ರೈತರ ವಿರುದ್ಧದ ಕೇಸ್ ವಾಪಸ್: ಎಕ್ಸಿಸ್ ಬ್ಯಾಂಕ್ ಮ್ಯಾನೇಜರ್ ಪ್ರಕಟ

ಬೆಳಗಾವಿ ರೈತರ ವಿರುದ್ಧ ಎಕ್ಸಿಸ್ ಬ್ಯಾಂಕ್ನಲ್ಲಿರುವ ಎಲ್ಲಾ ಪ್ರಕರಣಗಳನ್ನು ಕೂಡಲೇ ವಾಪಸ್ ಪಡೆಯಲಾಗುವುದು ಎಂದು ಎಕ್ಸಿಸ್ ಬ್ಯಾಂಕ್ ಹಿರಿಯ ಮ್ಯಾನೇಜರ್ ಪ್ರಕಟಿಸಿದ್ದಾರೆ.
ಎಕ್ಸಿಸ್ ಬ್ಯಾಂಕ್ನಿಂದ ಸಾಲ ಪಡೆದ ರಾಜ್ಯದ 140ಕ್ಕೂ ಅಧಿಕ ರೈತರನ್ನು ಬಂಧಿಸಲು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದ ಪೊಲೀಸರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ರೈತರು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಧ್ಯಪ್ರವೇಶ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಕೂಡಲೇ ಬೆಳಗಾವಿಯ ಎಕ್ಸಿಸ್ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ರಾಜಕುಮಾರ್ ರೈತರ ಮೇಲಿನ ಎಲ್ಲಾ ಪ್ರಕರಣ ವಾಪಸ್ ಪಡೆಯುವುದಾಗಿ ತಿಳಿಸಿದರು.
ಪಶ್ಚಿಮ ಬಂಗಾಳದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ರಜೆ ಘೋಷಿಸಲಾಗಿದೆ. ರಜೆ ಮುಗಿದ ನಂತರ ರೈತರ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ವಿವರಿಸಿದರು. ಈ ಹಿನ್ನೆಲೆಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ವಾಪಸ್ ಪಡೆಯಲಾಯಿತು.
ಇದಕ್ಕೂ ಮುನ್ನ ಎಕ್ಸಿಸ್ ಬ್ಯಾಂಕಿನ ರೈತ ವಿರೋಧಿ ನೀತಿ ಖಂಡಿಸಿ ಚಿತ್ರದುರ್ಗ ನಗರದಲ್ಲಿ ರೈತರು ಎಕ್ಸಿಸ್ ಬ್ಯಾಂಕಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರತಿಭಟನೆಗೆ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬೆಂಬಲ ನೀಡಿದ್ದರು. ಮಂಡ್ಯದಲ್ಲೂ ಎಕ್ಸಿಸ್ ಬ್ಯಾಂಕ್ ಶಾಖೆ ಮುಂಭಾಗ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.