Top

ನಿಮಿಷ 10, ವಾರ್ತೆ 50

ನಿಮಿಷ 10, ವಾರ್ತೆ 50
X

1.ಜನಾರ್ದನ ರೆಡ್ಡಿಯನ್ನ ಕಟ್ಟಿ ಹಾಕಲು ಆಂಧ್ರದಲ್ಲೂ ಖೆಡ್ಡಾ ತೋಡಲಾಗಿದೆ. ಸದ್ಯ ರೆಡ್ಡಿ ಹೈದ್ರಾಬಾದ್‌ನಲ್ಲಿರುವ ತಮ್ಮ ನಿವಾಸದಲ್ಲೇ ಇದ್ದಾರೆ ಅನ್ನೋ ಅನುಮಾನ ವ್ಯಕ್ತವಾಗ್ತಿದೆ. ಆದ್ರೆ ರೆಡ್ಡಿ ವಂಚನೆ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರಂತೆ.

2.ಜನಾರ್ದನ ರೆಡ್ಡಿ ಡೀಲ್ ಪ್ರಕರಣದಿಂದ ಬಿಜೆಪಿಗೆ ಯಾವುದೇ ಕಂಟಕವಿಲ್ಲ ಅಂತ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಜನಾರ್ದನ ರೆಡ್ಡಿಗೆ ನಮ್ಮ ಪಕ್ಷದಲ್ಲಿ ಯಾವುದೇ ಜವಾಬ್ದಾರಿ ಇಲ್ಲ. ಯಾವ ಕ್ಷೇತ್ರದ ಚುನಾವಣೆ ಜವಾಬ್ದಾರಿಯನ್ನೂ ಅವರು ವಹಿಸಿಲ್ಲ. ಅವರೇ ಮುಂದೆ ಬಂದು ಕೆಲಸ ಮಾಡ್ತೇವೆ ಅಂದ್ರೆ ನಾವ್ಯಾರು ಕೇಳೋಕೆ ಎಂದಿದ್ದಾರೆ.

3.ಆಂಬಿಡೆಂಟ್​ ಸಂಸ್ಥೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಅಂಬಿಡೆಂಟ್ ಸಂಸ್ಥೆಯ ನೂತನ ಮೊಬೈಲ್ ಬಿಡುಗಡೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದರು. ಸಚಿವನಾಗಿ ನಾನು ಕಾರ್ಯಕ್ರಮಕ್ಕೆ ಹೋಗಿದ್ದೆ ಹೊರತು ನನಗೂ ಸಂಸ್ಥೆಯ ಮಾಲೀಕನಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.

4.ಉಪಚುನಾವಣೆಗೂ ಮುನ್ನ ಶಾಂತಾ ಸಂಸತ್ತಿಗೆ, ಡಿಕೆಶಿ ಜೈಲಿಗೆ ಅಂತ ಹೇಳಿದ್ದ ರಾಮುಲುಗೆ ಡಿಕೆ ಸುರೇಶ್​ ಟಾಂಗ್​ ಕೊಟ್ಟಿದ್ದಾರೆ. ಅವರು ಕಳೆದ 6 ರಂದು ಹೇಳಿಕೆ ನೀಡಿದ್ದರು. ಈಗ 7 ರಂದು ಅವರ ಹೇಳಿಕೆ ನಿಜವಾಗುತ್ತಿದೆ. ಶ್ರೀರಾಮುಲು ಹೇಳಿಕೆ ಅವರ ಬಾಯಿಂದ ಬಂದ ಹೇಳಿಕೆಯಲ್ಲ. ಅದು ಅವರ ಕೇಂದ್ರದ ನಾಯಕರ ಹೇಳಿಕೆ ಅಂತ ಹೇಳಿದ್ರು.

5.ಟಿಪ್ಪು ಹಿಂದೆ ಬಿದ್ದ ಮಲ್ಯಾ ಹಾಳಾದ, ಸಿದ್ದರಾಮಯ್ಯ ಹಾಳಾದರು, ಇನ್ನು ಕುಮಾರಸ್ವಾಮಿ ಹಾಳಾಗ್ತಾರೆ ಅಂತ ಈಶ್ವರಪ್ಪ ಹೇಳಿದ್ದಾರೆ. ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು ಕೊಲೆಗಡುಕ ಟಿಪ್ಪು ಜಯಂತಿ ಮಾಡಬಾರದು ಎನ್ನುವುದು ರಾಜ್ಯದ ಜನರ ಆಗ್ರಹ, ವಿರೋಧ ಪಕ್ಷದಲ್ಲಿದ್ದಾಗ ಕುಮಾರಸ್ವಾಮಿ ಟಿಪ್ಪು ಜಯಂತಿ ವಿರೋಧಿಸಿದ್ದರು, ಈಗ ಅವರೇ ಕುರ್ಚಿಗಾಗಿ ಜಯಂತಿ ಮಾಡ್ತಿದಾರೆ ಅಂತ ಹೇಳಿದ್ರು.

6.ಟಿಪ್ಪು ಜಯಂತಿಯನ್ನೂ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಚರಿಸಬೇಕು ಎಂದು ಸಚಿವ ಜಮೀರ್ ಅಹ್ಮದ್‌ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು‌, ಜಯಂತಿ ಆಚರಣೆಯ ಸ್ಥಳ ವಿಚಾರದಲ್ಲಿ ಗೊಂದಲ ಇದೆ. ಕಳೆದ 3 ವರ್ಷಗಳಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲೇ ಮಾಡಲಾಗ್ತಿದೆ. ಈ ಬಾರಿಯೂ ಅಲ್ಲೇ ಮಾಡುತ್ತೇವೆ ಎಂದಿದ್ದಾರೆ ಅಂತಾ ಹೇಳಿದ್ರು.

