ಜೈಲಿಗೆ ಕಳಿಸಿದ್ಯಾರು? ಸಿದ್ದು, ರೆಡ್ಡಿ, ಪ್ರತಾಪ್ ಟ್ವೀಟ್ ಸಮರ

ತಮ್ಮ ಬದುಕಿನ 4 ಅಮೂಲ್ಯ ವರ್ಷಗಳನ್ನು ಸಿದ್ದರಾಮಯ್ಯ ಜೈಲಿನಲ್ಲಿ ಕೊಳೆಯುವಂತೆ ಮಾಡಿದರು ಎಂಬ ಮಾಜಿ ಸಚಿವ ಜನಾರ್ದನ ರೆಡ್ಡಿ ಆರೋಪಕ್ಕೆ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದರೆ, ಬಿಜೆಪಿ ಸಂಸದ ಪ್ರತಾಪ್ ಸಿಂಹ ಕೂಡ ಟ್ವೀಟರ್ನಲ್ಲಿ ಉತ್ತರಿಸುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಮೂಲಕ ಉಪಚುನಾವಣೆಯ ಸಮರ ಟ್ವೀಟರ್ನಲ್ಲಿ ಮುಂದುವರಿಯಿತು.
ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪತ್ರಕರ್ತರಾಗಿದ್ದಾಗ ಬರೆದ ಪುಸ್ತಕವನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದ್ದಾರೆ. ಬಳ್ಳಾರಿ ಗಣಿ ಹಗರಣಗಳ ಕುರಿತು ಜನಾರ್ದನ ರೆಡ್ಡಿ ಅವರನ್ನು ಕೇಂದ್ರವಾಗಿಟ್ಟುಕೊಂಡು 'ಮೈನಿಂಗ್ ಮಾಫಿಯಾ: ಇವರಾರು ಗೊತ್ತೇನು, ಇವರ ಕಥೆ ಹೇಳಲೇನು?' ಎಂಬ ಶೀರ್ಷಿಕೆಯ ಪುಸ್ತಕವನ್ನು ಪ್ರತಾಪ್ ಸಿಂಹ ಬರೆದಿದ್ದರು.
ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಸಿದ್ದು, 'ಸಿದ್ದರಾಮಯ್ಯನವರು ಅನ್ಯಾಯವಾಗಿ ತನ್ನನ್ನು ನಾಲ್ಕು ವರ್ಷ ಜೈಲಿಗೆ ಹಾಕಿಸಿದ್ದರು ಎಂದು ಕಣ್ಣೀರು ಹಾಕುತ್ತಿರುವ ಜನಾರ್ಧನ ರೆಡ್ಡಿಯವರೇ, ದಯವಿಟ್ಟು ನಿಮ್ಮ ಪಕ್ಷದ ಸಂಸದರೇ ಬರೆದಿದ್ದ ಈ ಪುಸ್ತಕ ಓದಿ. ಜೈಲಿಗೆ ಹೋಗುವ ಪಾಪ ಏನು ಮಾಡಿದ್ದೀರಿ ಎಂದು ಗೊತ್ತಾಗುತ್ತೆ' ಎಂದು ಲೇವಡಿ ಮಾಡಿದ್ದಾರೆ.
ನಂತರ ಪ್ರತಾಪ್ ಸಿಂಹ ಅವರ ಹಳೆಯ ಟ್ವೀಟ್ ಅನ್ನು ಪ್ರಕಟಿಸಿರುವ ಸಿದ್ದರಾಮಯ್ಯ, ಸನ್ಮಾನ್ಯ ಜನಾರ್ದನ ರೆಡ್ಡಿಯವರೇ, ನೀವು ಜೈಲಲ್ಲಿ ಕೊಳೆಯುವಂತೆ ಮಾಡಿದ್ದು ಯಾರೆಂದು ತಾನು ಬರೆದ ಪುಸ್ತಕದಲ್ಲಿದೆ ಎಂದು ನಿಮ್ಮ ಗೆಳೆಯ ಪ್ರತಾಪಸಿಂಹ ಟ್ವೀಟ್ ಮಾಡಿದ್ದರು. ಗಮನಿಸಿ' ಎಂದು ಟ್ವೀಟ್ ಮಾಡಿ ಕುಟುಕಿದರು.
ಇನ್ನು ಶ್ರೀರಾಮುಲು ವಿರುದ್ಧವೂ ಹರಿಹಾಯ್ದಿರುವ ಸಿದ್ದರಾಮಯ್ಯ, ಕರ್ನಾಟಕಕ್ಕೆ ಕಾಂಗ್ರೆಸ್ ಸರ್ಕಾರ ಸಾಕಷ್ಟು ಯೋಜನೆಗಳ ಕೊಡುಗೆ ನೀಡಿದೆ. ಆದರೆ, ಬಿಜೆಪಿ ಸರ್ಕಾರದ ಕೊಡುಗೆ ಗಣಿಲೂಟಿಕೋರರಾದ ಜನಾರ್ಧನ ರೆಡ್ಡಿ ಸೋದರರು ಮತ್ತು ಅವರ ಬೆಂಬಲಕ್ಕೆ ನಿಂತಿರುವ ಬಂಟ ಶ್ರೀರಾಮುಲುರನ್ನ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದರು.
ಇತ್ತ ಸಿದ್ದರಾಮಯ್ಯ ರ ಸರಣಿ ಟ್ವೀಟ್ ಗಳನ್ನ ಗಮನಿಸಿದ ಸಂಸದ ಪ್ರತಾಪ್ ಸಿಂಹ, ಅರರೇ ಸಿದ್ದರಾಮಯ್ಯನವರೇ, ಅವ್ರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗೋಲ್ಲ. ಅಂತ ಬೊಂಬ್ಡಿ ಹೊಡೆದು. ಅವರಪ್ಪನ ಕಾಲ ಬಳಿಗೇ ಓಡಿಹೋಗಿ ಬೇಷರತ್ ಬೆಂಬಲ ಕೊಡುತ್ತೇವೆ, ಮಗನನ್ನು ಮುಖ್ಯಮಂತ್ರಿ ಮಾಡಿ ಎಂದಿದ್ದು, ನೀಚ ಅಂದವರ ಜೊತೇನೆ ಪತ್ರಿಕಾಗೋಷ್ಠಿ ಮಾಡಿದ್ದೂ ಅಷ್ಟು ಬೇಗ ಮರೆತು ಹೋಯಿತಾ? ಎಂದು ಟ್ವಿಟರ್ ಮೂಲಕವೇ ಟಾಂಗ್ ಕೊಟ್ಟಿದ್ದಾರೆ.