ರಾಮನಗರ ಅಭ್ಯರ್ಥಿ ಕಣದಿಂದ ವಾಪಸ್: ಮತದಾನಕ್ಕೂ ಮುನ್ನವೇ ಬಿಜೆಪಿಗೆ ಶಾಕ್

ರಾಮನಗರ ವಿಧಾನಸಭಾ ಉಪ ಚುನಾವಣೆ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದಾರೆ. ಬಿಜೆಪಿಗೆ ಚುನಾವಣೆಗೆ ಮುನ್ನವೇ ಸೋಲುಂಡರೆ, ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಆಯ್ಕೆ ಬಹುತೇಕ ಖಚಿತವಾಗಿದೆ.
ಗುರುವಾರ ಬೆಳಗ್ಗೆ ಏಕಾಏಕಿ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ನಾಮಪತ್ರವನ್ನು ಹಿಂದಕ್ಕೆ ಪಡೆದಿದ್ದಾರೆ.ತಮ್ಮ ಈ ನಿರ್ಧಾರಕ್ಕೆ ಬಿಜೆಪಿ ಮುಖಂಡರೇ ಅಸಹಕಾರವೇ ಕಾರಣ ಎಂದು ಚಂದ್ರಶೇಖರ್ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ತಮ್ಮ ನಿಲುವು ಪ್ರಕಟಿಸಿದ ಚಂದ್ರಶೇಖರ್, ಚುನಾವಣೆಯಲ್ಲಿ ಬಿಜೆಪಿ ಮುಖಂಡರೇ ಸಹಕಾರ ನೀಡುತ್ತಿಲ್ಲ. ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ಬಂದಿಲ್ಲ. ಫೋನ್ ಮಾಡಿ ಆಹ್ವಾನಿಸೋಣ ಅಂದರೆ ನನ್ನ ಫೋನ್ ರೀಸಿವ್ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಬಿಜೆಪಿ ಸಹವಾಸವೇ ಸಾಕು ಎನಿಸಿಬಿಟ್ಟಿದೆ. ಹಾಗಾಗಿ ನಾನು ಕಾಂಗ್ರೆಸ್ಗೆ ಮರಳುತ್ತಿದ್ದೇನೆ ಎಂದು ಚಂದ್ರಶೇಖರ್ ಹೇಳಿದರು.
ಇದೇ ವೇಳೆ ಬಹುತೇಕ ಸೋಲು ಖಚಿತ ಎಂದು ಗೊತ್ತಿದ್ದರೂ ತೀವ್ರ ಪೈಪೋಟಿ ನೀಡುವ ಗುರಿ ಹೊಂದಿದ್ದ ಬಿಜೆಪಿಗೆ ಮತದಾನಕ್ಕೂ ಮುನ್ನವೇ ಭಾರೀ ಹಿನ್ನಡೆ ಉಂಟಾದಂತಾಗಿದೆ. ಇದರಿಂದ ಸ್ಥಳೀಯ ಬಿಜೆಪಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂಲತಃ ಕಾಂಗ್ರೆಸ್ನಲ್ಲಿ ಗುರುತಿಸಿಕೊಂಡಿದ್ದ ಚಂದ್ರಶೇಖರ್ ಅವರನ್ನು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಗೆ ಕರೆಸಿಕೊಂಡು ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿಸಿದ್ದರು. ಇದರಿಂದ ಕಾಂಗ್ರೆಸ್ ಮತಗಳನ್ನು ಒಡೆಯುವ ಜೊತೆಗೆ ಬಿಜೆಪಿ ಮತಗಳನ್ನು ಸೇರಿಸಿ ಗೆಲ್ಲಿಸಬಹುದು ಎಂದು ಲೆಕ್ಕಾಚಾರ ಹಾಕಿದ್ದರು.
ಚುನಾವಣಾ ಜವಾಬ್ದಾರಿ ಹೊರುತ್ತೇನೆ ಎಂದು ಯಡಿಯೂರಪ್ಪ, ಸದಾನಂದಗೌಡರ ಬಳಿ ಹೇಳಿಕೊಂಡಿದ್ದ ಚಂದ್ರಶೇಖರ್, ಇದೀಗ ಪ್ರಚಾರಕ್ಕೆ ಹೋಗಿರಲಿಲ್ಲ. ಅಲ್ಲದೇ ಫೋನ್ ಕೂಡ ರೀಸಿವ್ ಮಾಡದೇ ಇರುವುದು ಚಂದ್ರಶೇಖರ್ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.