7.ಶಿವಮೊಗ್ಗ ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ತೀನಿ ಅಂತ ಮಧು ಬಂಗಾರಪ್ಪ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಗೆದ್ದಿದೆ. ಯಡಿಯೂರಪ್ಪ ಸೋತು ಹೋಗಿದ್ದಾರೆ. ನಾನು ಹಲ್ಕಾ ಬುದ್ಧಿ ಬಳಸಿ ರಾಜಕಾರಣ ಮಾಡಲ್ಲ ಅಂತ ಹೇಳಿದ ಅವರು ಸಂಸದರಾಗಿರುವ ರಾಘವೇಂದ್ರ ಮಿತಿಯಲ್ಲಿ ಮಾತನಾಡಬೇಕು. ಹಣ ಹೆಂಡ ಹಂಚುವ ನೀಚ ಮಟ್ಟಕ್ಕೆ ನಾವು ಇಳಿದಿಲ್ಲ ಅಂತ ಬಿಜೆಪಿ ವಿರುದ್ಧ ವಾಗ್ದಾಳಿ ನಡಿಸಿದ್ರು..

8.ಉಪಚುನಾವಣೆಯಲ್ಲಿ ನನ್ನ ಮಗ ದುರಂತ ನಾಯಕನಾಗಿಬಿಟ್ಟ, ಅವನದು ಅಕ್ಷಮ್ಯ ಅಪರಾಧ, ನಾನು ಸಾಯುವವರೆಗೂ ಅವನೊಂದಿಗೆ ಮಾತನಾಡುವುದಿಲ್ಲ ಎಂದು ರಾಮನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೊನೆ ಕ್ಷಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಎಲ್ ಚಂದ್ರಶೇಖರ್ ತಂದೆ, ಕಾಂಗ್ರೆಸ್ ಎಂಎಲ್ ಸಿ ಎಂ ಲಿಂಗಪ್ಪ ಹೇಳಿದ್ದಾರೆ.

9.ದುನಿಯಾ ವಿಜಿ, ಕೀರ್ತಿಗೌಡ ಸೇರಿದಂತೆ ಏಳು ಮಂದಿಗೆ ನೋಟಿಸ್ ನೀಡಿರುವ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ತಿಳಿಸಿದ್ದಾರೆ. ದುನಿಯಾ ವಿಜಯ್ ಸೇರಿ ಹಲವರ ವಿರುದ್ಧ ಅಕ್ಟೋಬರ್ 27ರಂದು ಸೆಕ್ಷನ್ 107 ಹಾಕಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿದ್ದು, ಡಿಸಿಪಿ ಅಣ್ಣಾಮಲೈ ಎದುರು ದುನಿಯಾ ವಿಜಯ್, ಕುಟುಂಬಸ್ಥರು ಹಾಜರಾಗಿದ್ದಾರೆ. ಈ ವೇಳೆ ಮಾತನಾಡಿದ ದುನಿಯ ವಿಜಿ ಸಾರ್ವಜನಿಕರಿಗೆ, ಕಾನೂನಿಗೆ ಧಕ್ಕೆ ತರುವುದಿಲ್ಲ ಅಂತ ಹೇಳಿದ್ದಾರೆ.

10.ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ಮುಂದೆ 164ರಡಿ ಶ್ರುತಿ ಹರಿಹರನ್ ಹೇಳಿಕೆ ನೀಡಿದ್ದಾರೆ. ಶ್ರುತಿ ಹರಿಹರನ್ ಹೇಳಿಕೆಯನ್ನು 24ನೇ ACMM ನ್ಯಾಯಾಲಯದ ನ್ಯಾ.ಗೋಪಾಲಕೃಷ್ಣ ದಾಖಲಿಸಿಕೊಂಡಿದ್ದಾರೆ.

11.ಮನೆಯೊಳಗೆ ಬಾಂಬ್ ಪಟಾಕಿ ಎಸೆದ ಪರಿಣಾಮ ಮನೆಯಲ್ಲಿನ ಪೀಠೊಪಕರಣ ಧ್ವಂಸವಾದ ಘಟನೆ ಹೆಚ್.ಎ.ಎಲ್ ಬಳಿಯ ಪಣತ್ತೂರಿನಲ್ಲಿ ನಡೆದಿದೆ. ವೆಂಕಟೇಶ್ ಎಂಬುವವರ ಮನೆಯ ಒಳಗೆ ಕಿಡಿಗೇಡಿಗಳು ಪಟಾಕಿ ಎಸೆದಿದ್ದು, ಪಟಾಕಿ ಸಿಡಿದ ಪರಿಣಾಮ ಮನೆಯಲ್ಲಿನ ಸೋಫಾ ಹಾಗೂ ಮೆನೆಯ ರೂಫ್ ಶೀಟ್ ಗಳು ಛಿದ್ರವಾಗಿವೆ. ಇನ್ನು ಘಟನೆಯಲ್ಲಿ ರಾಜಮ್ಮ ಹಾಗೂ ಮೋಹಿತ್ ಗೌಡಗೆ ಗಾಯಗಳಾಗಿದ್ದು, ಸ್ಥಳಕ್ಕೆ ಮಾರತ್ತಹಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

12.ಬಿಎಂಟಿಎಫ್‌ ಸಬ್ ಇನ್ಸಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. 50 ಸಾವಿರ ಲಂಚ ಪಡೆಯುವಾಗ ಶಿವಕುಮಾರ್‌ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ.. ರಸ್ತೆ ಅತಿಕ್ರಮಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್‌, ರಾಹುಲ್‌ ಎಂಬುವರಿಗೆ ನೋಟಿಸ್ ನೀಡಿದ್ರು.. ಇದಕ್ಕೆ ಪ್ರತಿಕ್ರಿಯಿಸಲು ಬಂದಾಗ ರಾಹುಲ್ ಬಳಿ 50 ಸಾವಿರ ಲಂಚಕ್ಕೆ ಶಿವಕುಮಾರ್ ಬೇಡಿಕೆ ಇಟ್ಟಿದ್ರಂತೆ.. ಈ ಹಿಂದೆ 20 ಸಾವಿರ ಹಣ ಪಡೆದಿದ್ರು.. ಇವತ್ತು ಉಳಿದ ಹಣವನ್ನು ಪಡೆಯುವಾಗ ಎಸಿಬಿ ಡಿವೈಎಸ್‌ಪಿ ಬಾಲರಾಜ್‌ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ..

