Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.. 20 ಕೋಟಿ ಡೀಲ್ ಪ್ರಕರಣದಲ್ಲಿ ಸಿಲುಕಿಕೊಂಡು ತಲೆಮರೆಸಿಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಪತ್ತೆಗೆ ಸಿಸಿಬಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಜನಾರ್ದನ ರೆಡ್ಡಿ ಆಪ್ತನ ವಿಚಾರಣೆ ವೇಳೆ ಪೊಲೀಸರಿಗೆ ಕೆಲ ಮಾಹಿತಿ ಸಿಕ್ಕಿದ್ದು, ವೈಎಸ್​ಆರ್​ ಕಾಂಗ್ರೆಸ್​ ಜಗನ್ಮೋಹನ್​ ರೆಡ್ಡಿಯ ಆಪ್ತ ಬಾಬು ರೆಡ್ಡಿ ಆಶ್ರಯದಲ್ಲಿ ಜನಾರ್ದನ ರೆಡ್ಡಿ ಇದ್ದಾರೆನ್ನುವ ಸುಳಿವು ಸಿಕ್ಕಿದೆ.

2.. ಇನ್ನು ಆಂಬಿಡೆಂಟ್‌ ಡೀಲ್‌ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿ ಇಂದು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈಗಾಗಲೇ ಅವರ ಪರ ವಕೀಲರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇಂದು ಅರ್ಜಿ ಸಲ್ಲಿಸವ ಸಾಧ್ಯತೆಯಿದೆ.

3.. ಆಂಬಿಡೆಂಟ್ ಕಂಪನಿಯ ಮಾಲೀಕ ಫರೀದ್‌ನ್ನು ಸಿಸಿಬಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದರು. ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್, ತಮ್ಮದೇ ಭಾಷೆಯಲ್ಲಿ ಫರೀದ್‌ನಿಂದ ಸತ್ಯಾಂಶ ಕಕ್ಕಿಸಿದ್ರು. ಜನಾರ್ದನ ರೆಡ್ಡಿಗೆ 20 ಕೋಟಿ, ಉದ್ಯಮಿ ಒಬ್ಬರಿಗೆ 35 ಕೋಟಿ, ಆಸಿಪ್ ಅಲಿ ಅನ್ನೋರಿಗೆ 15 ಕೋಟಿ ಕೊಟ್ಟಿರೋದಾಗಿ ಬಾಯ್ಬಿಟ್ಟ ಫರೀದ್‌, ರಾಜಕಾರಣಿಗಳ ಹೆಸರು ಕೂಡ ಬಾಯ್ಬಿಟ್ಟಿದ್ದಾನೆ.

4.. ಸಿಸಿಬಿಗೆ ಕಚೇರಿಗೆ ಫರೀದ್ ಹಾಜರಾದ ವಿಚಾರ ಮಾದ್ಯಮಗಳಲ್ಲಿ‌ ಪ್ರಸಾರವಾಗುತ್ತಿದ್ದಂತೆ ಹಣ ಕಟ್ಟಿ ಮೋಸ ಹೋದ ಜನ ಸಿಸಿಬಿ‌ ಕಚೇರಿಯತ್ತ ದೌಡಾಯಿಸಿ ನ್ಯಾಯಕ್ಕಾಗಿ ಮನವಿ ಮಾಡಿಕೊಂಡ್ರು. ನಾವು ಸಹ ಫರೀದ್‌ಗೆ ಲಕ್ಷಲಕ್ಷ ಹಣ ಕೊಟ್ಟು ಮೋಸ ಹೋಗಿದ್ದೇವೆ. ನಮಗೆ ನಮ್ಮ ‌ಹಣವನ್ನುಕೊಡಿಸುವಂತೆ ಮನವಿ ಸಲ್ಲಿಸಿದ್ರು.

5..ಆಂಬಿಡೆಂಟ್‌ ವಂಚನೆ ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಕುಮಾರಸ್ವಾಮಿ ವಂಚನೆ​ ಕೇಸ್‌ ಸಂಬಂಧ ಹೇಳಿಕೆ ನೀಡುವುದು ಸೂಕ್ತವಲ್ಲ ಎಂದು ತಿಳಿಸಿದ್ರು. ಬೆಂಗಳೂರು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿದ್ದೇವೆ. CCB ತನಿಖೆಯ ಯಾವ ಹಂತದಲ್ಲೂ ನಾವು ಹಸ್ತಕ್ಷೇಪ ಮಾಡಲ್ಲ. ಲೂಟಿಕೋರ ಕಂಪನಿಯಿಂದ ಅಮಾಯಕರಿಗೆ ವಂಚನೆಯಾಗಿದೆ. ಹೀಗಾಗಿ ಶ್ರೀ ಸಾಮಾನ್ಯರಿಗೆ ಅನ್ಯಾಯವಾಗೋಕೆ ಸರ್ಕಾರ ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ...

6..ಬಿಜೆಪಿಯ ತೀವ್ರ ವಿರೋಧದ ನಡುವೆಯೂ ಮೈತ್ರಿ ಸರ್ಕಾರ ನಾಳೆ ಟಿಪ್ಪು ಜಯಂತಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಆಹ್ವಾನ ಪತ್ರಿಕೆಯನ್ನು ಮುದ್ರಿಸಲಾಗಿದೆ. ಆದ್ರೆ ಕಾರ್ಯಕ್ರಮ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹೆಸರೇ ಇಲ್ಲ..

7..ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಸಚಿವ ಜಮೀರ್​​ ಅಹ್ಮದ್​​​ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​ನಲ್ಲೇ ಟಿಪ್ಪು ಜಯಂತಿ ಆಚರಿಸಲಾಗುತ್ತಿದ್ದು, 2 ಸಾವಿರ ಟಿಕೆಟ್ ಮುದ್ರಣ ಮಾಡಿಸಿದ್ದೇವೆ. ಟಿಕೆಟ್ ಹೊಂದಿದವರಿಗೆ ಮಾತ್ರ ಪ್ರವೇಶ ಇರುತ್ತದೆ ಎಂದರು. ಅಲ್ದೇ ಬಿಜೆಪಿಯವರು ರಾಜಕೀಯಕ್ಕೆ ವಿರೋಧ ಮಾಡ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

8..ನಾಳೆ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಚಿತ್ರದುರ್ಗದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇಂದು ಬೆಳಿಗ್ಗೆಯಿಂದ ನವೆಂಬರ್ 10ರ ರಾತ್ರಿವರೆಗೂ ಸೆಕ್ಷನ್ 144 ಜಾರಿ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆಯಾದ್ಯಂತ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎರಡು ದಿನಗಳ ಕಾಲ ಮದ್ಯ ಮಾರಾಟಕ್ಕೂ ನಿಷೇಧ ಹೇರಲಾಗಿದೆ. ಸರ್ಕಾರದ ನಿರ್ದೇಶನದಂತೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ ಅಂತ ಚಿತ್ರದುರ್ಗ ಜಿಲ್ಲಾಧಿಕಾರಿ ಆರ್. ಗಿರೀಶ್, ಎಸ್ಪಿ ಡಾ.ಕೆ ಅರುಣ್ ಸ್ಪಷ್ಟಪಡಿಸಿದ್ದಾರೆ...

