ಸುಗಮ ಸಂಚಾರಕ್ಕಾಗಿ ಶಿರಾಡಿ ಘಾಟ್ನಲ್ಲಿ ಸುರಂಗ ನಿರ್ಮಾಣ

ಬೆಂಗಳೂರು-ಮಂಗಳೂರು ಮಧ್ಯೆ ಶಿರಾಡಿ ಘಾಟಿಯಲ್ಲಿ ಸುರಂಗ ನಿರ್ಮಾಣ ಕಾಮಗಾರಿಗೆ ಶೀಘ್ರ ಚಾಲನೆ ನೀಡಲು ನಿರ್ಧರಿಸಲಾಗಿದೆ ಅಂತ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ.
ಶುಕ್ರವಾರ ವಿಧಾಸೌಧದಲ್ಲಿ ಮಾತನಾಡಿದ ಅವರು, ಬೆಂಗಳೂರು-ಮಂಗಳೂರು ಪ್ರಮುಖ ನಗರಗಳಾಗಿದ್ದು, ಎರಡು ನಗರಗಳನ್ನು ಸಂಪರ್ಕಿಸಲು ನಾಲ್ಕು ರಸ್ತೆಗಳಿವೆ. ಆದರೆ, ಮಳೆಯಿಂದ ನಾಲ್ಕು ಸಂಪರ್ಕ ರಸ್ತೆಗಳು ಪದೇ ಪದೆ ಹಾನಿಗೊಳಗಾಗುತ್ತಿವೆ. ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಲ್ಲಿ ಟನೆಲ್ ನಿರ್ಮಾಣ ಮಾಡಲು ಚಿಂತನೆ ನಡೆದಿದೆ ಎಂದರು.
ಸುಮಾರು 23 ಕಿ.ಮೀ ಟನೆಲ್ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಟನೆಲ್ ಕಾಮಗಾರಿಗೆ ಸುಮಾರು 4 ಸಾವಿರ ಕೋಟಿ ಅಂದಾಜು ವೆಚ್ಚ ತಗುಲಲಿದೆ. ಈ ವರ್ಷವೇ ಟನೆಲ್ ಕಾಮಗಾರಿ ಪ್ರಾರಂಭಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ರೇವಣ್ಣ ಹೇಳಿದರು.
ಟನೆಲ್ ನಿರ್ಮಾಣ ಸಂಬಂಧ ಈಗಾಗಲೇ ಸರ್ವೆ ಕಾರ್ಯ ಮುಗಿದಿದೆ. ಇದೇ ವೇಳೆ ಶಿರಾಡಿ ಘಾಟ್ ರಸ್ತೆ ಕಾಮಗಾರಿ ವಿಳಂಬವಾಗುತ್ತಿರುವ ಸಂಬಂಧ ಅಸಮಾಧಾನ ವ್ಯಕ್ತಪಡಿಸಿದ ಸಚಿವ ರೇವಣ್ಣ, ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ವಿಫಲವಾಗಿದೆ. ಗುತ್ತಿಗೆ ಸಂಸ್ಥೆ ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದೆ ಎಂದು ರೇವಣ್ಣ ವಿಷಾದಿಸಿದರು.
ಈ ಹಿಂದೆ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಮೇಲೆ ಐಟಿ ದಾಳಿಯೂ ನಡೆದಿತ್ತು. ಹೀಗಾಗಿ ಶಿರಾಢಿ ಘಾಟ್ ರಸ್ತೆ ಕಾಮಗಾರಿ ಕಾಲಮಿತಿಯೊಳಗೆ ಪೂರೈಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗುತ್ತಿಗೆ ಸಂಸ್ಥೆಯನ್ನು ಬದಲಾಯಿಸಲು ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ರೇವಣ್ಣ ವಿವರಿಸಿದರು.