13.ಪಟಾಕಿ ಕಿಡಿ ತಗುಲಿ ಫರ್ನಿಚರ್ ಗೋದಾಮು ಸುಟ್ಟು ಕರಕಲಾದ ಘಟನೆ ಆನೇಕಲ್‌ನ ಚಂದಾಪುರ ಬಳಿಯ ಬನ್ನಹಳ್ಳಿಯಲ್ಲಿ ನಡೆದಿದೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಕೇರಳ ಮೂಲದ ಶಫಿ ಎಂಬುವವರಿಗೆ ಸೇರಿದ ಗೋದಾಮು ಬೆಂಕಿಗಾಹುತಿಯಾಗಿದೆ. ಇನ್ನು ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿವೆ..

14.ಖಾಸಗಿ ಬಸ್ ಏಜೆಂಟರ್​ಗಳು ಕೆಎಸ್ಆರ್​ಟಿಸಿ ಬಸ್ ಚಾಲಕ, ಹಾಗೂ ನಿರ್ವಾಹಕರನ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಗಳೂರು ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ. ದಾವಣಗೆರೆ-ಜಗಳೂರು ಮಾರ್ಗ ಮಧ್ಯೆ ಎರಡು ತಿಂಗಳಿನಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭಿಸಿತ್ತು . ಇದ್ರಿಂದಾಗಿ ಬಸ್‌ಗಳಿಗೆ ಕಲೆಕ್ಷನ್ ಇಲ್ಲವೆಂದು ಖಾಸಗಿ ಏಜೆಂಟ್‌ಗಲು ಪ್ರತಿನಿತ್ಯ ದಾಂಧಲೆ ನಡೆಸುತ್ತಿದ್ರು. ಇದು ಸಾಲದು ಅಂತ ಸರ್ಕಾರಿ ಬಸ್ ಅಡ್ಡಗಟ್ಟಿ ಬಸ್​ ಚಾಲಕ ಹಾಗೂ ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆ.

15.ಅಪ್ಪ ಮಾಡಿದ ಸಾಲಕ್ಕೆ ಹೆದರಿ ಮಗಳು, ಮೊಮ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದಲ್ಲಿ ನಡೆದಿದೆ. ರಾಧಾ ಹಾಗೂ ಆಕೆಯ ಇಬ್ಬರು ಮಕ್ಕಳು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ತಂದೆ ಮಾಡಿದ್ದ ಸಾಲ ವಾಪಸ್​ ಕೊಡಿಸುವಂತೆ ರಾಧಾಗೆ ಸಾಲಗಾರರು ತಾಕೀತು ಮಾಡಿದ್ದರು ಇದಕ್ಕೆ ಹೆದರಿ ರಾಧಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

16.ಈ ಬಾರಿಯ ದಿಪಾವಳಿಯನ್ನ ಪ್ರಧಾನಿ ನರೇಂದ್ರ ಮೋದಿ ಕೇದಾರನಾಥದಲ್ಲಿ ಆಚರಿಸಿದ್ದಾರೆ. ಕೇದಾರನಾಥಕ್ಕೆ ತೆರಳಿದ ಪ್ರಧಾನಿ ಯೋಧರ ಜೊತೆ ದೀಪಾವಳಿ ಆಚರಿಸಿದ್ದು, ಯೋಧರಿಗೆ ಸಿಹಿ ತಿನಿಸಿ ಸಂಭ್ರಮಿಸಿದ್ರು. ಇನ್ನು ಇದೇ ವೇಳೆ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಪ್ರಧಾನಿ ಭಾರತೀಯ ಯೋಧರಿಗೆ ದೀಪಾವಳಿಯ ಶುಭಕೋರಿದ್ರು. ಅಲ್ಲದೆ ಯೋಧರು ತಮ್ಮ ಜೀವವನ್ನೇ ಒತ್ತೆಯಿಟ್ಟು ದೇಶ ಕಾಯುತ್ತಾರೆ. ಭಾರತೀಯರ ರಕ್ಷಣೆಗಾಗಿ ಯೋಧರು ಹೋರಾಡುತ್ತಾರೆ. ಇಡೀ ದೇಶವನ್ನೇ ಬೆಳಗುವ ಯೋಧರಿಗೆ ನನ್ನ ನಮನ ಎಂದು ತಿಳಿಸಿದ್ರು...

17.ದೀಪಾವಳಿ ಹಬ್ಬದ ಪ್ರಯುಕ್ತ ವಾಘಾ ಗಡಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆ ಹಾಗೂ ಪಾಕಿಸ್ತಾನ ಯೋಧರು ಪರಸ್ಪರ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದ್ರು. ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆ, ಒಳನುಸುಳುವಿಕೆ ಹೊರತಾಗಿಯೂ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಈದ್ ಮಿಲಾದ್, ದೀಪಾವಳಿ ಮತ್ತಿತರ ರಾಷ್ಟ್ರೀಯ ಹಾಗೂ ಧಾರ್ಮಿಕ ಹಬ್ಬಗಳ ಸಂದರ್ಭಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸೈನಿಕರು ಪ್ರತಿವರ್ಷ ಸಿಹಿ ವಿನಿಮಯ ಮಾಡಿಕೊಂಡು ಶುಭಾಶಯ ಕೋರಲಾಗುತ್ತೆ.

18.ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಲು ಸುಪ್ರೀಂ ಕೋರ್ಟ್‌ ನಿಗದಿಪಡಿಸಿದ್ದ ಗಡುವಿಗೆ ನಾಗರಿಕರು ಹೆಚ್ಚು ಗಮನ ಕೊಟ್ಟಿಲ್ಲ ಎಂದು ಕಂಡುಬಂದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಬುಧವಾರ ಪಟಾಕಿಯ ಸದ್ದು ಬೆಳಗ್ಗಿನಿಂದಲೇ ಕೇಳಿಬಂದಿತ್ತು. ಸಂಜೆಯಾಗುತ್ತಲೇ ಪಟಾಕಿ ಅಬ್ಬರ ಜೋರಾಗಿದ್ದು, ರಾತ್ರಿ 8 ಗಂಟೆ ಬಳಿಕ ಪಟಾಕಿ ಸಿಡಿಸಬೇಕು ಎಂಬ ಆದೇಶವಿದ್ದರೂ ಜನರು ಆದೇಶಕ್ಕೆ ಕ್ಯಾರೇ ಎನ್ನಲಿಲ್ಲ.