9..ರಾಜ್ಯದಲ್ಲಿ ಟಿಪ್ಪು ಜಯಂತಿ ಸಮೀಪಿಸುತ್ತಿದ್ದೂ ಜಯಂತಿ ಆಚರಣೆಗೂ ಮುನ್ನ ಕೊಡಗು ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಕಳೆದೆ ಮೂರು ವರ್ಷಗಳಿಂದ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯನ್ನ ಆಚರಣೆ ಮಾಡುವ ಮೂಲಕ ಸಾವು ನೋವು ಗಲಭೆಗಳು ಉಂಟಾಗುತ್ತಿದ್ದು, ಟಿಪ್ಪು ಜಯಂತಿಯನ್ನ ಯಾವುದೇ ಕಾರಣಕ್ಕೂ ಆಚರಣೆ ಮಾಡಬಾರದು ಅನ್ನೋ ಒತ್ತಾಯಗಳು ಕೇಳಿ ಬಂದಿವೆ.

10..ಇತ್ತ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದಲ್ಲೂ ಇಂದಿನಿಂದ 3 ದಿನಗಳ ಕಾಲ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಶ್ರೀರಂಗಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಮೈಸೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುವ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಗಡಿ ಗ್ರಾಮ ನಗುವನಹಳ್ಳಿ ಬಳಿ ವಾಹನಗಳನ್ನ ತಪಾಸಣೆ ಮಾಡಲಾಗುತ್ತದೆ. ಟಿಪ್ಪು ಸಮಾಧಿ ಇರುವ ದರಿಯಾ ದೌಲತ್​ನಲ್ಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಟಿಪ್ಪು ಸಮಾಧಿಗೆ ಪುಷ್ಪಾರ್ಚನೆ ಮಾಡಲು ಮಾತ್ರ ಅವಕಾಶ ನೀಡಲಾಗುವುಸು ಅಂತ ಪೊಲೀಸ್​ ಇಲಾಖೆ ತಿಳಿಸಿದೆ.

11..ಹಾಸನಾಂಭೆ ಸನ್ನಿದಿಯಲ್ಲಿ ಲಾಡು ಪ್ರಸಾದ ಸಿಗದಿದ್ದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಯ ದರ್ಶನಕ್ಕಾಗಿ ಭಕ್ತರು ಸಾವಿರದ 300 ರೂಪಾಯಿ ಕೊಟ್ಟು ಟಿಕೆಟ್​ ಕರೀದಿದಸಿದ್ರು. ಟಿಕೆಟ್​ ತೆಗೆದುಕೊಂಡವ್ರಿಗೆ ಜಿಲ್ಲಾಡಳಿತ ಉಚಿತವಾಗಿ ಲಾಡು ವಿತರಣೆ ಮಾಲಾಗುವುದು ಎಂದಿತ್ತು. ಆದ್ರೆ ಲಾಡು ಪ್ರಸಾದದ ಅಂಗಂಡಿಗೆ ಬೀಗ ಜಡಿದ ವಿತರಕರು ನಾಪತ್ತೆಯಾಗಿದ್ದಾರೆ. ಪ್ರಸಾದ ವಿತರಣೆ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡ್ಬೇಕು ಅಂತ ಭಕ್ತರು ಪಟ್ಟು ಹಿಡಿದಿದ್ರು...

12..ಬೆಂಗಳೂರಿನಲ್ಲಿ ಪಟಾಕಿ ಕಿಡಿ ಬಿದ್ದು ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ಮಲ್ಲೇಶ್ವರಂನ ಸಿಂಡಿಕೇಟ್ ಬ್ಯಾಂಕ್ ಬಿಲ್ಡಿಂಗ್‌ನಲ್ಲಿ ಪಟಾಕಿ ಕಿಡಿಯಿಂದ ಬೆಂಕಿ ತಗುಲಿತ್ತು. ಖಾಲಿ ಕಟ್ಟಡದಲ್ಲಿ ಯಾರು ಇಲ್ಲದ ಹಿನ್ನಲೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನು ಮೊದಲ ಮಹಡಿಯಲ್ಲಿ ಸಿಂಡಿಕೇಟ್ ಬ್ಯಾಂಕ್‌ ಇದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದ್ರು...

13..ಇಮೈಕಾ ನೋಡಿಗಳ್ ಚಿತ್ರದ ಚಿತ್ರೀಕರಣ ಬಿಬಿಎಂ ಕಚೇರಿಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟನೆ ನೀಡಿದ್ದಾರೆ.

ಬಿಬಿಎಂಪಿಯ ಅನುಮತಿ ಪಡೆದು ಚಿತ್ರತಂಡ ಶೂಟಿಂಗ್ ಮಾಡಿದೆ. ಬಿಬಿಎಂಪಿಯ ರಸ್ತೆಗಳು, ಪಾರ್ಕ್ ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಲಿವೆ. ಕನ್ನಡ ಸಿನಿಮಾ ಸೇರಿದಂತೆ ಇತರೆ ಭಾಷೆಯ ಸಿನಿಮಾಗಳ ಚಿತ್ರೀಕರಣ ನಡೆಯುತ್ತವೆ. ಪಾಲಿಕೆಯ ಅನುಮತಿ ಪಡೆಯದೇ ಶೂಟ್ ಮಾಡಲು ಸಾದ್ಯವಿಲ್ಲ. ಬಿಬಿಎಂಪಿಯ ಅನುಮತಿ ಪಡೆದ ನಂತರವೇ ಶೂಟಿಂಗ್ ಮಾಡಿದ್ದಾರೆ. ಬಿಬಿಎಂಪಿಗೆ ಕಟ್ಟಬೇಕಾದ ಬಾಡಿಗೆಯನ್ನು ಚಿತ್ರತಂಡ ಕಟ್ಟಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

14..ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳಗಳಲ್ಲಿ ಒಂದಾದ ಮಲೆ ಮಹದೇಶ್ವರನ ಸನ್ನಿಧಿಯಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅದ್ದೂರಿ ಬ್ರಹ್ಮ ರಥೋತ್ಸವ ಜರುಗಿತು. ಚಾಮರಾಜನಗರ ಜಿಲ್ಲೆಯಲ್ಲಿರುವ ಮಾದಪ್ಪನ ಸನ್ನಿಧಿಗೆ ಲಕ್ಷಾಂತರ ಭಕ್ತರ ದಂಡು ಹರಿದು ಬಂದು ರಥೋತ್ಸವವನ್ನ ಕಣ್ತುಂಬಿಕೊಂಡಿತು. ರಥೋತ್ಸವದಲ್ಲಿ ಭಾಗಿಯಾದ ಲಕ್ಷಾಂತರ ಭಕ್ತರು, ಉಘೇ ಮಾದಪ್ಪ ಎಂದು ತೇರನ್ನು ಎಳೆದು ಸಂಭ್ರಮಿಸಿದ್ರು.

