Top

ಸಿಎಂ ಕಣ್ಣೀರು ಹಾಕಿ ಎಲ್ಲರನ್ನೂ ಮರಳು ಮಾಡ್ತಿದ್ದಾರೆ- ಆರ್.ಅಶೋಕ್

ಸಿಎಂ ಕಣ್ಣೀರು ಹಾಕಿ ಎಲ್ಲರನ್ನೂ ಮರಳು ಮಾಡ್ತಿದ್ದಾರೆ- ಆರ್.ಅಶೋಕ್
X

ಮಂಡ್ಯ: ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆ, ಮಂಡ್ಯದ ಕ್ಯಾತನಹಳ್ಳಿಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್, ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಸಿಎಂ ಹೆಚ್ಡಿಕೆ ವಿರುದ್ಧ ಕೊಟ್ಟ ಕುದುರೆ ಏರಲಾರದವನು ವೀರನೂ ಅಲ್ಲ ಶೂರನೂ ಅಲ್ಲ ಎಂದು ವಾಗ್ದಾಳಿ ನಡೆಸಿದ ಅಶೋಕ್, ಸಿಎಂ ಮಾತಿಗೆ ಮುನ್ನ ಕಣ್ಣೀರು ಹಾಕಿ‌ ಜನರನ್ನ ಮರುಳು ಮಾಡುತ್ತಿದ್ದಾರೆ. ಸಾಯ್ತೀನಿ ಸಾಯ್ತೀನಿ ಅಂತ ಹೋದ ಕಡೆಯಲ್ಲೆಲ್ಲಾ ಹೇಳ್ತಿದ್ದಾರೆ. ಅವರು ಯಾಕೆ ಸಾಯಬೇಕು, ಜನರು ಅಧಿಕಾರ ಕೊಟ್ಟಿದ್ದಾರೆ. ಹಣ, ಆಸ್ತಿ, ಬಂಗಲೆ ಎಲ್ಲ ಇಲ್ವ, ಆದ್ರೂ ಸಾಯ್ತೀನಿ ಅಂತ ಯಾಕೆ ಹೇಳ್ಬೇಕು ಎಂದು ಕಿಡಿಕಾರಿದ್ದಾರೆ.

ಅಲ್ಲದೇ ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ ಸಿಎಂ ನಾನೇ ಸಾಯ್ತೀನಿ ಅಂತಿದ್ದಾರೆ. ಇಡೀ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯನ್ನ ಒಪ್ಪಿಕೊಳ್ಳುತ್ತಿಲ್ಲ. ಎಲ್ಲಾ ಕಾಂಗ್ರೆಸ್ ಸಭೆಗಳಲ್ಲಿ ಗದ್ದಲ ಗಲಾಟೆ ನಡೆಯುತ್ತಿದೆ. ಶ್ರೀರಂಗಪಟ್ಟಣದಲ್ಲಿ ಮೋದಿ, ಬಿಜೆಪಿ ಪರ ಜೈಕಾರ ಕೂಗಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು ಮಂಡ್ಯದ ಕ್ಯಾತನಹಳ್ಳಿಯಲ್ಲಿರುವ ದಿ.ಪುಟ್ಟಣ್ಣಯ್ಯ ನಿವಾಸದಲ್ಲಿ ಮಾತನಾಡಿದ ಅಶೋಕ್, ಸಿಎಂ ಕುಮಾರಸ್ವಾಮಿ ದರ್ಶನ್ ಪುಟ್ಟಣ್ಣಯ್ಯ ಟೀಕಿಸಿದ್ದು ತಪ್ಪು. ವೈಯಕ್ತಿಕವಾಗಿ ಯಾರನ್ನೂ ಟೀಕಿಸಬಾರದು. ಕುಮಾರಸ್ವಾಮಿ ನಮ್ಮನ್ನು ಗೆಲ್ಲಿಸಿ ಇಲ್ಲದಿದ್ದರೆ ಸಾಯ್ತೀನಿ‌ ಅಂತ ಹೇಳ್ತಾರೆ. ಸಿಎಂ ಆದವ್ರು ಜನರ ಕಣ್ಣೊರೆಸಬೇಕು. ಆದ್ರೆ ಜನರೇ ನಮ್ಮ ಸಿಎಂ ಕಣ್ಣೊರೆಸುವಂತಾಗಿದೆ. ಜೆಡಿಎಸ್‌ಗೆ ಸೋಲಿನ ಭಯ ಕಾಡುತ್ತಿರುವ ಕಾರಣಕ್ಕೆ ಸಿಎಂ ಕಣ್ಣೀರು ಹಾಕಿ ರಾಜಕಾರಣ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಜನಾರ್ದನ ರೆಡ್ಡಿಯನ್ನು ಸಮರ್ಥಿಸಿಕೊಂಡು ಮಾತನಾಡಿದ ಆರ್.ಅಶೋಕ್, ಮೊದಲು ರೆಡ್ಡಿಯವರನ್ನ ವೈಯಕ್ತಿಕವಾಗಿ ಟೀಕೆ ಮಾಡಿದ್ದು, ಸಿದ್ದರಾಮಯ್ಯ. ಅದಕ್ಕೆ ಪ್ರತಿಯಾಗಿ ರೆಡ್ಡಿ ಸಿದ್ದರಾಮಯ್ಯ ಅವರನ್ನ ಟೀಕೆ ಮಾಡಿದ್ದಾರೆ. ಅಲ್ಲದೇ ಕುಮಾರಸ್ವಾಮಿ- ಕುಮಾರ್ ಬಂಗಾರಪ್ಪ ವೈಯಕ್ತಿಕ ಟೀಕೆಯೂ ತಪ್ಪು. ಜನಾರ್ದನ ರೆಡ್ಡಿ, ಸಿದ್ದರಾಮಯ್ಯ ವೈಯಕ್ತಿಕ ಟೀಕೆಯೂ ತಪ್ಪು ಎಂದು ಹೇಳಿದ್ದಾರೆ.

Next Story

RELATED STORIES