ರಾಮಮಂದಿರದ ಬಗ್ಗೆ ಅನಂತ್ ಕುಮಾರ್ ಹೆಗಡೆ ಬೇಸರ

ಶಿರಸಿ: ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್ಬುಕ್ ಪೇಜ್ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಸರ್ವೋಚ್ಛ ನ್ಯಾಯಾಲಯದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ರಾಮಮಂದಿರ ವಿಚಾರದಲ್ಲಿ ಸರ್ವೋಚ್ಛ ನ್ಯಾಯಾಲಯ ವರ್ತಿಸುತ್ತಿರುವ ರೀತಿ ಹಿಂದೂಗಳಿಗೆ ನೋವುಂಟು ಮಾಡಿದೆ. 5 ಶತಮಾನಗಳಿಂದ ರಾಮಮಂದಿರಕ್ಕಾಗಿ ಜೀವವನ್ನೇ ತ್ಯಾಗ ಮಾಡಿದ ಎಷ್ಟೋ ಭಕ್ತರಿಗೆ ಅನ್ಯಾಯ ಉಂಟಾಗಿದೆ ಎಂದಿದ್ದಾರೆ.
ಅಲ್ಲದೇ ಇನ್ನೆಷ್ಟು ತಲೆಮಾರು ನ್ಯಾಯ ಬೇಡುತ್ತಲೇ ಇರಬೇಕು ಎಂದು ಪ್ರಶ್ನಿಸಿದ ಹೆಗಡೆ, ಸೂಕ್ತ ಸಮಯದಲ್ಲಿ ನ್ಯಾಯ ಒದಗಿಸದಿದ್ದರೆ ಸಮಾಜದಲ್ಲಿ ಉಂಟಾಗುವ ಕ್ಷೋಭೆ ತಣಿಸಲು ಸರ್ಕಾರಕ್ಕೆ ಅನ್ಯಮಾರ್ಗ ಶೋಧಿಸುವ ಅನಿವಾರ್ಯತೆ ಎದುರಾಗುತ್ತದೆ. ನಾವೀಗ ಅಂತಹ ಸಂದಿಗ್ಧ ಸ್ಥಿತಿಯಲ್ಲಿದ್ದೇವೆ ಎಂದಿದ್ದಾರೆ.
ನ್ಯಾಯ ಒದಗಿಸುವ ನ್ಯಾಯಾಲಯವೇ ರಾಮ ಮಂದಿರ ವಿಚಾರವನ್ನು ಆದ್ಯತೆಯಲ್ಲಿ ಪರಿಗಣಿಸದಿರುವುದು ಹಿಂದುಗಳ ಹೋರಾಟಕ್ಕೆ ಅವಮಾನ ಮಾಡಿ ಹಿಂದುಗಳ ಭಾವನೆ ಜೊತೆ ಚಕ್ಕಂದ ಆಡಿದಂತೆ ಎಂದು ಹೆಗಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.