15..ನೋಟು ರದ್ದತಿ ಎಂಬುದು ಸ್ವಯಂ ನಿರ್ಮಿತ ದುರಂತವಾಗಿದ್ದು, ದೇಶದ ಜನರ ಬದುಕಿನ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ನೋಟು ರದ್ದತಿಯ ಎರಡನೇ ವರ್ಷಾಚರಣೆ ಸಂದರ್ಭ ಮಾತನಾಡಿದ ಅವರು ನವೆಂಬರ್ 8 ಭಾರತದ ಇತಿಹಾಸದಲ್ಲಿ ನಿರಾಶಾದಾಯಕ ದಿನವೆಂದು ದಾಖಲಾಗಲಿದೆ. ಈ ದಿನದಂದು ಪ್ರಧಾನಿ ಮೋದಿ ದೇಶದ ಮೇಲೆ ನೋಟು ರದ್ದತಿ ಎಂಬ ದಬ್ಬಾಳಿಕೆಯನ್ನು ನಡೆಸಿದರು.

16..ಪಂಚ ರಾಜ್ಯಗಳ ಚುನಾವಣೆಗೂ ಮೊದಲೇ ಆಲ್‌ ಇಂಡಿಯಾ ಮಜ್ಲಿಸ್‌ ಇತ್ತೆಹಾದುಲ್‌ ಮುಸ್ಲಿಮೀನ್ ಪಕ್ಷದ ನಾಯಕ ಅಸಾದುದ್ದೀನ್‌ ಓವೈಸಿ ಧ್ರುವೀಕರಣಕ್ಕೆ ಕೈ ಹಾಕಿದ್ದಾರೆ. ತೆಲಂಗಾಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಓವೈಸಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಗುರಿಯಾಗಿಸಿಕೊಂಡು ಭಾರತೀಯ ಜನತಾ ಪಾರ್ಟಿ ಮುಸ್ಲಿಂ ಮುಕ್ತ ಭಾರತ ಮಾಡಲು ಹೊರಟಿದೆ ಎಂದು ನೇರವಾಗಿ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಕಿಡಿಕಾರಿದ್ದಾರೆ..

17..ಕೇಂದ್ರ ಸರ್ಕಾರ ಮತ್ತು ಆರ್‌ಬಿಐ ನಡುವಿನ ಬಿಕ್ಕಟ್ಟು ಕುರಿತು ಪ್ರತಿಕ್ರಿಯಿಸಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ತನ್ನ ಹಣಕಾಸು ಬಿಕ್ಕಟ್ಟು ಮುಚ್ಚಲು ಆರ್‌ಬಿಐ ವಶಕ್ಕೆ ಪಡೆಯಲು ಮೋದಿ ಸರ್ಕಾರ ಯತ್ನಿಸುತ್ತಿದೆ. ಇಂತಹ ಯಾವುದೇ ಕ್ರಮಗಳು ಮಹಾದುರಂತವಾಗಲಿದೆ ಎಂದು ಎಂದಿದ್ದಾರೆ. ಅಲ್ಲದೆ ಆರ್‌ಬಿಐನ ಮಂಡಳಿಯಲ್ಲಿ ತನಗೆ ಬೇಕಾದವರು ಮಾತ್ರವೇ ಇರುವಂತೆ ಸರ್ಕಾರ ನೋಡಿಕೊಂಡಿದೆ. ಇದೇ 19ರಂದು ನಡೆಯುವ ಮಂಡಳಿಯ ಸಭೆಯಲ್ಲಿ ತನ್ನದೇ ಪ್ರಸ್ತಾವಗಳನ್ನು ಇಡಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

18..ತಮ್ಮ ರಾಜಕೀಯ ಗುರುವಾಗಿರುವ ಬಿಜೆಪಿ ಪಕ್ಷದ ಹಿರಿಯ ನಾಯಕ ಅಡ್ವಾಣಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ್ರು. ದೆಹಲಿಯ ಅಡ್ವಾಣಿ ನಿವಾಸಕ್ಕೆ ಭೇಟಿ ನೀಡಿದ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿದರು. ಮೊದಲು ಟ್ವಿಟ್ಟರ್ ಮೂಲಕ ಶುಭಾಶಯ ತಿಳಿಸಿದ ಅವರು ದೇಶಕ್ಕೆ ನೀಡಿದ್ದ ಕೊಡುಗೆ ಸ್ಮರಿಸಿದ್ದರು. ಇದಾದ ಬಳಿಕ ಅವರ ನಿವಾಸಕ್ಕೆ ತೆರಳಿ ಶುಭಾಶಯ ತಿಳಿಸಿದ್ರು.

19..ತೆಲಂಗಾಣದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೆ ಏರಿದರೆ ಹೈದರಾಬಾದ್ ನಗರದ ಹೆಸರನ್ನು ಭಾಗ್ಯನಗರ ಎಂದು ಬದಲಿಸುತ್ತೇವೆ ಎಂದು ಬಿಜೆಪಿ ಮುಖಂಡ ರಾಜ ಸಿಂಗ್ ಹೇಳಿದ್ದಾರೆ. ಅಷ್ಟೇ ಅಲ್ಲದೆ ಸಿಕಂದರಾಬಾದ್ ಹಾಗೂ ಕರೀಮ್ ನಗರ್ ಹೆಸರುಗಳನ್ನು ಸಹ ಬದಲಿಸುವುದಾಗಿ ಹೇಳಿದ್ದಾರೆ. ಮೊದಲಿಗೆ ಹೈದರಾಬಾದ್ ಹೆಸರು ಭಾಗ್ಯನಗರ್ ಅಂತಲೇ ಇತ್ತು. ಆದರೆ ಕುತುಬ್ ಷಾ ಬಂದ ನಂತರ ಹೈದರಾಬಾದ್ ಎಂದು ಬದಲಾಯಿಸಿದ. ಆದ್ದರಿಂದ ಹೈದರಾಬಾದ್ ಹೆಸರು ಬದಲಿಸುವ ಆಲೋಚನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

20..ಜಮ್ಮು-ಕಾಶ್ಮೀರದ ಕುಪ್ವಾರದಿಂದ ಬರುತ್ತಿದ್ದ ಟ್ರಕ್ ನಲ್ಲಿ 250 ಕೋಟಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ. ಸೇಬು ಸಾಗಿಸುವ ಬಾಕ್ಸ್ ನಲ್ಲಿ ಇವನ್ನು ಸಾಗಿಸಲಾಗುತ್ತಿತ್ತು ಎಂದು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯುರೋ ತಿಳಿಸಿದ್ದು, ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಈ ಟ್ರಕ್ ನಲ್ಲಿದ್ದ ಸರಕನ್ನು ಉತ್ತರ ದೆಹಲಿಯ ಆಜಾದ್ ಪುರ್ ಮಂಡಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಇನ್ನು ನಾರ್ಕೊಟಿಕ್ಸ್ ಬ್ಯುರೋ ಹಾಗೂ ಜಮ್ಮು-ಕಾಶ್ಮೀರದ ಪೊಲೀಸರು ಸೇರಿ ಕಾರ್ಯಾಚರಣೆ ನಡೆಸಿದ್ದು, ಜಮ್ಮು-ಕಾಶ್ಮೀರದ ಹೆದ್ದಾರಿ ಟೋಲ್ ಪ್ಲಾಜಾ ಬಳಿ ಪರಿಶೀಲನೆ ನಡೆಸಿ ಹೆರಾಯಿನ್ ವಶಪಡಿಸಿಕೊಂಡಿದ್ದಾರೆ..