19.ಛತ್ತೀಸ್‌ಗಡ ಚುನಾವಣೆಗೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿಯಿದೆ. ಹೀಗಾಗಿ ಚುನಾವಣಾ ಮತದಾನ ಜಾಗೃತಿ ಮೂಡಿಸುವಲ್ಲಿ ತಲ್ಲೀನವಾಗಿದೆ. ಹೀಗೆ ಜನರಿಗೆ ಮತದಾನದ ಮಹತ್ವ ತಿಳಿಸಿಕೊಡುವ ಸಂದರ್ಭದಲ್ಲಿ ಛತ್ತೀಸ್‌ಗಡದ ಗ್ರಾಮವೊಂದರಲ್ಲಿ ಕೇವಲ ನಾಲ್ಕೇ ಮಂದಿ ಮತದಾರರಿರುವ ವಿಚಾರ ಬೆಳಕಿಗೆ ಬಂದಿದೆ. ಭರತ್ಪುರ್-ಸೋನ್ಹಾಟ್ ವಿಧಾನಸಭಾ ಕ್ಷೇತ್ರದಲ್ಲಿರುವ ಶೆರಾಂದರ್ ಗ್ರಾಮದ ಪೋಲಿಂಗ್ ಬೂತ್ ನಂಬರ್ 143ರಲ್ಲಿ ಕೇವಲ ನಾಲ್ಕು ಮತದಾರರಿದ್ದು, ಇವರಲ್ಲಿ ಮೂವರು ಒಂದೇ ಕುಟುಂಬದ ಸದಸ್ಯರು ಎಂಬುವುದು ಮತ್ತಷ್ಟು ಚಕಿತಗೊಳಿಸುವ ವಿಚಾರವಾಗಿದೆ.

20.ಬೀಜಿಂಗ್‌ನಲ್ಲಿ ನಡೆದ ಟಾಯ್ಲೆಟ್‌ ಎಕ್ಸ್‌ಪೋ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೆರಿಕದ ಬಿಲೆನಿಯರ್‌ ಬಿಲ್‌ ಗೇಟ್ಸ್‌ ಕಂಪನಿ ಚರಂಡಿ ವ್ಯವಸ್ಥೆಯೇ ಇಲ್ಲದ, ದೀರ್ಘಾವಧಿ ಬಾಳಿಕೆ ಬರುವ ಮಾಯಾವಿ ಟಾಯ್ಲೆಟ್‌ಅನ್ನು ಅಭಿವೃದ್ಧಿ ಪಡಿಸಿರುವ ಬಗ್ಗೆ ತಿಳಿಸಿದ್ದಾರೆ. ನೂತನ ಮಾದರಿಯ ಟಾಯ್ಲೆಟ್‌ ಅಭಿವೃದ್ಧಿಯ ಸಂಶೋಧನೆಗಾಗಿ ಬಿಲ್‌ ಗೇಟ್ಸ್‌ ಬರೋಬ್ಬರಿ 200 ದಶಲಕ್ಷ ಡಾಲರ್‌ ವ್ಯಯಿಸಿದ್ದಾರೆ. ಪೂರ್ಣ ಸಿದ್ಧಗೊಳ್ಳಲು ಕನಿಷ್ಠ 200 ದಶಲಕ್ಷ ಡಾಲರ್‌ಅನ್ನು ಮತ್ತೆ ಖರ್ಚು ಮಾಡಬೇಕಾದೀತು ಎಂದು ಅಂದಾಜಿಸಲಾಗಿದೆ.

21.ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ವಿಶ್ವದ ಮೊತ್ತ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಟೀಮ್ ಇಂಡಿಯಾ ಉಸ್ತುವಾರಿ ನಾಯಕ ರೋಹಿತ್ ಶರ್ಮಾ ಪಾತ್ರವಾಗಿದ್ದಾರೆ. ಇದರೊಂದಿಗೆ ನಾಯಕ ವಿರಾಟ್ ಕೊಹ್ಲಿ ಅವರಿಗಿಂತಲೂ ಸಾಕಷ್ಟು ಮುಂದೆ ಸಾಗಿದ್ದಾರೆ. ದಾಖಲೆಗಳ ಮೇಲೆ ದಾಖಲೆಗಳನ್ನು ಬರೆಯುತ್ತಲೇ ಇರುವ ರನ್ ಮೆಶಿನ್ ಕೊಹ್ಲಿ ಅವರಿಗೆ ಇದುವರೆಗೆ ಟ್ವೆಂಟಿ-20 ಯಲ್ಲಿ ಶತಕ ಗಳಿಸಲು ಸಾಧ್ಯವಾಗಲಿಲ್ಲ.

22.ಕೆಎಸ್ಆರ್‌ಟಿಸಿ ಬಸ್ ಕಂಡಕ್ಟರ್‌ಗೆ ಪ್ರಯಾಣಿಕರು ತರಾಟೆಗೆ ತೆಗೆದುಕೊಂಡ ಘಟನೆ ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ನಡೆದಿದೆ. ತುಮಕೂರಿನಿಂದ ಬೆಂಗಳೂರಿಗೆ ಬಸ್ ಬರುತ್ತಿದ್ದ ಸಂದರ್ಭದಲ್ಲಿ, ಮಾರ್ಗಮದ್ಯೆ ಬಸ್ ಕೆಟ್ಟು ನಿಂತಿದ್ದು, ಶೀಘ್ರದಲ್ಲಿ ಬದಲಿ ವ್ಯವಸ್ಥೆ ಮಾಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.

