ಬರ್ತ್​​ಡೇಗೆ ಸ್ವೀಟ್ ನ್ಯೂಸ್​ ಕೊಟ್ಟೇಬಿಟ್ರು ಸ್ವೀಟಿ ಅನುಷ್ಕಾ..!

ಹುಟ್ಟುಹಬ್ಬದ ಸಂಭ್ರಮದಲ್ಲಿ ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಇದು ಸ್ವೀಟಿ ಕಲ್ಯಾಣೋತ್ಸವದ ಕಥೆಯಲ್ಲ. ಬದಲಿಗೆ ಅನುಷ್ಕಾ ಶೆಟ್ಟಿ ನಟಿಸ್ತಿರೋ ಹೊಸ ಸಿನಿಮಾ ಕಹಾನಿ. ಭಾರತೀಯ ಚಿತ್ರರಂಗದಲ್ಲೇ ಭಾರೀ ಕುತೂಹಲ ಕೆರಳಿಸಿರೋ NTR ಬಯೋಪಿಕ್​ನಲ್ಲಿ ಭಾಗಮತಿ ಅನುಷ್ಕಾ, ಹಿರಿಯ ನಟಿ ಬಿ. ಸರೋಜಾ ದೇವಿ ಪಾತ್ರದಲ್ಲಿ ನಟಿಸೋ ಕ್ರೇಜಿ ನ್ಯೂಸ್ ಹೊರ ಬಿದ್ದಿದೆ.

ಪಾತ್ರವರ್ಗದಿಂದಲೇ ಎನ್​ಟಿಆರ್ ಬಯೋಪಿಕ್ ಸಿನಿಮಾ ಇನ್ನಿಲ್ಲದ ಕುತೂಹಲ ಕೆರಳಿಸಿದೆ. ಮಹಾನ್ ಸಿನಿಮಾ ನಟ, ಮಹಾನ್ ರಾಜಕಾರಣಿ ಎನ್​ಟಿಆರ್​ ಜೀವನ ಚರಿತ್ರೆಯ ಸಿನಿಮಾದಲ್ಲಿ ಅವರಿಗೆ ಆಪ್ತರಾಗಿದ್ದವರ ಪಾತ್ರಗಳನ್ನ ಸೇರಿಸಲಾಗ್ತಿದೆ. ಬಾಲಕೃಷ್ಣ ತಮ್ಮ ತಂದೆ ಪಾತ್ರದಲ್ಲಿ ಬಣ್ಣ ಹಚ್ಚಿರೋದು ಗೊತ್ತೇಯಿದೆ. ಇನ್ನುಳಿದಂತೆ ಎನ್​ಟಿಆರ್ ಪತ್ನಿಯಾಗಿ ವಿದ್ಯಾಬಾಲನ್, ಹರಿಕೃಷ್ಣ ಪಾತ್ರದಲ್ಲಿ ಕಲ್ಯಾಣ್ ರಾಮ್, ಚಂದ್ರಬಾಬು ನಾಯ್ಡು ಪಾತ್ರದಲ್ಲಿ ರಾಣಾ, ಎಎನ್​ಆರ್ ಆಗಿ ಸುಮಂತ್, ಶ್ರೀದೇವಿಯಾಗಿ ರಕುಲ್, ಜಯಪ್ರದ ಪಾತ್ರದಲ್ಲಿ ತಮನ್ನಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.

ಒಂದಷ್ಟು ಪಾತ್ರಗಳು ಬಹಳ ಹೊತ್ತು ಸಿನಿಮಾದಲ್ಲಿದ್ರೆ, ಒಂದಷ್ಟು ಮಂದಿ ಅತಿಥಿ ಪಾತ್ರಗಳಲ್ಲಿ ಮಿಂಚಿದ್ದಾರೆ. ಸದ್ಯ ಬಿ. ಸರೋಜಾ ದೇವಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಒಂದ್ಕಾಲ ಸ್ಟಾರ್ ಹಿರೋಯಿನ್ ಕನ್ನಡತಿ ಬಿ. ಸರೋಜಾ ದೇವಿ. ಎನ್​ಟಿಆರ್​, ಸರೋಜಾದೇವಿ ರಾಮಾಂಜನೇಯ ಯುದ್ಧಂ, ಜಗದೇಕವೀರುನಿ ಕಥಾ,ದಾನವೀರಶೂರ ಕರ್ಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.

ಸರೋಜಾ ದೇವಿ ಪಾತ್ರಕ್ಕೆ ಅನುಷ್ಕಾ ಶೆಟ್ಟಿ ಪರ್ಫೆಕ್ಟ್ ಆಯ್ಕೆ ಅನ್ನೋದು ಟಾಲಿವುಡ್​​ ಮಂದಿಯ ಅಭಿಪ್ರಾಯ. ಸದ್ಯ ತೂಕ ಇಳಿಸಿಕೊಳ್ಳೋಕೆ ವಿದೇಶಕ್ಕೆ ತೆರಳಿರೋ ಅನುಷ್ಕಾ ಶೆಟ್ಟಿ ಶೀಘ್ರದಲ್ಲೇ ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ. ಸದ್ಯ ಎನ್​ಟಿಆರ್ ಬಯೋಪಿಕ್ ಶೂಟಿಂಗ್ ಭರದಿಂದ ಸಾಗಿದ್ದು, ಆದಷ್ಟು ಬೇಗ ಚಿತ್ರತಂಡವನ್ನ ಸೇರಿಕೊಳ್ಳಲಿದ್ದಾರೆ.

ಭಾಗಮತಿ ನಂತ್ರ ಕರಾವಳಿ ಚೆಲುವೆ ಯಾವುದೇ ಹೊಸ ಸಿನಿಮಾವನ್ನ ಒಪ್ಪಿಕೊಂಡಿಲ್ಲ. ಇದೀಗ ಎನ್​ಟಿಆರ್ ಬಯೋಪಿಕ್​ನಲ್ಲಿ ಬಿ. ಸರೋಜಾದೇವಿ ಪಾತ್ರದಲ್ಲಿ ಅನುಷ್ಕಾ ಬಣ್ಣ ಹಚ್ತಾರೆ ಅನ್ನೋ ಸುದ್ದಿ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ. ಕ್ರಿಶ್​ ನಿರ್ದೇಶನದ ಈ ಬಯೋಪಿಕ್ ಸಿನಿಮಾ ಕಥಾನಾಯಕಡು, ಮಹಾ ನಾಯಕುಡು ಹೆಸರಿನಲ್ಲಿ ಎರಡು ಭಾಗಗಳಾಗಿ ಜನವರಿಯಲ್ಲಿ ತೆರೆಗೆ ಬರಲಿದೆ.
ನಾಣಿ..ಎಂಟ್ರಟ್ರೈನ್​ಮೆಂಟ್ ಬ್ಯೂರೊ, ಟಿವಿ5