21..ರಾಷ್ಟ್ರ ರಾಜಧಾನಿಯಲ್ಲಿ ವಾಯು ಮಾಲಿನ್ಯ ಏಕಾಏಕಿ ಹೆಚ್ಚಾಗಿದ್ದು, ವಾತಾವರಣ ವಿಷವಾಗ್ತಿದೆ. ಮಕ್ಕಳು, ವೃದ್ಧರ ಆರೋಗ್ಯದ ಮೇಲೆ ಅತಿ ಬೇಗ ಇದ್ರ ಪರಿಣಾಮ ಬೀರುತ್ತಿದೆ. ಇನ್ನು ಜನರು ಮನೆಯಿಂದ ಹೊರ ಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ದೆಹಲಿ ಕಲುಷಿತ ವಾತಾವರಣ ಸುಧಾರಣೆಗೆ ಐತಿಹಾಸಿಕ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗ್ತಿದ್ದು, .ನಾಲ್ಕು ದಿನಗಳ ಕಾಲ ಸರಕು ಸಾಗಣೆ ಟ್ರಕ್ ಗಳ ನಿಷೇಧ ಹೇರಲು ನಿರ್ಧರಿಸಲಾಗಿದೆ.

22..ಸುಪ್ರೀಂಕೋರ್ಟ್‌ನ ಇತ್ತೀಚಿನ ತೀರ್ಪಿನ ಸಮರ್ಪಕ ಅನುಷ್ಠಾನದ ನಿಟ್ಟಿನಲ್ಲಿ ದೆಹಲಿ ಪೊಲೀಸರು ದಿಟ್ಟ ಕ್ರಮ ಕೈಗೊಂಡಿದ್ದು ನಿನ್ನೆ ರಾತ್ರಿ ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದವರು ಮತ್ತು ರಾತ್ರಿ 8 ಗಂಟೆಗೂ ಮುನ್ನ ಪಟಾಕಿ ಸಿಡಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಮಾರು 600 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದು, 100ಕ್ಕೂ ಹೆಚ್ಚು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ವಾಯುವ್ಯ ದೆಹಲಿಯಲ್ಲಿ ಪರವಾನಗಿ ಇಲ್ಲದೆ ಮಾರಾಟ ಮಾಡಲಾಗುತ್ತಿದ್ದ 140 ಕೆ.ಜಿ ಪಟಾಕಿ ವಶಪಡಿಸಿಕೊಂಡಿದ್ದು, 57 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

23..ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಾಗೆಯೇ, ದೇಶದ ಹಲವು ಕಟ್ಟಡಗಳು ವಿದ್ಯುತ್‌ ದೀಪಾಲಂಕಾರದಿಂದ ಜಗಮಿಸುತ್ತಿವೆ. ಗೋಲ್ಡನ್‌ ಟೆಂಪಲ್, ಇಂಡಿಯಾ ಗೇಟ್, ರಾಷ್ಟ್ರಪತಿ ಭವನ ಕಣ್ಣಿಗೆ ಬೆಳಕಿನ ಹಬ್ಬದೂಟ ಉಣಬಡಿಸಿದವು. ಇನ್ನು ಹೌರಾ ಸೇತುವೆ ಬಳಿಯ ಕೆಲವು ಕಟ್ಟಗಳು ಸಿಂಗಾರಗೊಂಡು ನೀಡುಗರ ಮನಸೆಳೆದವು...

24..ಅಮೆರಿಕಾದ ಲಾಸ್ ಎಂಜಲೀಸ್‌ಗೆ ಸಮೀಪದ ನೈಟ್‌ಕ್ಲಬ್‌ವೊಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ಪೊಲೀಸ್‌ ಅಧಿಕಾರಿ ಸೇರಿದಂತೆ 12 ಮಂದಿ ಮೃತಪಟ್ಟಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗಾಗಿ ಇಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಆಯೋಜನೆಯಾಗಿತ್ತು. ನೂರಾರು ಮಂದಿ ಯುವಕ- ಯುವತಿಯರು ಭಾಗವಹಿಸಿದ್ರು, ಇದನ್ನೇ ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಇನ್ನು ದಾಳಿಯಲ್ಲಿ ಮೃತಪಟ್ಟಿರುವವ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದ್ದು, ದಾಳಿ ನಡೆಸಿರುವ ಶಸ್ತ್ರಧಾರಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.

25..ಅಮೆರಿಕದ ಅತ್ಯಂತ ಮಹತ್ವದ ಉಪಚುನಾವಣೆಯ ಫ‌ಲಿತಾಂಶ ಪ್ರಕಟವಾಗಿದ್ದು, ವಿರೋಧ ಪಕ್ಷ ಡೆಮಾಕ್ರಾಟ್‌ ಈಗ ಕೆಳಮನೆಯನ್ನು 8 ವರ್ಷಗಳ ಅನಂತರ ಮೊದಲ ಬಾರಿಗೆ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಆದರೆ ಮೇಲ್ಮನೆಯಲ್ಲಿ ಆಡಳಿತಾರೂಢ ರಿಪಬ್ಲಿಕನ್‌ ಪಕ್ಷ ಗೆಲುವು ಸಾಧಿಸಿದೆ. ಕೆಳಮನೆಯಲ್ಲಿ ಡೆಮಾಕ್ರಾಟ್‌ಗಳು 23ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಟ್ರಂಪ್‌ ರೂಪಿಸಿದ ಕಾನೂನುಗಳಿಗೆ ಪಕ್ಷ ಅಡ್ಡಿಪಡಿಸಲಿವೆ. ಇದರಿಂದಾಗಿ ಮುಂದಿನ ಎರಡು ವರ್ಷಗಳವರೆಗೆ ಟ್ರಂಪ್‌ಗೆ ಸಂಕಷ್ಟ ಎದುರಾಗಲಿದೆ.