23.ಸರ್ಕಾರದಿಂದ ಟಿಪ್ಪು ಜಯಂತಿ ಆಚರಣೆ ಹಿನ್ನೆಲೆ, ಟ್ವಿಟರ್‌ ಮೂಲಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಯಾರೂ ಟಿಪ್ಪು ಜಯಂತಿ ಆಚರಣೆಯನ್ನ ಬೆಂಬಲಿಸುತ್ತಿಲ್ಲ. ನಾವೂ ಇದನ್ನ ವಿರೋಧಿಸುತ್ತಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಜಯಂತಿ ಕುರಿತು ಆಸಕ್ತಿ ವಹಿಸಿದೆ. ಮುಸ್ಲಿಂ ಸಮುದಾಯದ ಓಲೈಕೆಗಾಗಿ ಈ ರೀತಿ ಮಾಡ್ತಿದೆ. ಟಿಪ್ಪು ಜಯಂತಿ ಆಚರಣೆಯನ್ನ ಕೈ ಬಿಡಬೇಕು ಎಂದು ಹೇಳಿದ್ದಾರೆ.

24. ನೋಟ್ ಬ್ಯಾನ್ ಮಾಡಿ 2 ವರ್ಷ ಪೂರ್ಣಗೊಂಡ ಹಿನ್ನೆಲೆ, ಯೂತ್ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದು, ಪ್ರಧಾನಿ ಮೋದಿ ಅಣಕು ಶವ ಯಾತ್ರೆ ಮಾಡಿ, ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

25. ಪ್ರೀತಿ ವೈಫಲ್ಯವಾದ ಹಿನ್ನೆಲೆ ಅಪ್ರಾಪ್ತೆಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹೆಚ್.ಆರ್.ಯೋಗಿತಾ ಮೃತ ಯುವತಿಯಾಗಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೇವೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬೇವೂರು ಗ್ರಾಮದ ಮನೀಷ್ ಗೌಡ ಮತ್ತು ಯೋಗೀತಾ ಇಬ್ಬರು ಪ್ರೀತಿಸುತ್ತಿದ್ದು, ಪ್ರೀತಿಗೆ ಯುವತಿ ಪೋಷಕರು ನಿರಾಕರಿಸಿದ ಹಿನ್ನೆಲೆ, ಬೇಸತ್ತ ಯುವತಿ ನೇಣಿಗೆ ಶರಣಾಗಿದ್ದಾಳೆ. ಈ ಬಗ್ಗೆ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26. ಹಬ್ಬದ ದಿನವೇ ಮೈಸೂರು ವಿವಿ ಬಡಾವಣೆಯ ಪ್ರೊ.ಮಾರುತಿ ಎಂಬುವರ ಮನೆಯೊಂದರಲ್ಲಿ ನಾಗರಹಾವು ಪ್ರತ್ಯಕ್ಷವಾಗಿದ್ದು, ಸ್ನೇಕ್ ರಮೇಶ್ ಹಾವನ್ನ ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

27.ಮಂಗಳೂರಿನ ದೇರಳಕಟ್ಟೆ ಕಾನಕೆರೆ ಗ್ರಾಮದ ಮೂರು ಬಾವಿಯಲ್ಲಿ ತೈಲ ಪತ್ತೆಯಾಗಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಬಾವಿಯಿಂದ ಹೊರತೆಗೆದ ನೀರಿಗೆ ಬೆಂಕಿ ಹಚ್ಚಿದರೆ, ಬೆಂಕಿ ಹೊತ್ತಿ ಉರಿಯುತ್ತಿದ್ದು, ನೀರಿನಲ್ಲಿ ಪೆಟ್ರೋಲ್, ಡಿಸೆಲ್ ವಾಸನೆ ಬರುತ್ತಿದೆ.

28.ದೀಪಾವಳಿ ಅಂಗವಾಗಿ ಎಗ್ಗಿಲ್ಲದೇ ಇಸ್ಪೀಟ್ ದಂಧೆ ನಡೆಯುತ್ತಿದ್ದು,ರಾಯಚೂರಿನ ದೇವದುರ್ಗ ತಾಲ್ಲೂಕಿನಾದ್ಯಂತ ಗ್ರಾಮಮದ ನಿರ್ನಾಳ ಪ್ರದೇಶಗಳಲ್ಲಿ‌ ಜೂಜಾಡುತ್ತಿದ್ದಾರೆ. ಜೂಜಿನಲ್ಲಿ ಲಕ್ಷ ಲಕ್ಷ ಹಣ ಪಣಕ್ಕಿಟ್ಟಿದ್ದು, ಅಕ್ರಮ ಜೂಜಾಟವಾಡುತ್ತಿದ್ದರೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಇನ್ನು ಅಕ್ರಮವಾಗಿ ಜೂಜಾಡುತ್ತಿರುವ ದೃಷ್ಯ ವಾಟ್ಸಪ್‌ನಲ್ಲಿ ವೈರಲ್ ಆಗಿದೆ.

29.ಬಿಜೆಪಿ ಭೀಷ್ಮ ಎಲ್.ಕೆ.ಅಡ್ವಾಣಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್‌ ಮೂಲಕ ಶುಭಕೋರಿದ್ದು, ನಿಮ್ಮ ಆರೋಗ್ಯ,ಜೀವನ ಉತ್ತಮವಾಗಿರಲಿ. ಪ್ರಜಾಪ್ರಭುತ್ವದ ರಕ್ಷಣೆಗೆ ನಿಮ್ಮ ಮಾರ್ಗದರ್ಶನ ಅತ್ಯವಶ್ಯಕ. ಪ್ರಜಾಪ್ರಭುತ್ವಕ್ಕೆ ಇಂದು ಆತಂಕ ಎದುರಾಗಿದೆ. ಆದರೆ ನಿಮಗೆ ನಿಮ್ಮ ಮಾರ್ಗದರ್ಶಕ ಮಂಡಲ ಬೆಲೆ ನೀಡುತ್ತಿಲ್ಲ. ನಿಮ್ಮ ವ್ಯಕ್ತಿತ್ವ, ನಿಮ್ಮ ಸಿನಿಯಾರಿಟಿಗೆ ಬೆಲೆ ನೀಡುತ್ತಿಲ್ಲ ಎಂದು ಟ್ವೀಟರ್ ಮೂಲಕವೇ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ.

