Top

ಬಳ್ಳಾರಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಡಿಕೆಶಿ

ಬಳ್ಳಾರಿ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ ಡಿಕೆಶಿ
X

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಬಳ್ಳಾರಿ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಬಳ್ಳಾರಿ ಲೋಕಸಭಾ ಜವಾಬ್ದಾರಿ ನೀಡಿತ್ತು. ಶ್ರೀರಾಮುಲು ಅಣ್ಣನವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಚುನಾವಣೆ ಶಾಂತವಾಗಿ ನಡೆಯಲು ಶ್ರೀರಾಮುಲು ಸಹಕರಿಸಿದ್ದಾರೆ. ನಾವು ಗೆಲ್ಲಬಹದು.ಅಥವಾ ಅವರು ಸೋಲಬಹುದು. ಅದು ಮುಖ್ಯ ಅಲ್ಲ. ಆದರೆ ನಮ್ಮಿಂದ ಕಾರ್ಯಕರ್ತರಿಗೆ ತೊಂದರೆ ಆಗಿಲ್ಲ. ಬಿಜೆಪಿ ಅಭ್ಯರ್ಥಿ ಶಾಂತಾರವರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಲ್ಲದೇ ಪಕ್ಷ ಬೇಧ, ಜಾತಿ ಬೇಧ ಬಿಟ್ಟು ಎಲ್ಲ ವರ್ಗದ ಜನ ಮತ ನೀಡಿದ್ದಾರೆ. ಜನ ದೊಡ್ಡ ಅಂತರದ ಮುನ್ನಡೆ ಕೊಟ್ಟಿದ್ದಾರೆ. ಉಗ್ರಪ್ಪನವರು ಪಾರ್ಲಿಮೆಂಟ್ ನಲ್ಲಿ ನಮ್ಮ ಪರ ಕೆಲಸ ಮಾಡ್ತಾರೆ ಎಂದು ಹೇಳಿದರು.

ಚುನಾವಣೆಗೆ ನಾನು ಬಾಂಬ್ ಸಿಡಿಸ್ತೀನಿ ಅಂತ ಕೆಲ ನಾಯಕರು ಹೇಳಿದ್ದರು. ನಾವು ಬಳ್ಳಾರಿ ಅಭಿವೃದ್ಧಿಗೆ ಆದ್ಯತೆ ವಹಿಸಿದ್ದೇವೆ. ಬಳ್ಳಾರಿ ಗೆಲುವು ನಮಗೆ ಹೆಚ್ಚಿನ ಜವಾಬ್ದಾರಿ ನೀಡಿದೆ. ನಾನು ಕೆಲವರ ಹೆಸರನ್ನ ಸೂಚಿಸಿದ್ದೆ. ಅದಕ್ಕೆ ಬೆಲೆ ನೀಡಿ ಟಿಕೇಟ್ ಕೊಟ್ಟರು. ಈ ಗೆಲುವನ್ನ ರಾಹುಲ್ ಗಾಂಧಿಯವರಿಗೂ ಸಲ್ಲಿಸುತ್ತೇನೆ. ನನ್ನ ನಂಬಿ ಅಭ್ಯರ್ಥಿ ಹಾಕಿದ್ದರು. ಜನ ನಂಬಿಕೆ ಇಟ್ಟಂತೆ ಕಾಯಾ, ವಾಚಾ, ಮನಸಾ ಕೆಲಸ ಮಾಡುತ್ತೇವೆ ಎಂದಿದ್ದಾರೆ.

ಈ ಗೆಲುವು ಬರೀ ಚುನಾವಣೆ ಗೆಲುವಲ್ಲ. ಬಳ್ಳಾರಿ ಜನರ ಸ್ವಾಭಿಮಾನದ ಗೆಲುವು. ಆತ್ಮಗೌರವದ ಗೆಲುವು. ಸರ್ವಾಧಿಕಾರಿ ಧೋರಣೆ ವಿರುದ್ಧದ ಗೆಲುವು. ಹದಿನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸಿರುವ ಬಳ್ಳಾರಿ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತಾವು ಮತ್ತು ತಮ್ಮ ಪಕ್ಷದವರು ಶ್ರಮಿಸುತ್ತೇವೆ ಎಂಬ ಭರವಸೆ ನೀಡಿದ್ದಾರೆ.

ಈ ಗೆಲುವಿನ ಮೂಲಕ ನೀವು ನಮ್ಮ ಮೇಲೆ ಋಣ ಹೊರಿಸಿದ್ದೀರಿ. ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ಸೇವೆ ಮೂಲಕ ಅದನ್ನು ತೀರಿಸುವ ಸಂಕಲ್ಪ ನಮ್ಮದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಉಗ್ರಪ್ಪನವರು ಬಳ್ಳಾರಿ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲಿದ್ದಾರೆ. ಇನ್ನೇನಿದ್ದರೂ ಬಳ್ಳಾರಿ ಕಟ್ಟುವ ಕೆಲಸ. ಅದನ್ನು ನಾವು, ನೀವೂ ಇಬ್ಬರೂ ಸೇರಿ ಮಾಡೋಣ ಎಂದಿದ್ದಾರೆ.

ಅಲ್ಲದೇ ಗೆಲುವಿನ ಸಂಭ್ರಮದಲ್ಲಿರುವ ಡಿ.ಕೆ.ಶಿವಕುಮಾರ್ ನಾಡಿನ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ.

Next Story

RELATED STORIES