ತೃತೀಯ ರಂಗಕ್ಕೆ ದೇವೇಗೌಡ- ಚಂದ್ರಬಾಬು ನಾಯ್ಡು ಮತ್ತೆ ಚಾಲನೆ?

ಕರ್ನಾಟಕದ 5 ಉಪಚುನಾವಣೆಯ ಫಲಿತಾಂಶದಲ್ಲಿ ಮೈತ್ರಿ ಸರಕಾರ 4-1ರಿಂದ ಗೆಲುವು ಸಾಧಿಸುತ್ತಿದ್ದಂತೆ ತೃತೀಯ ರಂಗ ರಚನೆಯ ಕಸರತ್ತಿಗೆ ಮತ್ತೆ ಚಾಲನೆ ದೊರೆತಿದೆ. ಈ ಮೂಲಕ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಪ್ರಯತ್ನ ಮತ್ತೆ ಬಿರುಸುಗೊಂಡಿದೆ.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ಗುರುವಾರ ಭೇಟಿ ಮಾಡಲಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಎಲ್ಲಾ ಪ್ರಾದೇಶಿಕ ಪಕ್ಷಗಳನ್ನು ಒಂದುಗೂಡಿಸುವ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಎಲ್ಲಾ ಪ್ರಾದೇಶಿಕ ಪಕ್ಷಗಳನ್ನ ಒಂದೇ ವೇದಿಕೆಗೆ ತರುವ ಬಗ್ಗೆ ನೇತೃತ್ವ ವಹಿಸುವಂತೆ ದೇವೇಗೌಡರಿಗೆ ಚಂದ್ರಬಾಬು ನಾಯ್ಡು ಮನವಿ ಮಾಡಲಿದ್ದಾರೆ. ಈ ಮೂಲಕ ಪರೋಕ್ಷವಾಗಿ ದೇವೇಗೌಡರಿಗೆ ತೃತೀಯ ರಂಗದ ನೇತೃತ್ವ ವಹಿಸುವ ಸಾಧ್ಯತೆ ಇದೆ.
ಚಂದ್ರಬಾಬು ಭೇಟಿ ಬಳಿಕ ದೇಶ ಸುತ್ತಲಿರುವ ದೇವೇಗೌಡರು, ವಿವಿಧ ಪ್ರಾದೇಶಿಕ ಪಕ್ಷಗಳ ಮುಖಂಡರನ್ನ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ಲೋಕಸಭಾ ಚುನಾವಣೆಗೆ ಪಕ್ಷಗಳನ್ನು ಒಂದುಗೂಡಿಸುವ ಪ್ರಯತ್ನಕ್ಕೆ ಚುರುಕು ನೀಡಲಿದ್ದಾರೆ.
ಚಂದ್ರಬಾಬು ನಾಯ್ಡು ಬೆಂಗಳೂರು ಭೇಟಿ ವೇಳೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನೂ ಸಹ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಈ ಮೂಲಕ ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಬೆಳವಣಿಗೆಯ ಮಾಹಿತಿ ಪಡೆಯಲಿದ್ದಾರೆ.