30. ಕಲ್ಪತರು ನಾಡು ತುಮಕೂರಿನಲ್ಲಿ ಅಕ್ರಮ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದು, ಮರಳು ಸಾಗಾಣೆ ಮಾಡೋಕೆ ಹೊಸಮಾರ್ಗ ಕಂಡು ಹಿಡಿದಿದ್ದು, ಮಧುಗಿರಿ ತಾಲೂಕಿನ ಪುರವರದ ಬಳಿಯಿರೋ ಜಯಮಂಗಲೆ ನದಿಯ ದಡದಲ್ಲಿರುವ ತಮ್ಮ ಜಮೀನುಗಳಿಗೆ ನದಿಯಿಂದ ಮರಳು ,ಸ್ಟಾಕ್ ಮಾಡಿಕೊಂಡು ಬಳಿಕ ಮಾರಾಟ ಮಾಡುವುದಕ್ಕೆ ಪ್ಲಾನ್ ಮಾಡ್ತಿದ್ದಾರೆ. ಮಂಜುನಾಥ್ ಎಂಬುವವರು ಈ ಅಕ್ರಮ ಮರಳು ದಂಧೆ ನಡೆಸುತ್ತಿದ್ದು, ಈ ದೃಶ್ಯವನ್ನು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

31.ಟಿಪ್ಪು ಜಯಂತಿ ಆಮಂತ್ರಣ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೆಸರನ್ನ ಕೈಬಿಡಲಾಗಿದೆ. ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಕೈಬಿಡುವಂತೆ ಅನಂತ್ ಕುಮಾರ್ ಹೆಗಡೆ ಸರ್ಕಾರಕ್ಕೆ ಪತ್ರ ಬರೆದ ಹಿನ್ನೆಲೆ, ಉತ್ತರಕನ್ನಡ ಜಿಲ್ಲಾಡಳಿತ ಈ ನಿರ್ಧಾರ ಮಾಡಿದ್ದು, ಸರ್ಕಾರದ ಸೂಚನೆಯಂತೆ ಉತ್ತರ ಕನ್ನಡ ಜಿಲ್ಲೆಯ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಇದೇ ಮೊದಲ ಬಾರಿ ಹೆಸರನ್ನು ಕೈಬಿಡಲಾಗಿದೆ.

32. ರೆಡ್ಡಿ ಕೇಸ್ ಬಗ್ಗೆ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ದು, ಜನಾರ್ಧನ ರೆಡ್ಡಿ ಬಹಳ ಎಚ್ಚರಿಕೆಯಿಂದ ಇರಬೇಕಿತ್ತು. ಜೈಲಿಗೆ ಹೋಗಿ ಹೊರಗೆ ಬಂದಿದ್ದಾರೆ. ಸಾಕಷ್ಟು ಪ್ರಕರಣಗಳು ಅವರ ಮೇಲಿವೆ. ಆದರೂ ಇನ್ನೂ ಬುದ್ಧಿ ಕಲಿತಿಲ್ಲ. ನಾನು ಮಾಡಿದ್ದೇ ಸರಿ ಎಂಬ ಮನಸ್ಥಿತಿ ಇದೆ. ಹಾಗಾಗಿಯೇ ಈಗ ಮತ್ತೊಮ್ಮೆ ಸಿಕ್ಕಿಹಾಕಿಕೊಂಡಿದ್ದಾರೆ. ಪೋಲಿಸರು ಏನು ಕ್ರಮಕೈಗೊಳ್ಳಬೇಕೋ ಅದನ್ನ ಮಾಡ್ತಿದಾರೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲಾ ಎಂದಿದ್ದಾರೆ.

34. ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸದ್ಯ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಾರಿಯ ದೀಪಾವಳಿ ಹಬ್ಬವನ್ನ ಸೋನಾಲಿ ತಮ್ಮ ಪತಿ ಮತ್ತು ಮಕ್ಕಳೊಂದಿಗೆ ನ್ಯೂಯಾರ್ಕ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಸಿಂಪಲ್ ಆಗಿ ಪೂಜೆ ಮಾಡಿ ಹಬ್ಬ ಆಚರಿಸಿದ್ದಾರೆ.

35.ದೀಪಾವಳಿ ಪ್ರಯುಕ್ತ ಪಟಾಕಿ ಸಿಡಿಸುವ ವೇಳೆ , ಯುವಕನ ಕೈಗೆ ಗಂಭೀರ ಗಾಯವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ನಡೆದಿದೆ. ಗಾಯಗೊಂಡ ಯುವಕ ನಾಗರಾಜುವನ್ನು ನೆಲಮಂಗಲ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಪಟಾಕಿ ಸಿಡಿಯುವಾಗ ಎಡಗೈಗೆ ಗಂಭೀರ ಗಾಯವಾಗಿದ್ದು, ಪೆಟ್ಟಾದ ಬಳಿಕ ಯುವಕ ಪಟಾಕಿಯಿಂದಾಗುವ ಅನಾಹುತಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡಿದ್ದಾರೆ.

36.ಬಾಲಿವುಡ್ ಬಾದ್‌ಶಾ ಅಮಿತಾಬ್ ಬಚ್ಚನ್ ತಮ್ಮ ಕುಟುಂಬದ ಜೊತೆ ಭರ್ಜರಿಯಾಗಿ ದೀಪಾವಳಿ ಆಚರಿಸಿದ್ದು, ಫೋಟೋವನ್ನ ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಅಮಿತಾಬ್ ಬಚ್ಚನ್, ಅಭಿಷೇಕ್, ಜಯಾಬಚ್ಚನ್, ಐಶ್ವರ್ಯ, ಆರಾಧ್ಯ ಲಕ್ಷ್ಮಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಚಿತ್ರ ಇದಾಗಿದೆ.

