವಂತ ಗುಂಡುಗಳು ಪತ್ತೆಯಾದ ಹಿನ್ನೆಲೆ, ಸಿಸಿಬಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಈ ಹಿನ್ನೆಲೆ ಬಂಧನ ಮಾಡಿರುವ ಸಿಸಿಬಿ ಪೊಲೀಸರು‌, ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಅಡಿ ಕೇಸ್ ದಾಖಲಿಸಿ, ಆಲಿಖಾನ್‌ನನ್ನು ಬಂಧಿಸಿದೆ.

48.ಮುಂದಿನ ಅಕ್ಟೋಬರ ೨೩ ಕ್ಕೆ ಇಂಗ್ಲೆಂಡ್ ನಿಂದ ಚನ್ನಮ್ಮನ ಖಡ್ಗ ತರಬೇಕಿದೆ ಎಂದು ಮೃತ್ಯುಂಜಯಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ಹಂದಿಗುಂದ ಗ್ರಾಮದಲ್ಲಿ ನಡೆದ ಲಿಂಗಾಯತ ಸಮಾವೇಶ ಹಾಗೂ ಚನ್ನಮ್ಮನ ವಿಜಯೋತ್ಸವದ ಕಾರ್ಯಕ್ರಮದ ಭಾಷಣದಲ್ಲಿ ಮಾತನಾಡಿದ ಅವರು, ಸುಷ್ಮಾ ಸ್ವರಾಜ ಅವರ ಜೊತೆ ಚರ್ಚಿಸಿ ವಿದೇಶದಲ್ಲಿರುವ ಖಡ್ಗ ತರುವ ಕೆಲಸ ಆಗಬೇಕಿದೆ.ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹಾಗೂ ಸರಕಾರ ಜೊತೆ ಸಭೆ ನಡೆಸಿ ಅವರ ನಿಯೋಗ ಸುಷ್ಮಾ ಸ್ವರಾಜ್ ಅವರ ಬಳಿ ಒಯ್ದು ಖಡ್ಗ ತರುವ ಕೆಲಸ ಮಾಡಬೇಕಿದೆ ಎಂದು ಹೇಳಿದ್ದಾರೆ.

49.ಟಿಪ್ಪು ಜಯಂತಿಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಭಾಷಣ ಮಾಡಿದ್ದು, ರಾಜಕೀಯ ಬಂದಾಗ್ ಟೋಪಿಯನ್ನ ಹಾಕಿಕೊಂಡು, ಕೈಯಲ್ಲಿ ಖಡ್ಗವನ್ನ ಹಿಡಿದು ಪೋಸ್ ಕೊಡ್ತಾರೆ. ಅದು ಮತಗಳನ್ನ ಸೆಳೆಯುವುದಕ್ಕಾಗಿ. ಅದೇ ಟಿಪ್ಪು ಜಯಂತಿ ಬಂದಾಗ, ಒಳ್ಳೆಯದನ್ನ ನೆನೆಸುವಾಗ ನಾವು ವಿರೋಧ ಮಾಡ್ತಿವಿ ಅಂತಾ ಹೇಳ್ತಾರೆ. ಟಿಪ್ಪು ವಿಚಾರದಲ್ಲಿ ಈ ರೀತಿ ಆಗಬಾರದು ಎಂದು ಬಿಜೆಪಿಗೆ ಟಾಂಗ್ ನೀಡಿದ್ದಾರೆ.

50.ಬೆಂಗಳೂರಿನ ತ್ಯಾಗರಾಜನಗರದ ಸಾಯಿಬಾಬಾ ಟೆಂಪಲ್ ಬಳಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಬಿಲ್ಡೀಂಗ್‌ನಲ್ಲಿ ನಾಲ್ಕು ಜನರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ.

Next Story

RELATED STORIES