ಟ್ರ್ಯಾಕ್ಟರ್ ಹರಿಸಿ ಹುಲಿ ಕೊಂದ ಉತ್ತರ ಪ್ರದೇಶದ ಗ್ರಾಮಸ್ಥರು!

ಗ್ರಾಮಸ್ಥನೊಬ್ಬನ ಮೇಲೆ ದಾಳಿ ಮಾಡಿದ ಕಾರಣಕ್ಕೆ ರೊಚ್ಚಿಗೆದ್ದ ಗ್ರಾಮಸ್ಥರು ಟ್ರ್ಯಾಕ್ಟರ್ ಹರಿಸಿ ಹುಲಿಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಭಾನುವಾರ ಜರುಗಿದೆ.

ಲಕ್ನೋದಿಂದ 210 ಕಿ.ಮೀ. ದೂರದ ದುರ್ಗ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿ 50 ವರ್ಷದ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿತ್ತು. ದಾಳಿಯಲ್ಲಿ ಗಾಯಗೊಂಡಿದ್ದ ವ್ಯಕ್ತಿ ಭಾನುವಾರ ಮೃತಪಟ್ಟಿದ್ದ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು, ಭದ್ರತಾ ಸಿಬ್ಬಂದಿಯನ್ನು ಥಳಿಸಿ, ಟ್ರ್ಯಾಕ್ಟರ್ ಕದ್ದು ರಕ್ಷಿತಾರಣ್ಯದೊಳಗೆ ನುಗ್ಗಿಸಿದ್ದಾರೆ.

10 ವರ್ಷದ ಹುಲಿ ಕಂಡೊಡನೆ ಅದರ ಮೇಲೆ ಟ್ರ್ಯಾಕ್ಟರ್ ಅನ್ನು ನುಗ್ಗಿಸಿದ್ದೂ ಅಲ್ಲದೇ ಕೈಯಲ್ಲಿದ್ದ ದೊಣ್ಣೆಗಳಿಂದ ಮನ ಬಂದಂತೆ ಥಳಿಸಿ ಗ್ರಾಮಸ್ಥರು ಕೊಂದಿದ್ದಾರೆ.

ಹುಲಿ ಹತ್ಯೆಯನ್ನು ಗ್ರಾಮಸ್ಥರು ಸಮರ್ಥಿಸಿಕೊಂಡಿದ್ದು, ಎರಡು ವಾರಗಳ ಹಿಂದೆ ಜಾನುವಾರಗಳ ಮೇಲೆ ದಾಳಿ ಮಾಡಿತ್ತು. ಇದರಿಂದ ಜನರಲ್ಲಿ ಆತಂಕ ಉಂಟಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದ್ದೆವು. ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದ್ದಾರೆ.

ಎರಡು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದಲ್ಲಿ 13 ಮಂದಿಯನ್ನು ಬಲಿ ಪಡೆದಿದೆ ಎಂಬ ಕಾರಣಕ್ಕೆ ಹೆಣ್ಣು ಹುಲಿ ಅವನಿಯನ್ನು ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅರಣ್ಯ ಇಲಾಖೆ ಗುಂಡಿಟ್ಟು ಕೊಲ್ಲಲಾಗಿತ್ತು. ಈ ಘಟನೆ ಬೆನ್ನಲ್ಲೇ ಗ್ರಾಮಸ್ಥರೇ ಹುಲಿಯನ್ನು ಅಮಾನವೀಯ ರೀತಿಯಲ್ಲಿ ಕೊಂದ ಘಟನೆ ನಡೆದಿದೆ.