26..ಮೂವತ್ಮೂರು ವರ್ಷಗಳ ನಂತ್ರ ಪುನೀತ್ ರಾಜ್​ಕುಮಾರ್ ಬೆಟ್ಟದ ಹೂವು ಸಿನಿಮಾ ನೆನಪಿಸಿಕೊಂಡಿದ್ದಾರೆ.. ಬೆಟ್ಟದ ಹೂವು ಸಿನಿಮಾ ಚಿತ್ರೀಕರಣವಾದ ಅತ್ತಿಗುಂಡಿಗೆ ಭೇಟಿ ಕೊಟ್ಟು ಹಳೇ ದಿನಗಳನ್ನ ನೆನೆದು, ಅಲ್ಲಿನ ಜನರನ್ನ ಮಾತನಾಡಿಸಿ ಖುಷಿಪಟ್ಟಿದ್ದಾರೆ. ಇನ್ನು ಅಲ್ಲಿನ ಜನರನ್ನ ಮಾತನಾಡಿಸಿ, ಬೆಟ್ಟದ ಹೂವು ಸಿನಿಮಾ ಶೂಟಿಂಗ್ ಮಾಡಿದ ಅನುಭವವನ್ನ ಹಂಚಿಕೊಂಡಿದ್ದಾರೆ. ಪುನೀತ್ ರಾಜ್​ಕುಮಾರ್ ತಮ್ಮ ಅಫೀಷಿಯಲ್ ಫೇಸ್ಬುಕ್ ಪೇಜ್​ನಲ್ಲಿ ಈ ವಿಡಿಯೋ ಶೇರ್ ಮಾಡಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ.

27..ಕಾರು ಹಿಮ್ಮುಖವಾಗಿ ಚಲಿಸಿದರೂ ಕೂಡ, ಕಾರ್ ಒಳಗಿದ್ದ ಮಗು ಆಶ್ಚರ್ಯಕರ ರೀತಿಯಲ್ಲಿ ಸೇಫ್ ಆದ ಘಟನೆ ಮೈಸೂರಿನಲ್ಲಿ ನಡೆದಿದೆ. ನಿಂತಿದ್ದ ಕಾರಿನ ಹಯಾಂಡ್ ಬ್ರೇಕ್ ಇದ್ದಕ್ಕಿದ್ದಂತೆ ರಿಲೀಸ್ ಆಗಿದ್ದು, ಅರ್ಧ ಕಿ.ಮೀ ಹಿಮ್ಮುಖವಾಗಿ ಚಲಿಸಿದ್ದು, ಕಾರು ಚರಂಡಿಗೆ ಬಿದ್ದರೂ, ಕಾರ್ ಒಳಗಿದ್ದ ಮಗು ಸೇಫ್ ಆಗಿದೆ.

28..ರಾಯಚೂರಿನಲ್ಲಿ ಅವಧಿಗೂ ಮುನ್ನವೇ 11ಸಾವಿರ ಮೆಗಾವ್ಯಾಟ್ ಗಡಿ ದಾಟಿದ್ದು, ವಿದ್ಯುತ್ ಬೇಡಿಕೆ ಹೆಚ್ಚಾಗಿದ್ದು, ಧಿಡೀರ್ ವಿದ್ಯುತ್ ಬೇಡಿಕೆಯಿಂದ ಕೆಪಿಸಿಸಿಗೆ ಆತಂಕ ಹೆಚ್ಚಾಗಿದೆ. ರಾಜ್ಯದಲ್ಲಿ ಇದುವರೆಗೂ ಬೇಸಿಗೆಯಲ್ಲಿ ಮಾತ್ರ ವಿದ್ಯುತ್ ಬೇಡಿಕೆ 10 ಸಾವಿರದ ಗಡಿ ದಾಟಿತ್ತು.ಈ ಬಾರಿ ಚಳಿಗಾಲದಲ್ಲೆ ದಾಖಲೆ ಪ್ರಮಾಣದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಚಳಿಗಾಲದಲ್ಲಿಯೇ ಈ ಮಟ್ಟಕ್ಕಿರುವ ವಿದ್ಯುತ್ ಬೇಡಿಕೆ ಬೇಸಿಗೆಯಲ್ಲಿ ಅದೆಷ್ಟಾಗಬಹುದು ಎಂಬ ಲೆಕ್ಕಾಚಾರದಲ್ಲಿರುವ ಅಧಿಕಾರಿಗಳು, ಹೀಗೆ ಬೇಡಿಕೆ ಮುಂದುವರೆದಲ್ಲಿ ನಗರ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎನ್ನಲಾಗಿದೆ.

29..ಚುನಾವಣೆಯಲ್ಲಿ ಭಾಗಿಯಾಗುವ ಸಲುವಾಗಿ ಒಪ್ಪಿಗೆ ಪಡೆಯಲು 18 ಅನರ್ಹ ಶಾಸಕರು ಶಶಿಕಲಾ ಭೇಟಿ ಮಾಡಲು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ದಿನಕರನ್ ಜೊತೆ ಪಳನಿಅಪ್ಪನ್, ಮುರುಗನ್, ಸಂದಿಲ್ ಬಾಲಾಜ್, ರತ್ನಸಬಾಪತಿ, ಸುಂದರ್ ರಾಜನ್, ಜಯಂತಿ ಪದ್ಮನಾಭನ್ ಸೇರಿ 11ಜನ ಶಶಿಕಲಾರನ್ನು ಭೇಟಿಯಾದರು.

30.. 84ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಮತ್ತೆ ಬದಲಾಗಿದ್ದು, ಧಾರವಾಡದಲ್ಲಿ ನಡೆಯಲಿರುವ ಸಮ್ಮೇಳನದ ದಿನಾಂಕ ಮೂರನೇ ಬಾರಿ ಬದಲಾಗಿದೆ. ಜನವರಿ 6,7,8ಕ್ಕೆ ನಿಗದಿಯಾಗಿದ್ದ ದಿನಾಂಕ ಇದೀಗ, 4,5,6ಕ್ಕೆ ನಿಗದಿ ಮಾಡಲಾಗಿದೆ. ಜ.8ರಂದು ಅಖಿಲ ಭಾರತ ಮಟ್ಟದ ಮುಷ್ಕರವಿರುವ ಹಿನ್ನೆಲೆ ದಿನಾಂಕ ಬದಲಾಯಿಸಲಾಗಿದೆ. ಈ ಬಗ್ಗೆ ಧಾರವಾಡ ಡಿಸಿ ದೀಪಾ ಚೋಳನ್ ಹೇಳಿಕೆ ನೀಡಿದ್ದು, ಸಮ್ಮೇಳನದ ಸ್ಥಳವನ್ನು ಪರಿಶೀಲಿಸಿದರು.

31..ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಬಾಗಲಕೋಟೆ ಜಿಲ್ಲೆಯ ಕಳಸಕೊಪ್ಪ ಗ್ರಾಮದಲ್ಲಿ ಕೆರೆಗೆ ಬಾಗೀನ ಬಿಡುವಾಗ, ಶೂ ಹಾಕಿಕೊಂಡೆ ಬಾಗೀನ ಅರ್ಪಿಸಿದ್ದಾರೆ. ಶೂ ಕಳಚಿ ಎಂದು ಶಾಸಕ ಮುರುಗೇಶ್ ನಿರಾಣಿ ಸೂಚಿಸಿದರೂ ಕೂಡ, ಕ್ಯಾರೆ ಎನ್ನದ ಈಶ್ವರಪ್ಪ ಶೂ ಹಾಕಿಕೊಂಡು ಬಾಗೀನ ಅರ್ಪಿಸಿದರು.