37.ಪೆರೋಲ್ ಪಡೆದು ತಮ್ಮ ಸಹೋದರನ ಆರೋಗ್ಯ ವಿಚಾರಿಸಲು ಹೋಗಿದ್ದ ಇಳವರಸಿ, ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವಾಪಸ್ಸಾಗಿದ್ದಾರೆ. ಅಣ್ಣ ಅನಾರೋಗ್ಯಕ್ಕೀಡಾದ ಹಿನ್ನೆಲೆ, ಇಳವರಿಸಿ 15ದಿನಗಳ ಕಾಲ ಪೆರೋಲ್ ಪಡೆದು ಚೆನ್ನೈಗೆ ತೆರಳಿದ್ದರು. ಇಂದು ಪೆರೋಲ್ ಅವಧಿ ಮುಗಿದಿದ್ದು, ಇಳವರಸಿ ವಾಪಸ್ ಆಗಿದ್ದಾರೆ.

38.ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ದಾಳಿ ನಡೆಸಿದ್ದು, ರೈತರ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ ಗ್ರಾಮದ ಜಮೀನುಗಳಲ್ಲಿ ಕಾಡಾನೆಗಳು ದಾಳಿ ನಡೆಸಿದೆ. ಬಚಾಹಳಿ ಗ್ರಾಮದ ಪಾರ್ವತಮ್ಮ ಎಂಬ ರೈತ ಮಹಿಳೆ ಜಮೀನಿನ ಮೇಲೆ ದಾಳಿ ಮಾಡಿದ ಕಾಡಾನೆಗಳು ಅಪಾರ ಪ್ರಮಾಣದ ಮುಸುಕಿನ ಜೋಳ ಬೆಳೆ ನಾಶ ಮಾಡಿದೆ. ಸ್ಥಳಕ್ಕೆ ಗುಂಡ್ಲುಪೇಟೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

39.ಸೋದರ ಸಂಬಂಧಿಗಳ ಪರಸ್ಪರ ಮನಸ್ತಾಪ ಹಿನ್ನೆಲೆ, ಕುಡಿದ ಅಮಲಿನಲ್ಲಿ ಮಚ್ಚಿನಿಂದ ಕೊಚ್ಚಿ ಹಲ್ಲೆ ನಡೆಸಲಾಗಿದೆ. ನಂದಾ(35) ಗಾಯಗೊಂಡ ವ್ಯಕ್ತಿಯಾಗಿದ್ದು, ಚಾಮರಾಜನಗರದ ಹನೂರು ಪಟ್ಟಣದಲ್ಲಿ ಈ ಘಟನೆ ನಡೆದಿದೆ. ನಂದಾ ಮತ್ತು ರಾಜು ಇಬ್ಬರು ಸೋದರ ಸಂಬಂಧಿಗಳಾಗಿದ್ದು, ಕುಡಿlದ ಅಮಲಿನಲ್ಲಿದ್ದ ರಾಜು ಕ್ಷುಲ್ಲಕ ಕಾರಣಕ್ಕೆ ನಂದಾ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ನಂದಾ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸ್ಥಳಕ್ಕೆ ಹನೂರು ಪಟ್ಟಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

40. ಎಸಿಪಿ ಮರಿಯಪ್ಪಗೆ ಅಲೋಕ್ ಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ವಿಚಾರಣೆ ಬಳಿಕ ಮರಿಯಪ್ಪಗೆ ವಾರ್ನ್ ಮಾಡಿದ ಅಲೋಕ್ ಕುಮಾರ್, ಸಿಸಿಬಿಯಲ್ಲಿ ಶಿಸ್ತು ಮುಖ್ಯ, ಶಿಸ್ತಿನಿಂದಿರುವಂತೆ ಕೊನೆಯ ಬಾರಿ ಎಂದು ವಾರ್ನ್ ಮಾಡಿದ್ದಾರೆ.

41.ಟಿಪ್ಪು ಜಯಂತಿ ಹಿನ್ನೆಲೆ ಬೆಳಗಾವಿಯಲ್ಲಿ ಸಂಸದ ಸುರೇಶ್ ಅಂಗಡಿ ಅಸಮಾಧಾನ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಸರ್ಕಾರ ಟಿಪ್ಪು ಜಯಂತಿ ಮಾಡಬಾರದು. ನಮ್ಮ ಮುಖ್ಯನ್ಯಾಯಮೂರ್ತಿಗಳು ಟಿಪ್ಪು ಜಯಂತಿ ಬಗ್ಗೆ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅದನ್ನ ನಾನು ಸ್ವಾಗತಿಸುತ್ತೇನೆ. ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲಾ. ವಿರೋಧ ಪಕ್ಷದಲ್ಲಿ ಇದ್ದಾಗ ಕುಮಾರಸ್ವಾಮಿ ಟಿಪ್ಪು ಜಯಂತಿ ವಿರೋಧಿಸಿದ್ರು. ಈಗ ಅವರೇ ಇನ್ ಡೋರ್ ಕಾರ್ಯಕ್ರಮಕ್ಕೆ ಸೂಚಿಸಿದ್ದಾರೆ. ಬಿಜೆಪಿ ಪಕ್ಷದ ಇದನ್ನ ಬಲವಾಗಿ ವಿರೋಧಿಸುತ್ತದೆ ಎಂದು ಹೇಳಿದರು.

