ಅಲಿಖಾನ್ ಮನೆಯಲ್ಲಿ ಜೀವಂತ ಗುಂಡುಗಳು!

ಆ್ಯಂಬಿಡೆಂಟ್ ವಂಚನೆ ಪ್ರಕರಣದಲ್ಲಿ ಸಿಸಿಬಿ ಅಧಿಕಾರಿಗಳು ಬೆಂಗಳೂರಿನ ಆಲಿಖಾನ್ ಮನೆಯಲ್ಲಿ 5 ಜೀವಂತ ಗುಂಡುಗಳನ್ನು ಪತ್ತೆ ಹಚ್ಚಿದ್ದಾರೆ.

57 ಕೆಜಿ ಚಿನ್ನ ವರ್ಗಾವಣೆ ಸೇರಿದಂತೆ ಹಣ ಅಕ್ರಮ ವಹಿವಾಟು ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಬುಧವಾರ ಆಲಿಖಾನ್ ಮನೆಯನ್ನು ಸುಮಾರು 5 ಗಂಟೆಗಳ ಕಾಲ ತಪಾಸಣೆ ನಡೆಸಿದ್ದರು.

ತಪಾಸಣೆ ವೇಳೆ ಆಲಿಖಾನ್ ಮನೆಯಲ್ಲಿ 2.56 ಎಂಎಂನ 5 ಜೀವಂತ ಗುಂಡುಗಳು ಪತ್ತೆಯಾಗಿವೆ. ಸಿಸಿಬಿ ಅಧಿಕಾರಿಗಳು ಈ ಗುಂಡುಗಳನ್ನು ವಶಪಡಿಸಿಕೊಂಡಿದ್ದು, ಲೈಸೆನ್ಸ್ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಒಂದು ವೇಳೆ ಪರವಾನಗಿ ರಹಿತ ಗುಂಡುಗಳಾಗಿದ್ದರೆ ಆಲಿಖಾನ್ ಮತ್ತೊಂದಿಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ.

ಪರವಾನಗಿ ರಹಿತ ಗುಂಡುಗಳು ಎಂದು ದೃಢಪಟ್ಟರೆ ಆಲಿಖಾನ್ ಅವರನ್ನು ಪೊಲೀಸರು ಆಯುಧ ನಿಯಮಗಳ ಪ್ರಕಾರ ಬಂಧಿಸುವ ಸಾಧ್ಯತೆ ಇದೆ. ಇದೇ ವೇಳೆ ಆಲಿಖಾನ್ ಮನೆಯಲ್ಲಿ ವಶಕ್ಕೆ ಪಡೆದ ಇತರ ವಸ್ತುಗಳು ಹಾಗೂ ದಾಖಲೆಗಳ ಪರಿಶೀಲನೆಯೂ ನಡೆಯುತ್ತಿದೆ.