ಮರ್ಯಾದಗೇಡು ಹತ್ಯೆ: ಮಗಳ ಕುತ್ತಿಗೆ ಕೊಯ್ದು ತಾಯಿಯೇ ಹತ್ಯೆ

ಇತ್ತೀಚೆಗೆ ವಿಜಯಪುರದ ನಿಡಗುಂದಿ ತಾಲೂಕಿನ ಯಲಗೂರನಲ್ಲಿ ನಡೆದಿದ್ದ 4 ತಿಂಗಳ ಗರ್ಭಿಣಿಯ ಮರ್ಯಾದಗೇಡು ಹತ್ಯೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಾಯಿಯೇ ಮಗಳ ಕತ್ತು ಕೊಯ್ದು ಹತ್ಯೆ ನಡೆಸಿದ ಸಂಗತಿ ಬೆಳಕಿಗೆ ಬಂದಿದೆ.
ನಾಲ್ಕು ತಿಂಗಳ ಗರ್ಭಿಣಿ ರೇಣುಕಾ (24) ಕೊಲೆಯಾಗಿತ್ತು. ಮಗಳ ಕುತ್ತಿಗೆ ಕೊಯ್ದು ತಾಯಿ ಶಿವಲಿಂಗಮ್ಮಳೇ ಕೊಲೆ ಮಾಡಿದ ಹಂತಕಿ ಎಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಮನೆತನದ ಮಾನ, ಮರ್ಯಾದೆ ಹಾಳು ಮಾಡಿದಳೆಂದು ಹೆತ್ತ ಮಗಳ ಕತ್ತು ಸೀಳಿ ಕೊಲೆ ಮಾಡಿದ ಕಠೋರ ಮನಸಿನ ತಾಯಿ ಶಿವಲಿಂಗಮ್ಮ ಮಗಳನ್ನು ಕೊಲೆ ಮಾಡಲು ತನ್ನೂರಿನಿಂದಲೇ ಕೈಚೀಲದಲ್ಲಿ ಚಾಕು ತಂದಿದ್ದ ವಿಷಯ ಪೊಲೀಸರು ಪತ್ತೆ ಹಚ್ಚಿದ್ದಾರೆ.
ದೀಪಾವಳಿಗೆ ಮಗಳು ರೇಣುಕಾ ಮನೆಗೆ ಬಂದಿದ್ದ ಶಿವಲಿಂಗಮ್ಮ, ಬಳಿಕ ತನ್ನ ಮಗ ಹಾಗೂ ಅಳಿಯನನ್ನು ಕರೆಯಿಸಿಕೊಂಡಿದ್ದಳು. ನವ್ಹೆಂಬರ್ 6ರಂದು ಸಾಯಂಕಾಲ ರೇಣುಕಾಳನ್ನು ಕೊಲೆ ಮಾಡಿ ಮೂವರು ಪರಾರಿಯಾಗಿದ್ದರು.
ಶಿವಲಿಂಗಮ್ಮ ಕೊಲೆ ಮಾಡುವಾಗ ಸಹೋದರ ಮಲ್ಲಿಕಾರ್ಜುನ ಕಾಲು ಹಿಡಿದಿದ್ದರೆ, ರೇಣುಕಾ ತಂಗಿಯ ಗಂಡ ರಮೇಶ ಕೈಗಳನ್ನು ಹಿಡಿದಿದ್ದ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.
ನಿನ್ನೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದ ನಿಡಗುಂದಿ ಠಾಣೆ ಪೊಲೀಸರು, ವಿಚಾರಣೆ ವೇಳೆ ಪ್ರಕರಣದ ಎಳೆ ಎಳೆಯನ್ನು ಬಿಡಿಸಿಟ್ಟಿದ್ದಾರೆ.
ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕ್ಯಾದಿಗೇರಾ ಗ್ರಾಮದ ರೇಣುಕಾ, ಸಿರವಾರ ಗ್ರಾಮದ ಅನ್ಯ ಜಾತಿಯ ಶಂಕರನನ್ನು ವಿವಾಹವಾಗಿದ್ದಳು. ಕಳೆದ ಒಂದೂವರೆ ವರ್ಷದಿಂದ ರೇಣುಕಾ ಹಾಗೂ ಶಂಕರ ಇಬ್ಬರು ಜೀವನ ನಡೆಸುತ್ತಿದ್ದರು.