ನಕ್ಸಲರ ದಾಳಿಗೆ ಯೋಧ ಸೇರಿ ಐವರ ಸಾವು

naxals

ನಕ್ಸಲರು ಸುಧಾರಿತ ಸ್ಫೋಟಕ ಬಳಸಿ ನೆಲಬಾಂಬ್ ಸ್ಫೋಟಿಸಿದ್ದರಿಂದ ಸಿಐಎಸ್​ಎಫ್ ಯೋಧ ಸೇರಿದಂತೆ ಐವರು ಮೃತಪಟ್ಟ ಘಟನೆ ಚತ್ತೀಸ್​ಗಢದ ದಾಂತೇವಾಡದಲ್ಲಿ ಜರುಗಿದೆ.

ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶುಕ್ರವಾರ ಪ್ರತ್ಯೇಕ ರ್ಯಾಲಿಗಳಲ್ಲಿ ಭಾಗವಹಿಸಲಿದ್ದು, ಒಂದು ದಿನ ಮುನ್ನ ಈ ಘಟನೆ ನಡೆದಿದೆ. ಘಟನೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್​ಎಫ್) ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಹುಲ್ ಗಾಂಧಿ ನಾಳೆಯಿಂದ ಎರಡು ದಿನಗಳ ಕಾಲ ಚತ್ತೀಸ್​ಗಢದಲ್ಲಿ ತಂಗಲಿದ್ದು, 2 ದಿನದಲ್ಲಿ ಕನಿಷ್ಠ 5 ಕಡೆ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮೋದಿ ಜಗದಲ್​ಪುರಕ್ಕೆ ಭೇಟಿ ನೀಡಲಿದ್ದಾರೆ.

ನಕ್ಸಲರು ಚುನಾವಣೆ ನಡೆಯುವ ಪ್ರದೇಶವನ್ನು ಕೇಂದ್ರೀಕರಿಸಿ ನಡೆಸಿದ ಎರಡನೇ ದಾಳಿ ಇದಾಗಿದೆ. ಇದಕ್ಕೂ ಮುನ್ನ ನಡೆದ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತಪಟ್ಟಿದ್ದರು.

ನವೆಂಬರ್ 12ರಂದು ನಡೆಯುವ ಚುನಾವಣೆಯಲ್ಲಿ 18 ಸ್ಥಾನಗಳಿಗೆ ಮತದಾನ ನಡೆಯಲಿದೆ. ನವೆಂಬರ್ 20ರಂದು 72 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಡಿಸೆಂಬರ್ 11ರಂದು ಫಲಿತಾಂಶ ಪ್ರಕಟವಾಗಲಿದೆ.