32..ಹಾಸನದಲ್ಲಿ ಶಾಂತಿಯುತವಾಗಿ ಟಿಪ್ಪು ಜಯಂತಿ ವಿರುದ್ದ ಪ್ರತಿಭಟನೆ ಮಾಡಬೇಕು, ಶಾಂತಿಯುತ ಪ್ರತಿಭಟನೆ ಮಾಡದಿದ್ದರೆ ಕಠಿಣ ಕ್ರಮ ಜರುಗಿಸುತ್ತೇವೆ ಎಂದು ಹಾಸನ ಜಿಲ್ಲಾ ಎಸ್ಪಿ ಪ್ರಕಾಶ್ ಗೌಡ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ಹಾಸನದ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ನಿಯೋಜನೆ ಈಗಗಾಲೇ ಮಾಡಿದ್ದು, ಪ್ರತಿಭಟನಾಕಾರರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

33..ರೋಬೋ ವಿರುದ್ಧ ಕನ್ನಡಪರ ಹೋರಾಟಗಾರ ವಾಟಾಳಿ ನಾಗರಾಜ್ ತಮಟೆ ಪ್ರತಿಭಟನೆ ನಡೆಸಿದರು. ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳಿಗೆ ಅನ್ಯಾಯವಾಗುತ್ತಿದೆ. ಕನ್ನಡ ನೆಲದಲ್ಲಿ ಪರಭಾಷೆ ಚಿತ್ರಗಳ ಅಬ್ಬರ ಜಾಸ್ತಿಯಾಗಿದ್ದು, ಇದನ್ನ ವಿರೋಧಿಸಿ ಫಿಲಂ ಚೇಂಬರ್ ಮುಂದೆ ವಾಟಾಳ್ ಪ್ರತಿಭಟನೆ ನಡೆಸಿದರು.

34..ಪರಿಸರದ ಬಗ್ಗೆ ಕಾಳಜಿಯಿಂದ ಸೈಕಲ್ ಸವಾರಿ ಮಾಡಿ, ದೇಶ ಸುತ್ತುವ ಮೂಲಕ ಯುವಕನೋರ್ವ ಪರಿಸರ ಸಂರಕ್ಷಣೆಗೆ ಕರೆ ನೀಡಿದ್ದಾರೆ. ಸೆಕಲ್ ಬಳಸಿ ಪೆಟ್ರೋಲ್ ಉಳಿಸಿ ಎಂಬ ಸ್ಲೋಗನ್ ಹೇಳಿಕೊಂಡು. ಪರಿಸರ ಸಂರಕ್ಷಿಸಿ ಎಂಬ ನಾಮಫಲಕ ಹಾಕಿಕೊಂಡು ಸೈಕಲ್ ಸವಾರಿ ಹೊರಟಿದ್ದಾನೆ ರಾಜನ್. ಅ.2, 2017ರಂದು ಸೈಕಲ್ ಸವಾರಿ ಆರಂಭಿಸಿರುವ ರಾಜನ್, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಸೈಕಲ್ ಸವಾರಿ ಮಾಡುವ ಆಶಯ ಹೊಂದಿದ್ದಾರೆ.

35..ಪ್ರತಿ ಬೀದಿಬದಿಯ ವ್ಯಾಪಾರಿಗಳಿಗೆ ಎರಡರಿಂದ ಹತ್ತು ಸಾವಿರದವರೆಗೆ ಸಾಲ ಕೊಡುತ್ತೇವೆಂದು ಬಂಡೆಪ್ಪ ಕಾಶಂಪುರ್ ಹೇಳಿದ್ದಾರೆ. ಇಪ್ಪತ್ತೆರಡಕ್ಕೆ ಈ ಸಾಲ ಯೋಜನೆಗೆ ಚಾಲನೆ ನೀಡಲಾಗುವುದು, ಪ್ರತಿ ದಿನ ನೂರು ರೂಪಾಯಿ ಕಟ್ಟುವಂತೆ ಅವರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ಜೊತೆಗೆ ರೈತರಿಗೆ ಕ್ಲಸ್ಟರ್ ಮಟ್ಟದಲ್ಲಿ ಮುನ್ನೂರು ಎಕರೆಗೊಂದರಂತೆ ಸಹಕಾರ ಸಂಘ ಮಾಡಿಕೊಡಲು ಚಿಂತನೆ ನಡೆದಿದೆ. ಆ ಜಮೀನಿನ ಸಂಪೂರ್ಣ ನಿರ್ವಹಣೆಯನ್ನು ಸರ್ಕಾರ ನೋಡಿಕೊಳ್ಳುತ್ತದೆ. ಅವರಿಗೆ ಅವಶ್ಯಕತೆ ಇರುವ ಸಲಕರಣೆಗಳನ್ನು ಕೊಡಿಸಲಾಗುವುದು ಎಂದು ಹೇಳಿದರು.

36..ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿರುವ ಸರ್ಕಾರದ ವಿರುದ್ಧ ಸಂಸದ ನಳೀನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಿಪ್ಪುವಿಗಿಂತ ದೊಡ್ಡ ಮತಾಂಧ ಸಿದ್ದರಾಮಯ್ಯ. ಮುಸಲ್ಮಾನರಿಗೆ ಬೇಡದ, ಇಸ್ಲಾಂ ವಿರೋಧಿ ಟಿಪ್ಪುವಿನ ಜಯಂತಿ ಮಾಡಿದ್ದು ಸಿದ್ದರಾಮಯ್ಯ. ಈ ಮೂಲಕ ತಾನೊಬ್ಬ ಮುಸಲ್ಮಾನ ಮೌಲ್ವಿ ಅಂತ ತೋರಿಸಿಕೊಟ್ಟಿದ್ದು ಸಿದ್ದರಾಮಯ್ಯ. ಹೀಗಾಗಿ ಟಿಪ್ಪುವಿಗಿಂತ ಸಿದ್ದರಾಮಯ್ಯನ ಜಯಂತಿ ಆಚರಿಸೋದು ಒಳಿತು ಎಂದು ಕಿಡಿಕಾರಿದ್ದಾರೆ.

37..ನಾಳೆ ಟಿಪ್ಪು ಜಯಂತಿ ಹಿನ್ನೆಲೆ, ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೆಕ್ಷನ್ 144 ಪ್ರಕಾರ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಇಂದು ಸಂಜೆ 6 ಗಂಟೆಯಿಂದ ನ.11 ರ ರಾತ್ರಿ 12 ಗಂಟೆವರೆಗೂ ಸಕ್ಷನ್ ಜಾರಿ ಮಾಡಲಾಗಿದ್ದು, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ.