42.ಕೇಂದ್ರ ಸರ್ಕಾರ 500-1000 ಮುಖ ಬೆಲೆಯ ನೋಟ್ ಅಮಾನಿಕರಿಸಿ ಎರಡೂ ವರ್ಷ ಪೂರ್ಣ ಹಿನ್ನೆಲೆ. ರಾಯಚೂರಿನಲ್ಲಿ ಯುತ್ ಕಾಂಗ್ರೆಸ್ ನಿಂದ ಬ್ಲ್ಯಾಕ್ ಡೇ ಆಚರಣೆ ಮಾಡಲಾಯಿತು. ಅಂಬೇಡ್ಕರ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರ, ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

43. ಮಾಜಿ ಪೊಲೀಸ್ ಅಧಿಕಾರಿ ಮತ್ತು ರಾಜಕಾರಣಿ ಮನೆಯಿಂದ ಅನುಮಾನಾಸ್ಪದವಾಗಿ ವಿದ್ಯಾರ್ಥಿ ನಾಪತ್ತೆಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಪಿ.ಎಸ್.ಐ ಆಗಿದ್ದ ಮದನ್ ಮನೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿದ್ದ ವಿನಾಯಕ ಎಂಬಾತ ವಾಸವಿದ್ದು, ಕಳೆದ ತಿಂಗಳು 8ನೇ ತಾರೀಖಿನಂದು ಕಾಣೆಯಾಗಿದ್ದಾನೆ. ಈ ಬಗ್ಗೆ ವಿನಾಯಕ ಪೋಷಕರು ಘಟನೆಗೆ ಕಾರಣ ಮದನ್ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.

44.ಈಜಲು ತೆರಳಿದ್ದ ಇಬ್ಬರು ಪ್ರವಾಸಿಗರು ಸಮುದ್ರಪಾಲಾದ ಘಟನೆ ಉತ್ತರಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನಡೆದಿದೆ. ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಸಮುದ್ರ ಪಾಲಾಗಿದ್ದು, ಇನ್ನಿಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ಅಂಕೋಲಾ ಮೂಲದ ಪ್ರಮೋದ ನಾಯಕ (50)ಅಮೋಘ ನಾಯಕ (25)ಮೃತ ಯುವಕರಾಗಿದ್ದು, ಸಂಪತ್ ಮತ್ತು ಸಂಘಮ್ ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದಾರೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

45.ನೀರು ಕುಡಿಯಲು ಹೋಗಿದ್ದ ವೇಳೆ ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ಪರಸಪ್ಪ ಇಂಗಳಗಿ(18) ಹಾಗೂ ಶರಣಪ್ಪ ಇಂಗಳಗಿ(28) ಮೃತ ದುರ್ದೈವಿಗಳಾಗಿದ್ದು, ಮೃತ ಇಬ್ಬರು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕುಣಿಬೆಂಚಿ ಗ್ರಾಮದವರಾಗಿದ್ದಾರೆ.

46.ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆಯಾಗಿದ್ದು, ವಿಜಯಪುರ ಜಿಲ್ಲೆ ಇಂಡಿ ತಾಲೂಕಿ‌ನ ನಂದರಗಿ ಗ್ರಾಮದ ತೋಟದ ಮನೆಯಲ್ಲಿ ಘಟನೆ ನಡೆದಿದೆ. ಭಾಗ್ಯಶ್ರೀ ಗುಬ್ಯಾಡ ಮೃತ ದುರ್ದೈವಿಯಾಗಿದ್ದು, ಪತಿ ಹಾಗೂ ಮನೆಯವರು ಕೊಲೆಗೈದು ಶವ ನೇಣು ಹಾಕಿದ್ದಾರೆಂದು ಭಾಗ್ಯಶ್ರೀ ಮನೆಯವರು ಆರೋಪಿಸಿ, ಝಳಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮೃತಳ ಪತಿ ಪುಂಡಲೀಕನನ್ನು ಝಳಕಿ ಪೊಲೀಸರು ಬಂಧಿಸಿದ್ದಾರೆ.

47.ಬೈಕ್ ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಶ್ರೀಧರ ನಾಯ್ಕ (40) ಮೃತ ದುರ್ದೈವಿಯಾಗಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪತ್ನಿ ಶಿಲ್ಪಾಗೆ ಗಂಭೀರ ಗಾಯವಾಗಿದೆ. ಶಿಲ್ಪಾಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

48.ಬೀದಿ ನಾಯಿಗಳ ಹಾವಳಿಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಖಂಡೆನಹಳ್ಳಿ ಗೊಲ್ಲರಹಟ್ಟಿಯಲ್ಲಿ 8 ಕುರಿಮರಿ ಮತ್ತು 12 ಕುರಿಗಳು ಬಲಿಯಾಗಿದೆ. ಗಟ್ಟಪ್ಪ ಎಂಬುವವರಿಗೆ ಸೇರಿದ ಕುರಿಮರಿಗಳ ದೊಡ್ಡಿಗೆ ನುಗ್ಗಿ ಬೀದಿ ನಾಯಿಗಳು ದಾಳಿ ನಡೆಸಿದೆ.

49.ಜನಾರ್ದನ ರೆಡ್ಡಿ ಬಂಧನಕ್ಕೆ ಸಿಸಿಬಿ ಪೊಲೀಸರು ಎಲ್ಲಾ ಸಿದ್ಧತೆ ನಡೆಸಿದ್ದು, ಆಪ್ತರ ಫೋನ್‌ ನಂಬರ್‌ಗಳನ್ನ ಟ್ರ್ಯಾಪ್ ಮಾಡುವ ಮೂಲಕ ರೆಡ್ಡಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ರೆಡ್ಡಿ ನಾಪತ್ತೆಯಾಗಿದ್ದು, ಪೋನ್ ನಂಬರ್ ಸ್ವಿಚ್ ಆಫ್ ಆದ ಹಿನ್ನಲೆ, ಡ್ರೈವರ್, ಅಪ್ತ ಸಹಾಯಕ, ಶರವಣ, ಜಯರಾಮ್ , ಪ್ರಕಾಶ್ ಎಂಬುವವರ ಪೋನ್ ನಂಬರ್ಸ್ ಟ್ರ್ಯಾಪ್ ಮಾಡಲಾಗಿದೆ.

50. ಲೋಕಸಭೆ ಚುನಾವಣೆ ಬಗ್ಗೆ ಚರ್ಚೆ ನಡೆಸಲು ಚಂದ್ರಬಾಬು ನಾಯ್ಡು ಬೆಂಗಳೂರಿಗೆ ಬಂದಿದ್ದು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಜೊತೆ ಮಹತ್ವದ ಸಭೆ ನಡೆಸಿದರು.

Next Story

RELATED STORIES