38..ವಾಲ್ಮೀಕಿ ಸಮುದಾಯಾದ ಕುರಿತು ಅವಹೇಳನಕಾರಿ ವಿಡಿಯೋ ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುರಿಗಾಯಿಯನ್ನ ಅರೆಸ್ಟ್ ಮಾಡಲಾಗಿದೆ. ಕೊಪ್ಪಳ ಪೊಲೀಸರು ವಿಠಲ್ ಸಹದೇವ ಗಾವಡೆ(19)ಯನ್ನ ಬಂಧಿಸಿದ್ದಾರೆ. ವಿಠಲ್ ವಾಲ್ಮೀಕಿ ಸಮುದಾಯದ ಕುರಿತು ಅವಹೇಳನಕಾರಿಯಾಗಿ ಸೆಲ್ಫಿ ವಿಡಿಯೋ ಮಾತನಾಡಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

39..ಕೊಪ್ಪಳ ತಾಲೂಕಿನ ನರೇಗಲ್ ಗ್ರಾಮದ ಅಂಗನವಾಡಿ ಕೇಂದ್ರದೊಳಗೆ ನಾಗರಹಾವು ನುಗ್ಗಿದ್ದು, ಅಂಗನವಾಡಿಯ ನಿಜಸಂಗತಿ ಬಯಲಿಗೆ ಬಂದಿದೆ. ಅಂಗನವಾಡಿಯೊಳಗೆ ಹಾವು ಹುಡುಕಲು ಹೋದಾಗ, ಅಲ್ಲಿ ಕೊಳೆತ ಮೊಟ್ಟೆ, ಹಳಸಿದ ಬೆಲ್ಲ ಇರುವುದು ಬೆಳಕಿಗೆ ಬಂದಿದೆ. ಅಲ್ಲದೇ ಅಂಗನವಾಡಿ ಶಿಕ್ಷಕಿ ಹಾಗೂ ಅಡುಗೆ ಸಹಾಯಕಿ ಸೇರಿ ಪಡಿತರ ಮನೆಗೆ ಒಯ್ಯುತ್ತಿದ್ದ ಆರೋಪವಿದ್ದು, ಇಬ್ಬರನ್ನೂ ಅಮಾನತುಗೊಳಿಸಲು ಗ್ರಾಮಸ್ಥರ ಆಗ್ರಹಿಸಿದ್ದಾರೆ.

40..ಕಾರ್ಪೋರೇಟರ್ ಅಳಿಯನ ಮೇಲೆ ಪೊಲೀಸ್ ಇನ್ಸ್ಪೆಕ್ಟರ್ ಗೂಂಡಾಗಿರಿ ನಡೆಸಿದ್ದು, ವಾರ್ಡ್ ನಂಬರ್ 122 ಕಾರ್ಪೋರೇಟರ್ ಗಾಯತ್ರಿ ಎಂಬುವರ ಅಳಿಯ ಬಾಬು ಎಂಬುವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಕೃಷ್ಣಪ್ಪ ಎಂಬುವರ ದ್ವೇಷದ ಮೇಲೆ ಬಾಬು ಮೇಲೆ ಇನ್ಸ್ಪೆಕ್ಟರ್ ಮಂಜು ಹಲ್ಲೆ ಮಾಡಿದ್ದಾರೆನ್ನಲಾಗಿದೆ.

41..ನಟ ದುನಿಯಾ ವಿಜಿ ಕೌಟುಂಬಿಕ ಕಲಹ ವಿಚಾರಕ್ಕೆ ಸಂಬಂಧಿಸಿದಂತೆ, ವಿಚ್ಛೇದನ ಕೋರಿ ನಟ ದುನಿಯಾ ವಿಜಿ ಅರ್ಜಿ ಸಲ್ಲಿಸಿದ್ದು, ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ದುನಿಯಾ ವಿಜಿ ಮನೆಗೆ ಹೋಗದಂತೆ ನಾಗರತ್ನಗೆ ನಿರ್ಬಂಧ ಹೇರಲಾಗಿದೆ. ಅಲ್ಲದೇ, ದುನಿಯಾ ವಿಜಯ್ ವಿರುದ್ಧ ಹೇಳಿಕೆ ನೀಡುವಂತಿಲ್ಲ.ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ವಿಜಿ ಅಥವಾ ವಿಜಿ ಕುಟುಂಬದವರ ವಿರುದ್ಧ ಹೇಳಿಕೆ ಅಥವಾ ಸಂದರ್ಶನ ನೀಡುವಂತಿಲ್ಲ ಎಂದು ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಿಂದ ನಿರ್ಬಂಧ ಹೇರಲಾಗಿದೆ.

42..ಪ್ರಧಾನಿ ಮೋದಿಯವರನ್ನ ಜೀವಂತ ಸುಡುವ ಸಮಯ ಬಂದಿದೆ ಎಂಬ ಟಿಬಿ ಜಯಚಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾಧ್ಯಮ ಪ್ರಕಟಣೆ ಮೂಲಕ ಬಿಎಸ್ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯಚಂದ್ರರವರು ಪ್ರಧಾನಿ ಅವರಿಗೆ ಅಗೌರವ ಮಾಡಿ ತಮ್ಮ ಕೀಳುತನವನ್ನ ಪ್ರದರ್ಶಿಸಿದ್ದಾರೆ. ಮೋದಿಯವರ ಜನಪ್ರಿಯತೆ ಕಂಡು ಕಾಂಗ್ರೆಸ್ ನವ್ರು ಬುದ್ದಿ ಸ್ಥಿಮಿತ ಕಳ್ಕೊಂಡಂತೆ ಮಾತಾಡ್ತಿದ್ದಾರೆ. ಜಯಚಂದ್ರ ನಾಡಿನ ಜನತೆ ಕ್ಷಮೆ ಕೇಳಬೇಕು. ಇಲ್ಲದಿದ್ರೆ ಬಿಜೆಪಿ ಜಯಚಂದ್ರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದು, ಅಲ್ಲದೇ ಜೀವ ಬೆದರಿಕೆ ಹಾಕಿರೋದ್ರಿಂದ ಪಕ್ಷ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದೆ.

43..ಬಿಜೆಪಿ ಪ್ರತಿಭಟನೆ ವೇಳೆ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದು, ಯಾತಕ್ಕಾಗಿ ಟಿಪ್ಪು ಜಯಂತಿ ಆಚರಿಸಲಾಗುತ್ತೆ. ಸಾವಿರಾರು ಸೈನಿಕರನ್ನು ಮತಾಂತರ ಮಾಡಿದ್ದಕ್ಕಾಗಿಯೇ..? ಸಾವಿರಾರು ಸ್ತ್ರೀಯರನ್ನು ಹತ್ಯೆ ಮಾಡಿದ್ದಕ್ಕಾಗಿಯೇ..? ಟಿಪ್ಪು ಜಯಂತಿಯನ್ನು ಕೇವಲ ಬಿಜೆಪಿ ಮಾತ್ರವಲ್ಲ ಕನ್ನಡಪರ ಸಂಘಟನೆಗಳೂ ವಿರೋಧಿಸುತ್ತಿವೆ. ಕನ್ನಡ ಲಿಪಿಯಲ್ಲಿದ್ದ ಸಾಹಿತ್ಯವನ್ನು ಸುಟ್ಟು ಹಾಕಿ ಪಾರ್ಸಿಯನ್ನು ಹೇರಿದವನು ಟಿಪ್ಪು ಸುಲ್ತಾನ್. ಹಾಗಾಗಿಯೇ ಟಿಪ್ಪು ಜಯಂತಿಯನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

44..ಶಶಿಕಲಾ ಭೇಟಿ ಮಾಡಿದ ನಂತರ ದಿನಕರನ್ ಹೇಳಿಕೆ ನೀಡಿದ್ದು, ತಮಿಳುನಾಡಿನಲ್ಲಿ ಹೊಸ ರಾಜಕೀಯ ದ್ರುವಿಕರಣ ಆರಂಭವಾಗಲಿದೆ. ಡಿಎಂಕೆ ಇರುವ ಯಾವುದೇ ಘಟ್ ಬಂಧನ್ ಜೊತೇ ಶಶಿಕಲಾ ತಂಡ ಹೋಗುವ ಪ್ರಶ್ನೆಯೇ ಇಲ್ಲ. ಡಿಎಂಕೆ ಹೋದ ಕಡೇ ಜಯಲಲಿತ ಪಕ್ಷ ಹೋಗುವುದಾದರು ಹೇಗೆ ? ಇದೀಗ ಅಮಾನತುಗೊಂಡಿರುವ ಹತ್ತು ಶಾಸಕರುಗಕಳು ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಬದಲಿಗೆ ನೇರವಾಗಿ ಜನರ ಬಳಿ ಹೋಗುವಂತೆ ನಮ್ಮ ನಾಯಕಿ ಶಶಿಕಲಾ ಸೂಚಿಸಿದ್ದಾರೆಂದು ದಿನಕರನ್ ತಿಳಿಸಿದರು.

45..ಕೇಂದ್ರ ಸಚಿವ ಅನಂತ್ ಕುಮಾರ್ ಅನಾರೋಗ್ಯ ವಿಚಾರರಕ್ಕೆ ಸಂಬಂಧಿಸಿದಂತೆ, ಪತ್ನಿ ತೇಜಸ್ವಿನಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಅನಂತ್ ಕುಮಾರ್ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ .ಕ್ಯಾನ್ಸರ್ ಚಿಕಿತ್ಸೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ .ದೇಹದಲ್ಲಿರುವ ತೀವ್ರ ಸೋಂಕು ಸವಾಲಾಗಿ ಪರಿಣಮಿಸಿದೆ .ಕೃತಕ ಉಸಿರಾಟದೊಂದಿವೆ ಚಿಕಿತ್ಸೆ ಮುಂದುವರೆದಿದ್ದು, ವೈದ್ಯರು ಸಂಪೂರ್ಣ ಪ್ರಯತ್ನ ಮಾಡುತಿದ್ದು, ಚಿಕಿತ್ಸೆಗೆ ನಿಧಾನವಾಗಿ ಸ್ಪಂಧಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

46..ಪಟಾಕಿ ಸಿಡಿದು ನಾಲ್ವರ ಕಣ್ಣು, ಕೈ, ಕಾಲುಗಳಿಗೆ ಗಾಯವಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಚಂದ್ರಪ್ಪ (38), ದಿನೇಶ್ (35), ಶಿವಲಿಂಗಪ್ಪ (36) ಗಾಯಗೊಂಡವರಾಗಿದ್ದು, ಚಿಕಿತ್ಸೆ ಪಡೆದಿದ್ದಾರೆ.

47..ಗಾಲಿ ಜನಾರ್ಧನ ರೆಡ್ಡಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕಲಬುರಗಿಯಲ್ಲಿ ಹೇಳಿಕೆ ನೀಡಿದ್ದು, ಉಪ್ಪು ತಿಂದೋರು ನೀರು ಕುಡಿಲೇಬೇಕು. ತಪ್ಪು ಮಾಡಿದೋರಿಗೆ ಶಿಕ್ಷೆಯಾಗಲೇಬೇಕು. ಸಿಸಿಬಿ ಕ್ರಮ ಸರಿಯಿಲ್ಲ ಅಂದ್ರೆ ಸದನದಲ್ಲಿ ಪ್ರಶ್ನೆ ಮಾಡಲಿ. ಕಾನೂನು ಕ್ರಮ ಜರುಗುತ್ತಿರುವಾಗ ಹೆಚ್ಚೇನು ಮಾತಾಡಲ್ಲ ಎಂದಿದ್ದಾರೆ.

48..ಇಂದು ಹಾಸನದ ಅಧಿದೇವತೆ ಹಾಸನಾಂಬೆ ದೇವಸ್ಥಾನದ ಬಾಗಿಲನ್ನ ಇಂದು ಮುಚ್ಚಲಾಯಿತು. ಮಧ್ಯಾಹ್ನ 1.15ಕ್ಕೆ ಪ್ರಧಾನ ಅರ್ಚಕ ನಾಗರಾಜ್ ಬಾಗಿಲು ಮುಚ್ಚಿದ್ದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಉಪವಿಭಾಗಧಿಕಾರಿ ಎಸಿ ನಾಗರಾಜ್ ಉಪಸ್ಥಿತರಿದ್ದರು.

49..ಬಿಜೆಪಿ ರಾಜ್ಯ ವಕ್ತಾರ ಗೋ.ಮಧುಸೂದನ್ ಟಿಪ್ಪು ಜಯಂತಿ ಬಗ್ಗೆ ಹೇಳಿಕೆ ಕೊಟ್ಟಿದ್ದು, ಟಿಪ್ಪು ಜಯಂತಿಯನ್ನು ಸರ್ಕಾರ ಬೆಂಬಲಿಸುತ್ತಿಲ್ಲ. ಕೇವಲ ಕಾಂಗ್ರೆಸ್ ಮಾತ್ರ ಟಿಪ್ಪು ಜಯಂತಿ ಮಾಡುತ್ತಿರೋದು. ಅದಕ್ಕಾಗಿ ಸರ್ಕಾರಿ ವತಿಯಿಂದ ಆಚರಣೆಯಲ್ಲಿ ಸಿಎಂ ಕುಮಾರಸ್ವಾಮಿ ಭಾಗವಹಿಸುತ್ತಿಲ್ಲ. ಇದರಿಂದಾಗಿ ಟಿಪ್ಪು ಒಬ್ಬ ಮತಾಂಧ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎನ್ನುವ ಮೂಲಕ ಟಾಂಗ್ ನೀಡಿದ್ದಾರೆ.

50..ನೋಟು ಅಮಾನ್ಯಿಕರಣಕ್ಕೆ ಎರಡು ವರ್ಷವಾದ ಹಿನ್ನೆಲೆ, ತುಮಕೂರಿನ ಟೌನ್ ಹಾಲ್ ಎದುರು ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಮಾಜಿ ಸಚಿವ ಟಿ.ಬಿ ಜಯಚಂದ್ರ, ಮಾಜಿ ಶಾಸಕ ರಫೀಕ್ ಅಹಮದ್ ಸೇರಿದ್ದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿ, ಪ್ರಧಾನಿ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Next Story

RELATED STORIES